Ravi Hunj Column: ಅಭಿಯಾನದ ಹೊನಲು ಬೆಳಕಿನಡಿಯಲ್ಲಿ ಸ್ಪರ್ಧೆಗೆ ಬಿದ್ದು ಬೆತ್ತಲಾದವರು !
“ಪಾಶುಪತದ ಪಶು, ಪತಿ ಮತ್ತು ಪಾಶ ಎಂಬ ಮೂರು ಪದಾರ್ಥಗಳಲ್ಲಿ ಪತಿ ಪದಾರ್ಥ ಎಂದರೆ ಶಿವನು. ಮುಕ್ತಾತ್ಮರಾದ ವಿದ್ಯೇಶ್ವರಾದಿಗಳಿಗೆ ಶಿವತ್ವ ಇದ್ದರೂ ಪರಮೇಶ್ವರನ ಅಧೀನ ರಾದುದರಿಂದ ಅವರಿಗೆ ಸ್ವಾತಂತ್ರ್ಯವಿಲ್ಲ. ಹಾಗಾಗಿಯೇ ಶರೀರ, ಇಂದ್ರಿಯ, ಜಗತ್ತು ಮೊದಲಾದ ಪದಾರ್ಥಗಳಲ್ಲಿ ಒಂದು ವಿಶಿಷ್ಟವಾದ ಸಂಯೋಜನೆ ಕಂಡುಬರುವುದರಿಂದ (ಅವುಗಳನ್ನು) ಕಾರ್ಯಗಳೆಂದು ಪರಿಗಣಿಸ ಬಹುದು.

-

ಬಸವ ಮಂಟಪ
ರವಿ ಹಂಜ್
ಟಿ.ಎನ್.ಮಲ್ಲಪ್ಪನವರ ರೀತಿಯ ಕುಂದೂರು ಮಠದ ಇಮ್ಮಡಿ ಶಿವಬಸವ ಸ್ವಾಮಿಗಳು, ‘ಸಾಯಣ ಮಾಧವ ಪ್ರಣೀತರು ಸಂಸ್ಕೃತದಲ್ಲಿ ರಚಿಸಿರುವ ಸರ್ವದರ್ಶನ ಸಂಗ್ರಹ’ವನ್ನು ೧೯೭೬ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾ ಲಯ ಪ್ರಕಟಿಸಿದೆ.
ಈ ಕೃತಿಯಲ್ಲಿ ಭಾರತದ ಸರ್ವದರ್ಶನಗಳನ್ನು ಕೇವಲ ಅನುವಾದಿಸಿರುವುದಲ್ಲದೆ ಆಳವಾಗಿ ವಿಶ್ಲೇಷಿಸಿಯೂ ಇದ್ದಾರೆ. ಈ ಕೃತಿಯ ಶಿವದರ್ಶನದ ವಿಶ್ಲೇಷಣೆಯಲ್ಲಿ “ಮಾಹೇಶ್ವರರು ಶೈವಾಗಮ ಸಿದ್ಧಾಂತದ ತತ್ವವನ್ನು ಸರಿಯಾಗಿ ಮನನ ಮಾಡಿ, (ಜೀವಿಗಳ) ಕರ್ಮಸಾಪೇಕ್ಷನಾದ ಪರಮೇಶ್ವರನೇ (ಜಗತ್ತಿಗೆ) ಕಾರಣ ಎಂದಂಗೀಕರಿಸುತ್ತಾ, ‘ಪತಿ, ಪಶು ಮತ್ತು ಪಾಶ ಎಂಬುದಾಗಿ ತತ್ವಗಳು ಮೂರು’ ಎಂಬ ಪಾಶುಪತಕ್ಕಿಂತ ಭಿನ್ನವಾದ ಸಿದ್ಧಾಂತವನ್ನು ಮಂಡಿಸುತ್ತಾರೆ.
ಆದ್ದರಿಂದಲೇ ಆಗಮತತ್ವವಿದರು: ಜಗದ್ಗುರುವಾದ (ಶಿವನು) ಮೂರು ಪದಾರ್ಥಗಳನ್ನು ಮತ್ತು ನಾಲ್ಕು ಪಾದಗಳಿಂದ (ವಿದ್ಯಾ, ಕ್ರಿಯಾ, ಯೋಗ ಮತ್ತು ಚರ್ಯಾ) ಕೂಡಿರುವ ಮಹಾತಂತ್ರವನ್ನೂ ಒಂದೇ ಸೂತ್ರದಲ್ಲಿ ಸಂಕ್ಷೇಪವಾಗಿ ಹೇಳಿ, ಮತ್ತೆ ಅದನ್ನು ವಿಸ್ತಾರವಾಗಿ ನಿರೂಪಿಸಿದ್ದಾರೆ" ಎನ್ನುತ್ತಾರೆ.
“ಪಾಶುಪತದ ಪಶು, ಪತಿ ಮತ್ತು ಪಾಶ ಎಂಬ ಮೂರು ಪದಾರ್ಥಗಳಲ್ಲಿ ಪತಿ ಪದಾರ್ಥ ಎಂದರೆ ಶಿವನು. ಮುಕ್ತಾತ್ಮರಾದ ವಿದ್ಯೇಶ್ವರಾದಿಗಳಿಗೆ ಶಿವತ್ವ ಇದ್ದರೂ ಪರಮೇಶ್ವರನ ಅಧೀನ ರಾದುದರಿಂದ ಅವರಿಗೆ ಸ್ವಾತಂತ್ರ್ಯವಿಲ್ಲ. ಹಾಗಾಗಿಯೇ ಶರೀರ, ಇಂದ್ರಿಯ, ಜಗತ್ತು ಮೊದಲಾದ ಪದಾರ್ಥಗಳಲ್ಲಿ ಒಂದು ವಿಶಿಷ್ಟವಾದ ಸಂಯೋಜನೆ ಕಂಡುಬರುವುದರಿಂದ (ಅವುಗಳನ್ನು) ಕಾರ್ಯಗಳೆಂದು ಪರಿಗಣಿಸಬಹುದು. ಇವು ಕಾರ್ಯಗಳಾದುದರಿಂದ ಬುದ್ಧಿಪೂರ್ವಕವಾಗಿ (ಸೃಜಿಸುವ) ಒಬ್ಬ ಕರ್ತೃ ಇರಬೇಕು ಎಂದು ಅನುಮಾನಿಸಬಹುದು.
ಇದನ್ನೂ ಓದಿ: Ravi Hunj Column: ಕಾವಿಧಾರಿಗಳು ನಿಮ್ಮೊಂದಿಗೆ ತಹಶೀಲ್ದಾರ್ ಕಚೇರಿಗೆ ಬರುವುದಿಲ್ಲ
ಈ ರೀತಿಯ ಅನುಮಾನದಿಂದ ಪರಮೇಶ್ವರನ ಅಸ್ತಿತ್ವವು ಉಪಪಾದಿತವಾದಂತಾಗುತ್ತದೆ. ಕರ್ತೃವಿನ ಅಸ್ತಿತ್ವವನ್ನು ಅನುಮಾನ (ಪ್ರಮಾಣ) ದಿಂದಲೇ ಸಾಧಿಸಬಹುದು. ಆ ಅನುಮಾನ ಸ್ವರೂಪ ಹೀಗಿದೆ- ದೇಹಾದಿಗಳು ಕಾರ್ಯ ಎನಿಸಿಕೊಳ್ಳುತ್ತವೆ. ಏಕೆಂದರೆ ಅವುಗಳಲ್ಲಿ ವ್ಯವಸ್ಥಿತ ವಾದ ಸಂಯೋಜನೆ ಇದೆ ಅಥವಾ ಅವು ನಶ್ವರವಾಗಿವೆ. ಮಡಕೆ ಮಾಡುವುದು ಮೊದಲಾದ (ಕಾರ್ಯ)ಗಳಂತೆ; ಈ ರೀತಿಯಾಗಿ ಇವುಗಳನ್ನು ಕಾರ್ಯಗಳೆಂದು ಅಂಗೀಕರಿಸುವುದರಿಂದ ಬುದ್ಧಿ ಪೂರ್ವಕವಾಗಿ (ಈ ಜಗತ್ತನ್ನು) ಸೃಷ್ಟಿಸುವ ಒಬ್ಬ ಕರ್ತೃವನ್ನು ಸುಲಭವಾಗಿ ಪ್ರಾಕೃತ ಶರೀರಿ ಎನ್ನಬಹುದು. ಆದರೆ ಈಶ್ವರನು ಪ್ರಾಕೃತ ಶರೀರಿಯಲ್ಲ.
ಹಾಗಾಗಿ ಈಶ್ವರನನ್ನು ಕರ್ತೃವೆಂದರೆ ಆತನು ಅಶರೀರಿಯಾಗಿರುವುದಿಲ್ಲ. ಶರೀರಿ ಎಂದು ಒಪ್ಪಿಕೊಳ್ಳುವುದಾದರೆ ಈಶ್ವರನೂ ನಮ್ಮಂತೆಯೇ ಕ್ಲೇಶಯುಕ್ತನೂ ಅಸಜ್ಞನೂ ಪರಿಮಿತ ಶಕ್ತಿಯುಳ್ಳವನೂ ಆಗುತ್ತಾನೆ! ಆದರೆ ಆ ರೀತಿ ಭಾವಿಸಲಾಗದು; ಏಕೆಂದರೆ ಅಶರೀರಿಯಾದರೂ ಆತ್ಮನು ತಾನು ಸಮಾವೇಶಗೊಂಡಿರುವ ಶರೀರದಲ್ಲಿ ಸ್ಪಂದನೆಯನ್ನು ಉಂಟುಮಾಡುವ ಕರ್ತೃವಾಗಬಲ್ಲನು.
ಪರಮೇಶ್ವರನಿಗೆ ಮಲ, ಕರ್ಮವೇ ಮುಂತಾದ ಪಾಶಜಾಲಗಳ ಸಂಪರ್ಕವಿಲ್ಲದಿರುವುದರಿಂದ ಪ್ರಾಕೃತ ಶರೀರಕ್ಕೆ ಬದಲಾಗಿ ಶಾಕ್ತಶರೀರವಿರುತ್ತದೆ. ಶಕ್ತಿರೂಪವಾದ ಈಶಾನಾದಿ ಐದು ಮಂತ್ರ ಗಳಿಂದ ಈಶ್ವರನಿಗೆ ಮಸ್ತಕ ಮುಂತಾದ ಅವಯವಗಳನ್ನು ಕಲ್ಪಿಸಲಾಗಿದೆ. ಈಶಾನ ಮಂತ್ರದಿಂದ ಮಸ್ತಕವೂ, ತತ್ಪುರುಷ ಮಂತ್ರದಿಂದ ಮುಖವೂ, ಅಘೋರ ಮಂತ್ರದಿಂದ ಹೃದಯವೂ, ವಾಮದೇವ ಮಂತ್ರದಿಂದ ಗುಹ್ಯವೂ, ಸದ್ಯೋಜಾತ ಮಂತ್ರದಿಂದ ಪಾದವೂ ಇರುವ ಈಶ್ವರನು ಹೀಗೆ ಪ್ರಸಿದ್ಧನಾಗಿದ್ದಾನೆ.
ಆ ಐದು ಮೂರ್ತಿಗಳೂ ಕ್ರಮವಾಗಿ ಅನುಗ್ರಹ, ತಿರೋಧಾನ, ಸ್ಮೃತಿ, ಸೃಷ್ಟಿರೂಪವಾದ ಪಂಚಕೃತ್ಯಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಅವನ ಶರೀರವು ಸ್ವೇಚ್ಛಾ ನಿರ್ಮಿತವಾದದ್ದೇ ಹೊರತು ಮಾನವ ಶರೀರಸದೃಶವಾದದ್ದಲ್ಲ. ಅಲ್ಲದೆ, ನಿರಾಕಾರ ಶಿವನನ್ನು ಧ್ಯಾನಕ್ಕೋಸ್ಕರ ಆಕಾರ ಶಿವನಾಗಿ ಕಲ್ಪಿಸಲಾಗಿದೆ.
ಐದು ಮುಖವುಳ್ಳವನು, ಹದಿನೈದು ಕಣ್ಣುಳ್ಳವನು ಮುಂತಾದ ವಿಶೇಷಣಗಳಿಂದ ಆಗಮಗಳಲ್ಲಿ ಪರಮೇಶ್ವರನಿಗೆ ಪ್ರಧಾನವಾಗಿಯೇ ಶರೀರ, ಇಂದ್ರಿಯಾದಿಗಳಿರುವಂತೆ ಹೇಳಲಾಗಿದೆ. ಏಕೆಂದರೆ, ನಿರಾಕಾರವಾದ ವಸ್ತುವಿಗೆ ಧ್ಯಾನ, ಪೂಜಾದಿಗಳು ಅಸಂಭವವಾದುದರಿಂದ ಭಕ್ತರ ಅನುಗ್ರಹ ಕ್ಕೋಸ್ಕರ ಆಯಾಯ ಆಕಾರವನ್ನು ಗ್ರಹಿಸುವಂತೆ ರೂಪಿಸಲಾಗಿದೆ.
ಅದನ್ನೇ ಪೌಷ್ಕರಾಗಮದಲ್ಲಿ ಹೀಗೆ ಹೇಳಿದೆ: ಸಾಧಕಸ್ಯ ತು ರಕ್ಷಾರ್ಥಂ ತಸ್ಯ ರೂಪಮಿದಂ ಸ್ಮೃತಮ. ಇತಿ ಅನ್ಯತ್ರಾಪಿ ಆಕಾರವಾನ್ ತ್ವಂ ನಿಯಮಾದುಷಾಸ್ಕೋ ನ ವಸ್ಥನಾಕಾರಮುಖೈತಿ ಬುದ್ಧಿಃ...ಇತಿ || ಅಂದರೆ, ಸಾಧಕನ ರಕ್ಷಣೆಗೋಸ್ಕರ ಆತನ ರೂಪವನ್ನು ಹೀಗೆ ಒಪ್ಪಲಾಗಿದೆ. ಮತ್ತೊಂದೆಡೆಯಲ್ಲಿಯೂ, ನೀನು ಆಕಾರವುಳ್ಳವನು, ನಿಯಮದಿಂದ ಪೂಜಿಸಲ್ಪಡತಕ್ಕವನು, ನಿರಾಕಾರವಾದ ವಸ್ತುವನ್ನು ನಮ್ಮ ಬುದ್ಧಿಯು ಗ್ರಹಿಸಲಾರದು" ಎಂದು ವಿಶ್ಲೇಷಿಸಿದ್ದಾರೆ.
ಇದನ್ನೇ ವಚನಕಾರ, ವೇದಮೂರ್ತಿ ಸಂಗಣ್ಣ, ‘ವೇದದ ಮೊದಲಧ್ಯಾಯದಲ್ಲಿ ಓಂಕಾರಕ್ಕೆ ಒಡೆಯನಾರೆಂಬುದ ತಿಳಿದು, ಸದ್ಯೋಜಾತಾದ್ಭವೇದ್ಭೂಮಿವಾಮದೇವಾದ್ಭವೇಜ್ಜ ಲಂ ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ | ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ ||
ಇಂತೀ ವೇದವೇದ್ಯರು ಶಿವಭಕ್ತರಲ್ಲದಿಲ್ಲ. ಇಂತಿದನರಿಯದೆ, ಘನ ಕಿರಿದೆಂದು ಹೋರುವವರಿಗೆ ತಿಳಿವಳವ ಕೊಡುವೆ’ ಎಂದು ಎಲ್ಲವನ್ನೂ ಸಮೀಕರಿಸುವಲ್ಲಿಗೆ ಹಿಂದೂ-ವೀರಶೈವ-ಲಿಂಗವಂತ ಶರಣ ಒಂದಾಗಿ ದೇದೀಪ್ಯಮಾನವಾಗಿ ಬೆಳಗುತ್ತದೆ.
‘ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಐವರನೆತ್ತಿ ನುಂಗಿದ ಅವಿರಳ ಪರಬ್ರಹ್ಮ ನೋಡಾ. ಆ ಪರಬ್ರಹ್ಮವ ನುಂಗಿದನು ನಿರವಯ. ನಿರವಯವ ನುಂಗಿದ ನಿರಾಳ. ನಿರಾಳವ ನುಂಗಿದ ನಿತ್ಯ ನಿರಂಜನ ಪರವಸ್ತು ನೋಡಾ. ಇವರೆಲ್ಲರ ನುಂಗಿದ ಪರವಸ್ತು ಎನ್ನ ನುಂಗಿತ್ತಾಗಿ, ಆ ಪರವಸ್ತುವ ನಾನು ನುಂಗಿದೆನಾಗಿ, ನಿಃಶಬ್ದಮಯವಾಯಿತ್ತು ಕಾಣಾ, ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ’ ಎಂದು ತೋಂಟದ ಸಿದ್ದಲಿಂಗೇಶ್ವರರು ಎಲ್ಲವನ್ನೂ ನಿಶ್ಶಬ್ದ ನೀರವ ಮೌನವಾಗಿಸಿದ್ದಾರೆ.
ನಿರಾಕಾರ ಶಿವನ ಮೇಲಿನ ಭಕ್ತಿಯನ್ನು ಅಭಿವ್ಯಕ್ತಿಸಲು ಸಾಧನವಾಗಿ ಆಕಾರ ಶಿವನನ್ನು ರೂಪಿಸಲಾಯಿತು. ಇದು ಮಾನವ ರೂಪ, ಲಿಂಗರೂಪವಾಗಿ ಕಂಥೆ ಕಟ್ಟಿದ ಇಷ್ಟಲಿಂಗ ರೂಪ ತಾಳಿತು. ಇವೆಲ್ಲವುಗಳ ಮೂಲೋದ್ದೇಶ ಭಕ್ತಿಯ ಆಧ್ಯಾತ್ಮಿಕತೆಯನ್ನು ಸಾಽಸುವ ಸಾಧನವಷ್ಟೇ ಹೊರತು ಸನಾತನ ಶಿವ, ಲಿಂಗಾಯತ ಶಿವ, ಕಾರ್ಬನ್ ಲಿಂಗ, ಡೈನಾಮೈಟ್ ಲಿಂಗ ಎಂದೆಂಬ ವಿಭಜನೆಗಲ್ಲ .
ಇರಲಿ, ಹೀಗೆ ನಾಸಾದೀಯಸೂಕ್ತ-ಆಗಮ-ಶ್ರೀಕರಭಾ ಷ್ಯ-ಸಿದ್ಧಾಂತ ಶಿಖಾಮಣಿ-ವಚನಗಳ ಸ್ಥಿತ್ಯಂತರವನ್ನು ತಾರ್ಕಿಕವಾಗಿ ಓರ್ವ ನಿವೃತ್ತ ನ್ಯಾಯಾಧೀಶರು ವಿರಕ್ತ ಪೀಠದ ಜಗದ್ಗುರು ಗಳೊಡನೆ ಸೇರಿ ಧಾರ್ಮಿಕ ವಿಕಾಸವನ್ನು ಕಟ್ಟಿಕೊಟ್ಟಿದ್ದಾರೆ.
ಇದೇ ರೀತಿ ಕುಂದೂರು ಮಠದ ಇಮ್ಮಡಿ ಶಿವಬಸವ ಸ್ವಾಮಿಗಳು ಸಮಗ್ರ ಸನಾತನ ದರ್ಶನಗಳನ್ನು ವಿಶ್ಲೇಷಿಸಿ ಲಿಂಗವಂತ ವೀರಶೈವ ಧರ್ಮದ ಛಾಯೆಯ ಕುರುಹುಗಳನ್ನು ತೋರಿದ್ದಾರೆ. ಯಾವ ಮಾಹಿತಿ ತಂತ್ರಜ್ಞಾನದ ಅನುಕೂಲವಿಲ್ಲದಿzಗಲೂ ಇಂಥ ಪ್ರಗತಿಯ ಮಹತ್ಸಾಧನೆಯನ್ನು ಇವರೀರ್ವರಲ್ಲದೇ ಅನೇಕ ಶರಣರು, ವಿದ್ವಾಂಸರು ಸಾಧಿಸಿದ್ದಾರೆ.
ಇದೇ ರೀತಿ ಅಖಿಲ ಭಾರತ ವೀರಶೈವ ಮಹಾಸಭಾ ಮೊದಲ ಮತ್ತು ಎರಡನೇ ಅಧ್ಯಕ್ಷರಾದ ಶಿರಸಂಗಿ ಲಿಂಗರಾಜರು ತಮ್ಮ ಸರ್ವಸ್ವವನ್ನೂ ಅಖಂಡ ವೀರಶೈವ ಲಿಂಗವಂತ ಸಮಾಜಕ್ಕೆ ಧಾರೆಯೆರೆದಿದ್ದಾರೆ. ಚದುರಿ ಹೋಗಿದ್ದ ಸಮಾಜಕ್ಕೆ ಸಾಂಕ ರೂಪ ಕೊಟ್ಟು, ಸಾಮಾಜಿಕ ನೆಲೆಯೊದಗಿಸಿ eನ ದೀವಿಗೆ ಹಚ್ಚಿ ಸಾಹಿತ್ಯ ಶ್ರೀಮಂತಿಕೆಯನ್ನು ಕೊಟ್ಟಿದ್ದಾರೆ.
ಇದೆಲ್ಲವೂ ಅಂದಿನ ಸಮಾಜದ ಔನ್ಯತ್ಯದ ಒಂದು ಅವಲೋಕನ! ಇಂಥ ಅಗಮ್ಯ ಅಗೋಚರ ಅಪ್ರಮಾಣ ಸಿದ್ಧಾಂತವು ಇಂದಿನ ಮಾಹಿತಿ ತಂತ್ರeನದ ಯುಗಮಾನದಲ್ಲಿ ಏನಾಗುತ್ತಿದೆ? ಘನ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತಿಯಾದ ಓರ್ವ ಮಹನೀಯರೂ ತಮ್ಮ ಧಾರ್ಮಿಕ ಚಿಂತನೆಯ ಸಂಶೋಧನೆಗಳನ್ನು ಮಂಡಿಸುತ್ತಿದ್ದಾರೆ.
ಕೇವಲ ಒಂದಲ್ಲದೆ ನೂರೆಂಟು ಮಠಗಳು ಅವರ ಬೆಂಬಲಕ್ಕಿವೆ. ಆದರೆ ಅವರ ಸಂಶೋಧನೆಗಳು ಬಂಡವಾಳವಿಲ್ಲದ ಬಡಾಯಿಯಂತೆ ಕಂಗೊಳಿಸುತ್ತಿವೆ. ನಿವೃತ್ತ ಅಧಿಕಾರಶಾಹಿಗಳಾದ ಜಾಮ ದಾರರ ಕೂಪಮಂಡೂಕ ಪೊಳ್ಳು ‘ಸಂ’ಶೋಧನೆಗೆ ವಿಪರ್ಯಾಸವೆಂದರೆ ಈಗ ಇದೇ ಮುರುಘಾ ಮಠದ ಹಂಗಾಮಿ ಚೆಂಗೂಲಿ ಕಾವಿಧಾರಿಗಳೂ ಮೈದೂಗಿ ಜಯಜಯಕಾರ ಹಾಕುತ್ತಿದ್ದಾರೆ.
ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುತ್ತಾ ಬಸವ ಸಂಸ್ಕೃತಿಯ ಹೆಸರಿನಲ್ಲಿ ವಿಸ್ಮೃತಿಯನ್ನು ಮೆರೆಯುತ್ತಿದ್ದಾರೆ. ಅಖಂಡ ಸಮಾಜಕ್ಕೆ ಭಂಜಕ ರೂಪ ಕೊಟ್ಟು ಸಾಮಾಜಿಕ ನೆಲೆಗೆಡಿಸಿ ಅಧೋಗತಿ ಅಜ್ಞಾನದ ಪರಮಕೂಪಕ್ಕೆ ಧರ್ಮವನ್ನು ತಳ್ಳಿದ್ದಾರೆ. ಕುಂದೂರು ಮಠದ ಇಮ್ಮಡಿ ಶಿವಬಸವ ಸ್ವಾಮಿಗಳಷ್ಟೇ ಪಾಂಡಿತ್ಯದ ಇಂದಿನ ಇದೇ ಕುಂದೂರು ಮಠದ ಸ್ವಾಮಿಗಳು ಸಹ ಈ ಗಾಂಪ ಕಾವಿ ಪಾತ್ರಧಾರಿಗಳ ಹುನ್ನಾರಕ್ಕೆ ಬಲಿಯಾಗಿದ್ದಾರೆ.
ಮಹಾದಾನಿ ಶಿರಸಂಗಿ ಲಿಂಗರಾಜರಂಥ ನಿಸ್ವಾರ್ಥ ಸಮಾಜಸೇವಕರ ವಂಶಜ ನಾನು ಎಂದು ಹೇಳಿಕೊಳ್ಳುವ ರಾಜಕಾರಣಿಯೇ ಇಂದು ಈ ಸಮಾಜಭಂಜಕತನದ ರೂವಾರಿಯಾಗಿರುವುದು ಈ ಸಮಾಜದ ಲಿಂಗಾಹತದ ಹೆಗ್ಗುರುತಾಗಿದೆ. ಸರಕಾರಿ ಕಾರ್ಯಕ್ರಮದ ಆಚರಣೆಯಾಗಿ ಬಸವ ಜಯಂತಿ ಆಚರಿಸಲು ಸಿದ್ಧಪಡಿಸಿದ್ದ ವಿಶೇಷ ರಥವನ್ನೇ ಲಿಂಗಾಹತ ಮಠಾಧೀಶರ ಒಕ್ಕೂಟದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಅಭಿಯಾನಿಗಳೇ ಹೇಳಿಕೊಳ್ಳು ತ್ತಿದ್ದಾರೆ.
ಅಂದರೆ ಬಸವ ಸಂಸ್ಕೃತಿ ಅಭಿಯಾನವು ಕಾಂಗ್ರೆಸ್ ಸರಕಾರದ ಗುಪ್ತಗಾಮಿನಿಯೇ ಆಗಿದೆ. ಶಿರಸಂಗಿ ಲಿಂಗರಾಜರು ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಅಲಂಕರಿಸಿದ್ದ ಸ್ಥಾನದಲ್ಲಿರುವ ಶಿವಶಂಕರಪ್ಪನವರು ತಮ್ಮ ಮಹಾಸಭಾದ ಕಾರ್ಯದರ್ಶಿ ತೆಪರು ತೆಪರಾಗಿ ಲಿಂಗಾಹತರ ವಕ್ತಾರಿಕೆ ಮಾಡುತ್ತಿದ್ದರೂ ಏನೂ ಕ್ರಮ ಕೈಗೊಳ್ಳುತ್ತಿಲ್ಲ, ಏಕೆ? ತಮ್ಮನ್ನು ಆಗಾಗ್ಗೆ ಭೇಟಿ ಮಾಡುವ ಭಂಜಕ ಸಾಣೇಹಳ್ಳಿ ಸ್ವಾಮಿಗೆ ಇದನ್ನೆಲ್ಲ ನಿಲ್ಲಿಸಿ ಎಂದು ಒಂದು ಸಾರ್ವಜನಿಕ ಹೇಳಿಕೆಯನ್ನು ಕೊಟ್ಟಿಲ್ಲ, ಏಕೆ? ವೀರಪ್ಪನ್ ಅಂಥ ನರಹಂತಕನನ್ನು ಮಟ್ಟ ಹಾಕಿದ್ದ ಶಂಕರ್ ಬಿದರಿಯವರು ಸಮಾಜವನ್ನು ಒಗ್ಗೂಡಿಸಲು ಮಾಡಿದ ಪ್ರಯತ್ನಕ್ಕಾಗಿ ಅವರನ್ನು ಮಹಾಸಭಾದಲ್ಲಿ ನಿಸ್ಸಹಾಯಕ ರನ್ನಾಗಿ ಮಾಡಿರುವುದು ಏಕೆ? ಕಳೆದ ವರ್ಷ ಸರಕಾರವು ಭಂಜಕ ಪುಂಗವ ನಿಜಗುಣಾನಂದರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟದ್ದಲ್ಲದೆ ಈ ವರ್ಷ ಸರಕಾರದ 30 ಕೋಟಿ ವೆಚ್ಚದ ಬಸವ ಜಯಂತಿ ರಥಯಾತ್ರೆಯ ಸಂಚಾಲಕತ್ವ ವಹಿಸಿಕೊಟ್ಟಿದ್ದು, ಏಕೆ? ಭಂಜಕ ವಕ್ತಾರ ಜೆ.ಎಸ್. ಪಾಟೀಲನಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಡಮಾಡುವ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯತ್ವದ ಭಕ್ಷೀಸು ಕೊಡಲಾಗಿದೆ, ಏಕೆ? ಉಪಮುಖ್ಯಮಂತ್ರಿಗಳು, “ಸರಕಾರ ಯಾವುದೇ ಧರ್ಮವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿಲ್ಲ" ಎಂದು ಪದೇ ಪದೆ ಹೇಳಿಕೆ ಕೊಡುತ್ತಿರುವುದು ಏಕೆ? ಏಕೆಂದರೆ, ಇವರೆಲ್ಲರೂ ಕಾಂಗ್ರೆಸ್ ಸರಕಾರದ ‘ಭಾಗ್ಯ’ವಿಧಾತರಾಗಿರು ವುದೇ? ಶಿರಚ್ಛೇದಿತ ಕುಕ್ಕುಟಗಳಂತೆ ನರ್ತಿಸುತ್ತಿರುವ ಲೋಲುಪ್ತ ಪಡೆಯನ್ನು ಕಂಡೂ ಕಾಣದಂತಿರುವ ಸಮಾಜ ಚಿಂತಿಸಬೇಕು.ಇನ್ನು ತಮ್ಮ ಅಭಿಯಾನ, ಸಮಾವೇಶಕ್ಕೆ ಜನರನ್ನು ಸೇರಿಸಲು ರಾಜಕಾರಣಿಗಳ ಸೂತ್ರವನ್ನೇ ಕಾವಿಗಳೂ ಅಳವಡಿಸಿಕೊಂಡಿ ದ್ದಾರೆ.
ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳಿಗೆ, “ಎಂಟು ನೂರು ರುಪಾಯಿ ಬೆಲೆಯ ಇಳಕಲ್ ಸೀರೆಗಳನ್ನು ದಾನಿಗಳ ಕೃಪೆಯಿಂದ ಕೇವಲ ನಾನೂರು ರುಪಾಯಿಗೆ ಕೊಡುತ್ತೇವೆ. ಅಲ್ಲದೆ ಐವತ್ತು ರುಪಾಯಿಗೆ ಒಂದು ಒಳ್ಳೆಯ ಟವೆಲ, ವಿಭೂತಿ ಘಟ್ಟಿ, ವಚನದ ಪುಸ್ತಕ ಕೊಡುತ್ತೇವೆ.
ಊಟ, ಉಚಿತ ಸಾರಿಗೆ ಒದಗಿಸುತ್ತೇವೆ. ಬನ್ನಿ, ಪೂರ್ವಭಾವಿ ಸಭೆಯಲ್ಲಿ ಸೀರೆ ಆಯ್ದುಕೊಳ್ಳಿ. ಅಭಿಯಾನದಲ್ಲಿ ಧರಿಸಿಕೊಂಡು ಬನ್ನಿ. ಎರಡೂ ಸಭೆಗೂ ಉಚಿತ ಸಾರಿಗೆ ವ್ಯವಸ್ಥೆ, ಪ್ರಸಾದ, ಮನರಂಜನೆ. ಹಾಂ, ಯಾರು ಹೆಚ್ಚಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುವರೋ ಅವರಲ್ಲಿ ಐದು ಜನರಿಗೆ ದುಬೈನಲ್ಲಿ ಸನ್ಮಾನ ಮಾಡಲಾಗುವುದು. ಮರೆಯದಿರಿ, ಮರೆತು ನಿರಾಶರಾಗದಿರಿ" ಎಂದು ಕಂಪನಿ ನಾಟಕದ ಶೈಲಿ ಪ್ರಚಾರ ಮಾಡಿ ಜನರನ್ನು ಸೇರಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಮುನ್ನೂರು ಗಾಂಪ ಕಾವಿಪಾತ್ರಧಾರಿಗಳೆಲ್ಲರೂ ಅಭಿಯಾನದ ಸಮಾರೋಪ ಸಮಾರಂಭದ ಸಂತೆಯ ಹೊನಲು ಬೆಳಕಿನಡಿಯಲ್ಲಿ ಸ್ಪರ್ಧೆಗೆ ಬಿದ್ದು ಬೆತ್ತಲೋ ಬೆತ್ತಲಾದರು! ಈ ಕಾವಿಧಾರಿಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಸಲಿಂಗಿಗಳು, ಓರ್ವ ಎಚ್‌ಐವಿ ಪೀಡಿತ, ಹತ್ತಕ್ಕೂ ಹೆಚ್ಚು ಲೈಂಗಿಕ ಕಿರುಕುಳ ಅಥವಾ ಅನ್ಯಲಿಂಗ ಸಾಂಗತ್ಯಕ್ಕೆ ಹಾತೊರೆದವರು ಇದ್ದರು. ಮೂರು ವರ್ಷಗಳ ಹಿಂದೆ ಶರಣೆ ತಮಿಳ್ನಾಡು ಸತ್ಯಕ್ಕ ಎನ್ನುವವರ ವೈರಲ್ ಆಡಿಯೋದಲ್ಲಿ ಉಲ್ಲೇಖಿತ ರಾದವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಆಕೆ ಹೆಸರಿಸಿದ ಕೆಲವರು ಪಂಚತಾರಾ ಹೋಟೆಲಿನಲ್ಲಿ ಕೆಲವು ದಿನ ತಲೆಮರೆಸಿಕೊಂಡಿದ್ದರು. ಇವರ‍್ಯಾರೂ ಆಕೆಯ ಮೇಲೆ ಯಾವ ಮಾನಹಾನಿ ಮೊಕದ್ದಮೆಯನ್ನು ಹೂಡಿಲ್ಲ ಎಂಬುದೇ ಅವರ ಲಿಂಗಾಂಗ ಕಾರ್ಯಾ ಚರಣೆಗೆ ಸಾಕ್ಷಿ ಮತ್ತು ಇವರು ಯಾವ ಲಿಂಗಕ್ಕೆ ಪ್ರಾಮುಖ್ಯ ಕೊಡುತ್ತಾರೆ ಎಂಬುದಕ್ಕೆ ನಿದರ್ಶನ!
ಅಂದ ಹಾಗೆ ಇವರೆಲ್ಲರ ಲಂಪಟತನವೇನೂ ಯಾರಿಗೂ ಗೊತ್ತಿಲ್ಲದ್ದೇನಲ್ಲ! ಎಲ್ಲವೂ ಜಗಜ್ಜಾಹೀ ರಾಗಿರುವ ವಿಷಯವೇ ಆಗಿದೆ. ಇವರೆಲ್ಲರೂ ‘ಜಂಗಮದೆಡೆಗೆ’ ಎಂಬ ನಾಟಕವನ್ನಾಡ ಬಲ್ಲರೇ ಹೊರತು ನಡೆಯಲಾರರು! ಹೀಗಿದ್ದೂ ಇಂಥ ಅಜ್ಞಾನಿ ಅಧಮರನ್ನು ಎತ್ತಿ ಪೂಜಿಸುವ ಭಕ್ತರಿದ್ದಾರೆ ಎಂದರೆ ಈ ಭಕ್ತರು ಇನ್ನೆಂಥ ಘನಲಿಂಗವಂತರೋ ಆ ಥಾಯ್ಲೆಂಡ್ ಬಸಾಯನೇ ಬಲ್ಲ! ಹೀಗೆ ಮಹಾಬಯಲಿನಿಂದ ತಂಬಿಗಿ ಬಯಲೆಡೆಗೆ ನವಲಿಂಗಾಹತರು ನಿರಾಳವಾಗಲು ನಡೆಯುತ್ತಿದಾರೆ!
ಒಟ್ಟಾರೆ, ಇದಿಷ್ಟು ಅಂದಿನ eನವಂತ ತಾರ್ಕಿಕ ಉದಾತ್ತ ಚಿಂತನೆಯ ಇತಿಹಾಸ, ಮತ್ತು ಇಂದಿನ ಅeನಿ ಅತಾರ್ಕಿಕ ಸಂಕುಚಿತ ಚಿತೆಯ ವರ್ತಮಾನ! ಎರಡೂ ಸಾಕ್ಷಾತ್ಕರಿಸಿದ ವಾಸ್ತವ. ಈ ವಾಸ್ತವಿಕ ಚಿತ್ರಣವು, ಈ ಸಮಾಜವು ಹೇಗೆ ಅಧೋಗತಿಗೆ ಸಿಲುಕಿ ಅವಸಾನದತ್ತ ದಾಪುಗಾಲಿಟ್ಟು ಓಡುತ್ತಿದೆ ಎಂಬುದರ ಒಂದು ಅಳತೆಗೋಲಾಗಿದೆ.
ಇದು ಕೇವಲ ಅಖಂಡ ವೀರಶೈವ ಲಿಂಗವಂತ ಸಮಾಜದ ಅಧೋಗತಿಯಲ್ಲ. ಇದು ಇಡೀ ಹಿಂದೂ ಪ್ರಭೇದದ ಅಧೋಗತಿಯ ಅನಾವರಣ. ಕ್ರಿಸ್ತಪೂರ್ವದಲ್ಲಿ ಪ್ರಪಂಚದಾದ್ಯಂತ ಜ್ಞಾನಕಾಶಿ, ಶಾಸ್ತ್ರ(ವಿಜ್ಞಾನ) ಸೂತ್ರ(ಪ್ರಮೇಯ) ಗಳ ತವರು, ಅಧ್ಯಾತ್ಮ ಸಿದ್ಧಾಂತಗಳ ಜನಕ ಎಂದೆ ಖ್ಯಾತಿವೆತ್ತು ‘ಬುದ್ಧಿವಂತ ವಲಸಿಗರ ಸ್ವರ್ಗ’ ಎನಿಸಿದ್ದ ಭಾರತದ ಒಟ್ಟಾರೆ ಅಧೋಗತಿಯ ಪ್ರತೀಕ ಇದಾಗಿದೆ.
ಹಿಂದೂ ಪ್ರಭೇದವೆಂಬ ಬ್ರಹ್ಮಾಂಡವು ಇಷ್ಟಲಿಂಗವೆಂಬ ಕುರುಹಾದ ‘ಅಹಂ ಬ್ರಹ್ಮಾಸ್ಮಿ’ ಎಂಬ ಆಧ್ಯಾತ್ಮಿಕ ರೂಪಕವು, ಭೌತಿಕವಾಗಿ ‘ಲಿಂಗಂ ಸ್ವಾಹಾಂ’ ಎಂಬ ಪ್ರತಿರೂಪವಾಗಿ ಹೊಮ್ಮಿರುವ ವಾಸ್ತವಕ್ಕೆ ಇದೇ ನಿದರ್ಶನ! ವರ್ತಮಾನದ ಸಮಾಜವು ಇದನ್ನು ಮನಗಂಡು ಕಾರ್ಯಪ್ರವೃತ್ತ ವಾಗದಿದ್ದರೆ... I am the God. I am the Way. God bless you all!!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)