ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jasprit Bumrah: ಒಮಾನ್‌ ವಿರುದ್ದದ ಪಂದ್ಯದಲ್ಲಿ ಭಾರತದ ಸ್ಟಾರ್‌ ವೇಗಿ ಆಡುವುದು ಅನುಮಾನ!

Jasprit Bumrah Likely to rest against Oman: ಒಮಾನ್‌ ವಿರುದ್ಧ 2025ರ ಏಷ್ಯಾ ಕಪ್‌ ಟೂರ್ನಿಯ ಮುಂದಿನ ಪಂದ್ಯದಲ್ಲಿ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಆ ಮೂಲಕ ಅವರು ಸೂಪರ್‌ 4ರ ಪಂದ್ಯಕ್ಕೆ ಲಭ್ಯರಾಗಬಹುದು. ಈ ಹಿನ್ನೆಲೆಯಲ್ಲಿ ಒಮಾನ್‌ ಎದುರು ಅರ್ಷದೀಪ್‌ ಸಿಂಗ್‌ಗೆ ಅವಕಾಶ ನೀಡಬಹುದು.

ಒಮಾನ್‌ ವಿರುದ್ದದ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ!

ಒಮಾನ್‌ ವಿರುದ್ಧದ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ. -

Profile Ramesh Kote Sep 16, 2025 10:43 PM

ನವದೆಹಲಿ: ಒಮಾನ್‌ ವಿರುದ್ಧ ಸೆಪ್ಟಂಬರ್‌ 19 ರಂದು ನಡೆಯುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ (IND vs OMN) ಭಾರತ ತಂಡದ ಸ್ಟಾರ್‌ ವೇಗಿ ಜಸ್‌ಪ್ರೀತ್‌ ಬುಮ್ರಾಗೆ (Jasprit Bumrah) ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆ ಮೂಲಕ ಅವರನ್ನು ಟೂರ್ನಿಯ ಸೂಪರ್‌ 4ರ ಹಂತಕ್ಕೆ ತಾಜಾತನದಿಂದ ಉಳಿಯಲು ಅನುವು ಮಾಡಿಕೊಡಲಾಗುತ್ತದೆ. ಭಾರತ ತಂಡ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಸೆಪ್ಟಂಬರ್‌ 10 ರಂದು ಯುಎಇ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದಿತ್ತು ಹಾಗೂ ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಈ ಎರಡು ಗೆಲುವುಗಳ ಆಧಾರದ ಮೇಲೆ ಟೀಮ್‌ ಇಂಡಿಯಾ ಟೂರ್ನಿಯ ಸೂಪರ್‌-4ರ ಹಂತಕ್ಕೆ ಪ್ರವೇಶ ಮಾಡಿದೆ.

ಸೆಪ್ಟಂಬರ್‌ 19 ರಂದು ಒಮಾನ್‌ ವಿರುದ್ಧ ಭಾರತ ತಂಡ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಆಡಲಿದೆ. ಆದರೆ, ಸೆಪ್ಟಂಬರ್‌ 15 ರಂದು ಒಮಾನ್‌ ವಿರುದ್ಧ ಯುಎಇ ಗೆಲುವು ಪಡೆದ ಬಳಿಕ ಭಾರತ ತಂಡ ಅಧಿಕೃತವಾಗಿ ಸೂಪರ್‌-4ಕ್ಕೆ ಪ್ರವೇಶ ಮಾಡಿತು. ಈ ಹಿನ್ನೆಲೆಯಲ್ಲಿ ಒಮಾನ್‌ ವಿರುದ್ಧದ ಪಂದ್ಯದ ಫಲಿತಾಂಶ ಭಾರತ ತಂಡಕ್ಕೆ ಯಾವುದೇ ಪ್ರಭಾವ ಬೀರುವುದಿಲ್ಲ. ಹಾಗಾಗಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಲು ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಿದರೆ, ಏಳು ದಿನಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.

Asia Cup 2025: ಭಾರತ ಸೂಪರ್‌-4ಗೆ ಎಂಟ್ರಿ; ಪಾಕ್‌ ಲೆಕ್ಕಾಚಾರ ಹೇಗಿದೆ?

ಏಷ್ಯಾ ಕಪ್‌ ಟೂರ್ನಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಪಾಕಿಸ್ತಾನ ಎದುರಿನ ಪಂದ್ಯದಲ್ಲಿ 28 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ನಾಲ್ಕನೇ ಭಾರತೀಯ ಬೌಲರ್‌ ಎನಿಸಿಕೊಳ್ಳುವ ಮೂಲಕ ಭುವನೇಶ್ವರ್‌ ಕುಮಾರ್‌ ಅವರನ್ನು ಹಿಂದಿಕ್ಕಿದ್ದರು. ಬುಮ್ರಾ 72 ಪಂದ್ಯಗಳಿಂದ 17.67ರ ಸರಾಸರಿಯಲ್ಲಿ 92 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಅರ್ಷದೀಪ್‌ ಸಿಂಗ್‌ಗೆ ಅವಕಾಶ ನೀಡುವ ಸಾಧ್ಯತೆ

ಒಮಾನ್‌ ವಿರುದ್ದದ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಸ್ಥಾನದಲ್ಲಿ ಆಡುವ ರೇಸ್‌ನಲ್ಲಿ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಇದ್ದಾರೆ. ಬಹುಶಃ ಟಿ20ಐ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿರುವ ಅರ್ಷದೀಪ್‌ ಸಿಂಗ್‌ಗೆ ಈ ಪಂದ್ಯದಲ್ಲಿ ಅವಕಾಶ ನೀಡಬಹುದು. ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ ಒಂದೇ ಒಂದು ವಿಕೆಟ್‌ ಅಗತ್ಯವಿದೆ. ಒಂದು ವೇಳೆ ಒಮಾನ್‌ ವಿರುದ್ದ ಆಡಿದರೆ, ಎಡಗೈ ವೇಗಿ ಈ ಮೈಲುಗಲ್ಲು ತಲುಪಬಹುದು.

Asia Cup: ಒಮಾನ್‌ ವಿರುದ್ಧ ಯುಎಇಗೆ 42 ರನ್‌, ಸೂಪರ್‌ 4ಕ್ಕೆ ಅರ್ಹತೆ ಪಡೆದ ಭಾರತ!

ಒಮಾನ್ ವಿರುದ್ಧದ ಪಂದ್ಯವು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಅವಕಾಶ ನೀಡುತ್ತದೆ. ಯುಎಇ ಮತ್ತು ಪಾಕಿಸ್ತಾನ ವಿರುದ್ಧದ ಗೆಲುವುಗಳು ಕೆಲವು ಉನ್ನತ ಮತ್ತು ಮಧ್ಯಮ ಕ್ರಮಾಂಕದ ಆಟಗಾರರಿಗೆ ಸಾಕಷ್ಟು ಅಭ್ಯಾಸವನ್ನು ಒದಗಿಸಲಿಲ್ಲ. ಹಾಗಾಗಿ ಕಠಿಣ ಸೂಪರ್ ಫೋರ್ ಪಂದ್ಯಗಳಿಗೆ ಮೊದಲು ಇದನ್ನು ಸರಿಪಡಿಸಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ.