ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ʼಕಾಂತಾರ: ಚಾಪ್ಟರ್ 1'; ರಿಷಬ್ ಶೆಟ್ಟಿ ಚಿತ್ರ ಗಳಿಸಿದ್ದೆಷ್ಟು?
Kantara Chapter 1 Collection: ಬಹುನಿರೀಕ್ಷಿತ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್ 1ʼ ಚಿತ್ರ ತೆರೆಕಂಡಿದೆ. ವಿವಿಧ ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ ಕಲೆಕ್ಷನ್‌ನಲ್ಲಿ ರಜನಿಕಾಂತ್ ನಟನೆಯ ʼಕೂಲಿʼ ತಮಿಳು ಚಿತ್ರವನ್ನು ಮೀರಿಸಿದೆ.

-

ಬೆಂಗಳೂರು: 2022ರಲ್ಲಿ ʼಕಾಂತಾರʼದ (Kantara) ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್‌ನ ಛಾಪು ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್ (Hombale Films)-ರಿಷಬ್ ಶೆಟ್ಟಿ (Rishab Shetty) ಕಾಂಬಿನೇಷನ್ 3 ವರ್ಷದ ಬಳಿಕ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. 'ಕಾಂತಾರ'ದ ಪ್ರೀಕ್ವೆಲ್ ʼಕಾಂತಾರ: ಚಾಪ್ಟರ್ 1' (Kantara Chapter 1) 30 ದೇಶಗಳಲ್ಲಿ ತೆರೆಕಂಡಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ (Kantara Chapter 1 Collection). ನಿರೀಕ್ಷೆಯಂತೆ ಬಹುತೇಕ ಎಲ್ಲ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ದಸರಾ, ಗಾಂಧಿ ಜಯಂತಿಯ ಸಾರ್ವಜನಿಕ ರಜೆಯ ಹಿನ್ನೆಲೆಯಲ್ಲಿ ಚಿತ್ರ ತೆರೆಕಂಡಿದೆ. ಮೂಲಗಳ ಪ್ರಕಾರ ಚಿತ್ರ ಮೊದಲ ದಿನ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಜತೆಗೆ ರಜನಿಕಾಂತ್ ನಟನೆಯ ʼಕೂಲಿʼ ತಮಿಳು ಚಿತ್ರದ ಗಳಿಕೆಯನ್ನು ಮೀರಿಸಿದೆ.
ಈಗ ಬಂದಿರುವ ಮೂಲಗಳ ಮೊದಲ ದಿನ ವಿಶ್ವಾದ್ಯಂತ 67 ಕೋಟಿ ರೂ. ದೋಚಿಕೊಂಡಿದೆ. ಆ ಮೂಲಕ ಈ ವರ್ಷ ಮೊದಲ ದಿನ 2ನೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ತೆಲುಗಿನ ಪವನ್ ಕಲ್ಯಾಣ್ ಅವರ ʼಒಜಿʼ (84 ಕೋಟಿ ರೂ.) ಇದೆ. ಮೊದಲ ದಿನ ರಜನಿಕಾಂತ್ ಅವರ ʼಕೂಲಿʼ 65 ಕೋಟಿ ರೂ., ಹಿಂದಿಯ ʼಸೈಯಾರಾʼ 22 ಕೋಟಿ ರೂ., ʼಸಿಕಂದರ್ʼ 26 ಕೋಟಿ ರೂ. ಮತ್ತು ಛಾವಾ 31 ಕೋಟಿ ರೂ. ಕಲೆಕ್ಷನ್ ಮಾಡಿದೆ.
Packed houses, unstoppable excitement! ❤️🔥
— Kantara - A Legend (@KantaraFilm) October 2, 2025
Manjunatha Cinemas, Kalyanadurgam is witnessing a huge crowd and a wave of love for #KantaraChapter1.
#BlockbusterKantara in cinemas now ✨#KantaraInCinemasNow #DivineBlockbusterKantara #KantaraEverywhere #Kantara @hombalefilms… pic.twitter.com/hzNNbJIxlB
ಈ ಸುದ್ದಿಯನ್ನೂ ಓದಿ: ʼಕಾಂತಾರʼ ಕಥೆ ಮುಂದುವರಿಯಲಿದೆ; ಪ್ರೀಕ್ವೆಲ್ ಬಳಿಕ ಸೀಕ್ವೆಲ್ ಕೂಡ ಬರಲಿದೆ: ರಿಷಬ್ ಶೆಟ್ಟಿ ಫ್ಯಾನ್ಸ್‌ಗೆ ಸಿಕ್ತು ಗುಡ್‌ನ್ಯೂಸ್
ಇನ್ನು ಅಡ್ವಾನ್ಸ್ ಬುಕ್ಕಿಂಗ್ ಮೂಲಕ ದೇಶದಲ್ಲಿ ʼಕಾಂತಾರ: ಚಾಪ್ಟರ್ 1'ನ 4.75 ಲಕ್ಷ ಟಿಕೆಟ್ ಬಿಕರಿಯಾಗಿ 13.07 ಕೋಟಿ ರೂ. ಗಳಿಸಿದೆ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ತೆರೆಕಂಡಿದ್ದು, ಎಲ್ಲ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ರಿಲೀಸ್ ಆದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನ ಶಿವ ರಾಜ್‌ಕುಮಾರ್, ಶ್ರೀಮುರಳಿ, ಟಾಲಿವುಡ್ ಸೂಪರ್ ಸ್ಟಾರ್‌ಗಳಾದ ಪ್ರಭಾಸ್, ಜೂ. ಎನ್‌ಟಿಆರ್ ಮತ್ತಿತರರು ಶುಭ ಹಾರೈಸಿದ್ದಾರೆ.
ರಿಷಬ್ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ
ʼಕಾಂತಾರʼ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನ ಗಮನ ಸೆಳೆದಿತ್ತು. ತುಳುನಾಡ ಜನಜೀವನವನ್ನು, ಅಲ್ಲಿನ ಸಂಸ್ಕೃತಿಯನ್ನು ಸಮರ್ಥವಾಗಿ ತೆರೆಮೇಲೆ ತಂದಿದ್ದ ರೀತಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ನಟನೆಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು. ಅದರಲ್ಲಿಯೂ ಕ್ಲೈಮ್ಯಾಕ್ಸ್‌ನಲ್ಲಿ ಅವರ ಅಭಿನಯ ನೋಡಿ ಪ್ರೇಕ್ಷಕರು ದಂಗಾಗಿ ಹೋಗಿದ್ದರೂ. ಇದೀಗ ಈ ಭಾಗದಲ್ಲಿಯೂ ಅವರು ಅದೇ ರೀತಿಯ ಪ್ರದರ್ಶನ ನೀಡಿದ್ದು, ಪ್ರೇಕ್ಷಕರು ಮತ್ತೊಮ್ಮೆ ಜೈಕಾರ ಹಾಕಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಬಿ. ಅಜನೀಶ್ ಲೋಕನಾಥ್ ಅವರ ಸಂಗೀತವೂ ಹೈಲೈಟ್ ಆಗಿದೆ.