ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಸತ್‌ ಮೆಟ್ಟಿಲುಗಳ ಮೇಲೆ ಕೂತು ಟೀ ಸೇವನೆ, ಬಿಸ್ಕತ್ತು, ಪಕೋಡಾ ತಿನ್ನೋದು ಸರಿಯಾದ ನಡವಳಿಕೆ ಅಲ್ಲ: ರಾಹುಲ್‌ ಗಾಂಧಿ ವಿರುದ್ಧ ಎಚ್‌.ಡಿ.ದೇವೇಗೌಡ ಟೀಕೆ

ಸಂಸತ್ ಕಲಾಪಕ್ಕೆ ಕಾಂಗ್ರೆಸ್ ಸೇರಿ ಪ್ರತಿಪಕ್ಷ ಸದಸ್ಯರ ಅಡ್ಡಿ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಸಂಸತ್‌ ಮೆಟ್ಟಿಲುಗಳ ಮೇಲೆ ರಾಹುಲ್‌ ಗಾಂಧಿ ಟೀ, ಬಿಸ್ಕೆಟ್‌ ಸೇವಿಸಿರುವುದರ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಟೀಕಿಸಿದ್ದಾರೆ.

ಸಂಸತ್‌ ಮೆಟ್ಟಿಲು ಮೇಲೆ ಕೂತು ಚಹಾ ಸೇವನೆ ಸರಿಯಾದ ನಡವಳಿಕೆ ಅಲ್ಲ

ರಾಹುಲ್‌ ಗಾಂಧಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ. -

Prabhakara R
Prabhakara R Mar 16, 2026 6:01 PM

ನವದೆಹಲಿ, ಮಾರ್ಚ್ 16: ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳಿಂದ, ಅದರಲ್ಲಿಯೂ ಕಾಂಗ್ರೆಸ್ ಸದಸ್ಯರಿಂದ ಕಲಾಪಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೆಗೌಡರು, ಈ ಬಗ್ಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ತೋರಿಸುತ್ತಿರುವ ಅತಿರೇಕದ ವರ್ತನೆ, ಅಶಿಸ್ತಿನ ನಡವಳಿಕೆ ಬಗ್ಗೆ ಮಾಜಿ ಪ್ರಧಾನಿಗಳು ತೀವ್ರ ಆತಂಕ, ಕಳವಳ ವ್ಯಕ್ತಪಡಿಸಿದ್ದಾರೆ.

ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಅದರಲ್ಲಿಯೂ ಕಾಂಗ್ರೆಸ್ ಸಂಸದರು ಸಂಸತ್ತಿನ ಒಳಗೆ ಹಾಗೂ ಸಂಸತ್ತಿನ ಆವರಣದಲ್ಲಿ ಘೋಷಣೆ ಕೂಗುವುದು, ಫಲಕ ಪ್ರದರ್ಶನ ಮಾಡುವುದು, ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುವುದು ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆಯನ್ನು ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಮಾಜಿ ಪ್ರಧಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

LPG Gas Cylinder Shortage: ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆ ಬಗ್ಗೆ ದೂರು ಸಲ್ಲಿಕೆಗೆ ಆಹಾರ ಇಲಾಖೆಯಿಂದ ಸಹಾಯವಾಣಿ ಆರಂಭ

ರಾಜಕೀಯ ಜೀವನದ ಶೇ.90ರಷ್ಟು ಕಾಲ ಪ್ರತಿಪಕ್ಷದಲ್ಲಿಯೇ ಕಳೆದಿದ್ದೇನೆ:

ತಮ್ಮ 65 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಮಾಜಿ ಪ್ರಧಾನಿಗಳು; ನನ್ನ ರಾಜಕೀಯ ಜೀವನದ ತೊಂಬತ್ತರಷ್ಟು ದೀರ್ಘಾವಧಿಯ ಕಾಲವನ್ನು ಪ್ರತಿಪಕ್ಷದಲ್ಲಿಯೇ ಕಳೆದಿದ್ದೇನೆ. ನೀವು ಕೂಡ ಹೆಚ್ಚು ಕಾಲ ವಿರೋಧ ಪಕ್ಷದಲ್ಲಿಯೇ ಇದ್ದೀರಿ. ಪ್ರತಿಪಕ್ಷದ ಹೊಣೆಗಾರಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ತಮಗೆ ಅರಿವಿದೆ. ವಿರೋಧ ಪಕ್ಷಗಳು ತಮ್ಮ ವಿರೋಧವನ್ನು ತೋರಿಸಬಹುದು, ಆದರೆ ಅದು ನಿಯಮಗಳು, ಸಂಪ್ರದಾಯಗಳು ಮತ್ತು ಘನತೆಗೆ ಧಕ್ಕೆ ತರುವಂತಿರಬಾರದು. ಆದರೆ, ಪ್ರಸಕ್ತ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರ ವರ್ತನೆ ನನಗೆ ಬಹಳ ನೋವುಂಟು ಮಾಡಿದೆ. ಪ್ರತಿಪಕ್ಷದಲ್ಲಿ ಇದ್ದರೂ ಸಂಸತ್ತಿನ ಘನತೆ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ಶ್ರಮಿಸಿದ್ದೇನೆ ಎಂದು ಮಾಜಿ ಪ್ರಧಾನಿಗಳು ಪತ್ರದ ಮೂಲಕ ಬೇಸರ ಹೇಳಿದ್ದಾರೆ.

ಪ್ರತಿಪಕ್ಷ ಸದಸ್ಯರು, ಅದರಲ್ಲಿಯೂ ತಮ್ಮ ಪಕ್ಷದ ಸದಸ್ಯರು ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡು ಸಂಸದೀಯ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸಿದ್ದೇ. ಅದು ಆಗಲಿಲ್ಲ. ನಿಮ್ಮ ಸದಸ್ಯರು ಸಂಸತ್ತಿನ ಆವರಣದಲ್ಲಿ ಮತ್ತು ಸಂಸತ್ತಿನ ಒಳಗೆ ಪ್ರಚೋದನಾತ್ಮಕ ರೀತಿಯಲ್ಲಿ ವರ್ತಿಸಿ, ಸಂಸತ್ತಿನ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ತಮಗೆ ಪತ್ರ ಬರೆಯುವ ಸನ್ನಿವೇಶ ಸೃಷ್ಟಿಯಾಯಿತು ಎಂದು ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ.

ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಪರಂಪರೆಯ ಬಗ್ಗೆ ಪತ್ರದಲ್ಲಿ ದೇವೇಗೌಡರು ಒತ್ತಿ ಹೇಳಿದ್ದು, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ.ಆರ್. ಅಂಬೇಡ್ಕರ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮುಂತಾದವರು ಹಾಕಿಕೊಟ್ಟ ಬುನಾದಿ ಹಾಗೂ ಅವರ ಮಾರ್ಗದರ್ಶನದ ಮೇಲೆ ಪರಂಪರೆಯೂ ನಿರ್ಮಿತವಾಗಿದೆ. ನನ್ನ ಸುಂದೀರ್ಘ ಸಂಸದೀಯ ಅನುಭವದಲ್ಲಿ ಇತ್ತೀಚೆಗೆ ಕಂಡಂತಹ ಅವ್ಯವಸ್ಥೆ ಮತ್ತು ಅಡಚಣೆಯನ್ನು ನಾನು ಎಂದಿಗೂ ನೋಡಿಲ್ಲ. ನನ್ನ ಇಡೀ ರಾಜಕೀಯ ಜೀವನದಲ್ಲಿ ಸಂಸತ್ತಿನ ಪ್ರಚೋದನ್ಮಕವಾಗಿ ವರ್ತಿಸುವುದು, ಪ್ರತಿಭಟಿಸುವುದು, ಸದನದ ಬಾವಿಗೆ ಇಳಿದು ಕೂಗುವುದನ್ನು ಮಾಡಿಲ್ಲ. ಉತ್ತಮ ಸಂಸದೀಯ ಸಂಸ್ಕೃತಿಯನ್ನು ನಮ್ಮ ಪ್ರಜಾಪ್ರಭುತ್ವದ ಹಿರಿಯರು ನಮಗೆ ಕಲಿಸಿದ್ದಾರೆ ಎಂದು ದೇವೇಗೌಡರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ವಿರೋಧ ಪಕ್ಷದ ನಾಯಕನ ಕರ್ತವ್ಯ ಸುಲಭವಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರ ಎದುರು ಬೆಟ್ಟದಷ್ಟು ಸವಾಲುಗಳು ಇರುತ್ತವೆ. ಜನರ ಸಂಕಷ್ಟಗಳ ಬಗ್ಗೆ ಕಾಲ ಕಾಲಕ್ಕೆ ಸರಕಾರದ ಗಮನಕ್ಕೆ ತರಬೇಕಾಗುತ್ತದೆ. ಹಾಗಿದ್ದರೂ ಪ್ರತಿಭಟನೆ ಮಾಡುವ ಸಂದರ್ಭ ಬಂದರೆ ಅದಕ್ಕೆ ತನ್ನದೇ ಆದ ರೀತಿನೀತಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಪೀಠಕ್ಕೆ ಅಗೌರವ ತೋರುವ, ಅಪಚಾರ ಎಸಗುವ ಕೆಲಸ ಆಗಬಾರದು. ಸಂಸದೀಯ ನಿಯಮ, ಕಟ್ಟುಪಾಡುಗಳನ್ನು ಮೀರದೆ ಕಾರ್ಯ ನಿರ್ವಹಣೆ ಮಾಡುವುದರಲ್ಲಿ ವಿರೋಧ ಪಕ್ಷ ನಾಯಕನ ಯಶಸ್ಸು ಅಡಗಿದೆ ಎಂದು ನಾನು ನಂಬಿದ್ದೇನೆ. ನಾವು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನಾವು ಸಂಸತ್ತಿನ ನಿಯಮಗಳು ಮತ್ತು ಸ್ಥಾಪಿತ ಕಾರ್ಯ ವಿಧಾನಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳುತ್ತೇವೆ. ಅದಕ್ಕೆ ಎಲ್ಲರೂ ಬದ್ಧರಾಗಿ ವರ್ತಿಸಬೇಕು ಎಂದು ನಾನು ನಿಮ್ಮ ಗಮನಕ್ಕೆ ತರಲಿಸುತ್ತೇನೆ ಎಂದು ದೇವೇಗೌಡರು ಸೋನಿಯಾ ಗಾಂಧಿ ಅವರಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂಸತ್ತಿನ ಮೆಟ್ಟಿಲುಗಳ ಮೇಲೆ ಚಹಾ ಸೇವನೆ ಮಾಡುವುದು ಸರಿಯಾದ ನಡವಳಿಕೆ ಅಲ್ಲ. ಈ ಹಿಂದೆ ವಿರೋಧ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಗೌರವಿಸಿ, ಸಂಯಮದಿಂದ ವರ್ತಿಸಿದ್ದವು. ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ, ಬಿಸ್ಕತ್ತು, ಪಕೋಡಾ ತಿನ್ನುವುದು ಅತಿರೇಖದ ಕ್ರಮಗಳು. ಇವು ಅನುಚಿತ ಎಂದು ಗೌಡರು ಟೀಕಿಸಿದ್ದಾರೆ.

ನಾನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸರ್ಕಾರವನ್ನು ಮುನ್ನೆಡೆಸಿದ್ದೇನೆ. ಆ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸಂಸದೀಯ ಸದಾಚಾರ ಹಾಗೂ ಮೌಲ್ಯಗಳನ್ನು ಮೀರಿ ನಡೆದಿಲ್ಲ. ಅಂದಿನ ಸದಸ್ಯರು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸಂಯಮದಿಂದ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರತಿಭಟಿಸಿದಾಗಲೂ ಅವರು ಎಂದೂ ಸಂಸತ್ತಿನ ಪ್ರವೇಶ ದ್ವಾರವನ್ನು ನಿರ್ಬಂಧಿಸಲಿಲ್ಲ. ಇವತ್ತು ಅದಕ್ಕೆ ವಿರುದ್ಧವಾದ ಸನ್ನಿವೇಶ ಸೃಷ್ಟಿಯಾಗಿದೆ. ಇದು ಸಂಸದೀಯ ಹೆಗ್ಗಳಿಕೆಗೆ ಅಪಾರ ಹಾನಿ ಉಂಟು ಮಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ನನ್ನ ಕಾಳಜಿ ಮತ್ತು ನನ್ನ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನನಗೆ ನಂಬಿಕೆಯಿದೆ. ನಾನು ಯಾರನ್ನೂ ಲಘುವಾಗಿ ನೋಡುವ ಅಥವಾ ಯಾರ ಉತ್ಸಾಹವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ವಿರೋಧ ಪಕ್ಷದ ಹಿರಿಯ ಸ್ಥಾನದಲ್ಲಿರುವ ನೀವು, ನಿಮ್ಮ ರಾಜಕೀಯ ಅನುಭವ ಮತ್ತು ಪ್ರಬುದ್ಧತೆಯನ್ನು ಬಳಸಿಕೊಂಡು ನಿಮ್ಮ ಪಕ್ಷದ ನಾಯಕರು ಮತ್ತು ಇತರರೊಂದಿಗೆ ಮಾತನಾಡಿ ಸರಿಪಡಿಸಬೇಕು ಒತ್ತಾಯಿಸುತ್ತೇನೆ ಎಂದು ದೇವೇಗೌಡರು ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.

Operation Kamala: ಒಡಿಶಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪ

ಪ್ರತಿಭಟನೆಯನ್ನು ನಾನು ವಿರೋಧಿಸುವುದಿಲ್ಲ. ವಿರೋಧ ಪಕ್ಷವು ಎಷ್ಟು ಬೇಕಾದರೂ ಪ್ರತಿಭಟಿಸಬಹುದು. ಆದರೆ ಆ ಪ್ರತಿಭಟನೆಯು 75 ವರ್ಷಗಳ ವೈಭವಯುತ ವರ್ಷಗಳಲ್ಲಿ ನಾವು ಒಟ್ಟಾಗಿ ನಿರ್ಮಿಸಿಕೊಂಡಿದ್ದನ್ನು ಕೆಡವುವ ರೀತಿಯಲ್ಲಿ ಇರಬಾರದು ಎಂದು ಮಾಜಿ ಪ್ರಧಾನಿಗಳು ಪ್ರತಿಪಾದಿಸಿದ್ದಾರೆ.