Festival Trend 2025: ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ ಮೂರ್ತಿಗಳು
ಆಗಸ್ಟ್ 27ರಂದು ಗಣೇಶ್ ಚತುರ್ಥಿ ನಡೆಯಲಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಇದೀಗ ಇಕೋ ಫ್ರೆಂಡ್ಲಿ ಮಿನಿ ಗೌರಿ-ಗಣೇಶನ ಮೂರ್ತಿಗಳದ್ದೇ ಕಾರುಬಾರು! ಪುಟ್ಟ ಮೂರ್ತಿಗಳಿಂದಿಡಿದು ಆಳೆತ್ತರದ ಮೂರ್ತಿಗಳವರೆಗಿನ ಪರಿಸರ ಸ್ನೇಹಿ ಮೂರ್ತಿಗಳು ಎಲ್ಲೆಡೆ ಲಗ್ಗೆ ಇಟ್ಟಿವೆ. ಈ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು


ಇಕೋ ಫ್ರೆಂಡ್ಲಿ ಗೌರಿ-ಗಣೇಶ
ಈಗ ಎಲ್ಲಿ ನೋಡಿದರೂ ಇಕೋ ಫ್ರೆಂಡ್ಲಿ ಗೌರಿ-ಗಣೇಶನ ಮೂರ್ತಿಗಳದ್ದೇ ಕಾರುಬಾರು! ಮಾರುಕಟ್ಟೆಗಳಲ್ಲಿ ಮಾತ್ರವಲ್ಲ, ಆನ್ಲೈನ್ ಮಾರುಕಟ್ಟೆಗೂ ಇವು ಲಗ್ಗೆ ಇಟ್ಟಿವೆ. ಹೌದು, ಹಬ್ಬ ಸಮೀಪಿಸುತ್ತಿರುವಂತೆ ಎಲ್ಲೆಡೆ ಪರಿಸರ ಸ್ನೇಹಿ ಮಿನಿ ಗೌರಿ-ಗಣೇಶನ ಮೂರ್ತಿಗಳಿಂದಿಡಿದು ಆಳೆತ್ತರದ ಮೂರ್ತಿಗಳು ಎಂಟ್ರಿ ನೀಡಿವೆ.

ಬಣ್ಣ ರಹಿತ ಗೌರಿ-ಗಣೇಶನ ಕಾಲ
ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾದಂತೆ ಪೂಜಿಸಲು ಇಚ್ಚಿಸುವವರಿಗೋಸ್ಕರ ಸಾಕಷ್ಟು ಸ್ಥಳೀಯ ಬ್ರ್ಯಾಂಡ್ಗಳ ಹೆಸರಲ್ಲಿ ಇಕೋ ಫ್ರೆಂಡ್ಲಿ ಗೌರಿ-ಗಣೇಶನ ಮೂರ್ತಿಗಳು ಆಗಮಿಸಿವೆ. ಅಂಗೈಯಲ್ಲಿ ಹಿಡಿಯುವ ಮೈಕ್ರೋ ಶೇಪ್ನ ಮಣ್ಣಿನ ಕೆಮಿಕಲ್ ರಹಿತ ಮೂರ್ತಿಗಳಿಂದಿಡಿದು ಬೃಹತ್ ಆಕಾರದವು ಕಲಾವಿದರ ಕೈಗಳಲ್ಲಿ ತಯಾರಾಗಿ ಬಂದಿವೆ ಎನ್ನುತ್ತಾರೆ ಆರ್ವಿ ರಸ್ತೆಯಲ್ಲಿ ಮಾರಾಟ ಮಾಡುವ ಅಂಗಡಿಯೊಂದರ ಮಾರಾಟಗಾರರು.

ಆನ್ಲೈನ್ ಮಾರುಕಟ್ಟೆಯಲ್ಲಿ ಸ್ನೇಹಿ ಸೀಡ್ ಗಣೇಶ
ಇದೀಗ ಆನ್ಲೈನ್ ಮಾರುಕಟ್ಟೆಯಲ್ಲೂ ಪರಿಸರ ಸ್ನೇಹಿ ಸೀಡ್ ಗೌರಿ-ಗಣೇಶನ ಮೂರ್ತಿಗಳಿರುವ ಬಾಕ್ಸ್ಗಳು ಮಾರಾಟವಾಗುತ್ತಿವೆ. ಇಲ್ಲಿಯೂ ಕೂಡ ನಾನಾ ಬಗೆಯ ಪ್ಯಾಕೇಜ್ ಸೌಲಭ್ಯ ನೀಡಲಾಗುತ್ತಿದೆ. ಆನ್ಲೈನ್ನಲ್ಲಿ ಗೌರಿ-ಗಣೇಶನನ್ನು ಖರೀದಿಸುವುದು ಇತರೇ ವಸ್ತುಗಳಿಗಾಗಿ ಆನ್ಲೈನ್ ಶಾಪಿಂಗ್ ಮಾಡುವಷ್ಟೇ ಸುಲಭವಾಗಿದೆ ಎನ್ನುತ್ತಾರೆ ಪ್ರತಿಬಾರಿ ಆನ್ಲೈನ್ನಲ್ಲಿ ಖರೀದಿಸುವ ದೇವಾಂಶು ಹಾಗೂ ರಮಣ.

ಸಸಿ ಮೊಳಕೆಯೊಡೆಯುವ ಸೀಡ್ ಗಣೇಶ
ಇನ್ನು, ಹಬ್ಬಕ್ಕೆ ಪೂರಕ ಎಂಬಂತೆ ಸ್ಥಳೀಯ ಬೆಂಗಳೂರಿನ ಸೀಡ್ ಇಂಡಿಯಾ ಕಂಪನಿ ಸೇರಿದಂತೆ ನಾನಾ ಸ್ಟಾರ್ಟ್ ಅಪ್ ಕಂಪನಿಗಳು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಪರಿಸರ ಸ್ನೇಹಿ ಗೌರಿ-ಗಣೇಶನ ಮೂರ್ತಿಗಳನ್ನು ನಿರ್ಮಿಸಿ ಮಾರಾಟಕ್ಕಿಟ್ಟಿವೆ. ಇವನ್ನು ಮುಳುಗಿಸಿದ ನಂತರ ಮಣ್ಣಾಗುವ ಗಣಪನಿಂದ ಗಿಡವೊಂದು ಬೆಳೆಯುವ ಟೆಕ್ನಿಕ್ ಬಳಸಲಾಗಿದೆ.

ಹೋಮ್ ಡಿಲಿವರಿ ಸೌಲಭ್ಯ
ಬಹಳಷ್ಟು ದೊಡ್ಡ ಗ್ರಂಥಿಕೆ ಅಂಗಡಿಗಳು ಪುಟ್ಟ ಗಣಪನ ಜತೆಗೆ ಪೂಜೆಗೆ ಅಗತ್ಯವಿರುವ ಪ್ರತಿಯೊಂದು ಸಾಮಗ್ರಿಗಳನ್ನು ಒಳಗೊಂಡ ಪ್ಯಾಕೇಜನ್ನು ಹೋಮ್ ಡಿಲೆವರಿ ಸೌಲಭ್ಯ ನೀಡಿ ತಲುಪಿಸುತ್ತಿವೆ.