IND vs PAK: ಭಾರತದ ಸ್ಪಿನ್ ದಾಳಿಗೆ ಪತರಗುಟ್ಟಿದ ಪಾಕಿಸ್ತಾನ
ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಕುಲ್‌ದೀಪ್ ಯಾದವ್ 18 ರನ್‌ಗೆ 3 ವಿಕೆಟ್ ಕಿತ್ತರು. ಅಕ್ಷರ್ ಪಟೇಲ್ 2 ಅನುಭವಿ ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರೂ 27 ರನ್ ಬಿಟ್ಟುಕೊಟ್ಟು ಕೊಂಚ ದುಬಾರಿಯಾಗಿ ಕಂಡುಬಂದರು. ವರುಣ್ ಚರ್ಕವರ್ತಿ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

-

ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಭಾರತದ(IND vs PAK) ಬಿಗು ಬೌಲಿಂಗ್ ದಾಳಿಯ ಮಧ್ಯೆಯೂ, ಸಾಹಿಬ್ಜಾದಾ ಫರ್ಹಾನ್ ಮತ್ತು ಅಂತಿಮ ಹಂತದಲ್ಲಿ ಅಫ್ರಿದಿ ನಡೆಸಿದ ಬಿರುಸಿನ ಬ್ಯಾಟಿಂಗ್ ಹೋರಾಟದ ನೆರವಿನಿಂದ ಪಾಕಿಸ್ತಾನ 9 ವಿಕೆಟ್‌ಗೆ 127 ರನ್ ಗಳಿಸಿ ಸವಾಲೊಡ್ಡಿದೆ. ಭಾರತ ಗೆಲುವಿಗೆ 128 ರನ್ ಬಾರಿಸಬೇಕಿದೆ.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಆರಂಭದಲ್ಲೇ ಕುಸಿತ ಕಂಡಿತು. ವೈಡ್ ಮೂಲಕ ಖಾತೆ ತೆರೆದ ಪಾಕ್‌ಗೆ ಹಾರ್ದಿಕ್ ಮುಂದಿನ ಎಸೆತದಲ್ಲಿ ಆಘಾತವಿಕ್ಕಿದರು. ಸೈಮ್ ಅಯೂಬ್ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಅಟ್ಟಿದರು.
ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಜಸ್‌ಪ್ರೀತ್ ಬುಮ್ರಾ ಮುಂದಿನ ಓವರ್‌ನಲ್ಲಿ ಮೊಹಮ್ಮದ್ ಹ್ಯಾರಿಸ್(3) ವಿಕೆಟ್ ಕಿತ್ತರು. ತಂಡದ ಮೊತ್ತ 6 ರನ್ ಆಗುವಷ್ಟರಲ್ಲಿ 2 ಪ್ರಮುಖ ವಿಕೆಟ್ ಬಿದ್ದಿತು. ಆದರೆ ಮೂರನೇ ವಿಕೆಟ್‌ಗೆ ಜತೆಯಾದ ಫಖರ್ ಜಮಾನ್ ಮತ್ತು ಸಾಹಿಬ್ಜಾದಾ ಫರ್ಹಾನ್ ಕೆಲ ಕಾಲ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಇವರ ಆಟ ಕೂಡ ಹೆಚ್ಚು ಹೊತ್ತು ಸಾಗಲಿಲ್ಲ.
17 ರನ್‌ಗಳಿಸಿದ ವೇಳೆ ಅಕ್ಷರ್ ಪಟೇಲ್ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಅಪಾಯಕಾರಿ ಫಖರ್ ಜಮಾನ್ ಬೌಂಡರಿ ಲೈನ್‌ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಈ ವಿಕೆಟ್ ಬೀಳುತ್ತಿದ್ದಂತೆ ಪಾಕ್ ಮತ್ತೆ ಕುಸಿತ ಕಂಡಿತು. ನಾಯಕ ಸಲ್ಮಾನ್ ಅಲಿ ಆಘಾ(3), ಹಸನ್ ನವಾಜ್(5) ಮತ್ತು ಮೊಹಮ್ಮದ್ ನವಾಜ್(0) ಅಕ್ಷರ್ ಮತ್ತು ಕುಲ್‌ದೀಪ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಫರ್ಹಾನ್- ಅಫ್ರಿದಿ ಆಸರೆ
ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದ ಸಾಹಿಬ್ಜಾದಾ ಫರ್ಹಾನ್, 3 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 40 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ವೇಗಿ ಶಾಹೀನ್ ಅಫ್ರಿದಿ, 14 ಎಸೆತಗಳಿಂದ ಅಜೇಯ 33 ರನ್ ಬಾರಿಸಿರು. ಅವರ ಈ ಬ್ಯಾಟಿಂಗ್‌ನಲ್ಲಿ 4 ಸಿಕ್ಸರ್ ಸಿಡಿಯಿತು. ಪರಿಣಾಮ ಪಾಕ್ 100ರ ಗಡಿ ದಾಟಿತು.
ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಕುಲ್‌ದೀಪ್ ಯಾದವ್ 18 ರನ್‌ಗೆ 3 ವಿಕೆಟ್ ಕಿತ್ತರು. ಅಕ್ಷರ್ ಪಟೇಲ್ 2 ಅನುಭವಿ ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರೂ 27 ರನ್ ಬಿಟ್ಟುಕೊಟ್ಟು ಕೊಂಚ ದುಬಾರಿಯಾಗಿ ಕಂಡುಬಂದರು. ವರುಣ್ ಚರ್ಕವರ್ತಿ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.