Actor Yash: ʼಕೆಜಿಎಫ್' ಛಾಯಾಗ್ರಾಹಕ ಭುವನ್ ಗೌಡ ಮದುವೆಗೆ ಕಳೆ ತಂದ ರಾಕಿಂಗ್ ಸ್ಟಾರ್ ಯಶ್; ಇಲ್ಲಿದೆ ನೋಡಿ ವಿಡಿಯೊ
Yash attends Bhuvan Gowda’s wedding: ಶೂಟಿಂಗ್‍ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ನಟ ಯಶ್ ಹಬ್ಬ, ಕುಟುಂಬ ಹಾಗೂ ಆಪ್ತರ ಕಾರ್ಯಕ್ರಮ ಅಂದಾಗ ಬಿಡುವು ಮಾಡಿಕೊಂಡು ಹಾಜರಾಗುತ್ತಾರೆ. ಇದೀಗ 'ಕೆಜಿಎಫ್ʼ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರ ವಿವಾಹಕ್ಕೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದ್ದಾರೆ.
-
Priyanka P
Oct 25, 2025 6:39 PM
ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಹವಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಇದೆ. ʼಕೆಜಿಎಫ್ʼ ಸರಣಿ ಚಿತ್ರದ ನಂತರ ಅವರ ಅಭಿಮಾನಿ ಬಳಗ ಹೆಚ್ಚಾಗಿದೆ. ಸದ್ಯ ನಟ ಯಶ್ ಕನ್ನಡದ ʼಟಾಕ್ಸಿಕ್ʼ ಹಾಗೂ ಹಿಂದಿಯ ʼರಾಮಾಯಣʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‍ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ಅವರು ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಾರೆ. ಅದರಲ್ಲೂ ಹಬ್ಬ, ಕುಟುಂಬ ಹಾಗೂ ಆಪ್ತರ ಕಾರ್ಯಕ್ರಮ ಅಂದಾಗ ಬಿಡುವು ಮಾಡಿಕೊಂಡು ಹಾಜರಾಗುತ್ತಾರೆ. ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಛಾಯಾಗ್ರಾಹಕ ಭುವನ್ ಗೌಡ (Bhuvan Gowda) ಅವರ ವಿವಾಹಕ್ಕೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದ್ದಾರೆ.
ʼಕೆಜಿಎಫ್ʼ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ನಟ ಯಶ್ ನೂತನ ಜೋಡಿಗೆ ಶುಭಾಶಯ ಕೋರಿದ್ದಾರೆ. ವಿವಾಹ ಸಮಾರಂಭಕ್ಕೆ ಆಗಮಿಸಿದ ಯಶ್ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಹಸಿರು ಬಣ್ಣದ ಉದ್ದನೆಯ ಕುರ್ತಾ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು ಯಶ್ ಆಗಮಿಸಿದ್ದರು.
ವಿಡಿಯೊ ವೀಕ್ಷಿಸಿ:
. @bhuvangowda84 :- BOSS Banni BOSS 🔥
— Deepak YASH (@Deepak_RSY) October 24, 2025
This Is What YASH BOSS Earned 🔥#Yash #YashBOSS #ToxicTheMovie pic.twitter.com/zbntL0escX
ಛಾಯಾಗ್ರಾಹಕ ಭುವನ್ ಗೌಡ ನಿಖಿತಾ ಎಂಬುವವರ ಜತೆ ಅಕ್ಟೋಬರ್ 24ರಂದು ಸಪ್ತಪದಿ ತುಳಿದರು. ʼಕೆಜಿಎಫ್ʼ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಟಿಯರಾದ ಶ್ರೀಲೀಲಾ, ಶಾನ್ವಿ ಶ್ರೀವತ್ಸವ್ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಈ ಮದುವೆ ಸಮಾರಂಭಕ್ಕೆ ಆಗಮಿಸಿ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯ ಬಳಿಯ ರೆಸಾರ್ಟ್‌ವೊಂದರಲ್ಲಿ ಈ ಮದುವೆ ಸಮಾರಂಭ ನೆರವೇರಿದೆ.
ಇದನ್ನೂ ಓದಿ: Rocking Star Yash: ರಾಕಿ ಬಾಯ್ ಕುಟುಂಬದಲ್ಲಿ ದೀಪಾವಳಿ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?
ಭುವನ್ ಗೌಡ ಸ್ಟಿಲ್ ಫೋಟೊಗ್ರಾಫರ್ ಆಗಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ಫೋಟೊ ಶೂಟ್ ಮಾಡುತ್ತಿದ್ದರು. ʼಉಗ್ರಂʼ ಸಿನಿಮಾದ ಸಮಯದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪರಿಚಿತರಾಗಿದ್ದರು. ಆ ಚಿತ್ರಕ್ಕೆ ರವಿವರ್ಮನ್ ಹಾಗೂ ರವಿಕುಮಾರ್ ಸನಾ ಛಾಯಾಗ್ರಾಹಕರಾಗಿದ್ದರು. ಅನಿವಾರ್ಯ ಕಾರಣಗಳಿಂದ ಅವರಿಬ್ಬರು ಹೊರಬಂದಾಗ ಭುವನ್ ಗೌಡಗೆ ಸಿನಿಮಾ ಛಾಯಾಗ್ರಹಣದ ಅವಕಾಶ ಸಿಕ್ಕಿತ್ತು. ತಮ್ಮ ಅದ್ಭುತ ಫ್ರೇಮ್‌ಗಳಿಂದ ಭುವನ್ ಗೌಡ ಪ್ರಶಾಂತ್ ನೀಲ್ ಅವರ ಮನಗೆದ್ದರು. ಬಳಿಕ ಆಗಿದ್ದೇ ಇತಿಹಾಸ. ʼಕೆಜಿಎಫ್ʼ ಚಿತ್ರಕ್ಕೂ ಅವರನ್ನೇ ಛಾಯಾಗ್ರಾಹಕರಾಗಿ ನೀಲ್ ನೇಮಿಸಿದರು. ಇದು ಭುವನ್ ಗೌಡಗೆ ದೊಡ್ಡ ಹೆಸರು ತಂದುಕೊಟ್ಟಿತು.
ʼಲೊಡ್ಡೆʼ, ʼರಥಾವರʼ ಹಾಗೂ ʼಪುಷ್ಪಕ ವಿಮಾನʼ ಚಿತ್ರಗಳಿಗೂ ಭುವನ್ ಗೌಡ ಛಾಯಾಗ್ರಹಣ ಮಾಡಿದ್ದರು. ಶ್ರೀಮುರಳಿ ನಟನೆಯ ʼಭರಾಟೆʼ ಚಿತ್ರಕ್ಕೂ ಛಾಯಾಗ್ರಾಹಕರಾಗಿದ್ದರು. ಇದೀಗ ನೀಲ್ ಸಿನಿಮಾಗಳ ಖಾಯಂ ಛಾಯಾಗ್ರಾಹಕರಾಗಿಬಿಟ್ಟಿದ್ದಾರೆ. ʼಕೆಜಿಎಫ್ 2ʼ, ʼಸಲಾರ್ʼ ಸಿನಿಮಾಗಳಲ್ಲೂ ಛಾಪು ಮಾಡಿಸಿದ್ದಾರೆ. ಸದ್ಯ ಪ್ರಶಾಂತ್ ನೀಲ್ ಹಾಗೂ ಜೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಭಾರತೀಯ ಚಿತ್ರರಂಗದಲ್ಲಿ ಭುವನ್ ಗೌಡ ಅವರ ಹೆಸರು ಭಾರಿ ದೊಡ್ಡ ಸದ್ದು ಮಾಡುತ್ತಿದೆ. ಮುಂದೆ ʼಸಲಾರ್- 2ʼ ಸಿನಿಮಾಗೂ ಅವರ ಛಾಯಾಗ್ರಹಣ ಇರಲಿದೆ.
ಇನ್ನು ವಿವಾಹಕ್ಕೆ ರಾಕಿಂಗ್ ಸ್ಟಾರ್ ಯಶ್ ಬರುತ್ತಿದ್ದಂತೆ ಖುಷಿಯಿಂದ ಭುವನ್ ಗೌಡ ಸ್ವಾಗತಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಯಶ್ ಜತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.