Noel Robinson: ಕೇರಳದ ಮುಂಡು ಧರಿಸಿ ನೃತ್ಯ ಮಾಡುತ್ತಿದ್ದ ಜರ್ಮನ್ ಟಿಕ್‌ಟಾಕರ್ ಅರೆಸ್ಟ್: ಇಲ್ಲಿದೆ ವೈರಲ್ ವಿಡಿಯೊ
German TikToker arrest: ಆಫ್ರೋ ನೃತ್ಯದ ವಿಡಿಯೊಗಳಿಗೆ ಹೆಸರುವಾಸಿಯಾದ ಜರ್ಮನ್ ಟಿಕ್‌ಟಾಕರ್ ನೋಯೆಲ್ ರಾಬಿನ್ಸನ್‍ನನ್ನು ಬೆಂಗಳೂರು ಪೊಲೀಸರು ಬಂಧಿಸಿದರು. ವಿಡಿಯೊ ಚಿತ್ರೀಕರಿಸುತ್ತಿದ್ದ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಂಧನದ ನಂತರ ದಂಡ ಪಾವತಿಸಬೇಕಾಯಿತು ಎಂದು ನೋಯೆಲ್ ಹೇಳಿದರು.


ಬೆಂಗಳೂರು: ಆಫ್ರೋ ನೃತ್ಯದ ವಿಡಿಯೊಗಳಿಗೆ ಹೆಸರುವಾಸಿಯಾದ ಜರ್ಮನ್ ಟಿಕ್‌ಟಾಕರ್ (German Tiktoker) ನೋಯೆಲ್ ರಾಬಿನ್ಸನ್‍ನನ್ನು (Noel Robinson) ಬೆಂಗಳೂರು ಪೊಲೀಸರು ಬಂಧಿಸಿದರು. ಕೇರಳದ ಸಾಂಪ್ರದಾಯಿಕ ಉಡುಪು ಮುಂಡು ಧರಿಸಿ ನೋಯೆಲ್ ನೃತ್ಯ ಮಾಡಿದ್ದಾರೆ. ವಿಡಿಯೊ ಚಿತ್ರೀಕರಿಸುತ್ತಿದ್ದ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಪೊಲೀಸರು ನೋಯೆಲ್‍ನನ್ನು ಬಂಧಿಸಿದ್ದಾರೆ.
ಬಂಧನದ ನಂತರ ದಂಡ ಪಾವತಿಸಬೇಕಾಯಿತು ಎಂದು ನೋಯೆಲ್ ಹೇಳಿದರು. “ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದು ಇದೇ ಮೊದಲು. ಅವರು ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ನಾನು ಹೆದರುತ್ತಿದ್ದೆ. ಆದರೆ ಅದೃಷ್ಟವಶಾತ್ ಎಲ್ಲವೂ ಚೆನ್ನಾಗಿತ್ತು! ನಾನು ಸುರಕ್ಷಿತವಾಗಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ” ಎಂದು ವಿಡಿಯೊ ಹಂಚಿಕೊಂಡು ಬರೆದಿದ್ದಾರೆ.
ವಿಡಿಯೊದಲ್ಲಿ ನೋಯೆಲ್, ಕೇರಳದ ಸಾಂಪ್ರದಾಯಿಕ ಉಡುಪನ್ನು ಧರಿಸಿ ನೃತ್ಯದ ವಿಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು ನೋಡಬಹುದು. ಕೆಲವೇ ಕ್ಷಣಗಳಲ್ಲಿ, ಪೊಲೀಸರು ಅವರನ್ನು ತಡೆದು ವಾಹನದಲ್ಲಿ ಕರೆದೊಯ್ಯುತ್ತಾರೆ. ವಿಡಿಯೊದ ಕೊನೆಗೆ ನೋಯೆಲ್, ಪೊಲೀಸ್ ಠಾಣೆಯಲ್ಲಿದ್ದು, ಬಿಡುಗಡೆಯಾದ ನಂತರ ಹೊರನಡೆಯುವುದನ್ನು ಕಂಡು ಬಂದಿದೆ. ಅನುಮತಿಯಿಲ್ಲದೆ ನೃತ್ಯ ಮಾಡಿದ್ದಕ್ಕೆ ಆತನನ್ನು ಬಂಧಿಸಲಾಯ್ತು ಎಂದು ಹೇಳಲಾಗಿದೆ. ಆದರೆ ಈ ಘಟನೆಯಿಂದ ತನಗೆ ಭಾರತದ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ತಾನು ಭಾರತವನ್ನು ಪ್ರೀತಿಸುತ್ತೇನೆ. ಇಂತಹ ಘಟನೆ ಎಲ್ಲ ದೇಶಗಳಲ್ಲೂ ಸಂಭವಿಸಬಹುದು ಎಂದು ತಿಳಿಸಿದರು.
ವಿಡಿಯೊ ವೀಕ್ಷಿಸಿ:
ಇನ್ನು ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಕೆಲವರು ಕ್ಷಮೆ ಕೇಳಿದರೆ, ಇನ್ನೂ ಕೆಲವರು ಎಲ್ಲರೂ ಕಾನೂನಿಗೆ ಒಳಪಟ್ಟಿರುತ್ತಾರೆ ಎಂದು ತಿಳಿಸಿದರು. ಪೊಲೀಸರದೇನೂ ತಪ್ಪಲ್ಲ. ಇದು ಎಲ್ಲ ದೇಶಗಳಲ್ಲೂ ಸಾಮಾನ್ಯ ಎಂದು ಬಳಕೆದಾರರು ಹೇಳಿದರು. ಕನಿಷ್ಠ 15 ನಿಮಿಷಗಳಲ್ಲಿ, ಅವರು ಯಾವುದೇ ಪ್ರಕರಣವಿಲ್ಲದೆ ಠಾಣೆಯಿಂದ ಹೊರಬಂದಿದ್ದಕ್ಕೆ ಮತ್ತೊಬ್ಬ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.
ನೋಯೆಲ್ ರಾಬಿನ್ಸನ್ ಯಾರು?
ನೋಯೆಲ್ ರಾಬಿನ್ಸನ್ ತಮ್ಮ ನೃತ್ಯದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ ಅವರ ನೃತ್ಯ ಲಕ್ಷಾಂತರ ಜನರಿಗೆ ತಲುಪಿತು. ಅವರ ವಿಶಿಷ್ಟ ನೃತ್ಯ ಶೈಲಿಗೆ ಪ್ರಪಂಚದಾದ್ಯಂತ ಎಲ್ಲರೂ ಬೆರಗಾಗಿದ್ದಾರೆ. ಹಿಪ್ ಹಾಪ್ ನೃತ್ಯಕ್ಕೆ ನೋಯೆಲ್ ರಾಬಿನ್ಸನ್ ಜನಪ್ರಿಯರಾಗಿದ್ದಾರೆ.