ಪ್ರಧಾನಿ ನರೇಂದ್ರ ಮೋದಿಯ ಹೊಸ ವಸ್ತ್ರಶೈಲಿ; ಈ ರೀತಿಯ ಅವತಾರ ಹಿಂದೆಂದೂ ನೋಡಿರಲಿಲ್ಲ ಎಂದ ನೆಟ್ಟಿಗರು
PM Modi’s New Look Surprises Internet: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಹೊಸ ಉಡುಗೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ್ದಾರೆ. ನೆಟ್ಟಿಗರು ಈ ಹೊಸ ಶೈಲಿಯ ಉಡುಗೆಯನ್ನು ಕಂಡು ನಿಬ್ಬೆರಗಾಗಿದ್ದು, ಈ ಅವತಾರದಲ್ಲಿ ಅವರನ್ನು ಇದೇ ಮೊದಲ ಬಾರಿಗೆ ನೋಡಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ. -
ನವದೆಹಲಿ, ನ. 26: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ವಿಶಿಷ್ಟ ಮತ್ತು ಗಮನ ಸೆಳೆಯುವ ವಸ್ತ್ರಶೈಲಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಭಾರತೀಯ ಸಂಪ್ರದಾಯದ ಸೊಗಡನ್ನು ಆಧುನಿಕತೆಯೊಂದಿಗೆ ಬೆರೆಸುವ ಅವರ ಉಡುಗೆಗಳು ದೇಶ ಮಾತ್ರವಲ್ಲದೆ, ಜಾಗತಿಕ ವೇದಿಕೆಗಳಲ್ಲೂ ಚರ್ಚೆಯ ವಿಷಯವಾಗಿವೆ. ಸಾಂಪ್ರದಾಯಿಕ ಕುರ್ತಾ, ಪೈಜಾಮಾ, ಆಕರ್ಷಕ ಮೋದಿ ಜಾಕೆಟ್‌ಗಳಿಂದ ಹಿಡಿದು ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಡುಗೆಗಳವರೆಗೆ ಪ್ರಧಾನಿ ವೈವಿಧ್ಯಮಯ ಉಡುಗೆಗಳನ್ನು ತೊಟ್ಟಿದ್ದಾರೆ. ಇದೀಗ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಪ್ರಧಾನಿ ಮೋದಿ ಧರಿಸುವ ಉಡುಗೆಯು ಅವರ ಆತ್ಮವಿಶ್ವಾಸವನ್ನೂ ತೋರಿಸುತ್ತದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಅವರು ತೊಟ್ಟಿದ್ದ ಉಡುಗೆ ಶೈಲಿಯು ಎಲ್ಲರನ್ನೂ ಮೋಡಿ ಮಾಡಿದೆ. ಅವರ ಉಡುಗೆಯು ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಸದ್ದು ಮಾಡಿದ್ದು, ಇಂತಹ ಅವತಾರದಲ್ಲಿ ಅವರನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಶತಮಾನಗಳ ವೇದನೆಗೆ ಪೂರ್ಣ ವಿರಾಮ- ಶ್ರೀರಾಮನ ನೆಲದಲ್ಲಿ ನಿಂತು ಅಬ್ಬರಿಸಿದ ಮೋದಿ
ಅವರ ಉಡುಗೆ ಶೈಲಿಯಲ್ಲಿ ಸಾಂಪ್ರದಾಯಿಕ ಬಂದ್‌ಗಲಾ ವಿನ್ಯಾಸ ಆಧುನಿಕ ಶೈಲಿಯೊಂದಿಗೆ ಮೂಡಿಬಂದಿದೆ. ನಯವಾದ ಬೆಳ್ಳಿಯ ಛಾಯೆ ಹೊಳಪು ನೀಡಿದ್ದು, ಅಂತಾರಾಷ್ಟ್ರೀಯ ವೇದಿಕೆಗೆ ಚೆನ್ನಾಗಿ ಹೊಂದಿಕೊಂಡಿದೆ. ಉಡುಪಿನಲ್ಲಿದ್ದ ತೀಕ್ಷ್ಣವಾದ ಕಟ್‌ಗಳು ಅವರ ಮೈಕಟ್ಟಿಗೆ ಇನ್ನಷ್ಟು ಎತ್ತರದ, ಆತ್ಮವಿಶ್ವಾಸಭರಿತ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿತು. ಸೊಗಸಾದ ಲೋಹದ ಬಟನ್‌ಗಳು ಈ ಉಡುಗೆಯನ್ನು ಅತ್ಯಾಧುನಿಕ, ಆಕರ್ಷಕ ಮತ್ತು ಜಾಗತಿಕ ರಾಜತಾಂತ್ರಿಕ ಫ್ಯಾಷನ್‌ಗೆ ಹೊಂದುವಂತೆ ಮಾಡಿವೆ. ಭಾರತದ ಪರಂಪರೆ ಮತ್ತು ಆಧುನಿಕ ವಿನ್ಯಾಸದ ಸೌಂದರ್ಯದ ಸಮನ್ವಯವಾದ ಒಂದು ಸುಂದರ ಮಿಶ್ರಣ ಇದು ಎನಿಸಿಕೊಂಡಿತು.
ವಿಡಿಯೊ ವೀಕ್ಷಿಸಿ:
ಆ ಉಡುಪು ಧರಿಸಿದ್ದ ಪ್ರಧಾನಿಯ ಮುಖದಲ್ಲಿ ನಿಜವಾಗಿಯೂ ಎದ್ದು ಕಂಡಿದ್ದು ಅವರ ಆತ್ಮವಿಶ್ವಾಸದ ನಡಿಗೆ. ಮೋದಿಯು ವೇದಿಕೆ ಪ್ರವೇಶಿಸುತ್ತಿದ್ದಂತೆ ಅವರ ಲುಕ್ ಗಮನ ಸೆಳೆಯಿತು. ಫ್ಯಾಷನ್ ಉಡುಪು ತೊಡುವುದಷ್ಟೇ ಮುಖ್ಯವಲ್ಲ. ಅದನ್ನು ತೊಟ್ಟ ನಂತರ ತಾವು ಯಾವ ರೀತಿ ನಡೆದುಕೊಳ್ಳುತ್ತೇವೆ ಅನ್ನೋದು ಮುಖ್ಯವಾಗುತ್ತದೆ ಎಂಬ ಮಾತಿಗೆ ಸಮನಾರ್ಥಕ ಪದದಂತಿತ್ತು ಮೋದಿ ಅವರ ಮೋಡಿ ಮಾಡುವ ನಡಿಗೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆ ಉಡುಪು ತೊಟ್ಟು, ಅವರು ನಡೆದು ಬರುವ ರೀತಿಗೆ ಅನೇಕರು ಬೆರಗಾಗಿದ್ದಾರೆ. ಬಹುತೇಕರು ಅವರ ಲುಕ್‌ಗೆ ಕಳೆದುಹೋಗಿದ್ದಾರೆ.
ಸಾಂಪ್ರದಾಯಿಕ ಭಾರತೀಯ ಜವಳಿಗಳಾಗಿರಲಿ ಅಥವಾ ಜಾಗತಿಕ ಸಿಲೂಯೆಟ್‌ಗಳಾಗಿರಲಿ, ರಾಜಕೀಯ ಉಡುಗೆ ತೊಡುಗೆಗಳು ಏನನ್ನು ಸಂವಹನ ಮಾಡಬಹುದು ಎಂಬುದನ್ನು ನರೇಂದ್ರ ಮೋದಿ ಮರು ವ್ಯಾಖ್ಯಾನಿಸುತ್ತಲೇ ಇದ್ದಾರೆ.