ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nagara Panchami: ಬಂದೇ ಬಿಟ್ಟಿತು ಶ್ರಾವಣ ಮಾಸದ ಮೊದಲ ಹಬ್ಬ- ನಾಗರಪಂಚಮಿಯ ವಿಶೇಷತೆ ಏನು?

Nagara Panchami: ಆಷಾಢ ಕಳೆದು ಶ್ರಾವಣಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲು ಆಚರಿಸುವ ಹಬ್ಬ ನಾಗರಪಂಚಮಿ. ನಾಗರ ಪಂಚಮಿ ಎಂದರೆ ಸರ್ಪ ದೇವತೆಗಳನ್ನು ಅಥವಾ ನಾಗರಹಾವನ್ನು ಪೂಜಿಸುವ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಮಾಸದ ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ.

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯ ವಿಶೇಷತೆ ಏನು?

Priyanka P Priyanka P Jul 29, 2025 5:00 AM

ಬೆಂಗಳೂರು: ಆಷಾಢ ಕಳೆದು ಶ್ರಾವಣಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲು ಆಚರಿಸುವ ಹಬ್ಬ ನಾಗರಪಂಚಮಿ(Nagara Panchami). ಈ ಹಬ್ಬಕ್ಕೆ ಹಿಂದೂಗಳಲ್ಲಿ ವಿಶೇಷ ಮಹತ್ವವಿದೆ. ನಾಗರ ಪಂಚಮಿ ಎಂದರೆ ಸರ್ಪ ದೇವತೆಗಳನ್ನು ಅಥವಾ ನಾಗರಹಾವನ್ನು ಪೂಜಿಸುವ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಮಾಸದ ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್‌ನಲ್ಲಿ ಬರುತ್ತದೆ. ಈ ಬಾರಿ ಜುಲೈ 29ರ ಮಂಗಳವಾರ ಆಚರಿಸಲಾಗುತ್ತದೆ.

ಕೆಲವೆಡೆ ಇದನ್ನು ಅಣ್ಣ-ತಂಗಿ ಇಬ್ಬರೂ ಸೇರಿ ಪೂಜಿಸುತ್ತಾರೆ. ಈ ದಿನದಂದು ಹೊಸ ಬಟ್ಟೆಯನ್ನು ಧರಿಸಿ ನಾಗ ದೇವರಿಗೆ ಹಾಲಿನ ಅಭಿಷೇಕ ನೆರವೇರಿಸಲಾಗುತ್ತದೆ. ಹೆಣ್ಮಕ್ಕಳು ತನ್ನ ಸಹೋದರನಿಗಾಗಿ ಉಪವಾಸವಿದ್ದು, ಭಕ್ತಿ-ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಈ ದಿನದಂದು ಪೂಜೆ ಸಲ್ಲಿಸುವುದರಿಂದ ಕುಟುಂಬಗಳನ್ನು ಹಾವು ಕಡಿತ ಮತ್ತು ದುರದೃಷ್ಟದಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ.

ಹಿಂದೂ ಪುರಾಣಗಳಲ್ಲಿ, ಹಾವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈಶ್ವರನು ತನ್ನ ಕುತ್ತಿಗೆಯಲ್ಲಿ ನಾಗರಹಾವನ್ನು ಧರಿಸುತ್ತಾನೆ. ವಿಷ್ಣುವು ಅನಂತ (ಶೇಷ ನಾಗ) ಎಂಬ ಸರ್ಪದ ಮೇಲೆ ವಿಶ್ರಾಂತಿ ಪಡೆಯುತ್ತಾನೆ. ಸುಬ್ರಹ್ಮಣ್ಯ (ಕಾರ್ತಿಕೇಯ) ಸರ್ಪ ರಕ್ಷಕ ಎಂದು ಪರಿಗಣಿಸಲಾಗಿದೆ. ನಾಗಗಳನ್ನು ನೀರಿನ ಮೂಲಗಳು, ಫಲವತ್ತತೆ ಮತ್ತು ಸಂಪತ್ತಿನ ರಕ್ಷಕರೆಂದು ಪೂಜಿಸಲಾಗುತ್ತದೆ.

ಹಬ್ಬದ ಹಿಂದಿನ ದಂತಕಥೆಗಳು

ನಾಗರಪಂಚಮಿಗೆ ಸಂಬಂಧಪಟ್ಟಂತೆ ಹಲವಾರು ದಂತಕಥೆಗಳಿವೆ. ಮಹಾಭಾರತದ ಕಥೆಯ ಪ್ರಕಾರ, ರಾಜ ಪರೀಕ್ಷಿತನ ಮಗ ಜನಮೇಜಯನು ತನ್ನ ತಂದೆಯ ಹಾವಿನ ಕಡಿತದಿಂದ ಸಾವಿಗೆ ಸೇಡು ತೀರಿಸಿಕೊಳ್ಳಲು ಬೃಹತ್ ಸರ್ಪ ಯಾಗ ಮಾಡಿದನು. ಇದನ್ನು ನಿಲ್ಲಿಸಲು, ಋಷಿ ಆಸ್ತಿಕ ಮುನಿ ಮಧ್ಯಪ್ರವೇಶಿಸುತ್ತಾರೆ. ಶ್ರಾವಣ ಪಂಚಮಿಯ ದಿನದಂದು ಯಜ್ಞವನ್ನು ಕೊನೆಗೊಳಿಸುವಂತೆ ಜನಮೇಜಯನನ್ನು ಮನವೊಲಿಸಿದರು. ಹೀಗಾಗಿ ಈ ದಿನವನ್ನು ನಾಗ ಪಂಚಮಿ ಎಂದು ಕರೆಯಲಾಯಿತು.

ಮತ್ತೊಂದು ದಂತಕಥೆಯ ಪ್ರಕಾರ, ಯಮುನಾ ನದಿಯನ್ನು ವಿಷಪೂರಿತಗೊಳಿಸಿದ ಕಾಲಿಯಾ ಎಂಬ ಸರ್ಪವನ್ನು ಶ್ರೀಕೃಷ್ಣನು ಬಾಲಕನಾಗಿದ್ದಾಗ ನಿಗ್ರಹಿಸಿದ್ದ. ಕೃಷ್ಣ ಅದರ ಹೆಡೆಗಳ ಮೇಲೆ ನೃತ್ಯ ಮಾಡಿ ಅದನ್ನು ಓಡಿಸಿ, ನದಿಯ ಶುದ್ಧತೆಯನ್ನು ಪುನಃಸ್ಥಾಪಿಸಿದನೆಂಬ ನಂಬಿಕೆಯಿದೆ.

ಜಾನಪದ ನಂಬಿಕೆಯ ಪ್ರಕಾರ, ಒಂದೂರಲ್ಲಿ ನಾಲ್ಕು ಜನ ಗಂಡ್ಮಕ್ಕಳಿಗೆ ಒಬ್ಬಳು ತಂಗಿ ಇರುತ್ತಾಳೆ. ನಾಗರಪಂಚಮಿ ದಿನ ಅವರೆಲ್ಲಾ ಸೇರಿ ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಈ ವೇಳೆ ಅಣ್ಣಂದಿರು ಹಾವು ಕಚ್ಚಿ ಮೃತಪಡುತ್ತಾರೆ. ಅಣ್ಣಂದಿರನ್ನು ಕಳೆದುಕೊಂಡ ನೋವಿನಲ್ಲಿದ್ದ ತಂಗಿ ಒಬ್ಬಾತನನ್ನಾದರೂ ಬದುಕಿಸುವಂತೆ ಬೇಡಿಕೊಂಡಿದ್ದಾಳೆ. ಹೀಗಾಗಿ ಒಬ್ಬ ಅಣ್ಣನನ್ನು ಸರ್ಪ ಪ್ರಾಣಾಪಾಯದಿಂದ ಕಾಪಾಡಿತಂತೆ. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಆಚರಿಸಿದರು. ಅಂದಿನಿಂದ ಇದು ಹಲವೆಡೆಗಳಲ್ಲಿ ಅಣ್ಣ-ತಂಗಿಯರ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ.‌

ಈ ಸುದ್ದಿಯನ್ನೂ ಓದಿ: Vastu Tips: ವೃತ್ತಿ ಜೀವನದ ಅಡೆತಡೆ ದೂರ ಮಾಡಲು ಇಲ್ಲಿದೆ ವಾಸ್ತು ಪರಿಹಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಭಿನ್ನ ಆಚರಣೆ

ಇನ್ನು ಕರ್ನಾಟಕದ ಕರಾವಳಿ ಭಾಗ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಗಳಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಅಲ್ಲಿ ನಾಗಾರಾಧನೆಯು ಸ್ಥಳೀಯ ಸಂಸ್ಕೃತಿ, ಆಚರಣೆಗಳು ಮತ್ತು ಜಾನಪದದಲ್ಲಿ ಆಳವಾಗಿ ಬೇರೂರಿದೆ. ಭಾರತದ ಇತರ ಪ್ರದೇಶಗಳಿಗಿಂತ ಭಿನ್ನವಾಗಿ ಇಲ್ಲಿ ಆಚರಿಸಲಾಗುತ್ತದೆ. ನಾಗಾರಾಧನೆಯು ಇಲ್ಲಿನ ಅತಿ ದೊಡ್ಡ ಸಂಪ್ರದಾಯವಾಗಿದೆ.

ಈ ಜಿಲ್ಲೆಗಳಲ್ಲಿ ತುಳುವರು ಹಾವುಗಳನ್ನು (ನಾಗರಹಾವು) ರಕ್ಷಕ ಶಕ್ತಿಗಳೆಂದು ನಂಬುತ್ತಾರೆ. ಅವು ನಾಗಬನಗಳು ಎಂದು ಕರೆಯಲ್ಪಡುವ ಮರಗಳಿಂದ ಕೂಡಿದ ಪವಿತ್ರ ಸ್ಥಳಗಳಲ್ಲಿ ವಾಸಿಸುತ್ತವೆ ಎಂದು ನಂಬಲಾಗಿದೆ. ಬರಡಾಗಿದ್ದ ಭೂಮಿಯನ್ನು ಫಲವತ್ತತೆ ಮಾಡಿದ್ದು ನಾಗಗಳು ಎಂಬುದು ಇಲ್ಲಿನ ಜನರ ನಂಬಿಕೆ. ಹೀಗಾಗಿ ನಾಗಾರಾಧನೆಗೆ ಇಲ್ಲಿ ವಿಶೇಷ ಮಹತ್ವವಿದೆ.

ನಾಗದೇವರನ್ನು ಪೂಜಿಸುವುದರಿಂದ ಫಲವತ್ತತೆ, ಮಳೆ, ಕುಟುಂಬದ ಸಮೃದ್ಧಿ ಮತ್ತು ನಾಗ ದೋಷ (ಕುಟುಂಬ ವಂಶಾವಳಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಸರ್ಪ ಶಾಪ) ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಇಲ್ಲಿನ ಜನರಿಗೆ ಇದೊಂದು ಅತ್ಯಂತ ಪ್ರಮುಖ ಹಬ್ಬ.

ಆಷಾಢ ಕಳೆದು ಶ್ರಾವಣಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲು ಆಚರಿಸುವ ಹಬ್ಬ ನಾಗರಪಂಚಮಿ. ಈ ಹಬ್ಬಕ್ಕೆ ಹಿಂದೂಗಳಲ್ಲಿ ವಿಶೇಷ ಮಹತ್ವವಿದೆ. ನಾಗರ ಪಂಚಮಿ ಎಂದರೆ ಸರ್ಪ ದೇವತೆಗಳನ್ನು ಅಥವಾ ನಾಗರಹಾವನ್ನು ಪೂಜಿಸುವ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಮಾಸದ ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್‌ನಲ್ಲಿ ಬರುತ್ತದೆ. ಈ ಬಾರಿ ಜುಲೈ 29ರ ಮಂಗಳವಾರ ಆಚರಿಸಲಾಗುತ್ತದೆ.