ರಣಜಿ ಟೂರ್ನಿಯಲ್ಲಿ ಆರ್‌ಸಿಬಿ ನಾಯಕ ಮಿಂಚು, ಡಬಲ್ ಸೆಂಚುರಿ ಬಾರಿಸಿದ ರಜತ್ ಪಾಟಿದಾರ್!
ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ ಮಿಂಚುತ್ತಿದ್ದಾರೆ. ಪಂಜಾಬ್ ವಿರುದ್ದದ ಪಂದ್ಯದಲ್ಲಿ ಅವರು ತಮ್ಮ ಚೊಚ್ಚಲ ದ್ವಿಶತಕವನ್ನು ಬಾರಿಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೂ ಬಿಸಿಸಿಐ ಸೆಲೆಕ್ಟರ್‌ಗಳಿಗೆ ಸಂದೇಶ ರವಾನಿಸಿದ್ದಾರೆ.

ರಣಜಿ ಟ್ರೋಫಿ ಟೂರ್ನಿಯಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ರಜತ್ ಪಾಟಿದಾರ್. -

ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ಮಧ್ಯ ಪ್ರದೇಶ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್(Rajat Patidar), ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯಲ್ಲಿ ದ್ವಿಶತಕ ಸಿಡಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಸಂದೇಶವನ್ನು ರವಾನಿಸಿದ್ದಾರೆ. ಪಂಜಾಬ್ ವಿರುದ್ಧದ ತನ್ನ ಪಂದ್ಯದಲ್ಲಿ (MP vs PUN) ರಜತ್ ಪಾಟಿದಾರ್ ಸೊಗಸಾಗಿ ಬ್ಯಾಟ್ ಮಾಡಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ಚೊಚ್ಚಲ ದ್ವಿಶತಕವನ್ನು ಬಾರಿಸಿದ್ದಾರೆ. ಈ ಪಂದ್ಯದ ಎರಡನೇ ದಿನ ಶತಕವನ್ನು ಗಳಿಸಿದ್ದ ಇವರು, ಮೂರನೇ ದಿನ ದ್ವಿಶತಕವನ್ನು ಪೂರ್ಣಗೊಳಿಸಿದ್ದಾರೆ.
ಇಲ್ಲಿನ ಎಮೆರಾಲ್ಡ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ಮೂರನೇ ದಿನವಾದ ಶುಕ್ರವಾರ 107 ರನ್‌ಗಳಿಂದ ಬ್ಯಾಟಿಂಗ್ ಆರಂಭಿಸಿದ ರಜತ್ ಪಾಟಿದಾರ್, ಪಂಜಾಬ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 328 ಎಸೆತಗಳಲ್ಲಿ 26 ಬೌಂಡರಿಗಳೊಂದಿಗೆ ತಮ್ಮ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ಪಾಟಿದಾರ್, 332 ಎಸೆತಗಳಲ್ಲಿ 205 ರನ್‌ಗಳನ್ನು ಗಳಿಸಿದ್ದು, ನಾಲ್ಕನೇ ಹಾಗೂ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಧ್ಯ ಪ್ರದೇಶ ತಂಡ 146 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 519 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 232 ರನ್‌ಗಳಿಗೆ ಆಲ್‌ಔಟ್ ಆಗಿದ್ದ ಪಂಜಾಬ್ ಎದುರು 287 ರನ್‌ಗಳ ಬೃಹತ್ ಮುನ್ನಡೆಯನ್ನು ಪಡೆದಿದೆ.
MP vs PUN: ಶತಕದ ಮೂಲಕ ರಣಜಿ ಟ್ರೋಫಿ ಪಯಣವನ್ನು ಆರಂಭಿಸಿದ ರಜತ್ ಪಾಟಿದಾರ್!
ಪಾಟಿದಾರ್‌ರ ಮೊದಲ ದ್ವಿಶತಕ
ಈ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರನ್ನು ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶದ ನಾಯಕನನ್ನಾಗಿ ನೇಮಿಸಲಾಯಿತು. ಅವರು ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ದ್ವಿಶತಕ ಗಳಿಸಿದರು. ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರ ಮೊದಲ ದ್ವಿಶತಕವಾಗಿದೆ. ಅವರ ಹಿಂದಿನ ಅತ್ಯಧಿಕ ಸ್ಕೋರ್ 196 ರನ್‌ಗಳು. 32 ವರ್ಷದ ಬಲಗೈ ಬ್ಯಾಟ್ಸ್‌ಮನ್ 2015 ರಲ್ಲಿ ತಮ್ಮ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು. 10 ವರ್ಷಗಳ ಕಾಯುವಿಕೆಯ ನಂತರ, ಅವರು ದ್ವಿಶತಕವನ್ನು ಪೂರ್ಣಗೊಳಿಸಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ
ರಜತ್ ಪಾಟಿದಾರ್ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಅವರು ತಮ್ಮ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಮೂರು ಪಂದ್ಯಗಳಲ್ಲಿ ಭಾರತ ತಂಡದ ಪ್ಲೇಯಿಂಗ್ XIನ ಭಾಗವಾಗಿದ್ದರು ಮತ್ತು ಕೇವಲ 63 ರನ್‌ಗಳನ್ನು ಗಳಿಸಿದ್ದರು. ಆ ಸರಣಿಯಲ್ಲಿ ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತು ದೇವದತ್ ಪಡಿಕ್ಕಲ್ ಅವರು ಕೂಡ ಚೊಚ್ಚಲ ಪಂದ್ಯಗಳನ್ನು ಆಡಿದ್ದರು. ಈ ಇಬ್ಬರೂ ಆಟಗಾರರು ಹೆಚ್ಚಿನ ರನ್‌ಗಳನ್ನು ಗಳಿಸಿದ್ದರು. ಈ ಕಾರಣದಿಂದಲೇ ಪಟಿದಾರ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
IND vs AUS: ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನನ್ನು ಆರಿಸಿದ ಮೈಕಲ್ ಕ್ಲಾರ್ಕ್!
ರಜತ್ ಪಾಟಿದಾರ್ ಅವರ ಇತ್ತೀಚಿನ ಫಾರ್ಮ್ ಅತ್ಯುತ್ತಮವಾಗಿದೆ. ದುಲೀಪ್ ಟ್ರೋಫಿಯ ಐದು ಇನಿಂಗ್ಸ್‌ಗಳಲ್ಲಿ ಅವರು ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಅವರು ಇರಾನಿ ಕಪ್ ಪಂದ್ಯದಲ್ಲಿಯೂ ಅರ್ಧಶತಕದ ಇನಿಂಗ್ಸ್ ಆಡಿದ್ದರು. ಇದೀಗ ಅವರು ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದಾರೆ.