ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Friends become one Family: 80 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಾಗಿರುವ ಸ್ನೇಹಿತರ ಕುಟುಂಬ

ಇಬ್ಬರು ಸ್ನೇಹಿತರ ನಾಲ್ಕು ತಲೆಮಾರಿನ ಸದಸ್ಯರು 80 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಮಧ್ಯೆ ಯಾವುದೇ ರಕ್ತ ಸಂಬಂಧ ಇಲ್ಲ. ಸ್ನೇಹವೇ ಇವರನ್ನು ಒಟ್ಟಿಗೆ ವಾಸಿಸಲು ಪ್ರೇರೇಪಿಸಿದೆ. ಹಿರಿಯರ ಸ್ನೇಹ ಅವರ ಮಕ್ಕಳು, ಮೊಮ್ಮಕ್ಕಳ ಮೂಲಕವೂ ಮುಂದುವರಿದಿರುವುದು ವಿಶೇಷವೆಂದೇ ಹೇಳಬಹುದು. ಈ ಕುಟುಂಬ ಗುಜರಾತ್‌ನ ಭತಾರ್‌ನಲ್ಲಿರುವ 'ಮೈತ್ರಿ' ಬಂಗಲೆಯಲ್ಲಿ ವಾಸವಾಗಿದೆ.

ಸ್ನೇಹಿತರಿಬ್ಬರ ನಾಲ್ಕು ತಲೆಮಾರು ಒಂದೇ ಮನೆಯಲ್ಲಿ ವಾಸ

ಗಾಂಧಿನಗರ: ಈಗಿನ ಕಾಲದಲ್ಲಿ ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಅದೇ ಹೆಚ್ಚು. ಆದರೆ ಈ ಮನೆಯಲ್ಲಿಎರಡು ಗುಜರಾತಿ ಕುಟುಂಬಗಳ (Gujarati families) ನಾಲ್ಕು ತಲೆಮಾರು ಒಟ್ಟಿಗೆ ವಾಸ ಮಾಡುತ್ತಿವೆ. ಭಾರತ ಸ್ವಾತಂತ್ರ್ಯ ಹೋರಾಟದ (Indian freedom struggle) ಸಂದರ್ಭದಲ್ಲಿ ಅಂದರೆ 1940ರಲ್ಲಿ ಒಟ್ಟಾಗಿರುವ ಈ ಕುಟುಂಬ ಸುಮಾರು 80 ವರ್ಷಗಳಿಂದ ಒಂದೇ ಸೂರಿನಡಿ ಒಟ್ಟಿಗೆ ವಾಸ ಮಾಡುತ್ತಿವೆ. ಇವರೆಲ್ಲ ರಕ್ತ ಸಂಬಂಧದಿಂದ ಅಲ್ಲ ಸ್ನೇಹದಿಂದ (Gujarat Friends) ಒಂದಾಗಿ ಬಾಳುತ್ತಿರುವುದು ವಿಶೇಷ. ಹಿರಿಯರ ಸ್ನೇಹ ಅವರ ಮಕ್ಕಳು, ಮೊಮ್ಮಕ್ಕಳ ಮೂಲಕವೂ ಮುಂದುವರಿದಿದೆ.

ಗುಜರಾತ್‌ನ ಭತಾರ್‌ನಲ್ಲಿರುವ 'ಮೈತ್ರಿ' ಬಂಗಲೆಯಲ್ಲಿ ಈ ಕುಟುಂಬ ವಾಸವಾಗಿದೆ. ಇವರ ಸಂಬಂಧ ಅಗಾಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ಎರಡೂ ಕುಟುಂಬಗಳು ಎಂಟು ದಶಕಗಳಿಂದ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿವೆ.

ಬಿಪಿನ್ ದೇಸಾಯಿ ಮತ್ತು ಗುಣವಂತ್ ದೇಸಾಯಿ 1940ರಲ್ಲಿ ಸರ್ಕಾರಿ ಶಾಲೆಯಲ್ಲಿ ಭೇಟಿಯಾಗಿದ್ದರು. ಬಳಿಕ ಇವರ ಮಧ್ಯೆ ಸ್ನೇಹ ಆರಂಭವಾಗಿತ್ತು. ಆಗ ಇವರು ಮುಂದೊಂದು ದಿನ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಾರೆ ಎನ್ನುವ ಕಲ್ಪನೆಯೂ ಇರಲಿಲ್ಲ. ಇವರ ಸ್ನೇಹ ಶಾಲೆ ಜೀವನದೊಂದಿಗೆ ಕೊನೆಯಾಗಲಿಲ್ಲ. ಮುಂದೆ ಒಟ್ಟಿಗೆ ಸೇರಿ ಕೃಷಿ, ಡೈರಿ ಕೆಲಸ ಮಾಡಿದರು. ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದಲ್ಲೂ ಜತೆಯಾದರು.

1942ರಲ್ಲಿ ಮಹಾತ್ಮ ಗಾಂಧಿ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಪ್ರಾರಂಭಿಸಿದಾಗ ಬಿಪಿನ್ ದೇಸಾಯಿ ಮತ್ತು ಗುಣವಂತ್ ದೇಸಾಯಿ ಕೂಡ ಇದರಲ್ಲಿ ಸೇರಿಕೊಂಡರು. ಮೆಟ್ರಿಕ್ಯುಲೇಷನ್ ಮುಗಿಸಿದ ಬಳಿಕ ಅವರಿಬ್ಬರೂ ಬ್ರಿಟಿಷ್ ವಿರೋಧಿ ಕರಪತ್ರಗಳನ್ನು ವಿತರಿಸಿ, ಪ್ರತಿಭಟನೆಗಳನ್ನು ಆಯೋಜಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದರು.

ದೇಶದ ಸ್ವಾತಂತ್ರ್ಯದ ಬಳಿಕ ಇಬ್ಬರೂ ಪುಣೆ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಅಧ್ಯಯನದಲ್ಲಿ ಪದವಿ ಪಡೆದರು. ಬಳಿಕ ಸೂರತ್‌ಗೆ ಮರಳಿದ ಅವರು ಕೃಷಿ, ಡೈರಿ ನಿರ್ವಹಣೆ, ಗುತ್ತಿಗೆ ಮತ್ತು ಇತರ ವ್ಯವಹಾರಗಳಲ್ಲಿ ಒಟ್ಟಿಗೆ ಮಾಡಿದರು. ಇದಕ್ಕೂ ಮೊದಲು ಅವರು ಚಾಣಕ್ಯಪುರಿಯಲ್ಲಿ ಮಣ್ಣಿನ ಮನೆಯಲ್ಲಿ ವಾಸವಾಗಿದ್ದರು. ಕುಟುಂಬ ಬೆಳೆಯುತ್ತಿದ್ದರೂ ಅವರು ಪ್ರತ್ಯೇಕ ಮನೆ ಮಾಡುವ ಬಗ್ಗೆ ಎಂದಿಗೂ ಯೋಚನೆ ಮಾಡಲಿಲ್ಲ.

ಗುಜರಾತ್ ನ ಎರಡನೇ ಗಾಂಧಿ ಎಂದೇ ಹೆಸರುವಾಸಿಯಾದ ರವಿಶಂಕರ್ ಮಹಾರಾಜ್ ಅವರೊಂದಿಗೆ ಬಿಪಿನ್ ದೇಸಾಯಿ ಮತ್ತು ಗುಣವಂತ್ ದೇಸಾಯಿ.

1970ರಲ್ಲಿ ಅವರಿಬ್ಬರೂ ಸೇರಿ 'ಮೈತ್ರಿ' ಮನೆಯನ್ನು ನಿರ್ಮಿಸಿದರು. ಇದರಲ್ಲಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಕೊಠಡಿಯೊಂದಿಗೆ ಮನೆಯ ಹೃದಯಭಾಗದಲ್ಲಿ ಡ್ರಾಯಿಂಗ್ ರೂಮ್ ಇದೆ.

ಬಿಪಿನ್ ಅವರ ಮಗ ಗೌತಮ್ ದೇಸಾಯಿ (70) ಮತ್ತು ಗುಣ್ವಂತ್ ಅವರ ಮಗ ಪರಿಮಳ್ ದೇಸಾಯಿ (63) ತಮ್ಮ ಹಿರಿಯರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬದುಕಿನಲ್ಲಿ ಅನೇಕ ಬದಲಾವಣೆಗಳಾದರೂ ಮನೆ ಮಂದಿಯ ನಡುವೆ ಅದ್ಭುತವಾದ ಬಾಂಧವ್ಯವಿದೆ ಎನ್ನುತ್ತಾರೆ ಅವರು.

ತಂದೆಯವರ ಪರಂಪರೆಯನ್ನು ಮುಂದುವರಿಸಿರುವ ಗೌತಮ್ ದೇಸಾಯಿ ಹೇಳುವುದು ಹೀಗೆ...ʼʼನಮ್ಮ ತಂದೆಯವರು ಸ್ನೇಹಿತರೆಂದು ಕೆಲವರಿಗೆ ಮಾತ್ರ ಗೊತ್ತು. ಹೆಚ್ಚಿನವರು ಅವರು ಸಹೋದರರು ಎಂದೇ ಭಾವಿಸಿದ್ದಾರೆ. ತಂದೆಯವರಿಂದ ಯಾವುದೇ ಕಾರ್ಯಕ್ಕೆ ಅನುಮತಿ ಪಡೆಯಬೇಕಿದ್ದರೆ ನಾನು ಪರಿಮಳ್ ಅವರ ತಂದೆಯನ್ನು ಅವರು ನನ್ನ ತಂದೆಯನ್ನು ಸಂಪರ್ಕಿಸುತ್ತಿದ್ದರು. ನಮಗೆ ಬೇಕಾದ ಎಲ್ಲ ಸಹಕಾರವನ್ನು ಅವರು ನೀಡುತ್ತಿದ್ದರುʼʼ ಎಂದಿದ್ದಾರೆ.

ಎರಡು ಸ್ನೇಹಿತ ಕುಟುಂಬದವರ ಬಾಂಧವ್ಯವು ಈಗಿನ ಪೀಳಿಗೆಯಲ್ಲೂ ಮುಂದುವರಿದಿದೆ. ಪರಿಮಳ್ ತಮ್ಮ ಯುರೋಪ್ ಪ್ರವಾಸಕ್ಕೆ ಗೌತಮ್ ಮಗಳನ್ನು ಕರೆದುಕೊಂಡು ಹೋಗಿದ್ದರು. ಅದೇ ರೀತಿ ಪರಿಮಳ್ ಅವರ ಮಗ ಹಾರ್ದಿಕ್ ಕೂಡ ಗೌತಮ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಗೌತಮ್ ಪತ್ನಿ ಜಾನ್ವಿ ಮತ್ತು ಪರಿಮಳ್ ಪತ್ನಿ ತೃಪ್ತಿ ಈ ಕುಟುಂಬ ಬಾಂಧವ್ಯವನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುತ್ತಾರೆ ಎರಡು ಕುಟುಂಬಗಳ ಸದಸ್ಯರು.