Davanagere South by-election: ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್ ನೀಡಿದ್ದೇವೆ ಎಂದ ಡಿ.ಕೆ. ಶಿವಕುಮಾರ್
DK Shivakumar: ರಾಜಕೀಯದಲ್ಲಿ ಎಲ್ಲರಿಗೂ ತಮ್ಮ ಬೇಡಿಕೆ ಕೇಳುವ ಅಧಿಕಾರವಿದೆ. ಅವರು ಕೇಳುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕೆ ದುಡಿದಿರುತ್ತಾರೆ, ಅವರಿಗೆ ಕೇಳುವ ಹಕ್ಕಿರುತ್ತದೆ. ಇರುವುದು ಒಂದು ಸೀಟು. ನಾವು ಮೊದಲಿನಿಂದಲೂ ಎಲ್ಲರಿಗೂ ಅಧಿಕಾರ ನೀಡುತ್ತಾ ಬಂದಿದ್ದು, ಎಲ್ಲಾ ವಿಚಾರವನ್ನು ಬಗೆಹರಿಸುತ್ತೇವೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ. -
ದಾವಣಗೆರೆ, ಮಾ.23: ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ, ಶಾಮನೂರು ಶಿವಶಂಕರಪ್ಪ ಅವರು ಈ ಭಾಗಕ್ಕೆ ನೀಡಿರುವ ಕೊಡುಗೆಯಿಂದ ಈ ಭಾಗದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ (Davanagere South by-election) ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಗಳು, ನಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯುಬ್ ಹಾಗೂ ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥ್ ಅವರು ಇಂದು ಉಪಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಒಮ್ಮತದಿಂದ ಸಮರ್ಥ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ತಮ್ಮದೇ ಆದ ಆಸೆ, ಆಕಾಂಕ್ಷೆಯೊಂದಿಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.
ಸಮರ್ಥ್ ಅವರು ಮತ್ತೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಶಾಮನೂರು ಶಿವಶಂಕರಪ್ಪನವರೇ ಇಲ್ಲೇ ಇದ್ದು ವೃತ್ತಿ ಮಾಡುವಂತೆ ಹೇಳಿದ್ದರು. ಕ್ಷೇತ್ರದ ಜನತೆ, ಎಲ್ಲಾ ವರ್ಗದ ಮುಖಂಡರು, ಪಕ್ಷದ ವರಿಷ್ಠರು ಎಲ್ಲರೂ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಈ ಮಧ್ಯೆ ಮುಸಲ್ಮಾನ ಸಮುದಾಯದ ಶಾಸಕರುಗಳು ಈ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ನೀವು ನಮಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ನಾವು ಲೆಕ್ಕಾಚಾರ ಹಾಕಿದೆವು. ಕಾಂಗ್ರೆಸ್ ಪಕ್ಷ ಈ ಹಿಂದೆ ಟಿಕೆಟ್ ನೀಡಲಾಗದ ಕಾರಣಕ್ಕೆ ಜಬ್ಬಾರ್ ಅವರನ್ನು ಮೂರು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ಮುಂದಿನ ದಿನಗಳಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈ ಸಮಾಜಕ್ಕೆ ನ್ಯಾಯ ಒದಗಿಸಿಕೊಂಡು ಬಂದಿದ್ದೇವೆ. ಇದನ್ನು ಮುಂದುವರಿಸುತ್ತೇವೆ. ಇದು ನಮ್ಮ ಪಕ್ಷದ ಸಿದ್ಧಾಂತ ಎಂದು ಹೇಳಿದರು.
ಬಿಜೆಪಿಯಿಂದ ಕಾಂಗ್ರೆಸ್ ಸೇರುತ್ತಿರುವ ಕಾರ್ಯಕರ್ತರನ್ನು ಸ್ವಾಗತಿಸುತ್ತೇನೆ
ಭಾನುವಾರ ರಾತ್ರಿ ಬಿಜೆಪಿಯ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆಯಾಗಲು ಇನ್ನು ಹಲವರು ಮುಂದಾಗಿದ್ದು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲದಿಂದ ಕಾಂಗ್ರೆಸ್ ಸೇರುತ್ತಿರುವವರನ್ನು ನಾವು ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಇದರ ಜವಾಬ್ದಾರಿಯನ್ನು ಸ್ಥಳೀಯ ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ್ ಅವರಿಗೆ ವಹಿಸಿದ್ದೇನೆ. ಇಲ್ಲಿ ಯಾರೂ ಆಂತಕಕ್ಕೆ ಒಳಗಾಗುವುದು ಬೇಡ. ಪಕ್ಷ ಸಿದ್ಧಾಂತದ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವಂತಹ ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು.
ಈ ಭಾಗಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ, ಶಿಕ್ಷಣ ಸಂಸ್ಥೆ ಆ ಮೂಲಕ ಈ ಜಿಲ್ಲೆ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಈ ಪ್ರಗತಿಗೆ ಕೊಡುಗೆ ನೀಡಿದ್ದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಹಾಗೂ ಅವರ ಸಂಸ್ಥೆ. ಇದೆಲ್ಲವನ್ನು ಜನ ಸ್ಮರಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಎಲ್ಲಾ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ನೀಡಿರುವ ಕೊಡುಗೆಯನ್ನು ಜನ ಸ್ಮರಿಸುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಅವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ
ಪಕ್ಷದಲ್ಲಿ ಗೊಂದಲ ಹಾಗೂ ಬಂಡಾಯವನ್ನು ಯಾವ ರೀತಿ ಬಗೆಹರಿಸುತ್ತೀರಿ ಎಂದು ಕೇಳಿದಾಗ, ‘ರಾಜಕೀಯದಲ್ಲಿ ಎಲ್ಲರಿಗೂ ತಮ್ಮ ಬೇಡಿಕೆ ಕೇಳುವ ಅಧಿಕಾರವಿದೆ. ಅವರು ಕೇಳುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕೆ ದುಡಿದಿರುತ್ತಾರೆ, ಅವರಿಗೆ ಕೇಳುವ ಹಕ್ಕಿರುತ್ತದೆ. ಇರುವುದು ಒಂದು ಸೀಟು. ನಾವು ಮೊದಲಿನಿಂದಲೂ ಎಲ್ಲರಿಗೂ ಅಧಿಕಾರ ನೀಡುತ್ತಾ ಬಂದಿದ್ದು, ಎಲ್ಲಾ ವಿಚಾರವನ್ನು ಬಗೆಹರಿಸುತ್ತೇವೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಒಬ್ಬರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಶಾಮನೂರು ಶಿವಶಂಕರಪ್ಪ ಅವರ ಆತ್ಮೀಯರು. ಅವರು ಹಾಗೂ ಇತರರ ಜತೆ ನಾವು ಚರ್ಚೆ ಮಾಡುತ್ತಿದ್ದು, ಎಲ್ಲವನ್ನು ಸರಿ ಮಾಡುತ್ತೇವೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.