ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AK Rairu Gopal: ಕೇರಳದ 2 ರೂಪಾಯಿ ಡಾಕ್ಟರ್ ಎ.ಕೆ. ರೈರು ಗೋಪಾಲ್ ವಿಧಿವಶ

ಕಳೆದ 50 ವರ್ಷಗಳಿಂದ ತಮ್ಮ ಚಿಕಿತ್ಸಾಲಯದಲ್ಲಿ ಕೇವಲ 2 ರೂಪಾಯಿ ಶುಲ್ಕ ಪಡೆದು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಎ.ಕೆ. ರೈರು ಗೋಪಾಲ್ ವಯೋಸಹಜ ಕಾಯಿಲೆಗಳಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

2 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿದ್ದ ವೈದ್ಯ ರೈರು ನಿಧನ

ವೈದ್ಯ ಎ.ಕೆ. ರೈರು ಗೋಪಾಲ್

Profile Sushmitha Jain Aug 5, 2025 9:09 PM

ತಿರುವನಂತಪುರಂ: ‘ಎರಡು ರೂಪಾಯಿ ಡಾಕ್ಟರ್’ ಎಂದೇ ಖ್ಯಾತರಾದ ಡಾ. ಎ.ಕೆ. ರೈರು ಗೋಪಾಲ್ (AK Rairu Gopal) ಭಾನುವಾರ ಮುಂಜಾನೆ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೇರಳದ (Kerala) ಕಣ್ಣೂರಿನ (Kannur) ವೈದ್ಯ ಡಾ. ಎ. ಗೋಪಾಲನ್ ನಂಬಿಯಾರ್ (Gopalan Nambiar) ತಮ್ಮ ವೈದ್ಯಕೀಯ ವೃತ್ತಿ ಆರಂಭದಲ್ಲಿ ಮಗನಿಗೆ “ಹಣ ಗಳಿಕೆಯೇ ಗುರಿಯಾದರೆ, ಬೇರೆ ಕೆಲಸ ಮಾಡು” ಎಂದು ಸಲಹೆ ನೀಡಿದ್ದರು. ಈ ಮಾತು ಯುವ ವೈದ್ಯ ಡಾ. ಎ.ಕೆ. ರೈರು ಗೋಪಾಲ್ ಅವರ ಜೀವನದ ಮೇಲೆ ಗಾಢವಾಗಿ ಪ್ರಭಾವ ಬೀರಿತು. ತಮ್ಮ 50 ವರ್ಷಗಳ ವೃತ್ತಿಯಲ್ಲಿ ಡಾ. ರೈರು ಕೇವಲ 2 ರೂ. ಶುಲ್ಕವನ್ನು ವಿಧಿಸುತ್ತಿದ್ದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಡಾ. ರೈರು ಅವನ್ನು ‘ಜನರ ವೈದ್ಯ’ ಎಂದು ಕರೆದಿದ್ದಾರೆ. ಅವರ ಸೇವಾಮನೋಭಾವ ಬಡವರಿಗೆ ದೊಡ್ಡ ಆಸರೆಯಾಗಿತ್ತು ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಕೋಝಿಕೋಡ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಡಾ. ರೈರು, ಕಣ್ಣೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನಂತರ, ತಲಪ್‌ನಲ್ಲಿ 35 ವರ್ಷಗಳ ಕಾಲ ಸ್ವಂತ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸಿದರು. ನಂತರ ಥಾನಾ ಮಾಣಿಕ್ಕಕಾವು ದೇವಸ್ಥಾನದ ಬಳಿಯ ಮನೆಗೆ ಸ್ಥಳಾಂತರಗೊಂಡರು. ಅವರ ಕ್ಲಿನಿಕ್‌ಗಾಗಿ ಕಣ್ಣೂರು ಪೊಲೀಸ್ ಮೈದಾನದ ಬಳಿ ವಿಶೇಷ ಬಸ್ ನಿಲ್ದಾಣವನ್ನು ನಿರ್ಮಿಸಲಾಯಿತು.

ಡಾ. ರೈರು ಬೆಳಗ್ಗೆ 4ರಿಂದ ಸಂಜೆ 4ರವರೆಗೆ ರೋಗಿಗಳನ್ನು ಭೇಟಿಯಾಗುತ್ತಿದ್ದರು. ಕಾರ್ಮಿಕರ ಸಮಯದ ಮಿತಿಯನ್ನು ಗಮನಿಸಿ, ಬೆಳಗ್ಗೆ 3ರಿಂದಲೇ ರೋಗಿಗಳನ್ನು ಭೇಟಿಯಾಗುತ್ತಿದ್ದರು. ಕೆಲವೊಮ್ಮೆ ದಿನಕ್ಕೆ 300ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಬಹುತೇಕ ದಿನಗಳಲ್ಲಿ 200ಕ್ಕಿಂತ ಹೆಚ್ಚು ರೋಗಿಗಳನ್ನು ಭೇಟಿಯಾಗುತ್ತಿದ್ದರು. ತಮ್ಮ ವೃತ್ತಿಜೀವನದಲ್ಲಿ ಸುಮಾರು 18 ಲಕ್ಷ ಮಂದಿ, ಮಕ್ಕಳಿಂದ ಹಿರಿಯರವರೆಗೆ, ಅವರ ಬಳಿ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಡಾ. ರೈರು ತಿಳಿಸಿದ್ದರು.

ಅವರು ಕಡಿಮೆ ವೆಚ್ಚದ, ಪರಿಣಾಮಕಾರಿ ಔಷಧಿಗಳನ್ನು ಸೂಚಿಸುತ್ತಿದ್ದರು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರಿಗೆ ಉಚಿತವಾಗಿ ಒದಗಿಸುತ್ತಿದ್ದರು. ಜಿಲ್ಲೆಯಾಚೆಗಿನ ರೋಗಿಗಳು ಕೇವಲ 2 ರೂ. ಶುಲ್ಕಕ್ಕಾಗಿ ಬರುತ್ತಿದ್ದರು. ಇದನ್ನು ನಂತರ 10 ರೂ.ಗೆ ಹೆಚ್ಚಿಸಿದರು. ಡಾ. ರೈರು ಅವರ ದೈನಂದಿನ ಜೀವನವು ಶಿಸ್ತು ಮತ್ತು ಸರಳತೆಯಿಂದ ಕೂಡಿತ್ತು. ಮುಂಜಾನೆ 2:15ಕ್ಕೆ ಎದ್ದು, ಗೋಶಾಲೆಯನ್ನು ಸ್ವಚ್ಛಗೊಳಿಸಿ, ಹಾಲು ಕರೆದು, ಪ್ರಾರ್ಥನೆಯ ನಂತರ ರೋಗಿಗಳನ್ನು ಭೇಟಿಯಾಗುತ್ತಿದ್ದರು.

ಈ ಸುದ್ದಿಯನ್ನು ಓದಿ: Coolie Movie: ಅಂದುಕೊಂಡ ದಿನಕ್ಕೆ ರಿಲೀಸ್‌ ಆಗಲ್ವಾ ರಜನಿಕಾಂತ್‌ ನಟನೆಯ ‘ಕೂಲಿ’ ಚಿತ್ರ? ಏನಿದು ಕೃತಿಚೌರ್ಯ ಆರೋಪ?
ಅವರ ಪತ್ನಿ ಡಾ. ಶಕುಂತಲಾ ಔಷಧಿಗಳನ್ನು ವಿತರಿಸುತ್ತಿದ್ದರು. ಸಹೋದರರಾದ ಡಾ. ವೇಣುಗೋಪಾಲ್ ಮತ್ತು ಡಾ. ರಾಜಗೋಪಾಲ್ ಜತೆಗೆ ಲಾಭರಹಿತ ವೈದ್ಯಕೀಯ ಸೇವೆಯ ಕುಟುಂಬ ಪರಂಪರೆಯನ್ನು ಮುಂದುವರಿಸಿದರು. ಡಾ. ರೈರು ಅವರಿಗೆ ಮಗ ಬಾಲ ಗೋಪಾಲ್ ಮತ್ತು ಮಗಳು ವಿದ್ಯಾ ಭಾರತ್ ಇದ್ದಾರೆ. ಕೇರಳದ ಶ್ರೇಷ್ಠ ಕುಟುಂಬ ವೈದ್ಯರಿಗಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಾಣಿಪ್ರಿಯರಾಗಿದ್ದ ಅವರು ಹಲವು ಸಾಕುಪ್ರಾಣಿಗಳನ್ನು ಸಾಕಿದ್ದರು. ಭಾನುವಾರ ಮಧ್ಯಾಹ್ನ ಕಣ್ಣೂರಿನ ಪಯ್ಯಂಬಲಂನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ.