Ration Card e-KYC: ಪಡಿತರದಾರರಿಗೆ ಗುಡ್‌ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಮಾಡಲು ವಾರದೊಳಗೆ ಮೊಬೈಲ್ ಆ್ಯಪ್ ಬಿಡುಗಡೆ
ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರದಾರರು ಆಗಮಿಸುತ್ತಿರುವುದರಿಂದ ತಾಂತ್ರಿಕ ಸಮಸ್ಯೆ ಉಂಟಾಗಿ ಇ-ಕೆವೈಸಿ ಪ್ರಕ್ರಿಯೆ ವಿಳಂಬವಾಗಿಗುತ್ತಿದೆ. ಈ ಹಿನ್ನೆಲೆಯಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
-
ಬೆಂಗಳೂರು: ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯಲ್ಲಿ (Ration Card e-KYC) ಫಲಾನುಭವಿಗಳು ಎದುರಿಸುತ್ತಿರುವ ಸರ್ವರ್ ಸಮಸ್ಯೆಗಳು ಹಾಗೂ ತಾಂತ್ರಿಕ ಅಡಚಣೆಗಳ ಕುರಿತು ಇಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಸರ್ವರ್ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಗೆಹರಿಸಿ, ಇ-ಕೆವೈಸಿ ಪ್ರಕ್ರಿಯೆ ಯಾವುದೇ ತೊಂದರೆಯಿಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ವಿಕಾಸಸೌಧದಲ್ಲಿ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (KSDC) ಪ್ರತಿನಿಧಿಗಳೊಂದಿಗೆ ತುರ್ತು ಸಭೆ ನಡೆಸಿದ ಸಚಿವರು, ಇಲಾಖೆಯ ಸರ್ವರ್‌ನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಸ್ತುತ ಸೆಪ್ಟೆಂಬರ್ ತಿಂಗಳ ರೇಷನ್ ಪಡೆಯಲು ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬಿದ್ದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಎಲ್ಲೆಲ್ಲಿ ತಾಂತ್ರಿಕ ತೊಂದರೆಗಳು ಕಂಡುಬರುತ್ತವೆಯೋ ಅಲ್ಲೆಲ್ಲಾ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆ ಪರಿಹರಿಸಬೇಕೆಂದು ಆದೇಶಿಸಿದ್ದಾರೆ.
ವಾರದೊಳಗೆ ಮೊಬೈಲ್ ಆ್ಯಪ್ ಬಿಡುಗಡೆ
ಸಾರ್ವಜನಿಕರು ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಪ್ರಕ್ರಿಯೆಯನ್ನು ಸುಲಭಗೊಳಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ. ಸಿಟಿಜನ್ ಸರ್ವಿಸಸ್ ಇ-ಡೆಲಿವರಿ ನಿರ್ದೇಶನಾಲಯದ ಸಹಯೋಗದೊಂದಿಗೆ ಈ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಖ ಚಹರೆ ಗುರುತಿಸುವಿಕೆ (Face Authentication) ತಂತ್ರಜ್ಞಾನದ ಮೂಲಕ ಜನರು ತಮ್ಮ ಮೊಬೈಲ್‌ನಲ್ಲೇ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು. ಮುಂದಿನ ಒಂದು ವಾರದೊಳಗೆ ಈ ಅಪ್ಲಿಕೇಶನ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಾದ ಒಟ್ಟು 2,67,64,276 ಅರ್ಹ ಫಲಾನುಭವಿಗಳ ಪೈಕಿ ಇದುವರೆಗೆ 97,54,197 ಜನರು ಪ್ರಕ್ರಿಯೆ ಮುಗಿಸಿದ್ದಾರೆ. ಪ್ರಸ್ತುತ ದಿನವೊಂದಕ್ಕೆ ಸರಾಸರಿ 5.40 ಲಕ್ಷ ಜನರು ಇ-ಕೆವೈಸಿ ಮಾಡುತ್ತಿದ್ದಾರೆ. ಆಹಾರ ಇಲಾಖೆಯ ಸರ್ವರ್ ಸಮಸ್ಯೆ ಹಿಂದಿನಿಂದಲೂ ಇದ್ದು, ತಾವು ಅಧಿಕಾರ ವಹಿಸಿಕೊಂಡ ನಂತರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು 3rd Party Agency ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಡಿತರ ಚೀಟಿ ಇ-ಕೆವೈಸಿಗೆ ಸೆಪ್ಟೆಂಬರ್ 30 ಕೊನೆಯ ದಿನ
ಕೇಂದ್ರ ಸರ್ಕಾರವು 2025 ರ ಜುಲೈ 22 ರಂದು ಹೊರಡಿಸಿರುವ 'ಲಕ್ಷಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ತಿದ್ದುಪಡಿ ಆದೇಶ'ದ ಪ್ರಕಾರ, ರೇಷನ್ ಕಾರ್ಡ್ ಫಲಾನುಭವಿಗಳ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಪ್ರತಿ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈ ಕಾಯ್ದೆಯನ್ವಯ ಐದು ವರ್ಷ ಪೂರ್ಣಗೊಂಡಿರುವ ರಾಜ್ಯದ ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಪಡೆದು ಮರು ಇ-ಕೆವೈಸಿ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ 30 ಅಂತಿಮ ದಿನಾಂಕವಾಗಿದ್ದು, ಎಲ್ಲಾ ಜಿಲ್ಲೆಗಳ ಜಂಟಿ ಹಾಗೂ ಉಪ ನಿರ್ದೇಶಕರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.