ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಡಿ.ಕೆ. ಶಿವಕುಮಾರ್‌ರ ಕನಸು: ಡಿ.ಕೆ. ಸುರೇಶ್
DK Suresh: ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ. ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದಾರೆ.
ವೈ.ಜಿ. ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭ ಜರುಗಿತು. -
ಮಾಗಡಿ, ಮಾ.04: ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರಿನ ಅಭಾವ ನೀಗಿಸುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಾಜ್ಯದಲ್ಲಿಯೇ ನಂ.1 ಮಾಡುವ ಕನಸು ಶಿವಕುಮಾರ್ ಅವರದ್ದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ಹೇಳಿದರು. ಮಾಗಡಿಯ ಚಕ್ರಬಾವಿಯಲ್ಲಿ ಬುಧವಾರ ನಡೆದ ವೈ.ಜಿ.ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ. ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಮಾಗಡಿಯ ಅಭಿವೃದ್ಧಿ 2027- 28ಕ್ಕೆ ಅಚ್ಚರಿ ಮೂಡಿಸಲಿದೆ. ಪಟ್ಟಣದ ಒಳಗೆ ರಸ್ತೆಗಳು ಅತ್ಯಂತ ಅಚ್ಚುಕಟ್ಟಾಗಿವೆ. ಜತೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಸಹ ಅತ್ಯುತ್ತಮ ಸ್ಥಿತಿಯಲ್ಲಿವೆ. ಈ ಕ್ಷೇತ್ರದಲ್ಲಿ 1 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು. 92 ಕೋಟಿ ರೂಪಾಯಿ ವೆಚ್ಚದಲ್ಲಿ 115 ಕಿ.ಮೀ ದೂರದಿಂದ ಕಾವೇರಿ ನೀರನ್ನು ತಂದು ಚಕ್ರಬಾವಿ ಸೇರಿದಂತೆ ಸುತ್ತಮುತ್ತಲ ಕೆರೆಗಳಿಗೆ ತುಂಬಿಸುವ ಕಾರ್ಯ ಇದಾಗಿದೆ. ಚಕ್ರಬಾವಿ ಕೆರೆಗೆ ನೀರನ್ನು ತುಂಬಿಸುವ ಯೋಜನೆ ಊಹಿಸಲು ಸಾಧ್ಯವಾಗದಂತಹ ಯೋಜನೆ ಎಂದು ಹೇಳಿದರು.
ಪರಿಸರ ಇಲಾಖೆಯ ಒಂದಷ್ಟು ತೊಡಕುಗಳು ಇದ್ದ ಕಾರಣ ಇನ್ನೊಂದೆರಡು ಕಿಲೋಮೀಟರ್ ಕಾಮಗಾರಿ ಬಾಕಿಯಿದೆ. ಮೇ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಯಲಿದೆ. ಇನ್ನು ವರ್ಷದ 365 ದಿನವೂ ವೈ.ಜಿ.ಗುಡ್ಡ ಕಾವೇರಿ ನೀರಿನಿಂದ ತುಂಬಿರಲಿದೆ. ಅಂದರೆ ಅಷ್ಟೂ ದಿನವೂ ನಿಮ್ಮ ಕೆರೆಗಳು ತುಂಬಿರುತ್ತವೆ. ಉಪಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿ ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸಬೇಕು. ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕಾವೇರಿ ನದಿ ದೂರವಿದೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ತಂದು ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ವೈ.ಜಿ.ಗುಡ್ಡಕ್ಕೆ ಕಾವೇರಿ ನೀರು ಬರುತ್ತಿದೆ ಎಂದು ಯಾರೂ ಊಹಿಸಿರಲಿಲ್ಲ. ನಾನು ಸಂಸದನಾಗಿದ್ದಾಗ ಸ್ಥಳೀಯ ನಾಯಕರಾದ ಚಂದ್ರೇಗೌಡರ ಒಟ್ಟಿಗೆ ಸ್ಥಳಕ್ಕೆ ಭೇಟಿ ಮಾಡಿ ಅದಕ್ಕೆ ಹೇಗೆ ನೀರನ್ನು ತುಂಬಿಸಬಹುದು ಅಧಿಕಾರಿಗಳ ಬಳಿ ಚರ್ಚೆ ನಡೆಸಿದೆ ಎಂದರು.
ನಾನು ಸ್ಟ್ರೀಟ್ ಫೈಟರ್, ಹೋರಾಟ ಮಾಡೋದೇಗೆ ಗೊತ್ತಿದೆ; ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ 6 ವರ್ಷ ಸಾಕು ಎಂದ ಡಿಕೆಶಿ
ಹಿಂದಿನ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದಾಗ ಈ ಭಾಗದ ಮುಖ್ಯ ಎಂಜಿನಿಯರ್ ಆಗಿದ್ದ ಮೋಹನ್ ಅವರ ಬಳಿ ನೀರು ಹರಿಸುವ ಕುರಿತು ಚರ್ಚೆ ನಡೆಸಿದೆ. ಕಾವೇರಿ ನೀರನ್ನು ಕಣ್ವ ಜಲಾಶಯಕ್ಕೆ ತಂದು ನಂತರ ಹೇಗೆ ಮಂಚನಬೆಲೆ ವೈ.ಜಿ ಗುಡ್ಡಕ್ಕೆ ತರಬಹುದು ಎಂದು ಯೋಜನೆ ತಯಾರಿಸಲು ಹೇಳಿದೆ. ಆನಂತರ ಇದರ ಸಾಧ್ಯತೆಗಳನ್ನು ಚರ್ಚೆ ನಡೆಸಿ ಸತ್ತೇಗಾಲದಿಂದ ವೈ.ಜಿ.ಗುಡ್ಡಕ್ಕೆ ಕಾವೇರಿ ನೀರು ತರಲಾಗಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.