HD Kumaraswamy: ನೋವಿನಲ್ಲಿರುವವರಿಗೆ ಜೆಡಿಎಸ್ ಬಾಗಿಲು ತೆರೆದಿದೆ: ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಆಹ್ವಾನ ನೀಡಿದ ಎಚ್‌ಡಿಕೆ!
ಸಚಿವ ಸ್ಥಾನ ಸಿಗದೆ ಕಾಂಗ್ರೆಸ್‌ನ ಹಲವು ಶಾಸಕರು ನೋವಿನಲ್ಲಿದ್ದಾರೆ. ಈ ಬಗ್ಗೆ ಕೆಲವರು ನೋವು ತೋಡಿಕೊಂಡಿರುವುದನ್ನು ಗಮನಿಸಿದ್ದೇನೆ. ಎಲ್ಲಾ ರೀತಿಯ ಸಹಕಾರ ನೀಡಲು ತಯಾರಿರುವ ಹಾಗೂ ಮುಕ್ತ ಮನಸ್ಸಿನಿಂದ ಜೆಡಿಎಸ್‌ಗೆ ಬರುವವರಿಗೆ ಆಹ್ವಾನ ನೀಡಲು ನಾನು ಸಿದ್ಧನಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ. -
ಹಾಸನ: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಲವು ಕೈ ಶಾಸಕರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಸಮಾಧಾನಿತ ಶಾಸಕರನ್ನು ಜೆಡಿಎಸ್ ಪಕ್ಷಕ್ಕೆ ಬರುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಬಹಿರಂಗ ಆಹ್ವಾನ ನೀಡಿರುವುದು ಕಂಡುಬಂದಿದೆ.
ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್.ಡಿ. ಕುಮಾರಸ್ವಾಮಿಯವರು, ಕಾಂಗ್ರೆಸ್ ಪಕ್ಷದ ಅಸಮಾಧಾನಿತ ಶಾಸಕರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿದೆ. ನೊಂದವರಿಗೆ, ನೋವಿನಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದು ಹೇಳಿದ್ದಾರೆ.
ಸಚಿವ ಸ್ಥಾನ ಸಿಗದೆ ಕಾಂಗ್ರೆಸ್‌ನ ಹಲವು ಶಾಸಕರು ನೋವಿನಲ್ಲಿದ್ದಾರೆ. ಅವರಿಗೆ ಮಾತು ಕೊಟ್ಟಿದ್ದರೂ ಅದರಂತೆ ನಡೆದುಕೊಂಡಿಲ್ಲ ಎಂದು ಕೆಲವರು ನೋವು ತೋಡಿಕೊಂಡಿರುವುದನ್ನು ಗಮನಿಸಿದ್ದೇನೆ. ಎಲ್ಲಾ ರೀತಿಯ ಸಹಕಾರ ನೀಡಲು ತಯಾರಿರುವ ಹಾಗೂ ಮುಕ್ತ ಮನಸ್ಸಿನಿಂದ ಜೆಡಿಎಸ್‌ಗೆ ಬರುವವರಿಗೆ ಆಹ್ವಾನ ನೀಡಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ರಾಜ್ಯದ ಪರಿಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ಉತ್ತಮ ಕೆಲಸ ಮಾಡುವ ಸರ್ಕಾರ ಬರಬೇಕು. ಜನಪರವಾದ ತೀರ್ಮಾನ ಕೈಗೊಳ್ಳುವಂತಹ ಶಕ್ತಿ ಬೆಳೆಯಬೇಕು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿನ ಆಂತರಿಕ ವಿಶ್ವಾಸದ ಕೊರತೆ ಮತ್ತಷ್ಟು ಬಹಿರಂಗವಾಗಲಿದೆ. ಅಲ್ಲಿ ಉತ್ತಮವಾಗಿ ಕೆಲಸ ಮಾಡುವವರಿದ್ದಾರೆ. ಆದರೆ, ವಿಧಿಯಿಲ್ಲದೆ ಅಥವಾ ಅನಿವಾರ್ಯವಾಗಿ ಅಂತಹವರು ಮುಂದಿನ ದಿನಗಳಲ್ಲಿ ಆ ಪಕ್ಷ ತೊರೆಯುವ ಕಾಲ ದೂರವಿಲ್ಲ. ಅದನ್ನು ಕಾಲವೇ ನಿರ್ಧರಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ಶಾಸಕರು ಪಕ್ಷದಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಹಿರಿಯರು, ಕಿರಿಯರು ಎನ್ನುವುದಕ್ಕಿಂತ ಸಾರ್ವಜನಿಕವಾಗಿ ಭಯಭಕ್ತಿ ಇಟ್ಟುಕೊಂಡು ಜನರಿಗೆ ಗೌರವ ನೀಡುವ ಉತ್ತಮ ಶಾಸಕರು ಕಾಂಗ್ರೆಸ್‌ನಲ್ಲಿದ್ದಾರೆ. ಆದರೆ, ಪಕ್ಷ ನಿಷ್ಠೆ, ಬಲವಂತ ಅಥವಾ ಅನಿವಾರ್ಯತೆಯಿಂದಾಗಿ ಅವರು ಕಾಂಗ್ರೆಸ್‌ನಲ್ಲಿದ್ದಾರೆ. ಈ ಕುರಿತು ನನಗೆ ಮಾಹಿತಿಯಿದೆ. ಇದು ಮುಂದೆ ಯಾವ ರೀತಿಯ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡೋಣ ಎಂದರು.