ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸೇತುವೆಗೆ ಡಿಕ್ಕಿಯಾದ ಡಬಲ್ ಡೆಕ್ಕರ್ ಬಸ್; ಇಲ್ಲಿದೆ ಭಯಾನಕ ದೃಶ್ಯದ ವಿಡಿಯೊ

ಸೇತುವೆಯ ಕೆಳಗೆ ಹಾದುಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ಸಿನ ಚಾವಣಿ ಕಿತ್ತು ಹೋಗಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ. ಸಾಲ್ಫೋರ್ಡ್‌ನ ಎಕ್ಲೆಸ್‌ನಲ್ಲಿರುವ ಬಾರ್ಟನ್ ರಸ್ತೆ ಮತ್ತು ಟ್ರಾಫರ್ಡ್ ರಸ್ತೆಯ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

ಸೇತುವೆಗೆ ಡಿಕ್ಕಿಯಾದ ಡಬಲ್ ಡೆಕ್ಕರ್ ಬಸ್; ವಿಡಿಯೊ ವೈರಲ್‌

ಲಂಡನ್‌: ಸೇತುವೆಯ ಕೆಳಗೆ ಹಾದುಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ಸಿನ (Double Decker Bus) ಚಾವಣಿ ಕಿತ್ತು ಹೋಗಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ (Manchester) ನಡೆದಿದೆ. ಸಾಲ್ಫೋರ್ಡ್‌ನ ಎಕ್ಲೆಸ್‌ನಲ್ಲಿರುವ ಬಾರ್ಟನ್ ರಸ್ತೆ ಮತ್ತು ಟ್ರಾಫರ್ಡ್ ರಸ್ತೆಯ ಜಂಕ್ಷನ್‌ನಲ್ಲಿ ಈ ಅವಘಡ ನಡೆದಿದೆ. ಚಾವನಿ ಕಿತ್ತು ಹೋದರೂ, ಪ್ರಯಾಣಿಕರು ಕಿರುಚಾಡುತ್ತಿದ್ದರೂ ಘಟನಾ ಸ್ಥಳದಿಂದ ಬಸ್ ಕೆಲವು ಮೀಟರ್ ದೂರ ಚಲಿಸಿ ಬಳಿಕ ನಿಂತಿದೆ. ಘಟನೆಯ ಭಯಾನಕ ದೃಶ್ಯ (Viral Video) ಮನೆಯೊಂದರ ಡೋರ್ ಬೆಲ್ ಕೆಮ್ಯಾರಾದಲ್ಲಿ ಸೆರೆಯಾಗಿದೆ.

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್‌ ಎಕ್ಲೆಸ್‌ನಲ್ಲಿರುವ ಬಾರ್ಟನ್ ರಸ್ತೆ ಮತ್ತು ಟ್ರಾಫರ್ಡ್ ರಸ್ತೆಯ ಜಂಕ್ಷನ್‌ನಲ್ಲಿರುವ ತಗ್ಗು ಸೇತುವೆಗೆ ಬಸ್‌ ಡಿಕ್ಕಿಯಾಗಿದೆ. ಇದರಿಂದ ಅದರ ಚಾವಣಿ ಹರಿದುಹೋಗಿ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಗಾಯಗೊಂಡವರಿಗೆ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೂವರು ಗಂಭೀರ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಹೇಳುವುದು ಹೀಗೆ... ʼʼಬಸ್ ಸೇತುವೆಗೆ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಕಿರುಚುವ ಶಬ್ದ ಕೇಳಿತು. ನಾನು ಗೆಳತಿಯೊಂದಿಗೆ ನಮ್ಮ ಫ್ಲಾಟ್‌ನಲ್ಲಿದ್ದೆವು. ಬಸ್ ಸೇತುವೆಯ ಕೆಳಗೆ ಹಾದು ಹೋಗುವುದನ್ನು, ಇಬ್ಬರು ಮೇಲಿನ ಮಹಡಿಯಿಂದ ನೆಲಕ್ಕೆ ಬೀಳುವುದನ್ನು ಗೆಳತಿ ನೋಡಿದಳು. ಸ್ಫೋಟದಂತಹ ಜೋರಾದ ಶಬ್ದ ಕೇಳಿಬಂದಿತ್ತು. ಕೂಡಲೇ ನಾವು ಸಹಾಯಕ್ಕಾಗಿ ಧಾವಿಸಿದೆವುʼʼ ಎಂದು ತಿಳಿಸಿದ್ದಾರೆ.



ಸ್ಥಳೀಯ ನಿವಾಸಿ ಸ್ಟೇಸಿ ಮೋರ್ಲಿ ಪ್ರಕಾರ, ʼʼಈ ಘಟನೆಯು ಭಯಾನಕವಾಗಿತ್ತು. ನಾನು ಇನ್ನೂ ಆಘಾತದಲ್ಲಿದ್ದೇನೆ. ಜನರು ಮತ್ತು ಅವರ ಕುಟುಂಬಗಳ ಬಗ್ಗೆ ನನಗೆ ವಿಷಾದವಿದೆʼʼ ಎಂದಿದ್ದಾರೆ.

ಇದನ್ನೂ ಓದಿ: Karnataka Rains: ಮುಂದಿನ 6 ದಿನ ರಾಜ್ಯದಲ್ಲಿ ಆರ್ಭಟಿಸಲಿದೆ ಮುಂಗಾರು ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಇದೇ ಸ್ಥಳದಲ್ಲಿ ಇದೇ ರೀತಿಯಲ್ಲಿ 2023ರ ಏಪ್ರಿಲ್‌ನಲ್ಲೂ ಬಸ್ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ. ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರೇಟರ್ ಮ್ಯಾಂಚೆಸ್ಟರ್‌ನ ಸಾರಿಗೆ ಆಯುಕ್ತ ವೆರ್ನಾನ್ ಎವೆರಿಟ್, ʼʼಅಪಘಾತದ ಬಗ್ಗೆ ತುರ್ತು ತನಿಖೆಯನ್ನು ಘೋಷಿಸಲಾಗಿದೆ. ಇದಕ್ಕಾಗಿ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರ ತನಿಖಾ ತಂಡವು ಬಸ್ ನಿರ್ವಾಹಕ ಸ್ಟೇಜ್‌ಕೋಚ್‌ನ ವಿಚಾರಣೆ ನಡೆಸುತ್ತಿದೆʼʼ ಎಂದು ತಿಳಿಸಿದರು.