Raksha Bandhan 2025: ಈ ವರ್ಷದ ರಕ್ಷಾಬಂಧನ ಅತ್ಯಂತ ಶುಭದಾಯಕ; ಕಾರಣವೇನು?
ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಸಂಕೇತವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷದ ರಕ್ಷಾಬಂಧನ ಆಗಸ್ಟ್ 9ರಂದು ನಡೆಯಲಿದೆ. ಈ ವರ್ಷದ ರಕ್ಷಾಬಂಧನವನ್ನು ನೂರು ವರ್ಷಗಳಲ್ಲೇ ಅತ್ಯಂತ ಶುಭ ದಿನ ಎಂದು ಹೇಳಲಾಗುತ್ತಿದೆ...ಕಾರಣವೇನು?

ರಕ್ಷಾ ಬಂಧನ


ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಕೂಡ ಒಂದು. ಅದರಲ್ಲೂ 2025ರ ರಕ್ಷಾ ಬಂಧನವು ಅತ್ಯಂತ ಮಂಗಳದಾಯಕ ದಿನವಾಗಿದ್ದು, ಇದಕ್ಕೆ ಒಂದು ಅಪರೂಪದ ಮತ್ತು ಶುಭ ಜ್ಯೋತಿಷ್ಯ ಅಂಶ ಕಾರಣ ಎಂದು ತಜ್ಞರು ಹೇಳುತ್ತಾರೆ.

ಶ್ರಾವಣ ಮಾಸದ ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಇದೇ ಮೊದಲ ಬಾರಿಗೆ ಸೌಭಾಗ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶ್ರಾವಣ ನಕ್ಷತ್ರಗಳೆಲ್ಲವೂ ಒಂದೇ ದಿನದಲ್ಲಿ ಜತೆಯಾಗಿ ಬರುತ್ತಿದೆ. ಇದರಿಂದ ಈ ವರ್ಷದ ರಕ್ಷಾ ಬಂಧನವು ಹಿಂದಿನ ವರ್ಷಗಳಿಗಿಂತ ಬಹಳಷ್ಟು ವಿಶೇಷ ಎಂದು ಹೇಳಲಾಗುತ್ತದೆ.

ಆಗಸ್ಟ್ 9ರಂದು ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ರಾಖಿ ಕಟ್ಟುವ ಮಂಗಳಕರ ಸಮಯವು ಬೆಳಗ್ಗೆ 05:47ರಿಂದ ಮಧ್ಯಾಹ್ನ 1:24.

ಪಂಚಾಂಗದ ಪ್ರಕಾರ, ಶ್ರಾವಣ ಹುಣ್ಣಿಮೆ ಆಗಸ್ಟ್ 8ರಂದು ಮಧ್ಯಾಹ್ನ 2:12ರಿಂದ ಆರಂಭವಾಗಿ ಆಗಸ್ಟ್ 9ರಂದು ಮಧ್ಯಾಹ್ನ1:21ರವರೆಗೆ ಇರಲಿದೆ. ಹಾಗಾಗಿ ಉದಯ ತಿಥಿಯ ಕಾರಣ ರಕ್ಷಾ ಬಂಧನವನ್ನು ದಿನ ಪೂರ್ತಿಯಾಗಿ ಆಚರಣೆ ಮಾಡಬಹುದು.

ಹಿಂದೂ ಧರ್ಮದ ಪಂಚಾಂಗದ ಪ್ರಕಾರ, ಭಾದ್ರಾ ಎಂಬ ಸಮಯವು ಯಾವುದೇ ಶುಭ ಕಾರ್ಯಗಳಿಗೆ ಮಂಗಳಕರವಾಗಿರುವುದಿಲ್ಲ. ಈ ವರ್ಷ ಭಾದ್ರಾ ಅವಧಿಯು ರಕ್ಷಾ ಬಂಧನದ ಮುನ್ನವೇ ಮುಗಿಯಲಿದೆ. ಆದ್ದರಿಂದ ಯಾವುದೇ ಅಡೆತಡೆಗಳಿಲ್ಲದೆ ಪೂಜೆ ಸಲ್ಲಿಸಬಹುದು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೌಭಾಗ್ಯ ಯೋಗವು ಅದೃಷ್ಟ, ಸಮೃದ್ಧಿ ಮತ್ತು ಯೋಗ ಕ್ಷೇಮವನ್ನು ನೀಡಿದರೆ, ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲ ಒಳ್ಳೆಯ ಆಸೆ, ಕನಸುಗಳನ್ನು ಈಡೇರಿಸುತ್ತದೆ. ಶ್ರಾವಣ ನಕ್ಷತ್ರವು ಅಣ್ಣ-ತಂಗಿಯರ ಬಾಂಧವ್ಯವನ್ನು ಬಲ ಪಡಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಈ ವರ್ಷದ ರಕ್ಷಾ ಬಂಧನವು ಹೆಚ್ಚು ವಿಶೇಷವಾಗಿರಲಿದೆ.