'ಲಾರ್ಡ್ಸ್ ಟೆಸ್ಟ್ ಗೆಲ್ಲಿಸುವ ಅವಕಾಶ ನಿಮಗಿತ್ತಾದರೂ ಗೆಲ್ಲಿಸಲಿಲ್ಲ': ಕನ್ನಡಿಗನ ವಿರುದ್ಧ ಇರ್ಫಾನ್ ಪಠಾಣ್ ಕಿಡಿ!
Irfan Patna on Karun Nair: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕನ್ನಡಿಗ ಕರುಣ್ ನಾಯರ್ ವಿರುದ್ದ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ.

ಕರುಣ್ ನಾಯರ್ ವಿರುದ್ಧ ಇರ್ಫಾನ್ ಪಠಾಣ್ ಅಸಮಾಧಾನ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ಐದು ಪಂದ್ಯಗಳ (IND vs ENG) ಟೆಸ್ಟ್ ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲವಾಯಿತು. ಭಾರತ ತಂಡ ಕೆನಿಂಗ್ಟನ್ ಓವಲ್ ಪಂದ್ಯವನ್ನು 6 ರನ್‌ಗಳ ರೋಚಕ ಗೆಲುವು ಮೂಲಕ ಟೆಸ್ಟ್ ಸರಣಿ ಸೋಲಿನಿಂದ ತಪ್ಪಿಸಿಕೊಂಡಿತ್ತು. ಆದರೆ, ಈ ಸರಣಿಯ ನಾಲ್ಕು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಕರುಣ್ ನಾಯರ್ (Karun Nair) ಅವರು ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಟೀಕಿಸಿದ್ದಾರೆ. ಇದರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಸಾಯಿ ಸುದರ್ಶನ್ ಅವರ ಬಗ್ಗೆಯೂ ಪಠಾಣ್ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಕರುಣ್ ನಾಯರ್ 2017ರಲ್ಲಿ ಕೊನೆಯ ಬಾರಿ ಭಾರತ ಟೆಸ್ಟ್ ತಂಡದ ಪರ ಆಡಿದ್ದರು. ಆದರೆ, ಅವರು ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದಿದ್ದರು. ಆದರೆ, ಇಂಗ್ಲೆಂಡ್ ವಿರುದ್ಧದ ಆಂಡರ್ಸನ್ ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಿದ್ದ ನಾಲ್ಕು ಪಂದ್ಯಗಳಿಂದ 25.62ರ ಸರಾಸರಿಯಲ್ಲಿ ಗಳಿಸಿದ್ದು ಕೇವಲ 205 ರನ್‌ಗಳನ್ನು ಮಾತ್ರ. ಇದರಲ್ಲಿ ಅವರು ಗಳಿಸಿದ್ದು ಕೇವಲ ಒಂದೇ ಒಂದು ಅರ್ಧಶತಕ ಮಾತ್ರ.
IND vs ENG: ಶುಭಮನ್ ಗಿಲ್ ಇನ್ನೂ ಕಲಿಯಬೇಕೆಂದಿದ್ದ ಕಪಿಲ್ ದೇವ್‌ಗೆ ಯೋಗರಾಜ್ ಸಿಂಗ್ ತಿರುಗೇಟು!
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, "ಕರುಣ್ ನಾಯರ್ ಅವರು 10ಕ್ಕೆ 4 ಅಂಕವನ್ನು ಪಡೆದಿದ್ದಾರೆ. ಏಕೆ? ವಿಶೇಷವಾಗಿ ಅವರು ಸರಣಿಯುದ್ದಕ್ಕೂ ಕಳಪೆಯಾಗಿ ಕಂಡಿರಲಿಲ್ಲ. ಅವರು ಪ್ರತಿಯೊಂದು ಇನಿಂಗ್ಸ್‌ನಲ್ಲಿಯೂ ಸ್ಥಿರವಾಗಿ ಉತ್ತಮ ಆರಂಭವನ್ನು ಪಡೆಯುತ್ತಿದ್ದರು. ಆದರೆ, ಅವರು ಗಳಿಸಿದ್ದು ಕೇವಲ ಒಂದೇ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದರು. ಅವರು ತುಂಬಾ ಅವಕಾಶಗಳನ್ನು ಪಡೆದಿದ್ದರು. ಕ್ರಿಕೆಟ್ ಖಂಡಿತವಾಗಿಯೂ ಎರಡನೇ ಅವಕಾಶವನ್ನು ನೀಡುತ್ತದೆ, ಆದರೆ ಅವರು ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲಿಲ್ಲ. ವಿಶೇಷವಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ, ಇಲ್ಲಿ ಭಾರತ ತಂಡವನ್ನು ಗೆಲ್ಲಿಸಲು ಅತ್ಯುತ್ತಮ ಅವಕಾಶವಿತ್ತು, ಆದರೆ ಗೆಲ್ಲಿಸಲು ಸಾಧ್ಯವಾಗಿರಲಿಲ್ಲ," ಎಂದು ಹೇಳಿದ್ದಾರೆ.
IND vs ENG: ʻಒಂದು ವೇಳೆ ಬೆನ್ ಸ್ಟೋಕ್ಸ್ ಆಡಿದ್ರೆ ಇಂಗ್ಲೆಂಡ್ ಗೆಲ್ಲುತ್ತಿತ್ತುʼ-ಮೈಕಲ್ ವಾನ್!
"ಇದನ್ನು ಹೊರತುಪಡಿಸಿ ಅವರು ತುಂಬಾ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು ಹಾಗೂ ಇನಿಂಗ್ಸ್ ಅನ್ನು ಚೆನ್ನಾಗಿ ಆರಂಭಿಸಿದ್ದರು. ಆದರೆ, ತಕ್ಷಣ ಅವರು ಕಳಪೆ ಶಾಟ್ ಆಡಿ ವಿಕೆಟ್ ಒಪ್ಪಿಸುತ್ತಿದ್ದರು. ಓವಲ್ ಟೆಸ್ಟ್ ಪಂದ್ಯದಲ್ಲಿ ಅವರ ಮೇಲೆ ಬೌನ್ಸರ್ ಪ್ರಯೋಗ ಮಾಡಲಾಗಿತ್ತು. ಅವರು ಬೌನ್ಸರ್ ಎದುರು ತಿಣುಕಾಡುತ್ತಿದ್ದರು ಹಾಗೂ ಆರಾಮದಾಯಕವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಅವರಿಗೆ ನಾಲ್ಕು ಅಂಕವನ್ನು ನೀಡುತ್ತೇನೆ," ಎಂದು ತಿಳಿಸಿದ್ದಾರೆ.
ಸಾಯಿ ಸುದರ್ಶನ್‌ಗೆ 5 ಅಂಕ ನೀಡಿದ ಪಠಾಣ್
"ಸಾಯಿ ಸುದರ್ಶನ್ ಅವರು 10ಕ್ಕೆ 5 ಅಂಕವನ್ನು ಪಡೆದಿದ್ದಾರೆ. ಅವರು ತಮ್ಮ ಬ್ಯಾಟಿಂಗ್‌ನ ಕೆಲ ಅಂಶಗಳ ಮೇಲೆ ಕೆಲಸ ಮಾಡಬೇಕೆಂದು ಕಾಣಿಸಿದರೂ ಅವರಲ್ಲಿ ಅತ್ಯುತ್ತಮ ಸಾಮರ್ಥ್ಯವಿದೆ. ತಮಗೆ ಸಿಕ್ಕ ಅವಕಾಶದಲ್ಲಿ ಅವರಿನ್ನೂ ಸ್ವಲ್ಪಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಬಹುದಿತ್ತು. ಆ ಮೂಲಕ ಅವರ ಪಾಲಿನ ಸಂಗತಿಗಳು ಇನ್ನಷ್ಟು ಬದಲಾಗುತ್ತಿದ್ದವು," ಎಂದು ಇರ್ಪಾನ್ ಪಠಾಣ್ ಹೇಳಿದ್ದಾರೆ.