ಮಹಾರಾಷ್ಟ್ರ ಪರ ಆಡಿದ ಮೊದಲನೇ ರಣಜಿ ಪಂದ್ಯದಲ್ಲಿಯೇ ಪೃಥ್ವಿ ಶಾ ಡಕ್‌ಔಟ್! ವಿಡಿಯೊ
ಮಹಾರಾಷ್ಟ್ರ ಪರ ಆಡಿದ ತಮ್ಮ ಮೊದಲನೇ ರಣಜಿ ಟ್ರೋಫಿ ಪಂದ್ಯದಲ್ಲಿಯೇ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಡಕ್‌ಔಟ್ ಆದರು. ಕೇರಳ ವಿರುದ್ಧದ ಪಂದ್ಯದ ಮೊದಲನೇ ಓವರ್‌ನಲ್ಲಿ ಎಂಡಿ ನಿಧೀಶ್ ಅವರ ಬೌಲಿಂಗ್‌ನಲ್ಲಿ ಪೃಥ್ವಿ ಶಾ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆ ಮೂಲಕ ನಿರಾಶೆ ಮೂಡಿಸಿದರು.

ಮಹಾರಾಷ್ಟ್ರ ಪರ ರಣಜಿ ಪಂದ್ಯದಲ್ಲಿ ಡಕ್‌ಔಟ್ ಆದ ಪೃಥ್ವಿ ಶಾ. -

ತಿರುವನಂತಪುರಂ: ಮುಂಬೈ ತಂಡವನ್ನು ತೊರೆದು ಮಹಾರಾಷ್ಟ್ರ ಪರ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯನ್ನು ಆಡುತ್ತಿರುವ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ತನ್ನ ಆರಂಭಿಕ ಪಂದ್ಯದಲ್ಲಿಯೇ ನಿರಾಶೆ ಮೂಡಿಸಿದರು. ಬುಧವಾರ ಇಲ್ಲಿನ ಗ್ರೀನ್ ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾದ ಕೇರಳ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ಪರ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಅವರು ನಾಲ್ಕು ಎಸೆತಗಳನ್ನು ಆಡಿ ಖಾತೆ ತೆರೆಯದೆ ಡಕ್‌ಔಟ್ ಆದರು. ಎಂಡಿ ನಿಧೀಶ್ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಅರಿಯುವಲ್ಲಿ ವಿಫಲರಾದ ಪೃಥ್ವಿ ಶಾ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ಪಂದ್ಯದ ಮೊದಲನೇ ಓವರ್‌ನ ನಾಲ್ಕನೇ ಎಸೆತದಲ್ಲಿ ನಿಧೀಶ್ ಪಿಚ್ ಮಾಡಿದ ಬಳಿಕ ಚೆಂಡು ಸೀಮ್ ಆಯಿತು ಹಾಗೂ ಇದನ್ನು ಅರಿಯುವಲ್ಲಿ ವಿಫಲರಾದ ಪೃಥ್ವಿ ಶಾ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡರು. ಇದರ ಮುಂದಿನ ಎಸೆತದಲ್ಲಿ ನಿಧೀಶ್, ಸಿದ್ದೇಶ್ ವೀರ್ ಅವರನ್ನು ಕೂಡ ಔಟ್ ಮಾಡಿದರು. ಆ ಮೂಲಕ ಮಹಾರಾಷ್ಟ್ರ ತಂಡ ಖಾತೆ ತೆರೆಯದೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂದ ಹಾಗೆ ಈ ವರ್ಷದ ಆರಂಭದಲ್ಲಿಯೇ ಪೃಥ್ವಿ ಶಾ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಎನ್‌ಒಸಿ ಪಡೆದು ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಯಾಗಿದ್ದರು.
ಪೃಥ್ವಿ ಶಾಗೆ ಎದುರಾಯ್ತು ಸಂಕಷ್ಟ, ತನಿಖೆ ಕೈಗೆತ್ತಿಕೊಂಡ ದಿಲೀಪ್ ವೆಂಗ್ಸರ್ಕಾರ್!
ಪೃಥ್ವಿ ಶಾ ಅವರು ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ ಹಾಗೂ ರನ್ ಹೊಳೆ ಹರಿಸಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಇಲ್ಲಿಯ ತನಕ ಆಡಿದ 58 ಪ್ರಥಮ ದರ್ಜೆ ಪಂದ್ಯಗಳಿಂದ 46.02ರ ಸರಾಸರಿಯಲ್ಲಿ 4,556 ರನ್‌ಗಳನ್ನು ಕಲೆ ಹಾಕಿದ್ದಾರೆ. ಹಲವು ವರ್ಷಗಳ ಕಾಲ ಇವರು ಮುಂಬೈ ಇಂಡಿಯನ್ಸ್ ಪರ ಇನಿಂಗ್ಸ್ ಆರಂಭಿಸಿದ್ದಾರೆ. ಫಿಟ್‌ನೆಸ್ ಸಮಸ್ಯೆಯಿಂದ ಕಳೆದ ರಣಜಿ ಟ್ರೋಫಿ ಆವೃತ್ತಿಯಲ್ಲಿ ಮುಂಬೈ ತಂಡದಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿತ್ತು. 2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಅವರು ಮುಂಬೈ ಪರ ಕೊನೆಯ ಪಂದ್ಯವನ್ನು ಆಡಿದ್ದರು.
ಪೃಥ್ವಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿಯೂ ಅದ್ಭುತ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 55.72ರ ಸರಾಸರಿಯಲ್ಲಿ 3,399 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಟಿ20 ಪಂದ್ಯಗಳಿಂದ 151.54ರ ಸ್ಟ್ರೈಕ್ ರೇಟ್‌ನಲ್ಲಿ 2,902 ರನ್‌ಗಳನ್ನು ಬಾರಿಸಿದ್ದಾರೆ. ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಮುಂದಿನ ವೀರೇಂದ್ರ ಸೆಹ್ವಾಗ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರು ಭಾರತ ತಂಡಕ್ಕೆ ಬಹುಬೇಗ ಪದಾರ್ಪಣೆ ಮಾಡಿದರೂ ಗಾಯ ಸೇರಿದಂತೆ ಹಲವು ಕಾರಣಗಳಿಂದ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ.
Prithvi Shaw dismissal in Ranji Trophy while debuting for Maharashtra.
— Vishwesh Gaur (@iumvishwesh) October 15, 2025
He played only 1 team, and it was Mumbai. He played from 2016/17 to 2024/25.#KERvMAH #KERvsMAH #RanjiTrophy
VC: @BCCI pic.twitter.com/qbaU1ChD7Z
ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ಗಾಯಕ್ವಾಡ್ ಆಸರೆ
ಪೃಥ್ವಿ ಶಾ ಹಾಗೂ ಸಿದೇಶ್ ವೀರ್ ಜೊತೆಗೆ ಅರ್ಶಿನ್ ಕುಲಕರ್ಣಿ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಅಂಕಿತ್ ಬಾವ್ನೆ ಕೂಡ ಡಕ್‌ಔಟ್ ಆದರು. ಆ ಮೂಲಕ ಮಹಾರಾಷ್ಟ್ರ ತಂಡ ಕೇವಲ 5 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಋತರಾಜ್ ಗಾಯಕ್ವಾಡ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. 83 ರನ್‌ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ ಹಾಗೂ ಜಲಜ್ ಸೆಕ್ಸೇನಾ 49 ರನ್ ಗಳಿಸಿ ಔಟ್ ಆದರು. ಇದೀಗ ಮಹಾರಾಷ್ಟ್ರ ತಂಡ 51 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 154 ರನ್‌ಗಳನ್ನು ಗಳಿಸಿದೆ.