ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊಹ್ಲಿ-ರೋಹಿತ್‌ ಅವರೇ..... ಇನ್ನೂ ಸ್ವಲ್ಪ ದಿನ ಆಡಬಹುದಿತ್ತಲ್ವಾ? ಯಾಕಿಷ್ಟು ಆತುರ!

ಭಾರತೀಯ ಕ್ರಿಕೆಟ್‌ನ ಆಧುನಿಕ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಇವರಿಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡಲು ಮುಂದುವರಿದಿದ್ದಾರೆ. ಈ ಇಬ್ಬರೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕಿತ್ತು. ಆದರೆ, ಅವರು ಹಠಾತ್‌ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್‌ ನೀಡಿದ್ದರು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಇನ್ನಷ್ಟು ದಿನ ಆಡಬಹುದಿತ್ತು!

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಇನ್ನಷ್ಟು ದಿನ ಆಡಬಹುದಿತ್ತು! -

Profile Ramesh Kote Sep 16, 2025 7:12 PM

ಅಂಕಣ: ಕೆ. ಎನ್‌. ರಂಗು, ಚಿತ್ರದುರ್ಗ

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಇನ್ನೂ ಸ್ವಲ್ಪ ದಿನ ಟೆಸ್ಟ್‌ ಮತ್ತು ಟಿ20ಐ ಕ್ರಿಕೆಟ್‌ನಲ್ಲಿ ಮುಂದುವರಿಯಬಹುದಿತ್ತಪ್ಪ. ಅದು ಯಾಕೋ ಏನೋ ಒಬ್ಬರ ಹಿಂದೊಬ್ಬರು ಹಠಾತ್‌ ವಿದಾಯ ಘೋಷಿಸಿಯೇ ಬಿಟ್ಟರು. ಕಾರಣವೇನೆಂಬುದು ನಿಗೂಢ. ಆಯ್ತು ರೋಹಿತ್‌ ಶರ್ಮಾ ಓಕೆ, ಬಟ್‌ ರನ್‌ ಮಷಿನ್‌ ಇನ್ನೂ ಸ್ವಲ್ಪ ದಿನಗಳ ಕಾಲ ಆಡಬಹುದಿತ್ತು. ಯಾಕೆಂದರೆ ಅವರ ಎನರ್ಜಿ ಲೆವೆಲ್‌ಗೇನೂ ಕೊರತೆ ಇರಲಿಲ್ಲ. ಅವರ ಬಾಡಿ ಲಾಂಗ್ವೇಜ್‌ ಮತ್ತು ಕಾನ್ಫಿಡೆನ್ಸ್‌ ನೋಡಲು ಒಂಥರಾ ಕಣ್ಣಿಗೆ ಆನಂದ. ಮೈದಾನದಲ್ಲಿದ್ದಾಗ ಅವರ ಜೋಶ್‌ಗೇನು ಕಡಿಮೆ ಆಗಿರಲಿಲ್ಲ. ಬ್ಯಾಟ್‌ ಹಿಡಿದು ಪೆವಿಲಿಯನ್‌ನಿಂದ ಫೀಲ್ಡ್‌ಗೆ ಎಂಟ್ರಿಯಾಗೋದರಿಂದ ಹಿಡಿದು ಪುನಃ ಪೆವಿಲಿಯನ್‌ ಕಡೆ ಮುಖ ಮಾಡುವವರೆಗೆ ಸ್ಟೇಡಿಯಂನಲ್ಲಿ ಶಿಳ್ಳೆ, ಕೇಕೆಗಳ ಮಹಾಪುರವೇ ಹರಿದು ಬರುತ್ತಿತ್ತು. ಇಷ್ಟೆಲ್ಲಾ ಇದ್ದರೂ ಟೆಸ್ಟ್‌ ಮತ್ತು ಇಂಟರ್‌ನ್ಯಾಷನಲ್‌ ಚುಟುಕು ಕ್ರಿಕೆಟ್‌ಗೆ ಕೊಹ್ಲಿ ಗುಡ್‌ ಬೈ ಹೇಳಿದ್ಯಾಕೆ? ಈ ಪ್ರಶ್ನೆ ನಿಮಗೂ ಕಾಡುತ್ತಿದೆಯಾ? ನನಗಂತೂ ಕೊಹ್ಲಿಯವರು ವಿದಾಯ ಘೋಷಿಸಿದ ಅಂದಿನಿಂದ ಇಂದಿನವರೆಗೂ ಕಾಡುತ್ತಿದೆ. ಉತ್ತರವೆಂಬ ಪುಣ್ಯಾತ್ಮನ ಪುಣ್ಯಾತ್ಮನ್ನು ಕಂಡುಕೊಳ್ಳಲು ಹರ ಸಾಹಸಪಟ್ಟು ಪರದಾಡಿದೆ. ಆದರೆ ಆ ಪ್ರಶ್ನೆಗೆ ಉತ್ತರ ದೊರಕಲಿಲ್ಲ. ಮತ್ತೆ ಇನ್ನೇನು ಹೇಳೋಕ್‌ ಹೊರಟಿದಿಯಾ? ಬೇಗ ಹೇಳಯ್ಯ ನಮಗೆ ಟೈಮ್‌ ಇಲ್ಲ ಅಂತಾ ಗೊಣಗುತ್ತಾ ಇದಿರಾ? ಖಂಡಿತ ಹೇಳ್ತಿನಿ ಬನ್ನಿ. ನೀವು ಓದುಗ ಪ್ರಭುಗಳು ನಿಮ್ಮ ಮಾತನ್ನು ಮೀರಿ ಬರೆದರೆ ಮೆಚ್ಚಲಾರನಾ ಪರಮಾತ್ಮ!

ಭಾರತೀಯ ಕ್ರಿಕೆಟ್‌ ಜಾಗತಿಕ ಮಟ್ಟದಲ್ಲಿ ದಟ್ಟವಾಗಿ ಬೆಳೆಯಲು ಮುಖ್ಯ ಕಾರಣವೇ ಭಾರತೀಯ ಕ್ರಿಕೆಟ್‌ ಲೋಕದಲ್ಲಿ ಅರಳಿದ ದೈತ್ಯ ಪ್ರತಿಭೆಗಳು. ಸುನೀಲ್‌ ಗವಾಸ್ಕರ್‌ರಂತಹ ಚಾಣಕ್ಯ, ಕಪಿಲ್‌ ದೇವ್‌ರಂತಹ ಪವರ್‌ಫುಲ್‌ ಕ್ಯಾಪ್ಟನ್‌, ರಾಹುಲ್‌ ದ್ರಾವಿಡ್‌ ಅವರಂತಹ ಜಂಟಲ್‌ಮ್ಯಾನ್‌, ಸಚಿನ್‌ ತೆಂಡುಲ್ಕರ್‌ರಂತಹ ಅಪ್ರತಿಮ ಸಾಧಕ, ಮಹೇಂದ್ರ ಸಿಂಗ್‌ ಧೋನಿಯವರಂತಹ ಶಾಂತ ಸ್ವಭಾವದ ಕೀಪರ್‌ ಅಂಡ್‌ ಕ್ಯಾಪ್ಟನ್‌ ಆದಿಯಾಗಿ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಮತ್ತು ಹಿಟ್‌ ಮ್ಯಾನ್ ರೋಹಿತ್‌ ಶರ್ಮಾ ಅವರಂತಹ ಅನೇಕರ ಅಭೂತ ಪೂರ್ವ ಪ್ರದರ್ಶನದಿಂದ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್‌ ಎದೆ ಹುಬ್ಬಿಸಿ ನಿಂತಿದೆ. ಹೀಗೆ ಸಾಗುತ್ತಿದ್ದ ಭಾರತೀಯ ಕ್ರಿಕೆಟ್‌ ಪಯಣ ಕಳೆದ ಮೇ ತಿಂಗಳಲ್ಲಿ ಆಘಾತಕಾರಿ ಘಟನೆಗಳನ್ನು ಎದುರಿಸಿತ್ತು.

ವಿರಾಟ್‌ ಕೊಹ್ಲಿ-ಎಂಎಸ್‌ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟರ್‌ ಆರಿಸಿದ ದಿನೇಶ್‌ ಕಾರ್ತಿಕ್‌!

ರೋಹಿತ್‌ ಮತ್ತು ಕೊಹ್ಲಿಯವರು ಕೇವಲ ಆಟಗಾರರು ಮಾತ್ರವಲ್ಲ. ಇವರು ಆಧುನಿಕ ಯುಗದ ರಣಕಲಿಗಳು ಎಂದರೆ ಅತೀಶಯಯುಕ್ತಿಯಾಗಲಾರದು. ಯಾಕೆಂದರೆ ಎರಡೂ ನಾಯಕತ್ವದಲ್ಲಿ ಭಾರತ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಠಿಸಿತು. ಇಬ್ಬರ ಆಟಗಾರರ ಕ್ರಿಕೆಟ್‌ ಬದುಕು ವಿಭಿನ್ನ ಮತ್ತು ವಿಶಿಷ್ಟವಾದಂತಹದ್ದು. ದಶಕಗಳ ಕಾಲ ಈ ಎರಡು ಹೆಸರುಗಳು ಭಾರತ ತಂಡಕ್ಕೆ ಕೇವಲ ಬ್ಯಾಟ್‌ ಬೀಸುವ ಕೈಗಳಾಗದೇ ಎದುರಾಳಿಗಳನ್ನು ಮಣಿಸಲು ಹೂಡಿದ ರಣತಂತ್ರ, ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅದ್ಭುತ ವ್ಯಕ್ತಿತ್ವಗಳಾಗಿವೆ. ಇಂತಹ ಆಟಗಾರರು ಹಠಾತ್‌ ವಿದಾಯ ಹೇಳಿದರೆ ಕಳವಳಕಾರಿಯಲ್ಲವೇ?

ಕೊಹ್ಲಿಯವರು 3ನೇ ಕ್ರಮಾಂಕದಲ್ಲಿ ಬಂದು ತಂಡಕ್ಕೆ ಯೋಧನ ರೀತಿಯಲ್ಲಿ ಬಲವಾಗಿ ನಿಂತು ಚೇಸ್‌ ಮಾಡಿ ಮ್ಯಾಚ್‌ ಗೆಲ್ಲಿಸಿದ ಅದೆಷ್ಟೋ ರಾತ್ರಿಗಳು ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಮುಖದಲ್ಲಿ ಮೂಡಿದ ಮಂದಹಾಸಕ್ಕೆ ಕಾರಣವಾಗಿದ್ದವು. ಇನ್ನೂ ಹಿಟ್‌ ಮ್ಯಾನ್‌ ಕೂಡ ತಮ್ಮ ಸಿಗ್ನೇಚರ್‌ ಶಾಟ್‌ ಮೂಲಕ ತಂಡವನ್ನು ಗೆಲ್ಲಿಸಿದ ಅದೆಷ್ಟೋ ನಿದರ್ಶನಗಳನ್ನು ಕ್ರಿಕೆಟ್‌ ಪ್ರಿಯರು ಮರೆಯುವಂತಿಲ್ಲ. ತಂಡ ಸಂಕಷ್ಟದ ಸುಳಿಗೆ ಸಿಕ್ಕಾಗಲೆಲ್ಲಾ ಎದುರಾಳಿಗಳನ್ನು ಮಣಿಸಲು ಹಾಕಿದ ಪಟ್ಟುಗಳು ಎಂದೆಂದಿಗೂ ಭಾರತೀಯರ ಮನಸ್ಸಿನಲ್ಲಿ ಅಚ್ಛಳಿಯದಂತೆ ಉಳಿದಿವೆ. ಅದೆಷ್ಟೋ ಯುವ ಪ್ರತಿಭೆಗಳು ತಂಡಕ್ಕೆ ಪದಾರ್ಪಣೆ ಮಾಡಿದಾಗ ಅವರನ್ನು ತಿದ್ದಿ, ತೀಡಿ, ಮಾರ್ಗದರ್ಶನ ಮಾಡಿದ ಯುವ ಕಣ್ಮಣಿಗಳು ಇಂದು ತಂಡದ ನಾಯಕತ್ವ ಅಲಂಕರಿಸಿವೆ. ಆದರೆ ಇಂದು ಟೀಮ್‌ ಇಂಡಿಯಾ ಡ್ರೆಸಿಂಗ್‌ ರೂಂಗೆ ಮೌನ ಆವರಿಸಿಲ್ಲವೇ?

ವಿರಾಟ್‌ ಕೊಹ್ಲಿಯವರ ಫಿಟ್‌ನೆಸ್‌ ಪರೀಕ್ಷೆಯ ವಿವಾದದ ಬಗ್ಗೆ ಆಕಾಶ್‌ ಚೋಪ್ರಾ ಹೇಳಿಕೆ!

ಕೋಹ್ಲಿ-ರೋಹಿತ್‌ ಇಲ್ಲದೇ ಜೈಸ್ವಾಲ್‌, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌ ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯರಂತಹ ಅಸಾಧರಣ ಪ್ರತಿಭೆಗಳು ತಂಡದಲ್ಲಿದ್ದರೂ, ಯಾಕೋ, ಏನೋ ಟೀಮ್‌ ಇಂಡಿಯಾದಲ್ಲಿ ಮೊದಲಿದ್ದ ಹೊಳಪಿಲ್ಲ. ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಸಾಮರ್ಥ್ಯವುಳ್ಳ ಆಟಗಾರನ ಕೊರತೆ ಟೀಮ್ ಇಂಡಿಯಾಗೆ ಖಂಡಿತ ಕಾಡುತ್ತಿದೆ. ಅನೇಕ ಪ್ರವಾಸಗಳಲ್ಲಿ ಎದುರಾಳಿ ತಂಡವನ್ನು ಮಣಿಸಿ ಸರಣಿ ಜಯ ಗಳಿಸಿ ಭಾರತ ಮಾತೆಗೆ ಪ್ರಶಸ್ತಿಯ ಗರಿ ಮುಡಿಸಿದ ಈ ಇಬ್ಬರನ್ನು ಇಂದು ಕೊಟ್ಯಾಂತರ ಕಣ್ಣುಗಳು ಮಿಸ್‌ ಮಾಡಿಕೊಳ್ತಿವೆ. ‌

ಅನೇಕ ಕುಟುಂಬಗಳು ಟಿವಿ ಮುಂದೆ ಕೂತು ಈ ಇಬ್ಬರ ಆಟಗಾರರ ಆಟ ನೋಡಲು ಕಾತುರದಿಂದ ಕಾಯುತ್ತಿದ್ದವು. ಈ ಇಬ್ಬರು ಮೈದಾನದಲ್ಲಿದ್ದರೆ ಸ್ಕೋರ್‌ ಬೋರ್ಡ್‌ ಮೇಲೆ ನಂಬರ್‌ ಏರಿಕೆಯಾಗುತ್ತಿದ್ದ ಪರಿಯೇ ಗೊತ್ತಾಗುತ್ತಿರಲಿಲ್ಲ. ಈ ಇಬ್ಬರು ಜಾಹಿರಾತಿನ ಮೂಲಕ ಟಿವಿಯಲ್ಲಿ ಸ್ಟೈಲಿಶ್‌ ಎಂಟ್ರಿ ಕೊಟ್ಟಾಗ ಅದೆಷ್ಟೋ ಹುಡುಗಿಯರು ಕಣ್ಣು ರೆಪ್ಪೆ ಮಿಟುಕಿಸದೇ ನೋಡುತ್ತಾ ನಿಲ್ಲುತ್ತಿದ್ದರು. ಹೀಗೆ ಸದಾ ಪ್ರೇಕ್ಷಕರ ಮನದ ಕದವನ್ನು ತಟ್ಟುತ್ತಿದ್ದ ಆಟಗಾರರ ವಿದಾಯ ಎಷ್ಟೋ ಅಭಿಮಾನಿಗಳಿಗೆ ಆಘಾತಕಾರಿಯಲ್ಲವೇ?

ಇವೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಮೂಡಿದರೂ ವಾಸ್ತವ ಬೇರೆಯೇ ಇದೆ. ಪ್ರತಿಯೊಂದು ಅಂತ್ಯ ಇನ್ನೊಂದು ಹೊಸ ಮುನ್ನುಡಿಯ ಅಧ್ಯಾಯ. ಕ್ರಿಕೆಟ್‌ ದೇವರು ತೆಂಡಲ್ಕುರ್‌ ನಿವೃತ್ತಿ ಘೋಷಿಸಿದಾಗ ಆ ಸ್ಥಾನ ತುಂಬಿದ್ದು ಇದೇ ವಿರಾಟ್‌ ಕೊಹ್ಲಿ. ಧೋನಿಯವರ ನಿವೃತ್ತಿಯ ನಂತರ ನಾಯಕತ್ವದ ಸ್ಥಾನ ತುಂಬಿದ್ದು ಇದೇ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಅವರು. ರೋಹಿತ್‌ ವಿದಾಯದ ಬಳಿಕ ಇಂಗ್ಲೆಂಡ್‌ ಪ್ರವಾಸದಲ್ಲಿ ನೀರೀಕ್ಷಿತ ಪ್ರದರ್ಶನ ತೋರಿ ಸರಣಿ ಸಮಬಲಗೊಳಿಸಿದ್ದು ಯುವ ಕ್ಯಾಪ್ಟನ್‌ ಶುಭಮನ್‌ ಗಿಲ್.‌ ಹೀಗೆ ಹೇಳುತ್ತಾ ಹೋದರೆ ಸಾಲು ಸಾಲು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇನ್ನು ಹಿರಿಯ ಆಟಗಾರರ ಮಾರ್ಗದರ್ಶನದ ಕುರಿತು ಯೋಚಿಸುವುದಾದರೆ, ಹಾರ್ದಿಕ್‌ ಪಾಂಡ್ಯ, ಕನ್ನಡಿಗ ಕೆ ಎಲ್‌ ರಾಹುಲ್‌, ರಿಷಬ್‌ ಪಂತ್‌, ಸೂರ್ಯಕುಮಾರ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ ರಂತಹ ಅನುಭವಿಗಳು ಇದ್ದೇ ಇದಾರೆ. ಇನ್ನೂ ಚೆನ್ನಾಗಿ ಹೇಳಬೇಕೆಂದರೆ, ಹಿಂದೆ ಗವಾಸ್ಕರ್‌ ಮತ್ತು ಕಪಿಲ್‌ ದೇವ್‌ ನಿವ್ತತ್ತಿ ಘೋಷಿಸಿದಾಗ ಟೀಮ್‌ ಇಂಡಿಯಾಗೆ ಬರ ಸಿಡಿಲು ಬಡಿದಂತಾಗಿತ್ತು. ಆದರೆ ಆ ಕೊರತೆ ನೀಗಿಸಲು ಅನೇಕ ಯುವ ಪ್ರತಿಭೆಗಳು ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟವು. ಹೀಗೆ ಹಳೆ ನೀರು ಹೊರ ಹೋದ ಮೇಲೆ ಹೊಸ ನೀರು ಕೆರೆಗೆ ಬಂದೇ ಬರುತ್ತೆ ಅನ್ನುವ ಭರವಸೆ ಎಲ್ಲರಲ್ಲೂ ಇರುತ್ತೆ. ಹಾಗಾಗಿ ಪ್ರತಿಯೊಂದು ನಿವೃತ್ತಿಯ ನಂತರ ಒಂದು ಹೊಸ ಪ್ರತಿಭೆಯ ಅನಾವರಣ ಇದ್ದೇ ಇರುತ್ತೆ.

Rohit Sharma: ಏಕದಿನ ಕ್ರಿಕೆಟ್‌ ನಿವೃತ್ತಿಯ ವದಂತಿಗೆ ತೆರೆ ಎಳೆದ ರೋಹಿತ್‌ ಶರ್ಮಾ!

ಹಿರಿಯ ಆಟಗಾರರ ನಡುವೆ ಬಂದು ಸೆಂಚುರಿ ಬಾರಿಸಿ ಅಥವಾ ವಿಕೆಟ್‌ ಕಿತ್ತು ಸಂಭ್ರಮಿಸಿದ ಯುವ ಆಟಗಾರರಿಗೆ ಜವಬ್ದಾರಿ ಹೆಗಲೇರಿಸುವುದು ಬೇಡವೇ? ಅಜ್ಜ ಹಾಕಿದ ಆಲದ ಮರಕ್ಕೆ ಮೊಮ್ಮಗ ಜೋಕಾಲಿ ಕಟ್ಟದೇ, ತಾನೇ ಜೋಕಾಲಿ ಕಟ್ಟುವ ಮರ ಬೆಳೆಸುವುದು ಬೇಡವೇ? ಕಾರ್ಯದ ಒತ್ತಡದ ಮಧ್ಯೆ ಮಾಡಿದ ತ್ಯಾಗಗಳ ಅನುಭವ ಇತರರಿಗೆ ಆಗುವುದು ಬೇಡವೇ? ತಂಡ ಅನಿವಾರ್ಯವಾಗಿ ಸೋತಾಗ ನಿದ್ದೆಗೆಟ್ಟ ರಾತ್ರಿಗಳ ಬೆಲೆ ಮತ್ತಿತರಿಗೆ ಅರಿವಾಗುವುದು ಬೇಡವೇ? ಕೊಹ್ಲಿ ರೋಹಿತ್‌ ಸೂರ್ಯ ಚಂದ್ರ ಇರೋತನಕ ಆಡಲಿಕ್ಕಾಗುತ್ತಾ? ಯಾವತ್ತಾದರೂ ಒಂದು ದಿನ ನಿವೃತ್ತಿ ಕೊಡಲೇ ಬೇಕಾಗಿತ್ತು ತಾನೇ? ಹಾಗಾಗಿ ಕೊಟ್ಟಿದ್ದಾರೆ ಅಷ್ಟೇ. ಅಂತ ಹೇಳಿಕೊಂಡು ಆತಂಕಗೊಂಡಿದ್ದ ನನ್ನ ಮನಸ್ಸಿಗೆ ನಾನೇ ಸಾಂತ್ವಾನ ಹೇಳಿಕೊಂಡೆ.

ಪ್ರತಿಯೊಂದು ಸಾಲಿಗೂ ತನ್ನ ಅಂತ್ಯದ ಭಯದ ನಡುವೆ, ಹೊಸ ಸಾಲಿನ ಪ್ರಾರಂಬದ ಭರವಸೆ ಇರುತ್ತೆ. ಹಾಗೆಯೇ ಭಾರತೀಯ ಕ್ರಿಕೆಟ್‌ ನಿಂತ ನೀರಲ್ಲ. ಸದಾ ಹರಿಯುವ ನದಿಯಿದ್ದಂತೆ. ಖಂಡಿತವಾಗಿಯೂ ಹೊಸ ಪ್ರತಿಭೆಗಳು ಇಂಡಿಯನ್‌ ಕ್ರಿಕೆಟ್‌ ಅಂಗಳದಲ್ಲಿ ಅರಳಲಿವೆ. ಹಿಟ್‌ಮ್ಯಾನ್‌ ಮತ್ತು ರನ್‌ ಮಷಿನ್‌ ಮಾರ್ಗದರ್ಶನ ಟೀಂ ಇಂಡಿಯಾಗೆ ಖಂಡಿತ ಇರಲಿದೆ. ಹೀಗಿರುವಾಗ ಡ್ರೆಸಿಂಗ್‌ ರೂಮ್‌ಗೆ ಹತಾಶೆ ಯಾಕೆ? ಅಭಿಮಾನಿಗಳಿಗೆ ನಿರಾಶೆ ಯಾಕೆ?