ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Tech Summit 2026: ರೋಬೊಟಿಕ್ಸ್, ಫಿಸಿಕಲ್ ಎಐ ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವಾಗಿ ಬೆಂಗಳೂರನ್ನು ರೂಪಿಸಲು ‘ಬ್ರೇನ್ಸ್’ ಉಪಕ್ರಮ: ಪ್ರಿಯಾಂಕ್ ಖರ್ಗೆ

Priyank Kharge: ಬ್ರೇನ್ಸ್ ಯೋಜನೆಯು ಕರ್ನಾಟಕದ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದರ ಜತೆಗೆ, ದೇಶೀಯ ತಂತ್ರಜ್ಞಾನ ಸಾಮರ್ಥ್ಯ ವೃದ್ಧಿ, ಹೂಡಿಕೆ ಆಕರ್ಷಣೆ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ನವೀನ ಉತ್ಪನ್ನಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

‘ಬ್ರೇನ್ಸ್’ ಮಹತ್ವದ ನಾವೀನ್ಯತಾ ಉಪಕ್ರಮ: ಪ್ರಿಯಾಂಕ್ ಖರ್ಗೆ

ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ) -

Profile
Siddalinga Swamy Nov 17, 2026 7:46 PM

ಬೆಂಗಳೂರು, ನ.17: ರೋಬೊಟಿಕ್ಸ್ ಮತ್ತು ಫಿಸಿಕಲ್ ಎಐ (Physical AI) ಕ್ಷೇತ್ರಗಳಲ್ಲಿ ಬೆಂಗಳೂರನ್ನು ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ, ಬೆಂಗಳೂರು ಟೆಕ್ ಶೃಂಗಸಭೆ 2026ರಲ್ಲಿ ‘ಬ್ರೇನ್ಸ್ʼ (BRAINZ – Bengaluru Robotics & AI Innovation Zone) ಎಂಬ ಮಹತ್ವದ ನಾವೀನ್ಯತಾ ಉಪಕ್ರಮವನ್ನು ಘೋಷಿಸಲಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ (IISc) ಆರ್ಟ್‌ಪಾರ್ಕ್ (ARTPARK) ಸಹಯೋಗದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂಬತ್ತು ಎಕರೆ ಪ್ರದೇಶದಲ್ಲಿ ರೂಪುಗೊಳ್ಳಲಿರುವ ಬ್ರೇನ್ಸ್, ರೋಬೊಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಟೆಕ್ ಕ್ಷೇತ್ರಗಳ ಸಂಶೋಧಕರು, ನವೋದ್ಯಮಿಗಳು ಹಾಗೂ ಉದ್ಯಮ ವಲಯದ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರಲಿದೆ ಎಂದು ಅವರು ಹೇಳಿದ್ದಾರೆ.

ದೇಶೀಯವಾಗಿ ರೋಬೊಟಿಕ್ಸ್ ಮತ್ತು ಎಐ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು, ಸಂಶೋಧನಾ ಪ್ರಯೋಗಾಲಯಗಳಲ್ಲಿ ರೂಪುಗೊಳ್ಳುವ ನಾವೀನ್ಯತೆಗಳನ್ನು ನೈಜ ಜಗತ್ತಿನ ಬಳಕೆಗೆ ತರುವುದು ಹಾಗೂ ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನಗಳನ್ನು ರೂಪಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯ ಮೂಲಕ ₹1,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ, ಹೊಸ ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

ವಿಶೇಷವಾಗಿ ಫಿಸಿಕಲ್ ಎಐ ಮತ್ತು ಬುದ್ಧಿವಂತ ಯಂತ್ರಗಳ (Intelligent Machines) ಕ್ಷೇತ್ರದಲ್ಲಿ ಸಂಶೋಧನೆ, ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಾಯೋಗಿಕ ಬಳಕೆಗೆ ಉತ್ತೇಜನ ನೀಡುವ ಮೂಲಕ ಮುಂದಿನ ತಲೆಮಾರಿನ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಬೆಂಗಳೂರಿನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಸಂಶೋಧನಾ ಸಂಸ್ಥೆಗಳು, ಉದ್ಯಮಗಳು ಮತ್ತು ನವೋದ್ಯಮಗಳ ನಡುವಿನ ಸಹಯೋಗವನ್ನು ವಿಸ್ತರಿಸುವ ಮೂಲಕ ಪ್ರಯೋಗಾಲಯಗಳಲ್ಲಿ ಸಿದ್ಧವಾಗುವ ಅತ್ಯಾಧುನಿಕ ತಂತ್ರಜ್ಞಾನಗಳು ಕೈಗಾರಿಕೆ, ಆರೋಗ್ಯ, ಉತ್ಪಾದನೆ ಮತ್ತು ಇತರ ಕ್ಷೇತ್ರಗಳ ನೈಜ ಅಗತ್ಯಗಳಿಗೆ ಪರಿಹಾರ ಒದಗಿಸುವಂತೆ ಮಾಡುವುದು ಬ್ರೇನ್ಸ್‌ನ ಆಶಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕುರಿತು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ; ಕಾಮಗಾರಿ ತ್ವರಿತಗೊಳಿಸಲು ಸೂಚನೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ 2026ರಲ್ಲಿ ಈ ಉಪಕ್ರಮವನ್ನು ಪ್ರಕಟಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬ್ರೇನ್ಸ್ ಯೋಜನೆಯು ಕರ್ನಾಟಕದ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದರ ಜತೆಗೆ, ದೇಶೀಯ ತಂತ್ರಜ್ಞಾನ ಸಾಮರ್ಥ್ಯ ವೃದ್ಧಿ, ಹೂಡಿಕೆ ಆಕರ್ಷಣೆ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ನವೀನ ಉತ್ಪನ್ನಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.