ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HD Kumaraswamy: HMT ಕಾರ್ಖಾನೆಗೆ ಮರುಜೀವ- ಡಿಪಿಆರ್‌ ಸಿದ್ಧವಾಗುತ್ತಿದೆ ಎಂದ ಎಚ್.ಡಿ. ಕುಮಾರಸ್ವಾಮಿ

HMT Factory: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಚ್‌ಎಂಟಿ ಹಾಗೂ ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL) ಪುನರುಜ್ಜೀವನ ಮಾಡುವ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಎಚ್‌ಎಂಟಿ ಕಾರ್ಖಾನೆಗೆ ಮರುಜೀವ- ಡಿಪಿಆರ್‌ ಸಿದ್ಧವಾಗುತ್ತಿದೆ: ಎಚ್‌ಡಿಕೆ

-

Profile Siddalinga Swamy Oct 16, 2025 5:05 PM

ಮಂಡ್ಯ: ಪ್ರತಿಷ್ಠಿತ ಎಚ್‌ಎಂಟಿ ಕಾರ್ಖಾನೆಗೆ (HMT Factory) ಮರುಜೀವ ನೀಡಲು ಸಮಗ್ರ ಯೋಜನಾ ವರದಿ (DPR) ತಯಾರು ಮಾಡಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಚ್‌ಎಂಟಿ ಹಾಗೂ ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL) ಪುನರುಜ್ಜೀವನ ಮಾಡುವ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿಸಿದರು.

ನೀತಿ ಆಯೋಗದ ಸದಸ್ಯರು ಆಗಿರುವ ಡಾ. ವಿ.ಕೆ. ಸಾರಸ್ವತ ಅವರು ಎಚ್‌ಎಂಟಿ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಮಹತ್ವದ ವರದಿ ನೀಡಿದ್ದಾರೆ. ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಿಗಳು, ಎಚ್‌ಎಂಟಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿ.ಕೆ.ಸಾರಸ್ವತ ಅವರೊಂದಿಗೆ ನವದೆಹಲಿಯಲ್ಲಿ ಹಲವು ಸುತ್ತಿನ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ, ಜಪಾನ್ ದೇಶದಿಂದ ತಾಂತ್ರಿಕ ಸಹಕಾರ ಪಡೆಯುವ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ತಂಡವನ್ನು ಆ ದೇಶಕ್ಕೆ ಕಳಿಸಿದ್ದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬುದು ಜನರ ಅಭಿಲಾಷೆಯಾಗಿದೆ. ರಾಜ್ಯ ಸರ್ಕಾರದ ಸಹಕಾರ ಕೇಳಿದ್ದೇನೆ ಹಾಗೂ ದೆಹಲಿ ಮಟ್ಟದಲ್ಲಿಯೂ ಮಂಡ್ಯದಲ್ಲಿ ಉದ್ಯಮ ಸ್ಥಾಪಿಸುವ ಬಗ್ಗೆ ಹಲವಾರು ಉದ್ದಿಮೆದಾರರ ಜತೆ ಮಾತುಕತೆ ನಡೆಸಿದ್ದೇನೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ ದೋಖಾ! HDK ಆರೋಪ

ಮೈಶುಗರ್ ಶಾಲೆ ಅಭಿವೃದ್ಧಿಗೆ 10 ಕೋಟಿ ರೂ. ರಿಲೀಸ್‌- HDK ಭರವಸೆ

ಮಂಡ್ಯ: ಜಿಲ್ಲೆಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಮೈಶುಗರ್ ಶಾಲೆಯ (MySugar School) ಅಭಿವೃದ್ಧಿಗೆ ಶೀಘ್ರವೇ 10 ಕೋಟಿ ರೂ. ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಭರವಸೆ ನೀಡಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಈ ಶಾಲೆಯನ್ನು ಕೊಡುವುದು ಬೇಡ ಎಂದು ಹೇಳಿದ್ದೇನೆ. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದ್ದೆ. ಅದರ ವಿಚಾರದಲ್ಲಿ ನಮ್ಮ ತಂಡವೊಂದು ಮಂಡ್ಯದಲ್ಲಿ ಕೆಲಸ ಮಾಡುತ್ತಿದೆ. ಯಾರು ಅದರ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಮೈಶುಗರ್ ಶಾಲೆಯಿಂದ ಈಗಾಗಲೇ 10 ಕೋಟಿ ರೂ. ಅನುದಾನಕ್ಕೆ ಅರ್ಜಿ ಕೊಟ್ಟಿದ್ದಾರೆ. ಸದ್ಯದಲ್ಲೆ ಆ ಹಣ ಬಿಡುಗಡೆಯಾಗಲಿದೆ. ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದರು.

ಕೆಲ ದಿನಗಳಿಂದ ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿರಲಿಲ್ಲ. ಆದರೂ ನಾನು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಜಯಚಾಮರಾಜೇಂದ್ರ ಮಾರುಕಟ್ಟೆ ಮಳಿಗೆ ಉದ್ಘಾಟನೆಗೆ ಬಂದಿದ್ದೇನೆ. ಕೆಲಸದ ಒತ್ತಡದಲ್ಲೂ ಜಿಲ್ಲೆಗೆ ಹೆಚ್ಚು ಸಮಯ ಮೀಸಲು ಇಡುತ್ತೇನೆ. ಜತೆಗೆ ರಾಜ್ಯದ ಪ್ರವಾಸ ಮಾಡುವೆ ಎಂದು ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅನೇಕ ಯೋಜನೆಗೆ ಚಾಲನೆ ಕೊಟ್ಟಿದ್ದೇನೆ. ಈ ವರ್ಷ ಶಾಲಾ ಕಟ್ಟಡ, ಬಸ್ ನಿಲ್ದಾಣಗಳನ್ನು ಸಿಎಸ್‌ಆರ್ ನಿಧಿಯ ಮೂಲಕ ಅನುಷ್ಠಾನ ಮಾಡುತ್ತಿದ್ದೇನೆ. ಮೈಶುಗರ್ ಶಾಲೆ ಅಭಿವೃದ್ಧಿಗೂ ಅದೇ ನಿಧಿಯಿಂದ ಹಣ ನೀಡಲಾಗುತ್ತಿದೆ. ಅನುದಾನ ತರಿಸಿ ಕೊಡುವ ಜವಾಬ್ದಾರಿ ನನ್ನದು. ಮೈಶುಗರ್ ಶಾಲೆಗೆ ಇತಿಹಾಸ ಇದೆ. ಯಾರೂ ಸಣ್ಣದಾಗಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.

ಮಾರುಕಟ್ಟೆ ಮಳಿಗೆಗಳ ಉದ್ಘಾಟನೆ

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಮಂಡ್ಯ ನಗರಸಭೆ ವತಿಯಿಂದ ನಗರದ ಜಯಚಾಮರಾಜೇಂದ್ರ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಾರಾಟ ಮಳಿಗೆಗಳ ಸಮುಚ್ಚಯವನ್ನು ಉದ್ಘಾಟಿಸಿದರು. ಮಂಡ್ಯದ ಅತ್ಯಂತ ಹಳೆಯ ಮಾರುಕಟ್ಟೆ, ಗೊಂದಲಕ್ಕೆ ಅವಕಾಶ ಆಗದಂತೆ 127 ಮಳಿಗೆಗಳ ಹಂಚಿಕೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ | Utthana Prabandha Spardhe 2025: ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಸೂಕ್ತ ಸ್ಥಳ ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಅವರಿಗೆ ತಿಳಿಸಿದ್ದೇನೆ. ಅವರು ಜಾಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಮೂಲಸೌಕರ್ಯ ಕೊಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ಉಳಿದಂತೆ ನಾನು ಯಾರಿಗಾದರೂ ಖಾಸಗಿ ಹೂಡಿಕೆದಾರಿಗೆ ಹೇಳಿ ಕೈಗಾರಿಕೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.‌ ಕುಮಾರಸ್ವಾಮಿ ಹೇಳಿದರು.