Viral News: ಮಗನನ್ನು ವಧುವಿನಂತೆ ಅಲಂಕರಿಸಿ ಆತ್ಮಹತ್ಯೆಗೆ ಶರಣಾದ ಕುಟುಂಬ; ಇದರ ಹಿಂದಿದೆ ಅನ್ಯಾಯದ ಕಥೆ
ರಾಜಸ್ಥಾನದ ಬಾರ್ಮರ್‌ನಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಗನಿಗೆ ಹುಡುಗಿಯರ ಬಟ್ಟೆ ತೊಡಿಸಿ ರೀಲ್ಸ್ ಮಾಡಿದ್ದಾಳೆ. ಆ ನಂತರ ಇಡೀ ಕುಟುಂಬದ ನಾಲ್ವರು ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಆತ್ಮಹತ್ಯೆ ಪತ್ರವನ್ನು ಪತ್ತೆಹಚ್ಚಿದ್ದು, ಈ ಪ್ರಕರಣದ ತನಿಖೆ ನಡೆಸಿದ್ದಾರೆ.
 
                                -
 pavithra
                            
                                Jul 3, 2025 8:37 PM
                                
                                pavithra
                            
                                Jul 3, 2025 8:37 PM
                            ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಭೀಕರ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಗನಿಗೆ ಆಭರಣ ಹಾಕಿ, ಮೇಕಪ್ ಹಚ್ಚಿ ಹುಡುಗಿಯಂತೆ ಉಡುಗೆ ತೊಡಿಸಿದ್ದಾಳೆ. ಅದರ ನಂತರ, ನಾಲ್ಕು ಸದಸ್ಯರ ಈ ಕುಟುಂಬವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ. ಶಿವ ಪೊಲೀಸ್ ಠಾಣೆ ವ್ಯಾಪ್ತಿಯ ಉಡು ಗ್ರಾಮದ ಮನೆಯ ಸಮೀಪದ ನೀರಿನ ಟ್ಯಾಂಕ್‌ನಲ್ಲಿ ಈ ನಾಲ್ವರ ಮೃತದೇಹವು ಪತ್ತೆಯಾಗಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಮೃತರನ್ನು ಶಿವಲಾಲ್ ಗೌರ್ (35), ಆತನ ಪತ್ನಿ ಕವಿತಾ (32) ಮತ್ತು ಅವರ ಇಬ್ಬರು ಪುತ್ರರಾದ ಬಜರಂಗ್ (9) ಮತ್ತು ರಾಮದೇವ್ (8) ಎಂದು ಗುರುತಿಸಲಾಗಿದೆ. ದಂಪತಿ ತಮ್ಮ ಅಪ್ರಾಪ್ತ ಪುತ್ರರೊಂದಿಗೆ ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದು ಕಾಣಿಸಿಕೊಂಡಿದ್ದು, ಇದು ಎಲ್ಲರ ಗಮನ ಸೆಳೆದು ವೈರಲ್ ಆಗಿದೆ. ಅದರಲ್ಲಿ ಆತ್ಮಹತ್ಯೆಗೆ ಸ್ವಲ್ಪ ಮೊದಲು ಕವಿತಾ ತನ್ನ ಕಿರಿಯ ಮಗ ರಾಮ್‌ದೇವ್‌ನನ್ನು ವಧುವಿನಂತೆ ಅಲಂಕರಿಸುತ್ತಿರುವುದು ಸೆರೆಯಾಗಿದೆ. ಕುಟುಂಬವು ತಮ್ಮ ಜೀವನವನ್ನು ಕೊನೆಗೊಳಿಸುವ ಸ್ವಲ್ಪ ಸಮಯದ ಮೊದಲು ಈ ವಿಡಿಯೊವನ್ನು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳು ಪತ್ತೆಯಾದ ನೀರಿನ ಟ್ಯಾಂಕ್ ಬಳಿ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಮನೆಯ ಮಾಲೀಕತ್ವದ ಬಗ್ಗೆ ಕುಟುಂಬದೊಳಗೆ ನಡೆಯುತ್ತಿರುವ ಜಗಳದ ಬಗ್ಗೆ ಆತ್ಮಹತ್ಯೆಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕುಟುಂಬದ ಅಂತ್ಯಕ್ರಿಯೆಯನ್ನು ಅವರ ಮನೆಯ ಮುಂದೆ ನಡೆಸಬೇಕೆಂಬ ಅಂತಿಮ ಆಶಯವನ್ನೂ ಪತ್ರದಲ್ಲಿ ತಿಳಿಸಲಾಗಿದೆ.
ಜೈಪುರದಲ್ಲಿ ಮೂಲತಃ ಉಕ್ಕಿನ ಪೀಠೋಪಕರಣ ಕೆಲಸಗಾರನಾಗಿದ್ದ ಶಿವಲಾಲ್ ಇತ್ತೀಚೆಗೆ ತನ್ನ ಹಳ್ಳಿಗೆ ಮರಳಿದ್ದ. ಅವನು ತನ್ನ ಕುಟುಂಬದೊಂದಿಗೆ ತೋಟದ ಮನೆಯಲ್ಲಿ ವಾಸಿಸುತ್ತಿದ್ದ. ಶಿವಲಾಲ್ ಹಾಗೂ ಮಂಗಿ ಲಾಲ್ ನಡುವೆ ಆಸ್ತಿ ಹಕ್ಕುಗಳ ಬಗ್ಗೆ, ವಿಶೇಷವಾಗಿ ಪಿಎಂಎವೈ ನಿವಾಸದ ಬಗ್ಗೆ ವಿವಾದ ನಡೆಯುತ್ತಿತ್ತು ಎಂದು ಮೂಲಗಳು ಹೇಳುತ್ತವೆ. ಅವನ ತಾಯಿ ಪ್ರಸ್ತುತ ಬಾರ್ಮರ್ ನಗರದಲ್ಲಿ ಮಂಗಿ ಲಾಲ್ ಅವನೊಂದಿಗೆ ವಾಸಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ತರಗತಿಯಲ್ಲಿ ಫ್ಯಾಷನ್ ಶೋ ನಡೆಸಿದ ಶಿಕ್ಷಕ; ಮಕ್ಕಳ ಕಣ್ಣಲ್ಲಿ ಖುಷಿಯ ಕಾಮನಬಿಲ್ಲು! ವಿಡಿಯೊ ನೀವೂ ನೋಡಿ
ಅಧಿಕಾರಿಗಳು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ನಾಲ್ವರು ಶವಗಳನ್ನು ಟ್ಯಾಂಕ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಬಿಯಾಡ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ವೈರಲ್ ಆಗಿರುವ ರೀಲ್ ಮತ್ತು ಆತ್ಮಹತ್ಯೆ ಪತ್ರದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
