ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಕುಲ್ದೀಪ್‌ ಯಾದವ್‌ಗೆ ಅನ್ಯಾಯವಾಗಿದೆ ಎಂದ ಅಜಯ್‌ ಜಡೇಜಾ!

ಭಾರತ ಹಾಗೂ ಯುಎಇ ನಡುವಣ 2025ರ ಏಷ್ಯಾ ಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ 4 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೂ ಕುಲ್ದೀಪ್‌ ಯಾದವ್‌ ಅವರಿಗೆ ಅನ್ಯಾಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ ಆರೋಪ ಮಾಡಿದ್ದಾರೆ.

4 ವಿಕೆಟ್‌ ಕಿತ್ತರೂ ಕುಲ್ದೀಪ್‌ ಯಾದವ್‌ಗೆ ಅನ್ಯಾಯ: ಅಜಯ್‌ ಜಡೇಜಾ!

ಕುಲ್ದೀಪ್‌ ಯಾದವ್‌ ಅವರನ್ನು ಶ್ಲಾಘಿಸಿದ ಅಜಯ್‌ ಜಡೇಜಾ. -

Profile Ramesh Kote Sep 11, 2025 6:44 PM

ನವದೆಹಲಿ: ಯುಎಇ ವಿರುದ್ಧ 2025ರ ಏಷ್ಯಾ ಕಪ್‌ ( Asia Cup 2025) ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಭಾರತದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ (Kuldeep Yadav) ಅವರನ್ನು ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ (Ajay Jadeja) ಶ್ಲಾಘಿಸಿದ್ದಾರೆ. ಆದರೆ, ಈ ಪಂದ್ಯದಲ್ಲಿ ಕುಲ್ದೀಪ್‌ ಯಾದವ್‌ ಅವರು ನಿಯಮಿತವಾಗಿ ನಾಲ್ಕು ಓವರ್‌ಗಳನ್ನು ಬೌಲ್‌ ಮಾಡಲು ಅವಕಾಶ ನೀಡಬೇಕಾಗಿತ್ತು. ಆದರೆ, ಅವರಿಗೆ ಅನ್ಯಾಯವಾಗಿದೆ. ಅವರು ನಾಲ್ಕು ಓವರ್‌ಗಳನ್ನು ಬೌಲ್‌ ಮಾಡಿದ್ದರೆ 6 ವಿಕೆಟ್‌ಗಳನ್ನು ಕಬಳಿಸುತ್ತಿದ್ದರು ಎಂದು ಅಜಯ್‌ ಜಡೇಜಾ ಹೇಳಿದ್ದಾರೆ.

ಕುಲ್ದೀಪ್‌ ಯಾದವ್‌ ಅವರು ಈ ಪಂದ್ಯದಲ್ಲಿ ಬೌಲ್‌ 2.1 ಓವರ್‌ಗಳಲ್ಲಿ ಕೇವಲ 7 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಎದುರಾಳಿ ಯುಎಇ ತಂಡ 57 ರನ್‌ಗಳಿಗೆ ಆಲ್‌ಔಟ್‌ ಆಗುವಲ್ಲಿ ಭಾರತಕ್ಕೆ ಕುಲ್ದೀಪ್‌ ಯಾದವ್‌ ನೆರವು ನೀಡಿದ್ದರು. ನಂತರ ಗುರಿಯನ್ನು ಹಿಂಬಾಲಿಸಿದ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, 4.3 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು.

Asia Cup 2025: ಆರ್‌. ಅಶ್ವಿನ್‌ ದಾಖಲೆ ಮುರಿದ ಕುಲ್‌ದೀಪ್‌ ಯಾದವ್‌

ಸೋನಿ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಭಾಗವಹಿಸಿದ ಅಜಯ್‌ ಜಡೇಜಾ,"ಸಿಲಬಸ್‌ ಅನ್ನು ನೀವು ಇಲ್ಲಿ ಮರೆತು ಬಿಡಿ, ಕುಲ್ದೀಪ್‌ ಯಾದವ್‌ ಸಿಲಬಸ್‌ನಿಂದ ಆಚೆ ಪ್ರದರ್ಶನವನ್ನು ತೋರಿದ್ದಾರೆ. ಅವರು ನಾಲ್ಕು ವಿಕೆಟ್‌ಗಳನ್ನು ಪಡೆದರೂ ಅವರಿಗೆ ಅನ್ಯಾಯವಾಗಿದೆ. ಇಂಗ್ಲೆಂಡ್‌ ವಿರುದ್ದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕುಲ್ದೀಪ್‌ ಯಾದವ್‌ ಅವರನ್ನು ಒಂದೇ ಒಂದು ಪಂದ್ಯದಲ್ಲಿ ಆಡಿಸಲಿಲ್ಲ ಎಂಬುದನ್ನು ನಾವಿಲ್ಲಿ ಮರೆಯೋಣ. ಯುಎಇ ವಿರುದ್ದದ ಪಂದ್ಯದಲ್ಲಿ ಅವರು ಆರಂಭಿಕ ಎರಡು ಓವರ್‌ಗಳನ್ನು ಬೌಲ್‌ ಮಾಡಿ ಎರಡು ವಿಕೆಟ್‌ ಕಿತ್ತಿದ್ದರು. ನಂತರ ಅವರನ್ನು ನಿಲ್ಲಿಸಿ ಶಿವಂ ದುಬೆ ಅವರನ್ನು ಕರೆ ತರಲಾಯಿತು. ತಂಡಕ್ಕೆ ದುಬೆ ಫಿಟ್‌ ಆಗುತ್ತಾರಾ?" ಎಂದು ಪ್ರಶ್ನೆ ಮಾಡಿದ್ದಾರೆ.

ಒಂದು ವೇಳೆ ಕುಲ್ದೀಪ್‌ ಯಾದವ್‌ ಅವರನ್ನು ನಿಲ್ಲಿಸಿಲ್ಲವಾಗಿದ್ದರೆ, ಅವರು ಮುಂದಿನ ಓವರ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆಯುತ್ತಿದ್ದರು ಎಂದು ಅಜಯ್‌ ಜಡೇಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Asia Cup 2025: ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಯಿಂದ ಭಾರತಕ್ಕೆ ಸುಲಭ ತುತ್ತಾದ ಯುಎಇ!

"ಇತರೆ ಬೌಲರ್‌ಗಳನ್ನು ಪ್ರಯತ್ನಿಸಲಾಗುತ್ತಿತ್ತು. ಆದರೆ, ಕುಲ್ದೀಪ್‌ ಯಾದವ್‌ ಬೌಲಿಂಗ್‌ಗೆ ಮರಳಿದ ಬಳಿಕ ಎರಡು ಅಥವಾ ಮೂರು ಎಸೆತಗಳಲ್ಲಿ ಇನ್ನೆರಡು ವಿಕೆಟ್‌ಗಳನ್ನು ಕಬಳಿಸಿದರು. ಒಂದು ವೇಳೆ ಕುಲ್ದೀಪ್‌ ನಾಲ್ಕು ಓವರ್‌ಗಳನ್ನು ಸತತವಾಗಿ ಬೌಲ್‌ ಮಾಡಿದ್ದರೆ, ಅವರು 4 ವಿಕೆಟ್‌ ಬದಲು 6 ವಿಕೆಟ್‌ಗಳನ್ನು ಕಬಳಿಸುತ್ತಿದ್ದರು," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಲ್ದೀಪ್‌ ಯಾದವ್‌ ಅವರು ತಮ್ಮ ಎರಡನೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಯುಎಇ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಚೈನಾಮನ್‌ ಸ್ಪಿನ್ನರ್‌, ರಾಹುಲ್‌ ಚೋಪ್ರಾ, ಮುಹಮ್ಮದ್‌ ವಸೀಮ್‌ ಹಾಗೂ ಹರ್ಷಿತ ಕೌಶಿಕ್‌ ಅವರನ್ನು ಔಟ್‌ ಮಾಡಿದ್ದರು. ಈ ಓವರ್‌ನ ಬಳಿಕ ಕುಲ್ದೀಪ್‌ ಯಾದವ್‌ ಅವರಿಗೆ ಬೌಲಿಂಗ್‌ ನೀಡದೆ ನಿಲ್ಲಿಸಲಾಗಿತ್ತು. ನಂತರ ಅವರನ್ನು 14ನೇ ಓವರ್‌ಗೆ ಕರೆ ತರಲಾಗಿತ್ತು. ತಮ್ಮ ಮೂರನೇ ಓವರ್‌ನಲ್ಲಿ ಅವರು ಹೈದರ್‌ ಅಲಿ ಅವರನ್ನು ಔಟ್‌ ಮಾಡಿದ್ದರು.