ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Regulate activities: ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಕಡ್ಡಾಯ: ಸರ್ಕಾರ ಆದೇಶ

Ban on RSS activities: ಖಾಸಗಿ ಸಂಘ-ಸಂಸ್ಥೆಗಳು ಅಥವಾ ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವುದನ್ನು ನಿಯಂತ್ರಿಸುವ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಸರ್ಕಾರದ ಜಂಟಿ ಕಾರ್ಯದರ್ಶಿ ಅರ್ಚನ ಎಂ.ಎಸ್‌. ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಕಡ್ಡಾಯ

-

Prabhakara R Prabhakara R Oct 18, 2025 8:40 PM

ಬೆಂಗಳೂರು: ಸರಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಆರ್‌ಎಸ್‌ಎಸ್‌ ಮಾತ್ರವಲ್ಲದೇ ಎಲ್ಲ ಖಾಸಗಿ ಸಂಘ-ಸಂಸ್ಥೆಗಳು ಸರ್ಕಾರಿ ಸ್ಥಳ ಬಳಸಲು (Regulate activities) ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಗುರುವಾರ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.

ಖಾಸಗಿ ಸಂಘ-ಸಂಸ್ಥೆಗಳು ಅಥವಾ ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವುದನ್ನು ನಿಯಂತ್ರಿಸುವ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಸರ್ಕಾರದ ಜಂಟಿ ಕಾರ್ಯದರ್ಶಿ ಅರ್ಚನ ಎಂ.ಎಸ್‌. ಆದೇಶ ಹೊರಡಿಸಿದ್ದಾರೆ.

ಸರ್ಕಾರದ ನಿಗಮ-ಮಂಡಳಿಗಳು, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿ / ಜಾಗಗಳು ನಾಗರಿಕರ ಸದ್ಬಳಕೆಗೆ ನಿರ್ದಿಷ್ಟಪಡಿಸಲಾಗಿದೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಭವಿಸದಂತೆ ಕ್ರಮವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಆಕ್ಷೇಪಗಳನ್ನು ನಿವಾರಿಸುವುದು ಸಹ ಅವಶ್ಯವಾಗಿರುತ್ತದೆ.

ರಾಜ್ಯದಲ್ಲಿ ಹಲವಾರು ಖಾಸಗಿ ಸಂಘ-ಸಂಸ್ಥೆಗಳು, ಸಂಘಟನೆಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳನ್ನು ಅನುಮತಿ ಪಡೆಯದೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ (Tresspass) ಎಂದು ಪರಿಗಣಿಸಲ್ಪಡುತ್ತವೆ. ಇದು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆ ಉಂಟುಮಾಡುತ್ತದೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ /ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಖಾಸಗಿ ಸಂಘಟನೆ, ಸಂಸ್ಥೆ, ಸಂಘವು ಆಯಾ ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವುದು ಅಗತ್ಯವಾಗಿರುತ್ತದೆ.

ಯಾವುದೇ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಅನಾನುಕೂಲವಾಗುವುದು, ಅಲ್ಲಿನ ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವುದಾದಲ್ಲಿ ಅಂತಹ ಚಟುವಟಿಕೆಗಳ ಆಯೋಜನೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿ ನಿರಾಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅನುಮತಿ ಯಾರಿಂದ ಪಡೆಯಬೇಕು?

  • ಸರ್ಕಾರದ/ ಸರ್ಕಾರಿ ಸಾಮ್ಯದ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ: ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು -ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ
  • ಉದ್ಯಾನವನಗಳು, ಆಟದ ಮೈದಾನಗಳು, ಇತರ ತೆರೆದ ಸ್ಥಳಗಳು: ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ/ ಸ್ಥಳಗಳು: ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು/ ಪೊಲೀಸ್ ಅಧೀಕ್ಷಕರು.

ಈ ಸುದ್ದಿಯನ್ನೂ ಓದಿ | RSS: ಆರೆಸ್ಸೆಸ್‌ ಪಥಸಂಚಲನದಲ್ಲಿ ಭಾಗವಹಿಸಿದ ಪಿಡಿಒ ಅಮಾನತು

ಈ ಇಲಾಖೆ, ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನ ಬದ್ಧವಾದ ನಾಗರಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಅನುವಾಗುವಂತೆ ಸೂಕ್ತ, ವಿವರವಾದ ಮಾರ್ಗಸೂಚಿಯನ್ನು ಆಯಾ ಇಲಾಖೆಗಳು ಹೊರಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.