ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿದ್ದ ಕೋತಿಯ ರಕ್ಷಣೆ; ಯುವಕರ ಧೈರ್ಯಕ್ಕೆ ನೆಟ್ಟಿಗರಿಂದ ಶಭಾಶ್‍ಗಿರಿ: ಇಲ್ಲಿದೆ ವಿಡಿಯೊ
Men Jump into Rushing River: ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿಕೊಂಡಿದ್ದ ಕೋತಿಯನ್ನು ಇಬ್ಬರು ಪುರುಷರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಧುಮ್ಮಿಕ್ಕುತ್ತಿರುವ ನದಿಗೆ ಹಾರಿದ ಒಬ್ಬಾತ ಮಂಗವನ್ನು ರಕ್ಷಿಸಲು ಮುಂದಾಗಿದ್ದಾನೆ. ನೀರಿನ ಹರಿವಿನಿಂದ ಅದು ಬಹುತೇಕ ಕೊಚ್ಚಿ ಹೋಗುತ್ತಿದ್ದಾಗ, ಆ ಯುವಕ ಕಾಪಾಡಿದ್ದಾನೆ.


ಶ್ರೀನಗರ: ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿಕೊಂಡಿದ್ದ ಕೋತಿಯನ್ನು ಇಬ್ಬರು ಪುರುಷರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಇದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ (Viral Video). ವಿಡಿಯೊದಲ್ಲಿ ನದಿಯ ಭಾರಿ ಹರಿವಿನ ನಡುವೆ ಇಬ್ಬರು ಪುರುಷರು ಕೋತಿಯ ರಕ್ಷಣೆಗೆ ಮುಂದಾಗುವುದನ್ನು ಕಾಣಬಹುದು.
ಮೊದಲು ನೀರು ಮತ್ತು ಹಠಾತ್ ಮಾನವ ಹಸ್ತಕ್ಷೇಪದಿಂದ ಕೋತಿ ಭಯಭೀತವಾದಂತೆ ಕಾಣುತ್ತದೆ. ಅದು ಕೋಪದಿಂದ ಗುರಾಯಿಸುತ್ತದೆ. ಆದರೆ ಯುವಕ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಾಗ, ಅದು ಶಾಂತವಾಗುತ್ತದೆ ಮತ್ತು ಆತನೊಂದಿಗೆ ಸಹಕರಿಸುತ್ತದೆ. ವಿಡಿಯೊದಲ್ಲಿ ಕಂಡುಬರುವಂತೆ, ದೀರ್ಘ ಪ್ರಯತ್ನಗಳ ನಂತರ ಕೋತಿಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು.
ನದಿಯಲ್ಲಿ ಸಿಲುಕಿದ್ದ ಮಂಗ
ನದಿಯ ಭಾರಿ ಹರಿವಿನ ನಡುವೆ, ನೀರಿನ ಮಧ್ಯದಲ್ಲಿ ಬಂಡೆಗಳ ಮೇಲ್ಮೈ ಬಳಿ ಒಂದು ಮಂಗ ಸಿಲುಕಿಕೊಂಡಿರುವುದು ಕಂಡುಬಂದಿದೆ. ಅದು ದಡ ಸೇರಲು ಪೇಚಾಡುತ್ತಿತ್ತು. ಇದನ್ನು ನೋಡಿದ ಇಬ್ಬರು ಪುರುಷರು ಕೋತಿಗೆ ಸಹಾಯ ಮಾಡಲು ನಿರ್ಧರಿಸಿದರು. ಧುಮ್ಮಿಕ್ಕುತ್ತಿರುವ ನದಿಗೆ ಹಾರಿದ ಒಬ್ಬಾತ ಮಂಗವನ್ನು ರಕ್ಷಿಸಲು ಮುಂದಾಗಿದ್ದಾರೆ. ನೀರಿನ ಹರಿವಿನಿಂದ ಅದು ಬಹುತೇಕ ಕೊಚ್ಚಿ ಹೋಗುತ್ತಿದ್ದಾಗ, ಆ ವ್ಯಕ್ತಿ ಕೋತಿಯನ್ನು ಹಿಡಿಯಲು ಪ್ರಯತ್ನಿಸಿದ್ದಾನೆ.
ವಿಡಿಯೊ ವೀಕ್ಷಿಸಿ:
ಆ ವ್ಯಕ್ತಿಯು ಬಂದಾಗ ತನಗೇನೋ ಅಪಾಯವಾಗುತ್ತದೆ ಎಂದು ಗ್ರಹಿಸಿದ ಮಂಗ ಗುರ್ ಎಂದಿದೆ. ಕೋತಿಯನ್ನು ಎತ್ತಲು ಪ್ರಯತ್ನಿಸಿದಾಗ ಅದು ಕಚ್ಚಲು ಮುಂದಾಗಿದೆ. ಆದರೂ ಧೃತಿಗೆಡದ ವ್ಯಕ್ತಿ ಕೋತಿಯನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಅದನ್ನು ಶಾಂತಗೊಳಿಸಲು ಪ್ರಯತ್ನಿಸಿದನು. ಕೊನೆಗೆ ಈತ ತನ್ನನ್ನು ರಕ್ಷಿಸುತ್ತಿದ್ದಾನೆ ಎಂದು ತಿಳಿದ ಕೋತಿ ಶಾಂತವಾಗುತ್ತದೆ. ಕೊನೆಗೆ ಯುವಕ, ಕೋತಿಯನ್ನು ಕಲ್ಲಿನ ಮೇಲ್ಮೈಯಿಂದ ತೆಗೆದುಕೊಂಡು ದಡ ಸೇರಿಸುವ ಮೂಲಕ ರಕ್ಷಿಸಿದ್ದಾನೆ.
ಇನ್ನು ಯುವಕನ ಧೈರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಂದು ಪ್ರಾಣಿಯು ಮನುಷ್ಯನು ತಮಗೆ ಸಹಾಯ ಮಾಡುತ್ತಿದ್ದಾನೆಂದು ಅರಿತುಕೊಳ್ಳುವ ಕ್ಷಣ ತನಗೆ ತುಂಬಾ ಇಷ್ಟವಾಯಿತು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಲವರು ಯುವಕನ ಧೈರ್ಯವನ್ನು ಕೊಂಡಾಡಿದ್ದಾರೆ.