Mohan Bhagwat: ʼʼಯಾವುದೇ ಸಂಘರ್ಷವಿಲ್ಲದಂತೆ ಭಾರತ 3,000 ವರ್ಷ ಜಗತ್ತನ್ನು ಮುನ್ನಡೆಸಿದೆʼʼ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ʼʼಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ಮೂಲಕ ಹಲವರ ಅನುಮಾನಗಳನ್ನು ತಪ್ಪೆಂದು ದೃಢಪಡಿಸಿದೆ. ಭಾರತ 3,000 ವರ್ಷಗಳ ಕಾಲ ವಿಶ್ವ ನಾಯಕನಾಗಿದ್ದಾಗ ಯಾವುದೇ ಜಾಗತಿಕ ಕಲಹ ಇರಲಿಲ್ಲʼʼ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

-

ದೆಹಲಿ: ʼʼಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಆ ಮೂಲಕ ಭಾರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆಲ್ಲ ಸ್ಪಷ್ಟ ಸಂದೇಶ ರವಾನಿಸಿದೆ. ಭಾರತ 3,000 ವರ್ಷಗಳ ಕಾಲ ವಿಶ್ವ ನಾಯಕನಾಗಿದ್ದಾಗ ಯಾವುದೇ ಜಾಗತಿಕ ಕಲಹ ಇರಲಿಲ್ಲʼʼ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದರು. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ʼʼಜಗತ್ತಿನಲ್ಲಿ ಕಂಡು ಬರುವ ಎಲ್ಲ ಸಂಘರ್ಷಗಳಿಗೆ ವೈಯಕ್ತಿಕ ಹಿತಾಸಕ್ತಿಯೇ ಕಾರಣʼʼ ಎಂದು ಅವರು ಪ್ರತಿಪಾದಿಸಿದರು.
ಭಾರತವು ಜಗತ್ತನ್ನು ಮುನ್ನಡೆಸುತ್ತಿದ್ದಾಗ ಯಾವುದೇ ದೇಶವನ್ನು ವಶಪಡಿಸಿಕೊಳ್ಳಲಿಲ್ಲ. ಜತೆಗೆ ಯಾರ ವ್ಯಾಪಾರವನ್ನೂ ನಿರ್ನಾಮ ಮಾಡಲಿಲ್ಲ ಎಂದು ಭಾಗವತ್ ತಿಳಿಸಿದರು. "ನಾವು ಯಾರನ್ನೂ ಬದಲಾಯಿಸಲಿಲ್ಲ; ನಾವು ಯಾರನ್ನೂ ಮತಾಂತರಿಸಲಿಲ್ಲ. ನಾವು ಎಲ್ಲಿಗೆ ಹೋದರೂ ನಾಗರಿಕತೆಯ ಪ್ರಜ್ಞೆ, ಜ್ಞಾನವನ್ನು ಹಂಚಿದ್ದೇವೆ. ವಿವಿಧ ಧರ್ಮಗಳ ಗ್ರಂಥಗಳನ್ನು ಮನನ ಮಾಡಿದ್ದೇವೆ ಮತ್ತು ಜೀವನವನ್ನು ಸುಧಾರಿಸಿದ್ದೇವೆ. ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಗುರುತು ಇದೆ, ಎಲ್ಲವೂ ಇದೆ. ಆದರೆ ಉತ್ತಮ ಸಂವಹನ ಇಲ್ಲ" ಎಂದು ಅವರು ಹೇಳಿದರು.
ಮೋಹನ್ ಭಾಗವತ್ ಅವರ ಭಾಷಣ:
#WATCH | Indore, Madhya Pradesh | RSS chief Mohan Bhagwat says, "...Because of the awareness and feeling of purity our ancestors gave us,... India was the best country. There had been no conflict in the world for 3000 years... Technological progress was very high, but the… pic.twitter.com/CowhI3z1Ej
— ANI (@ANI) September 14, 2025
ಈ ಸುದ್ದಿಯನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ಘೋಷಿಸುತ್ತಾರಾ? ಬಿಜೆಪಿಯ 75 ವರ್ಷಕ್ಕೆ ನಿವೃತ್ತಿಯ ಅಘೋಷಿತ ನಿಯಮದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಅವರ ಮಾತನ್ನು ಉಲ್ಲೇಖಿಸಿದ ಭಾಗವತ್, ಬ್ರಿಟಿಷ್ ಆಳ್ವಿಕೆ ಕೊನೆಗೊಂಡ ನಂತರವೂ ಒಗ್ಗಟ್ಟಿನಿಂದ ಉಳಿಯುವ ಮೂಲಕ ಭಾರತವು ಅವರ ಮಾತನ್ನು ತಪ್ಪು ಎಂದು ಸಾಬೀತುಪಡಿಸಿದೆ ಎಂದರು. "ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡ ನಂತರ ನೀವು (ಭಾರತೀಯರು) ಬದುಕಲು ಸಾಧ್ಯವಾಗುವುದಿಲ್ಲ ಮತ್ತು ದೇಶ ವಿಭಜನೆಯಾಗುತ್ತದೆ ಎಂದು ಚರ್ಚಿಲ್ ಒಮ್ಮೆ ಹೇಳಿದ್ದರು. ಆದರೆ ಹಾಗಾಗಲಿಲ್ಲ. ಈಗ ಇಂಗ್ಲೆಂಡ್ ಸ್ವತಃ ವಿಭಜನೆಯ ಹಂತಕ್ಕೆ ಬಂದಿದೆ. ಆದರೆ ನಾವು ವಿಭಜನೆಯಾಗುವುದಿಲ್ಲʼʼ ಎಂದು ತಿಳಿಸಿದರು.
ʼʼಜಗತ್ತು ನಂಬಿಕೆಯ ಮೇಲೆ ನಡೆಯುತ್ತಿದ್ದರೆ, ಭಾರತವು ನಂಬಿಕೆಯ ನೆಲವಾಗಿದೆ. ಇಲ್ಲಿ ಕ್ರಿಯಾಶೀಲ ಮತ್ತು ತರ್ಕಬದ್ಧವಾಗಿ ಯೋಚಿಸುವ ಪ್ರಜ್ಞಾವಂತ ನಾಗರಿಕರಿದ್ದಾರೆ. ನಮ್ಮಲ್ಲಿರುವ ನಂಬಿಕೆ ದೃಢವಾದುದು. ಇದು ನೀವು ಎಲ್ಲೋ ಕೇಳಿರುವ ಕಾಲ್ಪನಿಕ ನಂಬಿಕೆಯಲ್ಲ. ಇದು ನೇರ ಗ್ರಹಿಕೆಯನ್ನು ಆಧರಿಸಿದ ನಂಬಿಕೆ" ಎಂದು ಅವರು ವಿವರಿಸಿದರು.