Vishwavani Editorial: ಇನ್ನೆಷ್ಟು ಪುರಾವೆ ಬೇಕು ಇವರಿಗೆ?
ಕೆಲ ತಿಂಗಳ ಹಿಂದೆ ರಾಜ್ಯದಲ್ಲೂ ಡ್ರಗ್ಸ್ ಜಾಲದ ಮೇಲೆ ದಾಳಿಯಾಗಿ ಭಾರಿ ಪ್ರಮಾಣದಲ್ಲಿ ಅಮಲು ಕಾರಕ ವಸ್ತುಗಳನ್ನು ವಶಪಡಿಸಿಕೊಂಡ ಸುದ್ದಿ ಗೊತ್ತಾದಾಗ ಒಂದಿಡೀ ಕರ್ನಾಟಕ ಬೆಚ್ಚಿ ಬಿದ್ದಿದ್ದು ಖರೆ. ಈಗ ಇದನ್ನೂ ಮೀರಿಸುವ ಸುದ್ದಿ ಬಂದಿದೆ. ಅದೆಂದರೆ, ಮುಂಬೈ ಸೇರಿದಂತೆ ಹಲವು ಜಾಗಗಳಿಗೆ ಪೂರೈಕೆಯಾಗುತ್ತಿದ್ದ ಮಾದಕ ವಸ್ತುಗಳ ತಯಾರಿಕಾ ನೆಲೆಯೊಂದು ಮೈಸೂರಿನಲ್ಲಿ ಮೈಚೆಲ್ಲಿ ಕೊಂಡಿದ್ದನ್ನು ಪತ್ತೆ ಹಚ್ಚಲಾಗಿದೆ ಹಾಗೂ ಗಣನೀಯ ಪ್ರಮಾಣದ ಅಮಲುಕಾರಕ ದ್ರವ್ಯಗಳನ್ನು ಜಪ್ತಿ ಮಾಡಲಾಗಿದೆ.


ಮಾದಕ ದ್ರವ್ಯಗಳ (ಡ್ರಗ್ಸ್) ತಯಾರಿಕೆ ಹಾಗೂ ಮಾರಾಟ ಜಾಲವು ದೇಶದ ಉದ್ದಗಲಕ್ಕೂ ಹಬ್ಬಿಕೊಂಡಿದ್ದು, ಇದನ್ನು ಮೂಲೋತ್ಪಾಟನ ಮಾಡುವ ಅಗತ್ಯವಿದೆ ಎಂಬ ಕೂಗು ನಿನ್ನೆ-ಮೊನ್ನೆಯದಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಡ್ರಗ್ಸ್ ವ್ಯಸನಿಗಳು ಗಮನಾರ್ಹ ಸಂಖ್ಯೆಯಲ್ಲಿ ಓಲಾಡುತ್ತಿರುವ ಕಾರಣಕ್ಕೆ ದೇಶದ ಪಂಜಾಬ್ ರಾಜ್ಯಕ್ಕೆ ‘ಉಡ್ತಾ ಪಂಜಾಬ್’ ಎಂಬ ಹಣೆಪಟ್ಟಿ ತಗುಲಿಕೊಂಡ ನಂತರವಂತೂ ಈ ಕೂಗು ಮತ್ತಷ್ಟು ತೀವ್ರವಾಯಿತು.
ಆದರೆ ಸಂಬಂಧಪಟ್ಟ ಇಲಾಖೆಗಳು ಅಥವಾ ನಿಗ್ರಹದಳಗಳು ಈ ಜಾಲವನ್ನು ಜಾಲಾಡಿ, ಗಣನೀಯ ಮಟ್ಟದಲ್ಲಿ ಡ್ರಗ್ಸ್ ದಂಧೆಕೋರರ ಹೆಡೆಮುರಿ ಕಟ್ಟಲು ವಿಫಲರಾಗಿದ್ದಕ್ಕೋ ಏನೋ ಈ ಜಾಲವು ದೇಶದ ವಿವಿಧೆಡೆ ತಳವೂರಿ ಬಿಟ್ಟಿತು. ಕೆಲ ತಿಂಗಳ ಹಿಂದೆ ರಾಜ್ಯದಲ್ಲೂ ಡ್ರಗ್ಸ್ ಜಾಲದ ಮೇಲೆ ದಾಳಿಯಾಗಿ ಭಾರಿ ಪ್ರಮಾಣದಲ್ಲಿ ಅಮಲುಕಾರಕ ವಸ್ತುಗಳನ್ನು ವಶಪಡಿಸಿಕೊಂಡ ಸುದ್ದಿ ಗೊತ್ತಾದಾಗ ಒಂದಿಡೀ ಕರ್ನಾಟಕ ಬೆಚ್ಚಿ ಬಿದ್ದಿದ್ದು ಖರೆ.
ಇದನ್ನೂ ಓದಿ: Vishwavani Editorial: ಮಾಲ್ಡೀವ್ಸ್ ಗೆ ಬುದ್ದಿ ಬಂತಾ?
ಈಗ ಇದನ್ನೂ ಮೀರಿಸುವ ಸುದ್ದಿ ಬಂದಿದೆ. ಅದೆಂದರೆ, ಮುಂಬೈ ಸೇರಿದಂತೆ ಹಲವು ಜಾಗಗಳಿಗೆ ಪೂರೈಕೆಯಾಗುತ್ತಿದ್ದ ಮಾದಕ ವಸ್ತುಗಳ ತಯಾರಿಕಾ ನೆಲೆಯೊಂದು ಮೈಸೂರಿನಲ್ಲಿ ಮೈಚೆಲ್ಲಿ ಕೊಂಡಿದ್ದನ್ನು ಪತ್ತೆ ಹಚ್ಚಲಾಗಿದೆ ಹಾಗೂ ಗಣನೀಯ ಪ್ರಮಾಣದ ಅಮಲುಕಾರಕ ದ್ರವ್ಯಗಳನ್ನು ಜಪ್ತಿ ಮಾಡಲಾಗಿದೆ.
ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಡ್ರಗ್ಸ್ ತಯಾರಿಕೆ ಮತ್ತು ಮಾರಾಟದ ಜಾಲವು ಬೆಳೆಯುತ್ತಲೇ ಇದೆ ಎಂಬುದಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಇದಕ್ಕಿಂತ ಪುರಾವೆ ಬೇಕೇ? ಇದು ‘ಟಿಪ್ ಆಫ್ ದಿ ಐಸ್ ಬರ್ಗ್’ ಎನ್ನುವಂಥ ನಿದರ್ಶನ, ನಿರ್ಲಕ್ಷ್ಯ ಬಿಟ್ಟು ಜಾಲಾಡಿದರೆ ಇಂಥ ಅಡ್ಡಾಗಳು ಇನ್ನಷ್ಟು ಸಿಕ್ಕಾವು. ಜನರ ದೈಹಿಕ-ಮಾನಸಿಕ ಆರೋಗ್ಯಕ್ಕೆ ಕಂಟಕಕಾರಿಯಾಗಿ ಪರಿಣಮಿಸಬಲ್ಲ ಈ ಪಿಡುಗನ್ನು ನಿರ್ನಾಮಗೊಳಿಸಿ, ಸಮಾಜಕ್ಕೆ ನೆಮ್ಮದಿಯ ನಾಳೆಗಳನ್ನು ಕರುಣಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಟಿಬದ್ಧರಾಗಲಿ...