Pro Kabaddi: ಟೈ ಬ್ರೇಕರ್‌ನಲ್ಲಿ ಪಲ್ಟಿ ಹೊಡೆದ ಬುಲ್ಸ್; ಪುಣೆಗೆ ರೋಚಕ ಗೆಲುವು
ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದ ತಮಿಳ್ ತಲೈವಾಸ್ ತಂಡ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು 38-35 ಅಂಕಗಳ ಅಂತರದಿಂದ ಮಣಿಸಿತು. ತಮಿಳ್ ಪರ ಅಬ್ಬರದ ರೈಡಿಂಗ್ ನಡೆಸಿದ ಅರ್ಜುನ್ ದೇಶ್ವಾಲ್ 12 ಮತ್ತು ಪವನ್ ಸೆಹ್ರಾವತ್ 9 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಿಮಾಂಶು ಮತ್ತು ಸುರೇಶ್ ಜಾಧವ್ ತಲಾ 3 ಅಂಕಗಳಿಸಿ ನೆರವಾದರು. ತಂಡ ರೇಡಿಂಗ್‌ನಲ್ಲಿ 21, ಟ್ಯಾಕಲ್‌ನಲ್ಲಿ 11 ಅಂಕ ಗಳಿಸಿತು

-

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್ 12ನೇ(Pro Kabaddi) ಆವೃತ್ತಿಗೆ ಶುಕ್ರವಾರ ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಚಾಲನೆ ದೊರೆತಿದ್ದು, ದಿನದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಗೆದ್ದರೆ, ಅತ್ಯಂತ ರೋಚಕವಾಗಿ ನಡೆದ ದ್ವಿತೀಯ ಪಂದ್ಯದಲ್ಲಿ ಪುಣೇರಿ ಪಲ್ಟಾನ್(Puneri Paltan) ವಿರುದ್ಧ ಬುಲ್ಸ್ ತಂಡ ಟೈ ಬ್ರೇಕರ್‌ನಲ್ಲಿ ಸೋಲೊಪ್ಪಿಕೊಂಡಿತು.
ಅತ್ಯಂತ ಜಿದ್ದಾಜಿದ್ದಿನಿಂತ ಸಾಗಿದ ದ್ವಿತೀಯ ಪಂದ್ಯದಲ್ಲಿ ಬುಲ್ಸ್ ಮತ್ತು ಪುಣೆ ತಂಡದ ಆಟಗಾರರು ಹಾವು-ಏಣಿ ಆಟದಂತೆ ಅಂಕಕ್ಕಾಗಿ ತೀವ್ರ ಹೋರಾಟ ನಡೆಸಿದರು. ಇದೇ ಕಾರಣದಿಂದ ಮೊದಲಾರ್ಧ 13-13 ಅಂಕದೊಂದಿಗೆ ಆಟ ಮುಕ್ತಾಯಗೊಂಡಿತು. ದ್ವಿತೀಯಾರ್ಧದ ಮೊದಲ ಕೆಲ ನಿಮಿಷದ ಆಟದಲ್ಲಿ ಆಕ್ರಮಣಕಾರಿ ಆಟವಾಡಿದ ಬುಲ್ಸ್ ಮುನ್ನಡೆ ಸಾಧಿಸಿದರೂ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಅನೇಕ ತಪ್ಪುಗಳಿಂದ ಎದುರಾಳಿಗೆ ಸತತವಾಗಿ ಅಂಕ ಬಿಟ್ಟುಕೊಟ್ಟಿತು. ಆದರೆ ಕೊನೆಯ ಒಂದು ನಿಮಿಷದ ಆಟದಲ್ಲಿ ಮತ್ತೆ ಪುಟಿದೇದ್ದ ಬುಲ್ಸ್ ಪಂದ್ಯವನ್ನು 32-32 ಅಂತರದಿಂದ ಟೈ ಮಾಡಿಕೊಂಡಿತು.
ಬುಲ್ಸ್ ಅಂತಿಮ ಟ್ಯಾಕಲ್‌ನಲ್ಲಿ ಜೆರ್ಸಿ ಹಿಡಿದ ಕಾರಣಕ್ಕಾಗಿ ಎದುರಾಳಿಗೆ ಒಂದು ಅಂಕ ನೀಡಲಾಯಿತು. ಇದು ಪಂದ್ಯವನ್ನು ಟೈಗೊಳ್ಳುವಂತೆ ಮಾಡಿತು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಟೈ ಬ್ರೇಕರ್ ನಡೆಸಲಾಯಿತು.
ಟೈ ಬ್ರೇಕರ್‌ಗೆ ಸಾಗಿದ ಪಂದ್ಯ
ಹೊಸ ನಿಯಮದಂತೆ ಪಂದ್ಯ ಟೈ ಆದ ಕಾರಣ 5 ನಿಮಿಷಗಳ ಟೈ ಬ್ರೇಕರ್ ಸುತ್ತು ಆಡಿಸಲಾಯಿತು. ಉಭಯ ತಂಡಗಳು ಐವರು ರೈಡರ್‌ಗಳು ಯಾರಾರು ಎಂದು ಮೊದಲೇ ತಿಳಿಸುವ ಮೂಲಕ ರೈಟಿಂಗ್ ನಡೆಸಿತು. ಪ್ರತಿ ರೈಡ್ ಕೂಡ ಡು ಆರ್ ಡೈ ರೈಡ್ ಆಗಿತ್ತು. ಈ ಪಂದ್ಯ ಕೂಟದ ಇತಿಹಾಸದ ಮೊದಲ ಟೈ ಬ್ರೇಕರ್ ಎನಿಸಿತು. ಟ್ರೈ ಬ್ರೇಕರ್ ಕೂಡ ಅತ್ಯಂತ ರೋಚಕವಾಗಿ ಸಾಗಿತು ಆದರೆ ಅಂತಿಮವಾಗಿ ಗೆಲುವಿನ ಅದೃಷ್ಟ ಪುಣೆಗೆ ಒಲಿಯಿತು. ಗೆಲುವಿನ ಅಂತರ 6-4. ಈ ಹಿಂದಿನ ಆವೃತ್ತಿಯಲ್ಲಿ ಪಂದ್ಯ ಟೈ ಗೊಂಡರೆ ಉಭಯ ತಂಡಗಳಿಗೂ ತಲಾ ಮೂರು ಅಂಕ ನೀಡಲಾಗುತ್ತಿತ್ತು. ಆದರೆ ಈ ನಿಯಮವನ್ನು ಈ ಬಾರಿ ಕೈಬಿಡಲಾಗಿದೆ.
ಶುಭಾರಂಭ ಕಂಡ ತಮಿಳ್
ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದ ತಮಿಳ್ ತಲೈವಾಸ್ ತಂಡ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು 38-35 ಅಂಕಗಳ ಅಂತರದಿಂದ ಮಣಿಸಿತು. ತಮಿಳ್ ಪರ ಅಬ್ಬರದ ರೈಡಿಂಗ್ ನಡೆಸಿದ ಅರ್ಜುನ್ ದೇಶ್ವಾಲ್ 12 ಮತ್ತು ಪವನ್ ಸೆಹ್ರಾವತ್ 9 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಿಮಾಂಶು ಮತ್ತು ಸುರೇಶ್ ಜಾಧವ್ ತಲಾ 3 ಅಂಕಗಳಿಸಿ ನೆರವಾದರು. ತಂಡ ರೇಡಿಂಗ್‌ನಲ್ಲಿ 21, ಟ್ಯಾಕಲ್‌ನಲ್ಲಿ 11 ಅಂಕ ಗಳಿಸಿತು.
ತೆಲುಗು ತಂಡದ ಪರ ಭರತ್ 11, ವಿಜಯ್ ಮಲಿಕ್ 6 ಮತ್ತು ಶುಭಂ ಶಿಂಧೆ 4 ಅಂಕ ಗಳಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಪ್ರದರ್ಶನ ವ್ಯರ್ಥವಾಯಿತು. ಶನಿವಾರದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತೆ ಕಣಕ್ಕಿಳಿಯಲಿದ್ದು ಯುಪಿ ಯೋಧಾಸ್ ಸವಾಲು ಎದುರಿಸಲಿದೆ.
ಕಬಡ್ಡಿ ಆಡಿ ಗಮನ ಸೆಳೆದ ಸೂರ್ಯವಂಶಿ
18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದ 14 ವಯಸ್ಸಿನ ವೈಭವ್ ಸೂರ್ಯವಂಶಿ ಅವರನ್ನು 12ನೇ ಆವೃತ್ತಿಯ ಪ್ರೊ ಕಬಡ್ಡಿಯ ಉದ್ಘಾಟನ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅದರಂತೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ವೈಭವ್ ಕಬಡ್ಡಿ ಅಂಗಳದಲ್ಲಿ ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಜತೆಗೆ ಕಬಡ್ಡಿಯೂ ಆಡಿ ಗಮನಸೆಳೆದರು.