ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಕೊರತೆಯಲ್ಲೂ ಚಿಮ್ಮಿದ ಒರತೆ

ತಮ್ಮ ಅಚ್ಚುಮೆಚ್ಚಿನ ವಿಷಯವಾದ ‘ಸಾಮಾಜಿಕ ನ್ಯಾಯ’, ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಮುಂತಾದ ‘ಘನವಾದ’ ವಿಷಯಗಳ ಜತೆಜತೆಗೆ, ಅಲೆಮಾರಿಗಳು ಮತ್ತು ಬೌದ್ಧಮತೀಯರ ಅಭಿವೃದ್ಧಿಗೆ ಪ್ರಾಧಿಕಾರ, ಹವ್ಯಕ ಭಾಷಾ ಅಕಾಡೆಮಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಆಯೋಗ ಇವುಗಳನ್ನು ರಚಿಸುವ ಕಡೆಗೂ ಗಮನಹರಿಸಿರುವುದು ಶ್ಲಾಘನೀಯ

Vishwavani Editorial: ಕೊರತೆಯಲ್ಲೂ ಚಿಮ್ಮಿದ ಒರತೆ

-

Ashok Nayak
Ashok Nayak Mar 7, 2026 9:07 AM

ಅಂತೂ ಇಂತೂ, ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೆಲುವಿನ ನಗೆ ಬೀರಿದ್ದಾರೆ. ಬಜೆಟ್‌ನಲ್ಲಿ ಘೋಷಣೆಯಾಗುವ ಯೋಜನೆಗಳಿಗೆ ಮೀಸಲಿಡಬೇಕಾಗುವ ಅನುದಾನಕ್ಕಾಗಿ ಸಂಪನ್ಮೂಲವನ್ನು ಎಲ್ಲಿಂದ ಹೊಂದಿಸಿ ತರುತ್ತಾರೆ? ಎಂಬ ಕೆಲವರ ಸಹಜ ಅನುಮಾನಗಳು ಮತ್ತು ನಿರೀಕ್ಷೆಗಳ ನಡುವೆಯೇ ಈ ಬಜೆಟ್ ಮಂಡಿಸಿರುವ ಅವರು, ತಮ್ಮ ಅಚ್ಚುಮೆಚ್ಚಿನ ವಿಷಯವಾದ ‘ಸಾಮಾಜಿಕ ನ್ಯಾಯ’, ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಮುಂತಾದ ‘ಘನವಾದ’ ವಿಷಯಗಳ ಜತೆಜತೆಗೆ, ಅಲೆಮಾರಿಗಳು ಮತ್ತು ಬೌದ್ಧಮತೀಯರ ಅಭಿವೃದ್ಧಿಗೆ ಪ್ರಾಧಿಕಾರ, ಹವ್ಯಕ ಭಾಷಾ ಅಕಾಡೆಮಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಆಯೋಗ ಇವುಗಳನ್ನು ರಚಿಸುವ ಕಡೆಗೂ ಗಮನಹರಿಸಿರುವುದು ಶ್ಲಾಘನೀಯ.

ಇದನ್ನೂ ಓದಿ: Vishwavani Editorial: ಅಲ್ಲಿ ನೆನಪಿನ ಶಕ್ತಿ ಬೇಡವಾ?

ಮಾತ್ರವಲ್ಲದೆ, ಸಂಪನ್ಮೂಲ, ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಕೊರತೆ ಆಧರಿಸಿ ರಾಜ್ಯದಲ್ಲಿನ ತಾಲೂಕುಗಳನ್ನು ‘ಅತ್ಯಂತ ಹಿಂದುಳಿದ, ಹಿಂದುಳಿದ, ಕಡಿಮೆ ಅಭಿವೃದ್ಧಿಯ ಹಾಗೂ ಮುಂದುವರಿದ ತಾಲೂಕುಗಳು’ ಎಂದು 4 ಬಗೆಯಲ್ಲಿ ವಿಂಗಡಿಸುವ ಚಿಂತನೆ ಅವರಿಂದ ಹೊಮ್ಮಿದೆ; ಇಂಥ ಪ್ರತಿ ಗುಂಪಿನಲ್ಲಿ ತಲಾ 59 ತಾಲೂಕುಗಳನ್ನು ಸೇರಿಸಿ, ಅಭಿವೃದ್ಧಿ ಕೊರತೆ ಮತ್ತು ಪ್ರಾದೇಶಿಕ ಅಸಮತೋಲನದ ನಿವಾರಣೆಗೆಂದು ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ರಸ್ತೆ ಸಂಪರ್ಕ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನಲ್ಲಿ 4291 ಕೋಟಿ ರು. ಹಣವನ್ನು ಮೀಸಲಿಡುವುದಾಗಿ ಅವರು ಘೋಷಿಸಿದ್ದಾರೆ.

ಈ ಎಲ್ಲ ಸದಾಶಯಗಳು ಸಮರ್ಥವಾಗಿ ಮತ್ತು ಸಮರ್ಪಕವಾಗಿ ಕೈಗೂಡಿದರೆ ಅದಕ್ಕಿಂತ ಸಂತಸದ ಸಂಗತಿ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಅವರು ಯಶವನ್ನು ಕಾಣಲಿ ಎಂದು ಆಶಿಸೋಣ, ಹಾರೈಸೋಣ...