IND vs ENG: ಶುಭಮನ್ ಗಿಲ್‌ರನ್ನು ಹಿಂದಿಕ್ಕಬಲ್ಲ ಆಟಗಾರನನ್ನು ಹೆಸರಿಸಿದ ಓವೈಸ್ ಶಾ!
ಇಂಗ್ಲೆಂಡ್ ವಿರುದ್ದ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಭಾರತ ತಂಡದ ಶುಭಮನ್ ಗಿಲ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಂಗ್ಲರ ಮಾಜಿ ಬ್ಯಾಟ್ಸ್‌ಮನ್ ಓವೈಸ್ ಶಾ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆದರೆ, ಮುಂದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಅವರನ್ನು ಕೆಎಲ್ ರಾಹುಲ್ ಹಿಂದಿಕ್ಕಲಿದ್ದಾರೆಂದು ಅವರು ಭವಿಷ್ಯ ನೀಡಿದ್ದಾರೆ.

ಶುಭಮನ್ ಗಿಲ್‌ರನ್ನು ಹಿಂದಿಕ್ಕಬಲ್ಲ ಆಟಗಾರನನ್ನು ಆರಿಸಿದ ಓವೈಸ್ ಶಾ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಅತ್ಯುತ್ತಮ ಫಾರ್ಮ್‌ನಲ್ಲಿರು ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಹಾಗೂ ಕೆಎಲ್ ರಾಹುಲ್ (KL Rahul) ಅವರನ್ನು ಆಂಗ್ಲರ ಮಾಜಿ ಕ್ರಿಕೆಟಿಗ ಓವೈಸ್ ಶಾ (Owais Shah) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ಮುಂದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಅವರನ್ನು ಕೆಎಲ್ ರಾಹುಲ್ ಹಿಂದಿಕ್ಕಲಿದ್ದಾರೆಂದು ಅವರು ಭವಿಷ್ಯ ನುಡಿದಿದ್ದಾರೆ. ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶುಭಮನ್ ಗಿಲ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಮೂರು ಪಂದ್ಯಗಳಿಂದ 607 ರನ್‌ಗಳನ್ನು ಗಳಿಸಿದ್ದಾರೆ.
ಇನ್ನು ಕೆಎಲ್ ರಾಹುಲ್ ಅವರು ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಎರಡು ಶತಕಗಳನ್ನು ಬಾರಿಸಿದ್ದಾರೆ. ಇಲ್ಲಿಯ ತನಕ ಆಡಿದ ಮೂರು ಟೆಸ್ಟ್ ಪಂದ್ಯಗಳಿಂದ 375 ರನ್‌ಗಳನ್ನು ಕಲೆ ಹಾಕಿದ್ದು, ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕೆಎಲ್ ರಾಹುಲ್ ತಂಡದಲ್ಲಿ ಹಿರಿಯ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ.
IND vs ENG: ಕರುಣ್ ನಾಯರ್ ಔಟ್, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
ವಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಓವೈಸ್ ಶಾ, "ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿಯ ನೆರಳಿನಲ್ಲಿದ್ದಾರೆಂದು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಜತೆ ಕ್ರೀಸ್‌ನಲ್ಲಿದ್ದರೆ ಗಿಲ್ ಕೂಡ ನಿಮಗೆ ಪ್ರಮುಖ ಬ್ಯಾಟ್ಸ್‌ಮನ್ ಆಗುತ್ತಾರೆ ಹಾಗೂ ಕೆಎಲ್ ರಾಹುಲ್ ಸದ್ಯ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ, ಈ ಸಮಯ ಅವರದಾಗಿದೆ. ವಿರಾಟ್ ಕೊಹ್ಲಿ ಇಲ್ಲದೆ ಇದು ಮೊದಲ ಸರಣಿಯಾಗಿದೆ. ಬ್ಯಾಟಿಂಗ್ ಕ್ರಮಾಂಕವನ್ನು ನೀವು ನೋಡಿದಾಗ, ಶುಭಮನ್ ಗಿಲ್ ಉತ್ತಮವಾಗಿ ಆಡಿದ್ದಾರೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅವರು ಈ ರೀತಿ ಬ್ಯಾಟ್ ಮಾಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ," ಎಂದು ಹೇಳಿದ್ದಾರೆ.
ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್
ಇದೇ ವೇಳೆ ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಓವೈಸ್ ಶಾ, ಕೆಎಲ್ ರಾಹುಲ್ ಅವರನ್ನು ಕೂಡ ಹೊಗಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಅವರಿಗೆ ಇದು ಸಕಾಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
IND vs ENG 4th Test: ಬುಮ್ರಾಗೆ ಮತ್ತೆ ವಿಶ್ರಾಂತಿ; ನಾಲ್ಕನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಹಲವು ಬದಲಾವಣೆ
"ಭಾರತ ತಂಡದ ಸದ್ಯದ ಬ್ಯಾಟಿಂಗ್ ಲೈನ್ ಅಪ್‌ನಲ್ಲಿ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ನಾನು ಭಾವಿಸುತ್ತೇನೆ. ಅವರ ತಂತ್ರ ಮತ್ತು ಮನೋಧರ್ಮವು ಭರವಸೆ ನೀಡುವ ಸಂಖ್ಯೆಗಳ ಪ್ರಕಾರವನ್ನು ಅವರಿಗೆ ತಲುಪಿಸುವ ಸಮಯ ಇದಾಗಿದೆ. ಮುಂದಿನ 10-15 ಪಂದ್ಯಗಳಲ್ಲಿ ಕೆಎಲ್ ರಾಹುಲ್ ಆಡಿದರೆ, ಖಂಡಿತವಾಗಿಯೂ ಅವರು ಶುಭಮನ್ ಗಿಲ್ ಅವರನ್ನು ಹಿಂದಿಕ್ಕಲ್ಲಿದ್ದಾರೆ. ಮುಂದಿನ 12 ತಿಂಗಳ ಅವಧಿಯಲ್ಲಿ ನಾವು ಇದನ್ನು ನೋಡಲಿದ್ದೇವೆ," ಎಂದು ಓವೈಸ್ ಶಾ ತಿಳಿಸಿದ್ದಾರೆ.
ಮೂರು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಟೆಸ್ಟ್ ಸರಣಿಯಲ್ಲಿ 1-2 ಹಿನ್ನಡೆಯಲ್ಲಿದೆ. ಇದೀಗ ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿವೆ. ಈ ಟೆಸ್ಟ್ ಸರಣಿಯನ್ನು ಗೆಲ್ಲಬೇಕೆಂದು ಭಾರತ ತಂಡ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ.