2028ಕ್ಕೆ ಕರ್ನಾಟಕದಲ್ಲಿ ಎನ್‌ಡಿಎ ಸರ್ಕಾರ ಬರುವುದು ಖಚಿತ: ನಿಖಿಲ್ ಕುಮಾರಸ್ವಾಮಿ
Nikhil Kumaraswamy: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ ₹29,764.10 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅನುದಾನವನ್ನು ₹190 ಕೋಟಿಯಿಂದ ₹50 ಕೋಟಿಗೆ ಇಳಿಸಿ, ₹140 ಕೋಟಿ ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. -
ಮೈಸೂರು, ಮೇ 13: ಸಿದ್ದರಾಮಯ್ಯ ಅವರು ಸದನದ ಒಳಗಡೆ ಜೆಡಿಎಸ್ 17 ಸ್ಥಾನದಿಂದ ಸಿಂಗಲ್ ಡಿಜಿಟ್‌ಗೆ ಬರುತ್ತೆ ಎಂದು ಅಪಹಾಸ್ಯ ಮಾಡಿದ್ದಾರೆ. ವರುಣದಲ್ಲೇ ಈ ಸವಾಲನ್ನು ಸ್ವೀಕರಿಸುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೇರ ಸವಾಲು ಹಾಕಿದರು. ವರುಣ ಕ್ಷೇತ್ರದ ಮೆಲ್ಲಹಳ್ಳಿಯಲ್ಲಿ ನಡೆದ ಜನರೊಂದಿಗೆ ಜನತಾದಳ ಸಮಾರಂಭದಲ್ಲಿ ಮಾತನಾಡಿದ ಅವರು, 2004ರಲ್ಲಿ ಜೆಡಿಎಸ್ 58 ಸ್ಥಾನ ಪಡೆದಿತ್ತು. ಅದಕ್ಕಿಂತ ಒಂದು ಸ್ಥಾನ ಹೆಚ್ಚಾಗಿ ಪಡೆದು, 2028ಕ್ಕೆ ಎನ್‌ಡಿಎ ಸರ್ಕಾರ ರಚನೆ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ನಿಮ್ಮನ್ನು ಚಾಂಪಿಯನ್ ಮಾಡಿದ್ದು ಯಾರು ಅಂತ ಮರೆತಿದ್ದೀರಾ?
ʼಅಹಿಂದ ನಾಯಕ ಅಂತ ಹೇಳುವವರು, ನಿಮ್ಮನ್ನು ಚಾಂಪಿಯನ್ ಮಾಡಿದ್ದು ಯಾರು ಅಂತ ಮರೆತಿದ್ದೀರಾ?ʼ ಎಂದು ಪ್ರಶ್ನಿಸಿದ ನಿಖಿಲ್, ʼಇಂದು ದಾಖಲೆ ಬಜೆಟ್ ಮಂಡಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆʼ ಎಂದು ವಾಗ್ದಾಳಿ ನಡೆಸಿದರು.
ದಲಿತರ ಹಣ ಗ್ಯಾರಂಟಿಗೆ ವರ್ಗಾವಣೆ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ ₹29,764.10 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅನುದಾನವನ್ನು ₹190 ಕೋಟಿಯಿಂದ ₹50 ಕೋಟಿಗೆ ಇಳಿಸಿ, ₹140 ಕೋಟಿ ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಕಳೆದ ಎರಡು ದಶಕದಲ್ಲಿ 54 ಜನ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಅನುಭವಿಸಿ, ರಾಜಕೀಯ ಲಾಭಕ್ಕಾಗಿ ಪಕ್ಷ ಬಿಟ್ಟು ಹೋದರು. ಅಷ್ಟು ಜನ ಬಿಟ್ಟರೂ ಪಕ್ಷ ಇಷ್ಟು ಸದೃಢವಾಗಿದೆ ಎಂದರೆ, ಅದು ನಿಮ್ಮಂಥ ನಿಷ್ಠಾವಂತ ಕಾರ್ಯಕರ್ತರಿಂದ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2,416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಕಳೆದ 2 ವರ್ಷಗಳಲ್ಲಿ 138 ರೈತರು ಬಲಿಯಾಗಿದ್ದಾರೆ. 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ ₹7.64 ಲಕ್ಷ ಕೋಟಿ ಮೀರಲಿದೆ ಎಂದು ಅಂಕಿ-ಅಂಶ ಸಮೇತ ವಿವರಿಸಿದರು.
ದಲಿತರ ಮೇಲೆ ದೌರ್ಜನ್ಯದಲ್ಲಿ ರಾಜ್ಯ 8ನೇ ಸ್ಥಾನ: NCRB ವರದಿ ಉಲ್ಲೇಖಿಸಿ ಸರ್ಕಾರದ ವಿರುದ್ಧ ನಿಖಿಲ್ ವಾಗ್ದಾಳಿ
ಕುಮಾರಣ್ಣ ಅಧಿಕಾರದಲ್ಲಿದ್ದಾಗ 25,000 ಕೋಟಿ ರುಪಾಯಿ ಸಾಲ ಮನ್ನಾ ಮಾಡಿ 25 ಲಕ್ಷ ರೈತ ಕುಟುಂಬಗಳಿಗೆ ನೆರವಾದರು. ನಾವು ಜನರ ಪರವಾಗಿ ಹೋರಾಟ ಮುಂದುವರಿಸುತ್ತೇವೆ. 2028ಕ್ಕೆ ಕರ್ನಾಟಕದಲ್ಲಿ ಜನಪರ ಎನ್‌ಡಿಎ ಸರ್ಕಾರ ಬರುವುದು ಖಚಿತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಕೆ. ಮಹದೇವ್, ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮುಖಂಡರಾದ ಕೃಷ್ಣ ನಾಯಕ್, ಪ್ರಸನ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.