IND vs PAK: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭಾರತ vs ಪಾಕ್ ಏಷ್ಯಾ ಕಪ್ ಪಂದ್ಯದ ವಿವಾದ
Asia Cup 2025: "ಕ್ರಿಕೆಟ್ ರಾಷ್ಟ್ರಗಳ ನಡುವಿನ ಸಾಮರಸ್ಯ ಮತ್ತು ಸ್ನೇಹವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರು ದೇಶದ ವಿರುದ್ಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

-

ನವದೆಹಲಿ: ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ(IND vs PAK) ಟಿ20 ಏಷ್ಯಾಕಪ್ ಪಂದ್ಯವನ್ನು(Asia Cup 2025) ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ. ಎರಡೂ ದೇಶಗಳ ನಡುವಿನ ಕ್ರಿಕೆಟ್ ಪಂದ್ಯವು "ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಕಾರಕ" ಮತ್ತು ಸಶಸ್ತ್ರ ಪಡೆಗಳ ಮತ್ತು ಒಟ್ಟಾರೆ ರಾಷ್ಟ್ರದ ನೈತಿಕ ಸ್ಥೈರ್ಯಕ್ಕೆ ಹಾನಿಕಾರಕವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ಅಸಮಂಜಸ ಸಂದೇಶವನ್ನು ರವಾನಿಸಿದೆ ಎಂದು ಉರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
"ಕ್ರಿಕೆಟ್ ರಾಷ್ಟ್ರಗಳ ನಡುವಿನ ಸಾಮರಸ್ಯ ಮತ್ತು ಸ್ನೇಹವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರು ದೇಶದ ವಿರುದ್ಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ.
"ಇದು ಪಾಕಿಸ್ತಾನಿ ಭಯೋತ್ಪಾದಕನ ಕೈಯಲ್ಲಿ ಪ್ರಾಣ ಕಳೆದುಕೊಂಡ ಬಲಿಪಶುಗಳ ಕುಟುಂಬಗಳ ಭಾವನೆಗಳಿಗೆ ನೋವುಂಟು ಮಾಡಬಹುದು. ಮನರಂಜನೆಗಿಂತ ರಾಷ್ಟ್ರದ ಘನತೆ ಮತ್ತು ನಾಗರಿಕರ ಸುರಕ್ಷತೆ ಮುಖ್ಯ" ಎಂದು ಅರ್ಜಿದಾರರು ಹೇಳಿದ್ದಾರೆ.
ಇದನ್ನೂ ಓದಿ Asia Cup 2025: ಆರ್. ಅಶ್ವಿನ್ ದಾಖಲೆ ಮುರಿದ ಕುಲ್‌ದೀಪ್ ಯಾದವ್