ರಾಹುಲ್ ಗಾಂಧಿ ಸಹವಾಸದಿಂದ ಮಲ್ಲಿಕಾರ್ಜುನ ಖರ್ಗೆಯೂ ಅಪ್ರಬುದ್ಧರಾಗಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ
Pralhad Joshi: ರಾಹುಲ್ ಗಾಂಧಿ ಸಹವಾಸದಿಂದಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ರಾಜ್ಯದ ಅಧ್ಯಕ್ಷರಾದಿಯಾಗಿ ಎಲ್ಲರೂ ಒಂದು ರೀತಿ ಕೆಳಮಟ್ಟದ ಭಾಷೆ ಪ್ರಯೋಗಿಸುತ್ತಿದ್ದಾರೆ. ಇದು ಇವರ ಸಂಸ್ಕೃತಿ ಮತ್ತು ಹತಾಶೆಯನ್ನು ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಪ್ರಲ್ಹಾದ್ ಜೋಶಿ ಮತ್ತು ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ). -
ನವದೆಹಲಿ, ಅ.26: ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಒಬ್ಬರೇ ಅಪ್ರಬುದ್ಧ ನಾಯಕ ಎಂದು ಭಾವಿಸಿದ್ದೆವು. ಆದರೆ, ಅವರ ಸಹವಾಸದಿಂದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕ ಎಲ್ಲರೂ ಅಪ್ರಬುದ್ಧರೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಅಪಕ್ವವಾಗಿಬಿಟ್ಟಿದ್ದಾರೆ. ಹತಾಶ ಮನೋಭಾವದಿಂದ ಅರಿವೇ ಇಲ್ಲದಂತೆ ಏನೇನೆಲ್ಲಾ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾತೋಶ್ರೀ ಬಗ್ಗೆ ಆಯಿತು ಈಗ ಅವರ ದಿವಂಗತ ತಂದೆಯನ್ನೂ ರಾಜಕೀಯ ವಿಷಯವಾಗಿ ಎಳೆದು ತರುತ್ತಿದ್ದಾರೆ ಈ ಕಾಂಗ್ರೆಸ್ಸಿಗರು ಎಂದು ಜೋಶಿ ತೀವ್ರವಾಗಿ ಖಂಡಿಸಿದರು.
ಪ್ರಧಾನಿ ಮೋದಿ ಅವರ ಪೋಷಕರು ಅತ್ಯಂತ ಬಡ ಕುಟುಂಬದಿಂದ ಬಂದವರು ಅಲ್ಲದೆ, ಪ್ರಸ್ತುತ ನಮ್ಮ ನಡುವೆ ಇಲ್ಲದಾಗಿದ್ದಾರೆ. ಹೀಗಿರುವಾಗ ಮೃತ ಪೋಷಕರನ್ನು ಹೆಸರಿಸಿ ಸಲ್ಲದ ಹೇಳಿಕೆ ನೀಡುವುದು ಕಾಂಗ್ರೆಸ್ ನಾಯಕರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಸಹವಾಸದಿಂದಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ರಾಜ್ಯದ ಅಧ್ಯಕ್ಷರಾದಿಯಾಗಿ ಎಲ್ಲರೂ ಒಂದು ರೀತಿ ಕೆಳಮಟ್ಟದ ಭಾಷೆ ಪ್ರಯೋಗಿಸುತ್ತಿದ್ದಾರೆ. ಇದು ಇವರ ಸಂಸ್ಕೃತಿ ಮತ್ತು ಹತಾಶೆಯನ್ನು ಪ್ರದರ್ಶಿಸುತ್ತಿದೆ ಎಂದು ಕುಟುಕಿದರು.
ಈ ಹಿಂದೆ ಸೋನಿಯಾ ಗಾಂಧಿ ಹೀಗೆ ಮಾಡುತ್ತಿದ್ದರು, ಈಗ ರಾಹುಲ್ ಗಾಂಧಿ ಅದನ್ನೇ ಮುಂದುವರಿಸಿದ್ದಾರೆ. ಅವರು ಚುನಾವಣೆಗಳಲ್ಲಿ ಗೆಲ್ಲಲು ಬಯಸುವುದಾದರೆ ಮೊದಲು ಇಂತಹ ಅಸಭ್ಯ, ಕೀಳು ಮಟ್ಟದ ಭಾಷೆ ಬಿಡಬೇಕು. ಕನಿಷ್ಠ ಮತದ ಭಾಷೆ ಎಂದಿಗೂ ಯಶಸ್ಸು ತರುವುದಿಲ್ಲ ಎಂಬುದನ್ನು ಅರಿತುಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು ಜೋಶಿ.
ರಾಜಕೀಯದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಸಣ್ಣತನ ತೋರಿದ ಮಲ್ಲಿಕಾರ್ಜುನ ಖರ್ಗೆ: ಎಚ್.ಡಿ.ಕುಮಾರಸ್ವಾಮಿ
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಅದಾಗಲೇ ಸಂಪೂರ್ಣ ನೆಲಕಚ್ಚಿದೆ. ಇವರು ಹೀಗೇ ವರ್ತಿಸಿದಲ್ಲಿ ಜನರು ಇನ್ನೂ ಹೀನಾಯವಾಗಿ ಸೋಲಿನ ರುಚಿ ತೋರಿಸುತ್ತಾರೆ ಎಂದು ಎಚ್ಚರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ವಯಸ್ಸು ಮತ್ತು ಅನುಭವದಲ್ಲಿ ಅತ್ಯಂತ ಹಿರಿಯರಾದ ಅದರಲ್ಲೂ ನಮ್ಮ ಸಂಸ್ಕೃತಿ ಹಿರಿಮೆಯ ಕರುನಾಡಿನವರಾಗಿ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಮತ್ತು ತೀವ್ರ ವಿಷಾದನೀಯ ಎಂದ ಅವರು ಬೇಸರ ವ್ಯಕ್ತಪಡಿಸಿದರು