ಕರ್ನಾಟಕದಲ್ಲಿ ಯುದ್ಧ ವಿಮಾನ ತಯಾರಿಕಾ ಘಟಕಕ್ಕೆ 650 ಎಕರೆ ಭೂಮಿ ಕೊಡಲು ಸಿದ್ಧ: ರಕ್ಷಣಾ ಸಚಿವರಿಗೆ ಎಂ.ಬಿ.ಪಾಟೀಲ್ ಪತ್ರ
ಎಎಂಸಿಎ ಯೋಜನೆಗೆ ಸಂಬಂಧಿಸಿದಂತೆ ನಾವು ರಕ್ಷಣಾ ಸಚಿವಾಲಯ ಮತ್ತು ಎಡಿಎ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ಇದಕ್ಕೆ ಅಗತ್ಯವಿರುವ 650 ಎಕರೆ ಭೂಮಿಯನ್ನು ಕೊಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಚಿವ ಎಂ.ಬಿ.ಪಾಟೀಲ್. -
ಬೆಂಗಳೂರು: ರಕ್ಷಣಾ ಇಲಾಖೆಯ ಅಡಿಯಲ್ಲಿರುವ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಸ್ಥಾಪಿಸಲು ಉದ್ದೇಶಿಸಿರುವ ಮಧ್ಯಮ ಸ್ತರದ ಸುಧಾರಿತ ಯುದ್ಧ ವಿಮಾನ (ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ ಕ್ರಾಫ್ಟ್ (AMCA) ತಯಾರಿಕಾ ಕ್ಯಾಂಪಸ್ಸನ್ನು ಕರ್ನಾಟಕದಲ್ಲೇ ಸ್ಥಾಪಿಸಬೇಕು. ಇದಕ್ಕೆ ಅಗತ್ಯವಿರುವ 650 ಎಕರೆ ಭೂಮಿಯನ್ನು ಕೊಡಲು ರಾಜ್ಯ ಸರಕಾರ ಸಿದ್ಧವಿದೆ. ಈ ಯೋಜನೆಯು ರಾಜ್ಯದಲ್ಲೇ ಜಾರಿಗೆ ಬರುವುದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸೂಕ್ತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಶನಿವಾರ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ವಲಯಕ್ಕೆ ರಾಜ್ಯವು ಶೇ.65ರಷ್ಟು ಕೊಡುಗೆ ನೀಡುತ್ತಿದೆ. ಉದ್ದೇಶಿತ ಸಂಸ್ಥೆಗೆ ಆರಂಭದಲ್ಲಿ ಬೇಕಿರುವ 300 ಎಕರೆ (ಯುದ್ಧ ವಿಮಾನ ತಯಾರಿಕೆ) ಮತ್ತು ಭವಿಷ್ಯದ ದೃಷ್ಟಿಯಿಂದ ಅಗತ್ಯವಿರುವ 350 ಎಕರೆ (ರನ್ ವೇ ನಿರ್ಮಾಣ) ಸ್ಥಳವನ್ನು ಕೂಡಲೇ ಒದಗಿಸಲು ಯಾವುದೇ ತೊಂದರೆ ಇಲ್ಲ. ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಸೇರಿದ ಎಚ್ಎಎಲ್, ಇಸ್ರೋ, ಎನ್ಎಎಲ್, ಡಿಆರ್ ಡಿಒ, ಡಿ.ಎ.ಆರ್.ಇ., ಜಿ.ಟಿ.ಆರ್.ಇ., ಎಡಿಇ, ಬಿಇಎಂಎಲ್ ಮತ್ತು ಬಿಇಎಲ್ ಮುಂತಾದವೆಲ್ಲ ಬೆಂಗಳೂರಿನಲ್ಲೇ ಇವೆ. ಹೀಗಾಗಿ ಎಎಂಸಿಎ ಸ್ಥಾವರ ಸ್ಥಾಪನೆಗೆ ಬೆಂಗಳೂರು ಅಥವಾ ಸುತ್ತಮುತ್ತಲಿನ ಸ್ಥಳಗಳು ಹೇಳಿಮಾಡಿಸಿದಂತಿವೆ ಎಂದು ವಿವರಿಸಿದ್ದಾರೆ.
ಈ ಸ್ಥಾವರವನ್ನು ಸ್ಥಾಪಿಸಲಿರುವ ಎ.ಡಿ.ಎ ಕೇಂದ್ರ ಕಚೇರಿ ಕೂಡ ಬೆಂಗಳೂರಿನಲ್ಲೇ ಇದೆ. ಇದನ್ನು ಕೇಂದ್ರ ಸರಕಾರ ಪರಿಗಣಿಸಬೇಕು. ಇನ್ನೊಂದೆಡೆ, ಟಾಟಾ ಸಮೂಹದವರು ವೇಮಗಲ್‌ನಲ್ಲಿ ಹೆಲಿಕಾಪ್ಟರ್ ಜೋಡಣಾ ಘಟಕ ಸ್ಥಾಪಿಸಿದ್ದಾರೆ. ಜಗದ್ವಿಖ್ಯಾತ ಏರ್ ಬಸ್ ಮತ್ತು ಬೋಯಿಂಗ್ ಕಂಪನಿಗಳು ಕೂಡ ತಮ್ಮ ಬೃಹತ್ ಎಂಜಿನಿಯರಿಂಗ್ ಮತ್ತು ಆರ್ & ಡಿ ಘಟಕಗಳನ್ನು ರಾಜ್ಯದಲ್ಲಿ ಹೊಂದಿವೆ. ಇವುಗಳಿಗೆ ಪೂರಕವಾಗಿ ಎರಡು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಮ್ಮಲ್ಲಿ ಸಕ್ರಿಯವಾಗಿವೆ ಎಂದು ಅವರು ಪತ್ರದಲ್ಲಿ ವಿಶದಪಡಿಸಿದ್ದಾರೆ.
Bidadi township: ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ ಪರ ಇಂದಿನಿಂದಲೇ ನನ್ನ ಹೋರಾಟ ಆರಂಭ: ಎಚ್.ಡಿ. ದೇವೇಗೌಡ ಘೋಷಣೆ
ಪ್ರತ್ಯೇಕ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗವನ್ನೇ ಹೊಂದಿರುವ ಭಾರತೀಯ ವಿಜ್ಞಾನ ಸಂಸ್ಥೆ ಕೂಡ ಬೆಂಗಳೂರಿನಲ್ಲೇ ಇದೆ. ಈ ಸಂಸ್ಥೆಯು ಎಡಿಎ, ಡಿ.ಆರ್.ಡಿ.ಒ ಮತ್ತು ಎಚ್ಎಎಲ್ ಮುಂತಾದವಕ್ಕೆ ಬೇಕಾಗಿರುವ ಪ್ರತಿಭಾವಂತರನ್ನು ಒದಗಿಸುತ್ತಿವೆ. ರಾಜ್ಯವು ಪ್ರತ್ಯೇಕ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯನ್ನು ಹೊಂದಿದ್ದು, ಐದು ಕಡೆಗಳಲ್ಲಿ ಏರೋಸ್ಪೇಸ್ ಹಬ್ ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ನೀತಿಯಡಿ 6 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಇದ್ದು, 2027ರ ಕೊನೆಯ ಹೊತ್ತಿಗೆ 70 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಎಎಂಸಿಎ ಯೋಜನೆಗೆ ಸಂಬಂಧಿಸಿದಂತೆ ನಾವು ರಕ್ಷಣಾ ಸಚಿವಾಲಯ ಮತ್ತು ಎಡಿಎ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಪಾಟೀಲ ನುಡಿದಿದ್ದಾರೆ.