ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CWP Conference: ವಿಧಾನಸೌಧದಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸದಸ್ಯರ ಸಮ್ಮೇಳನ; ಮಹಿಳಾ ನಾಯಕತ್ವ, ರಾಜಕೀಯ ಪ್ರಾತಿನಿಧ್ಯದ ಕುರಿತು ಚರ್ಚೆ

ಬೆ೦ಗಳೂರಿನಲ್ಲಿ ನವೆಂಬರ್ 17 ಮತ್ತು 18ರಂದು ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸದಸ್ಯರ ಭಾರತ ವಲಯದ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ 150ಕ್ಕೂ ಹೆಚ್ಚು ಮಹಿಳಾ ಜನಪ್ರತಿನಿಧಿಗಳು ಭಾಗಿಯಾಗಿದ್ದು, ಇದು ಮಹಿಳಾ ನಾಯಕತ್ವಕ್ಕೆ ಪ್ರೋತ್ಸಾಹ, ಸಮಾನ ಪ್ರಾತಿನಿಧ್ಯಕ್ಕೆ ಉತ್ತೇಜನ ನೀಡಲು ವೇದಿಕೆಯಾಗಿದೆ.

ವಿಧಾನಸೌಧದಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸದಸ್ಯರ ಸಮ್ಮೇಳನ

-

Prabhakara R
Prabhakara R Nov 17, 2026 3:48 PM

ಬೆಂಗಳೂರು: ವಿಧಾನಸೌಧದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸದಸ್ಯರ ಭಾರತ ವಲಯದ ಸಮ್ಮೇಳನ (CWP Conference) ಆರಂಭವಾಗಿದೆ. ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿದರು. ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಮಹಿಳೆಯರ ನಾಯಕತ್ವ, ಪ್ರಾತಿನಿಧ್ಯ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.

CWP (1)

ಸಿಎಂ ಡಿ.ಕೆ. ಶಿವಕುಮಾರ್ ಅವರು ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳನ್ನು ಸ್ವಾಗತಿಸಿ ಮಾತನಾಡಿದರು. ಈ ಸಮ್ಮೇಳನವು ಸುಮಾರು 15 ರಿಂದ 20 ದೇಶಗಳ 150ಕ್ಕೂ ಹೆಚ್ಚು ಮಹಿಳಾ ಶಾಸಕರು, ಸಂಸದರನ್ನು ಒಂದೆಡೆ ಸೇರಿಸಿದ್ದು, ಭಾರತ ಹಾಗೂ ಕಾಮನ್‌ವೆಲ್ತ್ ರಾಷ್ಟ್ರಗಳ ಮಹಿಳಾ ನಾಯಕಿಯರ ಈ ಮಹತ್ವದ ಕೂಟವನ್ನು ಆತಿಥ್ಯ ವಹಿಸಿಕೊಳ್ಳುವುದಕ್ಕೆ ಕರ್ನಾಟಕ ಹೆಮ್ಮೆಪಡುತ್ತದೆ.

ಮಹಿಳಾ ರಾಜಕೀಯ ಸಬಲೀಕರಣದ ಕಡೆಗಿನ ಭಾರತದ ಪ್ರಯಾಣವನ್ನು ಒತ್ತಿಹೇಳುತ್ತಾ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಗೆ ದಾರಿ ಮಾಡಿಕೊಟ್ಟ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರಯತ್ನಗಳನ್ನು ಅವರು ಸ್ಮರಿಸಿದರು. ಹಾಗೆಯೇ, ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರತಿನಿಧಿನಿತ್ವ ಸಿಗಲು ಮತ್ತು 2023ರ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಳ್ಳಲು ಸೋನಿಯಾ ಗಾಂಧಿ ಅವರು ನಡೆಸಿದ ನಿರಂತರ ಪ್ರಯತ್ನಗಳನ್ನು ಅವರು ಸ್ಮರಿಸಿಕೊಂಡರು.

CWP (2)

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಮಹಿಳೆಯರು ಕೇವಲ ಶಾಸಕಾಂಗ ಸಂಸ್ಥೆಗಳಲ್ಲಿ ಆಸನಗಳನ್ನು ಅಲಂಕರಿಸಿದರೆ ಸಾಲದು; ಬದಲಿಗೆ ನಿರ್ಧಾರಗಳನ್ನು ಪ್ರಭಾವಿಸಲು, ಕಾನೂನುಗಳನ್ನು ರೂಪಿಸಲು ಮತ್ತು ಆಡಳಿತದ ದಿಕ್ಕನ್ನು ನಿರ್ಧರಿಸಲು ಅವಕಾಶವಿರಬೇಕು ಎಂದು ಸಿಎಂ ಹೇಳಿದರು. ಪ್ರಜಾಪ್ರಭುತ್ವವನ್ನು ಹೆಚ್ಚು ಒಳಗೊಳ್ಳುವ ಮತ್ತು ಸ್ಪಂದನಾಶೀಲವಾಗಿಸಲು ಅರ್ಥಪೂರ್ಣ ಪ್ರಾತಿನಿಧ್ಯತೆ ಅತ್ಯಗತ್ಯ ಎಂದು ಅವರು ತಿಳಿಸಿದರು.

ಮಹಿಳಾ ರಾಜಕೀಯ ನಾಯಕತ್ವವನ್ನು ಮುನ್ನಡೆಸುವಲ್ಲಿ CWP ಭಾರತ ವಲಯದ ಅಧ್ಯಕ್ಷರಾದ ಡಾ. ಡಿ. ಪುರಂದೇಶ್ವರಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಭಾರತ ಮತ್ತು ಕಾಮನ್‌ವೆಲ್ತ್‌ ರಾಷ್ಟ್ರಗಳಾದ್ಯಂತ ಮಹಿಳಾ ನಾಯಕಿಯರ ಬಲವಾದ ಜಾಲವನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಸಭೆಯ ಉಪಸಭಾಪತಿಗಳಾದ ಹರಿವಂಶ್ ನಾರಾಯಣ್ ಸಿಂಗ್, ಮಾನ್ಯ ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಸೇರಿದಂತೆ ಗಣ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.



ಸಮ್ಮೇಳನದ ಮೊದಲ ದಿನ ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಸೈಬರ್ ಸುರಕ್ಷತೆಯ ಕುರಿತು ವಿಶೇಷ ಅಧಿವೇಶನ ನಡೆಯಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸೈಬರ್ ಕಿರುಕುಳ, ಆನ್‌ಲೈನ್ ದೌರ್ಜನ್ಯ ಹಾಗೂ ಡಿಜಿಟಲ್ ವಂಚನೆಗಳಂತಹ ಸವಾಲುಗಳ ಬಗ್ಗೆ ಚರ್ಚೆ ನಡೆಯಲಿದ್ದು, ಸುರಕ್ಷಿತ ಡಿಜಿಟಲ್ ವಾತಾವರಣದಲ್ಲಿ ಮಹಿಳೆಯರು ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಅಗತ್ಯವಿರುವ ಕ್ರಮಗಳ ಬಗ್ಗೆ ವಿಚಾರ ವಿನಿಮಯವಾಗಲಿದೆ. ವಿಶ್ವಸಂಸ್ಥೆಯ ಮಹಿಳಾ ಘಟಕವಾದ ಯುಎನ್ ವುಮೆನ್ ಇಂಡಿಯಾ ವತಿಯಿಂದ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ, ವಿಶೇಷವಾಗಿ ಮೆನೋಪಾಸ್‌ ಕುರಿತು ಪ್ರತ್ಯೇಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ನವೆಂಬರ್ 18ರಂದು ನಡೆಯಲಿರುವ ಎರಡನೇ ಅಧಿವೇಶನದಲ್ಲಿ ಮಹಿಳಾ ಶಾಸಕರ ಸಾಮರ್ಥ್ಯ ವೃದ್ಧಿ, ಶಾಸಕಾಂಗ ಕಾರ್ಯವಿಧಾನಗಳ ಅರಿವು ಮತ್ತು ಹಿರಿಯ ಜನಪ್ರತಿನಿಧಿಗಳ ಮಾರ್ಗದರ್ಶನದ ಮೂಲಕ ಹೊಸದಾಗಿ ಆಯ್ಕೆಯಾದ ಮಹಿಳಾ ಶಾಸಕರಿಗೆ ನೆರವು ನೀಡುವ ಕುರಿತು ಚರ್ಚಿಸಲಾಗುತ್ತದೆ. ಮಹಿಳಾ ಜನಪ್ರತಿನಿಧಿಗಳು ಕಾನೂನು ರಚನೆ, ನೀತಿ ನಿರ್ಧಾರ ಮತ್ತು ಸಾರ್ವಜನಿಕ ಆಡಳಿತದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಬೇಕಾದ ತರಬೇತಿ ಹಾಗೂ ಮಾರ್ಗದರ್ಶನ ವ್ಯವಸ್ಥೆಗಳ ಬಗ್ಗೆಯೂ ವಿಚಾರ ಮಂಡನೆಯಾಗಲಿದೆ.

ನವೆಂಬರ್ 18ರಂದು ಕರ್ನಾಟಕದ ರಾಜ್ಯಪಾಲರು ಡಾ. ಸುಧಾ ಯಾದವ್ ಅವರ ಸಮಾರೋಪ ಭಾಷಣದೊಂದಿಗೆ ಸಮ್ಮೇಳನ ಮುಕ್ತಾಯಗೊಳ್ಳಲಿದೆ.