Varamahalaxmi festival 2025: ಹಬ್ಬಕ್ಕೆ ಮನೆಗೆ ಬರಲು ಸಿದ್ಧ ರೆಡಿಮೇಡ್ ವರಮಹಾಲಕ್ಷ್ಮಿ
ವರಮಹಾಲಕ್ಷ್ಮಿ ವ್ರತ ಮಾಡಲು ಇನ್ನು ಎರಡೇ ದಿನ ಬಾಕಿ. ಅಯ್ಯೋ ಕೊನೆಯ ಕ್ಷಣ, ಸಿಂಗರಿಸಲು ಸಮಯವಿಲ್ಲ ಎನ್ನುವವರ ಮನೆಯ ಹಬ್ಬಕ್ಕೆ ಈಗಾಗಲೇ ಅಲಂಕೃತಗೊಂಡಿರುವ ರೆಡಿಮೇಡ್ ವರಮಹಾಲಕ್ಷ್ಮಿಯ ಉತ್ಸವ ಮೂರ್ತಿಗಳು ಬರಲು ರೆಡಿಯಾಗಿವೆ. ಯಾವ್ಯಾವ ಅಲಂಕಾರದಲ್ಲಿ, ಎಲ್ಲಿ, ಎಷ್ಟು ಬೆಲೆಗೆ ಇವುಗಳು ಲಭ್ಯವಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.



ಅಲಂಕರಿಸಲು ಹಾಗೂ ಸಿಂಗರಿಸಲು ಸಮಯವಿಲ್ಲ ಎನ್ನುವವರ ಮನೆಗೆ ಬರಲು ರೆಡಿಮೇಡ್ ವರಮಹಾಲಕ್ಷಿ ಉತ್ಸವ ಮೂರ್ತಿಗಳು ಸಿದ್ಧವಾಗಿವೆ. ಹೌದು, ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಫೇವರೇಟ್ ಹಬ್ಬ. ಈ ಹಬ್ಬಕ್ಕೆ ಪೂರಕ ಎಂಬಂತೆ ಕಂಪ್ಲೀಟ್ ಅಲಂಕೃತಗೊಂಡ ರೆಡಿಮೇಡ್ ವರಮಹಾಲಕ್ಷ್ಮಿಯ ಉತ್ಸವಮೂರ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

ವೈವಿಧ್ಯಮಯ ಅಲಂಕಾರದಲ್ಲಿ ರೆಡಿಮೇಡ್ ವರಮಹಾಲಕ್ಷ್ಮಿ ಕಂಗೊಳಿಸುತ್ತಿದ್ದು, ಅವರವರ ಮನೆಯಲ್ಲಿ ಹಬ್ಬ ಆಚರಿಸುವ ಕಾನ್ಸೆಪ್ಟ್ ಗೆ ತಕ್ಕಂತೆ, ವರಮಹಾಲಕ್ಷ್ಮಿಯ ಉತ್ಸವ ಮೂರ್ತಿಗಳು ದೊರಕುತ್ತಿವೆ. ಉದಾಹರಣೆಗೆ, ಫ್ಲೋರಲ್ ಥೀಮ್ ಆಗಿದ್ದಲ್ಲಿ, ಅಲಂಕೃತಗೊಂಡ ದೇವಿಯ ಕಂಪ್ಲೀಟ್ ಉಡುಗೆ-ತೊಡುಗೆ ಹಾಗೂ ಅಲಂಕಾರಿಕ ಆಕ್ಸೆಸರೀಸ್ಗಳು ಹೂವಿನ ಡಿಸೈನ್ನಿಂದ ಅಲಂಕೃತಗೊಂಡಿರುತ್ತವೆ. ಹಸಿರು ಬಣ್ಣಕ್ಕೆ ಪ್ರಾಮುಖ್ಯತೆ ನೀಡುವವರಿಗೆಂದು ಈ ಕಲರ್ನ ಸೀರೆ, ಬಳೆ, ಆಭರಣ ಧರಿಸಿರುವ ವರಮಹಾಲಕ್ಷ್ಮಿ ದೊರೆಯುತ್ತದೆ.

ಜ್ಯುವೆಲರಿಗಳಿಂದಲೇ ಸೆಳೆಯುವಂತವು, ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ- ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮಿ, ಕಮಲದ ಹೂವಿನೊಳಗೆ ಕುಳಿತ ಲಕ್ಷ್ಮಿ, ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾಲಕ್ಷ್ಮಿ ಸೇರಿದಂತೆ ನಾನಾ ಕಾನ್ಸೆಪ್ಟ್ಗೆ ತಕ್ಕಂತೆ ಅಲಂಕೃತಗೊಂಡ ವರಮಹಾಲಕ್ಷ್ಮಿ ಉತ್ಸವ ಮೂರ್ತಿಗಳು ಬೆಂಗಳೂರಿನ ಗಾಂಧೀ ಬಜಾರ್, ಮಲ್ಲೇಶ್ವರದ ಮುಖ್ಯ ರಸ್ತೆಯ ಸುತ್ತ-ಮುತ್ತ, ಜಯನಗರ 4 ನೇ ಬ್ಲಾಕ್ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ.

ದೇವಿಯ ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗಧಿ ಪಡಿಸಲಾಗಿದೆ. ವರಮಹಾಲಕ್ಷ್ಮಿ ದೇವಿಯ ಗಾತ್ರ ಹಾಗೂ ಡೆಕೋರೇಷನ್ ಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಚಿಕ್ಕ ಉತ್ಸವಮೂರ್ತಿಗೆ ಕಡಿಮೆಯೆಂದರೂ 1 ಸಾವಿರ ರೂ. ಇರುತ್ತದೆ. ಎತ್ತರ ಹಾಗೂ ಡೆಕೋರೇಷನ್ ಆಧಾರದ ಮೇಲೆ ಬೆಲೆ ನಿಗದಿಯಾಗಿರುತ್ತದೆ. ಗರಿಷ್ಠ ಎಂದರೂ 30-40 ಸಾವಿರ ರೂ.ಗಳ ಬೆಲೆಯಿದೆ ಎನ್ನುತ್ತಾರೆ ಮಲ್ಲೇಶ್ವರದ ಶಾಪ್ ವೊಂದರ ಮಾರಾಟಗಾರರು. ಅಲ್ಲದೇ ಗ್ರಾಹಕರಿಗೆ ಇವುಗಳ ಉಚಿತ ಹೋಮ್ ಡಿಲಿವಿರಿ ಸೌಲಭ್ಯ ಕೂಡ ನೀಡಲಾಗುತ್ತಿದೆ ಎನ್ನುತ್ತಾರೆ ಅವರು.

ರೆಡಿಮೇಡ್ ವರಮಹಾಲಕ್ಷ್ಮಿ ಖರೀದಿಸುವುದಾದಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಹಬ್ಬದ ಅನಂತರ ಮರಳಿ ತೆಗೆದು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಗುಣಮಟ್ಟದ ಅಲಂಕಾರಿಕ ಸಾಮಗ್ರಿ ಬಳಸಿದಂತಹ ಉತ್ಸವಮೂರ್ತಿ ಖರೀದಿಸಿ. ಇವುಗಳ ನಿರ್ವಹಣೆ ಹೇಗೆ? ಬಾಳಿಕೆ ಕುರಿತಂತೆ ಅರಿಯಿರಿ.