ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ನಮ್ಮ ಮನೆಯ ಮೇಲ್ಭಾಗದಲ್ಲಿ ಹಲಸಿನ ಮರವೊಂದಿತ್ತು; ಅದರ ನೆರಳಿನಿಂದಾಗಿ, ಬೇಸಗೆಯಲ್ಲಿ ಸೆಕೆ ಕಡಿಮೆಯಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕೆಲವು ಕಿ.ಮೀ. ಪೂರ್ವ ದಿಕ್ಕಿಗೆ ಸಾಗಿದರೆ, ಪಶ್ಚಿಮ ಘಟ್ಟ ಸಾಲಿನ ಗರ್ಭದಲ್ಲೇ ಎಂಬಂತೆ ಇರುವ ಕೆಲವು ಹಳ್ಳಿಗಳಲ್ಲಂತೂ, ಮನೆಗಳನ್ನೇ ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಂತೆ ಮರ, ಗಿಡ, ಬಳ್ಳಿಗಳು ಬೆಳೆದಿರುತ್ತಿದ್ದವು.

ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

-

ಶಶಿಧರ ಹಾಲಾಡಿ

ಪ್ರತಿ ವರ್ಷ ಚಳಿಗಾಲ ಬಂದ ಕೂಡಲೆ, ನಮ್ಮ ದೇಶದ ರಾಜಧಾನಿಯ ಗಾಳಿ ಹದಗೆಡುತ್ತದೆ; ಏರ್ ಕ್ವಾಲಿಟಿ ಇಂಡೆಕ್ಸ್ 300 ರಿಂದ 400 ತಲುಪುತ್ತದೆ! ಈ ವರ್ಷ ಅಲ್ಲಿನ ಸ್ಥಿತಿ ತೀರಾ ಕೆಟ್ಟಿದ್ದು, ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಬೇಕೆಂದು ಜನ ಬಯಸುತ್ತಿದ್ದಾರೆ. ಚೀನಾ ದೇಶವು ತಾನು ಹೇಗೆ ತನ್ನ ದೇಶದ ಗಾಳಿಯನ್ನು ಶುದ್ಧವಾಗಿ ಟ್ಟಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದೆ. ಅಲ್ಲಿನ ಬಿಗಿ ಆಡಳಿತದಿಂದಾಗಿ, ದೂಳು ಮತ್ತು ಮಾಲಿನ್ಯ ತಡೆಯಬೇಕೆಂದು ನಿರ್ಧರಿಸಿದ ತಕ್ಷಣ, ಅಗತ್ಯ ವೆನಿಸಿದರೆ ದೊಡ್ಡ ದೊಡ್ಡ ಕಾರ್ಖಾನೆ ಗಳನ್ನೇ ರಾತ್ರಿ ಬೆಳಗಾಗುವುದರೊಳಗೆ ದೂರಕ್ಕೆ ಸ್ಥಳಾಂತರಿಸುವಂತಹ ಕೆಲಸಗಳನ್ನು ಮಾಡಬಹುದು; ಆದರೆ ಅಂತಹ ಬಿಗಿ ಕ್ರಮ ನಮ್ಮ ದೇಶದಲ್ಲಿ ಅಸಾಧ್ಯ. ಈಗ ದೆಹಲಿಯ ಕೆಲವು ಪ್ರಾಜ್ಞರು, ಪರಿಸರಪ್ರೇಮಿಗಳು ಒಂದು ಆಂದೋಲನ ಆರಂಭಿಸಿದ್ದಾರೆ: ಅದೇ ನೆಂದರೆ, ‘ದೆಹಲಿಯ ಸುತ್ತಲೂ ಹರಡಿರುವ ಅರಾವಳಿ ಬೆಟ್ಟ ಮತ್ತು ಕಾಡನ್ನು ಉಳಿಸಿ ಮತ್ತು ಇದರಿಂದಾಗಿ ದೆಹಲಿಯ ಗಾಳಿಯನ್ನು ಶುದ್ಧೀಕರಿಸಬಹುದು!’ ನಿಮ್ಮ ಸುತ್ತಲಿನ ಮರ, ಗಿಡ, ಕುರುಚಲು ಕಾಡು, ಬಳ್ಳಿಯ ಮಹತ್ವವನ್ನು ನೀವೂ ಗಮನಿಸಿರಬಹುದು. ಅದರ ಕುರಿತು ನೀವೂ ಬರೆಯಿರಿ! ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.

ಕೆಲವು ದಶಕಗಳ ಹಿಂದಿನ ಮಾತು: ನಮ್ಮ ಹಳ್ಳಿಮನೆಗೆ ತಾಗಿಕೊಂಡಂತೆ, ಬೃಹದಾಕಾರದ, ನಾನಾ ಪ್ರಭೇದದ ಹಲವು ಮರಗಳಿದ್ದವು. ಮನೆಯಿಂದ ಹತ್ತು ಹೆಜ್ಜೆ ನಡೆದರೆ, ಇನ್ನಷ್ಟು ಮರಗಳು! ನಮ್ಮ ಮನೆಯ ಸುತ್ತ ಮಾತ್ರವಲ್ಲ, ನಮ್ಮ ಹಳ್ಳಿ ಮತ್ತು ಸುತ್ತಮುತ್ತಲಿನ ನಮ್ಮ ಬಂಧುಗಳ ಹೆಚ್ಚಿನವರ ಮನೆಯ ಸುತ್ತಲೂ ದೊಡ್ಡ ದೊಡ್ಡ ಮರಗಳೇ! ಕೆಲವು ಕಡೆ, ಮನೆಯನ್ನೇ ಪೂರ್ತಿ ಮರೆಯಾಗಿಸು ವಂತೆ ಬೆಳದ ಮರಗಳೂ ಇದ್ದವು.

ನಮ್ಮ ಮನೆಯ ಮೇಲ್ಭಾಗದಲ್ಲಿ ಹಲಸಿನ ಮರವೊಂದಿತ್ತು; ಅದರ ನೆರಳಿನಿಂದಾಗಿ, ಬೇಸಗೆಯಲ್ಲಿ ಸೆಕೆ ಕಡಿಮೆಯಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕೆಲವು ಕಿ.ಮೀ. ಪೂರ್ವ ದಿಕ್ಕಿಗೆ ಸಾಗಿದರೆ, ಪಶ್ಚಿಮ ಘಟ್ಟ ಸಾಲಿನ ಗರ್ಭದಲ್ಲೇ ಎಂಬಂತೆ ಇರುವ ಕೆಲವು ಹಳ್ಳಿಗಳಲ್ಲಂತೂ, ಮನೆಗಳನ್ನೇ ತಮ್ಮ ಗರ್ಭ ದಲ್ಲಿ ಅಡಗಿಸಿಕೊಂಡಂತೆ ಮರ, ಗಿಡ, ಬಳ್ಳಿಗಳು ಬೆಳೆದಿರುತ್ತಿದ್ದವು. ಆ ರೀತಿ, ದಟ್ಟ ಮರಗಿಡ ಗಳ ನಡುವೆ ಮನೆ ಕಟ್ಟಿಕೊಂಡು, ಸಸ್ಯಗಳೊಂದಿಗೆ ಸಮನ್ವಯ ಸಾಧಿಸಿಕೊಂಡು, ನೂರಾರು ವರ್ಷ ಗಳಿಂದ ಬದುಕನ್ನು ಕಟ್ಟಿಕೊಂಡವರನ್ನು ಇನ್ನಷ್ಟು ಸಂಖ್ಯೆಯಲ್ಲಿ ನೋಡಬೇಕಾದರೆ, ಹೆಬ್ರಿ ಸನಿಹದ ಕಬ್ಬಿನಾಲೆ ಎಂಬ ಗ್ರಾಮಕ್ಕೆ ಹೋಗಬೇಕು.

ಪರಿಸರದೊಂದಿಗೆ ಮಿಳಿತವಾದ ಬದುಕು ಅಲ್ಲಿ ನೆಲೆಗಟ್ಟಿದೆ. ಇರಲಿ, ನಮ್ಮ ಹಳ್ಳಿಯಲ್ಲಿದ್ದ ನಮ್ಮ ಮನೆಯ ವಿಚಾರಕ್ಕೆ ಬರೋಣ. ಬೃಹದಾಕಾರವಾಗಿ ಬೆಳೆದಿದ್ದು, ನಮ್ಮ ಊಟ, ತಿಂಡಿ, ತಿನಿಸುಗಳಿಗೆ ರುಚಿಕೊಡುತ್ತಿದ್ದ ಮರವೊಂದು ನಮ್ಮ ಮನೆಯ ಮಗ್ಗುಲಲ್ಲೇ ಇತ್ತು.

ಅಂಗಳ ದಾಟಿ, ಹತ್ತಾರು ಹೆಜ್ಜೆ ನಡೆದರೆ ಆ ಮರದ ನೆರಳಿನಲ್ಲಿ ನಿಲ್ಲಬಹುದಿತ್ತು; ವಿಶಾಲವಾದ ರೆಂಬೆಕೊಂಬೆಗಳಿದ್ದ ಆ ಮರದಲ್ಲಿ ದಟ್ಟವಾಗಿ ಬೆಳೆದಿದ್ದ ದೊಡ್ಡ ದೊಡ್ಡ ಎಲೆಗಳಿಂದಾಗಿ, ಮರದ ಅಡಿ ಬಿಸಿಲು ಬೀಳಲು ಸಾಧ್ಯವೇ ಇರಲಿಲ್ಲ. ಆ ಮರವು ನಮ್ಮ ಅಡುಗೆಗೆ, ಊಟ ತಿಂಡಿಗೆ ರುಚಿ ತರು ತ್ತಿದ್ದ ರೀತಿ ಮಾತ್ರ ಬಹಳ ಕುತೂಹಲಕಾರಿ.

ಇದನ್ನೂ ಓದಿ: Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

ಆ ಮರವು ಪ್ರತಿವರ್ಷ ಬಿಡುತ್ತಿದ್ದ ಸಾವಿರಾರು ಕಾಯಿಗಳಿಗೆ ವಾಣಿಜ್ಯಕ ಮೌಲ್ಯವೂ ಇದೆ. ಅದು ಪ್ರತಿ ಮಳೆಗಾಲದಲ್ಲಿ ಬೀಳಿಸುವ ಅಡಿಕೆ ಗಾತ್ರದ ಕಾಯಿಗಳ ತಿರುಳನ್ನು ಜಜ್ಜಿ, ಪುಡಿ ಮಾಡಿ, ನೀರು ಹಾಕಿ ತಿರುವಿ, ದೊಡ್ಡ ಪಾತ್ರೆಗೆ ಹಾಕಿ ಚೆನ್ನಾಗಿ ಬೇಯಿಸಿದರೆ, ಪಾತ್ರೆಯ ಮೇಲ್ಭಾಗದಲ್ಲಿ ಎಣ್ಣೆ ತೇಲುತ್ತಾ ಶೇಖರವಾಗುತ್ತಿತ್ತು.

ಬಿಸಿಯಾದ ಆ ಎಣ್ಣೆಯು ತಣಿಯುತ್ತಿದ್ದಂತೆ, ಉಂಡೆ ಗಾತ್ರಕ್ಕೆ ಮಾಡಿಬಿಟ್ಟರೆ, ಪೂರ್ತಿ ತಣಿದ ನಂತರ ಬಿಳಿಯ ಕ್ರಿಕೆಟ್ ಬಾಲ್‌ನ ಸ್ವರೂಪ! ಬಣ್ಣ ಮಾತ್ರ ನಸು ಬಿಳಿ. ಆ ಬಿಳಿ ಉಂಡೆಯನ್ನು ಬಾಣಲೆಗೆ ಹಾಕಿ, ಬಿಸಿ ಮಾಡಿದರೆ, ಸುಮಾರು ಕಾಲು ಲೀಟರ್ ಖಾದ್ಯ ತೈಲ ಸಿದ್ಧ!

ಆ ಖಾದ್ಯತೈಲದ ಗುಣಮಟ್ಟವು, ಇಂದು ಅಂಗಡಿಗಳಲ್ಲಿ ದೊರಕುವ ರಿಫೈನ್ಡ್ ಆಯಿಲ್‌ನಷ್ಟೇ ಉತ್ತಮ. ಅದರಲ್ಲಿ ಹಪ್ಪಳ ಕರಿಯಬಹುದು, ಬನ್ಸ್, ಮುಳಕ, ಅತ್ರಾಸ, ಮಂಗಳೂರು ಬಜ್ಜಿ ಕಾಯಿಸ ಬಹುದು! ಆ ಎಣ್ಣೆಯನ್ನು ಒಗ್ಗರಣೆಗೂ ಬಳಸಬಹುದು, ವಾತದಿಂದ ಬರುವ ಕಾಲು ನೋವು, ಸೊಂಟ ನೋವಿನ ಶಮನಕ್ಕೂ ಬಳಸಬಹುದು. ಇನ್ನೂ ವಿಶೇಷವೆಂದರೆ, ಆ ಬಿಳಿ ಉಂಡೆಗಳನ್ನು ಆರು ತಿಂಗಳುಗಳ ತನಕ ಕಾಪಿಡಬಹುದು. 20-30 ಎಣ್ಣೆ ಉಂಡೆಗಳಿದ್ದರೆ, ಗ್ರಾಮೀಣ ಕುಟುಂಬದ ಆರು ತಿಂಗಳುಗಳ ಅಡುಗೆಗೆ ಸಾಕು!

ಮರವನ್ನೂ ಪಾಲು ಮಾಡಿಕೊಂಡರು

ವಾತಾವರಣದ ಉಷ್ಣತೆಗೆ ಗಟ್ಟಿಯಾಗಿ, ಉಂಡೆಯ ರೂಪ ತಾಳುವ ಈ ಖಾದ್ಯತೈಲವೇ ದೂಪದ ಎಣ್ಣೆ; ಆ ಎಣ್ಣೆ ಇರುವ ಕಾಯಿಗಳನ್ನು ಕೊಡುವ ಮರವೇ ದೂಪದ ಮರ (ವಟೇರಿಯಾ ಇಂಡಿಕಾ). ನಮ್ಮ ಮನೆ ಬಳಿ ಇದ್ದ ಆ ಬೃಹದಾಕಾರದ ಮರವು ಪ್ರತಿವರ್ಷ ನೀಡುವ ಸಾವಿರಾರು ಕಾಯಿ ಗಳನ್ನು ಸಂಗ್ರಹಿಸಿ, ತಿರುಳು ಬೇರ್ಪಡಿಸಿ ಬೇಯಿಸಿ ಎಣ್ಣೆ ಮಾಡುವುದು ನಮ್ಮ ಮನೆಯವರ ಹವ್ಯಾಸ. ಆ ದೂಪದ ಮರಕ್ಕೆ ಅದೆಷ್ಟು ಪ್ರಾಮುಖ್ಯತೆ ಇತ್ತು ಎಂದರೆ, ಕೆಲವು ದಶಕಗಳ ಹಿಂದೆ ನಮ್ಮ ಮನೆ ಹಿಸ್ಸೆಯಾದಾಗ, ಆ ದೂಪದ ಮರದ ಕಾಯಿಗಳನ್ನು ಎರಡೂ ಕುಟುಂಬಗಳು ಹಂಚಿ ಕೊಳ್ಳಬೇಕು ಎಂಬ ಒಪ್ಪಂದವೂ ಆಗಿತ್ತು!

ಈಗ ದೂಪದ ಎಣ್ಣೆಯನ್ನು ಖಾದ್ಯತೈಲವಾಗಿ ಉಪಯೋಗಿಸುವ ಪದ್ಧತಿ ನಮ್ಮ ಹಳ್ಳಿಯಲ್ಲಿ ಪೂರ್ತಿಯಾಗಿ ನಿಂತು ಹೋಗಿದೆ. ಅಲ್ಲಲ್ಲಿ ಹಾಡಿ ಹಕ್ಕಲುಗಳಲ್ಲಿ ದೂಪದ ಮರಗಳು ಇದ್ದರೂ, ನಿಧಾನವಾಗಿ ಬೆಳೆಯುವ ಆ ಮರವನ್ನು ರಕ್ಷಿಸುವ ಕುರಿತು ಕೃಷಿಕರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಈಗೇನಿದ್ದರೂ, ಬೇಗನೆ ಬೆಳೆದು, ಬೇಗನೆ ‘ಕಟಾವಿಗೆ’ ಬರುವ ಅಕೇಶಿಯಾ ಮರಗಳೇ ಜನಪ್ರಿಯ.

ಮನೆಯ ತುಂಬಾ ಸುಗಂಧ

ನಮ್ಮ ಹಳ್ಳಿ ಕಾಡುಗಳಲ್ಲಿ ‘ದುಗಳು ದೂಪ’ ಎಂದು ಕರೆಯಿಸಿಕೊಳ್ಳುವ ಇನ್ನೊಂದು ಮರವೂ ಇದೆ. ಎತ್ತರವಾಗಿ ಬೆಳೆಯುವ ಈ ಮರದ ಕಾಂಡಕ್ಕೆ ಚಿಕ್ಕ ಗಾಯ ಮಾಡಿದರೆ, ಅಂಟು ಅಂಟಾದ ‘ರಾಳ’ ಅಥವಾ ದೂಪ ಒಸರುತ್ತದೆ; ಅದನ್ನು ಆರಲು ಬಿಟ್ಟರೆ, ಅರೆಪಾರದರ್ಶಕ ಅಂಟು ಅಥವಾ ರಾಳ ಸಿಗುತ್ತದೆ. ಆ ರಾಳವನ್ನು ಪುಡಿ ಮಾಡಿ, ಒಂಡು ಸೌಟಿನಲ್ಲಿಟ್ಟು ಬೆಂಕಿ ಹಚ್ಚಿದರೆ, ಒಳ್ಳೆಯ ಸುಗಂಧ ಭರಿತ ಹೊಗೆ ಮನೆಯ ತುಂಬಾ ತುಂಬಿಕೊಳ್ಳುತ್ತದೆ.

ಬಾಣಂತಿಯರಿರುವ ಮನೆಯಲ್ಲಿ ಈ ದೂಪವನ್ನು ಸುಡುವ ಪದ್ಧತಿ ಇತ್ತು. ಆದರೆ, ದುಗಳು ದೂಪದ ಮರದ ಅಂಟು ಅಥವಾ ರಾಳವನ್ನು, ವಾಣಿಜ್ಯಕ ಉದ್ದೇಶಗಳಿಗಾಗಿ ಸಂಗ್ರಹಿಸುವ ಕೆಲಸವು ನಾಲ್ಕಾರು ದಶಕಗಳ ಹಿಂದೆ ಆರಂಭವಾಯಿತು. ಹಾಡಿ ಗುಡ್ಡಗಳಲ್ಲಿ ಏಕಾಂಗಿಯಾಗಿ ಎತ್ತರವಾಗಿ ಬೆಳೆಯುವ ದುಗಳು ದೂಪದ ಮರಗಳನ್ನು ಹುಡುಕಿ, ಅದರ ಕಾಂಡಕ್ಕೆ ಗಾಯ ಮಾಡಿ, ಅಂಟು ಸಂಗ್ರಹಿಸಲೆಂದೇ ಕೆಲವರು ಗುಡ್ಡಗಳಲ್ಲಿ ಓಡಾಡುತ್ತಿದ್ದರು.

ಅಧಿಕೃತವೋ, ಅನಧಿಕೃತವೋ, ಒಟ್ಟಾರೆ, ನಮ್ಮ ಸುತ್ತಮುತ್ತಲಿನ ಎಲ್ಲಾ ದುಗಳು ದೂಪದ ಮರಗಳ ತೊಗಟೆಗಳನ್ನು ಒಂದೆರಡು ಅಡಿಗಳಷ್ಟು ಕೆತ್ತಿ, ರಾಳ ಸಂಗ್ರಹಿಸತೊಡಗಿದರು. ಆ ರೀತಿ ಅಂಟು ತೆಗೆದ ನಂತರ, ಕೆಲವೇ ವರ್ಷಗಳಲ್ಲಿ ಮರವೇ ಸತ್ತು, ಉರುಳಿ ಬೀಳುತ್ತದೆ. ಸುಗಂಧದ ಹೊಗೆ ನೀಡುವ ಅಂಟು ನೀಡುವ, ಬಲಿತ ದೂಪದ ಮರಗಳು ಈಗ ನಮ್ಮ ಹಳ್ಳಿಯಲ್ಲಿ ಬಲು ಅಪರೂಪ ವಾಗಿವೆ.

ನಮ್ಮ ಹಳ್ಳಿಯಲ್ಲಿ ಹಿಂದೆ ಹೇರಳವಾಗಿದ್ದು, ಇಂದು ಕಡಿಮೆ ಸಂಖ್ಯೆಯಲ್ಲಿರುವ ಇನ್ನೊಂದು ಮರವೆಂದರೆ ಹೊನ್ನೆ ಮರ (ಕ್ಯಾಲೋಫಿಲ್ಲಂ ಇನೋಫಿಲ್ಲಂ). ಕಳೆದ ಶತಮಾನದ ಮೊದಲರ್ಧ ದಲ್ಲಿ, ಇವು ಪ್ರತಿ ಹಳ್ಳಿಯಲ್ಲಿ ಅಗತ್ಯವಾಗಿ ಸಾಕಷ್ಟು ಸಂಖ್ಯೆಯಲ್ಲಿರಬೇಕಾಗಿದ್ದ ವೃಕ್ಷಗಳು. ದಟ್ಟ ಹಸಿರಿನ, ದೊಡ್ಡ ಗಾತ್ರದ ಎಲೆ; ಆದರೆ, ಜನರಿಗೆ ಬೇಕಾಗಿದ್ದುದು, ಆ ಮರವು ಜೊಂಪೆಜೊಂಪೆಯಾಗಿ ಬಿಡುತ್ತಿದ್ದ, ದುಂಡನೆಯ ಕಾಯಿಗಳು.

ಆಗಿನ್ನೂ ದೀಪದ ಉದ್ದೇಶಕ್ಕೆ ನಮ್ಮ ಹಳ್ಳಿಗಳಲ್ಲಿ ಚಿಮಿಣಿ ಎಣ್ಣೆಯ ಬಳಕೆ ಆರಂಭವಾಗಿರಲಿಲ್ಲ. ಮನೆಯಲ್ಲಿ ದೀಪ ಹಚ್ಚಲು, ಹೊನ್ನೆ ಎಣ್ಣೆಯೇ ಪ್ರಶಸ್ತ. ಅಡಕೆ ಗಾತ್ರದ, ಪೂರ್ತಿ ದುಂಡಗಿದ್ದ ಹಸಿರು ಬಣ್ಣದ ಹೊನ್ನೆ ಕಾಯಿಗಳನ್ನು ಬುಟ್ಟಿಗಟ್ಟಲೆ ಸಂಗ್ರಹಿಸಿ, ಒಣಗಿಸಿ ಎಣ್ಣೆ ತಯಾರಿಸುವ ಪರಿಪಾಠ. ಆ ಎಣ್ಣೆಯನ್ನು ಬಳಸಿ, ದೀಪ, ಸೊಡರು, ಹಣತೆಗಳನ್ನು ಬೆಳಗುತ್ತಿದ್ದರು.

ಕ್ರಮೇಣ ಸೀಮೆ ಎಣ್ಣೆಯು ಹಳ್ಳಿಗಳಿಗೆ ಸರಬರಾಜು ಆಗತೊಡಗಿದ ನಂತರ, ಚಿಮಿಣೀ ಬುಡ್ಡಿ, ಲಾಟೀನು, ಗ್ಯಾಸ್ ಲೈಟುಗಳ ಬಳಕೆ ಜನಪ್ರಿಯವಾಯಿತು, ಹೊನ್ನೆ ಎಣ್ಣೆ ತಯಾರಿಸುವ ಪದ್ಧತಿ ಪೂರ್ತಿ ನಿಂತು ಹೋಯಿತು. ನಮ್ಮ ಹಳ್ಳಿಯ ಜನರು, ಹೊನ್ನೆಣ್ಣೆ ಮತ್ತು ಹೊನ್ನೆ ಮರಗಳನ್ನು ಅದಾವ ಪರಿಯಲ್ಲಿ ಮರೆತುಬಿಟ್ಟಿದ್ದಾರೆಂದರೆ, ಮನೆ ಬೆಳಗಲು ಅದರ ಎಣ್ಣೆಯನ್ನು ಬಳಸುವ ದೀಪಗಳಿದ್ದವು ಎಂಬುದೇ ಈಗಿನ ತಲೆಮಾರಿನ ಅರಿವಿನಲ್ಲಿಲ್ಲ. ನಮ್ಮ ಹಳ್ಳಿಯಲ್ಲಿ ಇತ್ತೀಚೆಗೆ ಗಮನಿಸಿದಾಗ, ಮೊದಲಿನಂತೆ ತೋಡುಗಳ ಬದಿಯ್ಲೋ, ಕಾಲ್ದಾರಿಯ ಬದಿಯಲ್ಲೋ ಕಂಡು ಬರುತ್ತಿದ್ದ ಮಧ್ಯಮ ಗಾತ್ರದ ಹೊನ್ನೆ ಮರಗಳು ಮಾಯವಾಗಿ ಬಿಟ್ಟಿವೆ!

ಮುಳ್ಳುಗಿಡದ ಎಲೆಯಿಂದ ಚಾಪೆ

ಗದ್ದೆಯಂಚಿನ ತೋಡಿನ ಪಕ್ಕದಲ್ಲಿ ಬೆಳೆಯುತ್ತಿದ್ದ ಮುಂಡುಕನ ಗಿಡಗಳು ಮತ್ತು ಅದರ ಎಲೆ ಯಿಂದ ತಯಾರಿಸುವ ಚಾಪೆಯ ಕಥೆ ಇನ್ನೂ ಮಜವಾಗಿದೆ. ಅದನ್ನು ‘ಮುಂಡುಕನ ಓಲಿ ಚಾಪೆ’ ಎಂದೇ ಕರೆಯುವ ರೂಢಿ. ವರ್ಷದ ಒಂಬತ್ತು ತಿಂಗಳು ನೀರು ಹರಿಯುತ್ತಿದ್ದ ತೋಡಿನ ಅಂಚೇ, ಮುಂಡುಕನ ಗಿಡಗಳು ಬೆಳೆಯಲು ಸೂಕ್ತ ತಾಣ. ಆರರಿಂದ ಹತ್ತು ಅಡಿ ಎತ್ತರ ಬೆಳೆಯುವ ಪೊದೆ; ಒತ್ತೊತ್ತಾಗಿ ಹೊರಬರುವ ನಾಲ್ಕು ಅಡಿ ಉದ್ದದ ಎಲೆಗಳು; ಆ ಎಲೆಗಳ ಎರಡೂ ಬದಿಯಲ್ಲಿ ಪುಟಾಣಿ ಮುಳ್ಳುಗಳ ಸಾಲು. ಬಲಿತ ಮುಂಡುಕನ ಎಲೆಗಳು ಮೈಕೈಗೆ ತಗುಲಿದರೆ, ಗಾಯ ಖಚಿತ! ಅಂತಹ ಎಲೆಗಳನ್ನ ಕತ್ತರಿಸಿ, ಎರಡೂ ಪಕ್ಕದ ಮುಳ್ಳುಗಳನ್ನು ನಾಜೂಕಾಗಿ ಸವರಿ ತೆಗೆದುಹಾಕಲು ಒಂದು ಮಟ್ಟದ ಕೌಶಲ್ಯ ಅಗತ್ಯ. ಆ ರೀತಿ ಮುಳ್ಳು ತೆಗೆದು, ಮುಂಡುಕನ ಉದ್ದನೆಯ ಎಲೆಗಳನ್ನು ಒಣಗಿಸಿ, ಕಲಾತ್ಮಕವಾಗಿ ಹೆಣೆದು ಚಾಪೆ ಮಾಡುವ ಕೆಲವು ಮಹಿಳೆಯರು ನಮ್ಮೂರಿನಲ್ಲಿದ್ದರು.

ಆ ಚಾಪೆಯ ಮೇಲೆ ಮಲಗಿದರೆ ಸುಖನಿದ್ದೆ! ಎಲೆಗಳ ಮೇಲೆ ಮಲಗಿದಂತೆ. ಇಂತಹ ಮೆದು ಚಾಪೆಗೆ ಪ್ರತಿಸ್ಪರ್ಧಿಯೋ ಎಂಬಂತೆ, ‘ಈಚಲು ಓಲಿ ಚಾಪೆ’ಗಳೂ ನಮ್ಮೂರಲ್ಲಿದ್ದವು. ನಮ್ಮ ಹಳ್ಳಿಯಿಂದ ಸುಮಾರು ಹತ್ತು ಕಿ.ಮೀ. ದೂರದ ಅಂಪಾರು ಎಂಬ ಹಳ್ಳಿಯ ಸನಿಹದ ಗುಡ್ಡಗಳಲ್ಲಿ ಈಚಲು ಗಿಡಗಳು ಹೇರಳವಾಗಿ ಬೆಳೆಯುತ್ತವೆ.

ಅವು ಪೊದೆ ಗಾತ್ರದ ಪ್ರಭೇದದವು. ಆ ಎಲೆಗಳನ್ನು ಕತ್ತರಿಸಿ ಹೊತ್ತು ತಂದು, ಒಣಗಿಸಿ, ಹೆಣೆದು ತಯಾರಿಸುವ ಚಾಪೆಗಳು ತುಸು ಬಿರುಸು; ಮೆದುವಾದ ಮುಂಡುಕನ ಓಲಿ ಚಾಪೆಗೆ ಹೋಲಿಸಿದರೆ, ಬಿರುಸಾದ ಈಚಲು ಓಲಿ ಚಾಪೆಗಳ ಬಾಳಿಕೆ ಜಾಸ್ತಿ. ಪ್ಲಾಸ್ಟಿಕ್ ಚಾಪೆಗಳು ನಮ್ಮ ಹಳ್ಳಿ ಸಂತೆಯಲ್ಲಿ ದೊರಕಲು ಆರಂಭಗೊಂಡ ನಂತರ, ಸ್ಥಳೀಯವಾಗಿ ದೊರಕುವ ಎಲೆಗಳಿಂದ ತಯಾರಿಸುವ ಚಾಪೆಗಳು ನಮ್ಮ ಹಳ್ಳಿಯಿಂದ ಪೂರ್ತಿಯಾಗಿ ಮರೆಯಾಗಿಬಿಟ್ಟಿವೆ!

ಬಕ್ಕೆ ಮತ್ತು ಇಂಬ

ಆಹಾರ ರೂಪದ ಕಾಯಿಗಳನ್ನು ನೀಡುವ, ಮನೆ ಕಟ್ಟಲು ಅಗತ್ಯವಾಗಿರು ಮೋಪು ನೀಡುವ, ಔಷಽಯ ಗುಣಗಳನ್ನು ಹೊಂದಿರುವ ಹಲವು ಮರಗಿಡ ಬಳ್ಳಿಗಳು ನಮ್ಮ ಹಳ್ಳಿಯಲ್ಲಿದ್ದು, ಅವೆಲ್ಲವುಗಳ ಪೂರ್ತಿ ವಿವರ ಬರೆಯುತ್ತಾ ಹೋದರೆ ಪುಟ್ಟ ಪುಸ್ತಕವೇ ಆದೀತು!

ಆಹಾರವಾಗಿ ಮತ್ತು ಉತ್ತಮ ಮೋಪು ನೀಡುವ ಮರಗಳನ್ನ ಗಮನಿಸಿದರೆ, ಮೊದಲ ಸ್ಥಾನವು ಹಲಸಿನ ಮರಕ್ಕೆ ನೀಡಬೇಕೋ, ಮಾವಿನ ಮರಕ್ಕೆ ನೀಡಬೇಕೋ ಗೊತ್ತಾಗುತ್ತಿಲ್ಲ. ರುಚಿಯೇ ಮಾನದಂಡವಾದರೆ ಮಾವು, ಆದರೆ ಹೊಟ್ಟೆ ತುಂಬಿಸಿ, ಕೆಲವರ ಹಸಿವನ್ನು ನೀಗಿಸುವ ವಿಚಾರ ಗಮನಿಸಿದರೆ ಹಲಸು!

ನಮ್ಮ ಹಳ್ಳಿಮನೆಯ ಸುತ್ತಲೂ ಕೆಲವು ಹಲಸಿನ ಮರಗಳಿವೆ; ಅದಕ್ಕಿಂತ ಹೆಚ್ಚು ವೈವಿಧ್ಯದ ಹಲಸಿನ ಮರಗಳು ನಮ್ಮ ಆಚೀಚಿನ ಮನೆಗಳಲ್ಲಿ, ಅಬ್ಲಿಕಟ್ಟೆಯಲ್ಲಿನ ನಮ್ಮ ಬಂಧುಗಳ ಮನೆಯ ಲ್ಲಿದ್ದವು. ಒಂದೊಂದು ಮರದ್ದೂ ಒಂದೊಂದು ರುಚಿ; ಜತೆಗೆ ಬಕ್ಕೆ ಮತ್ತು ಇಂಬ (ಮೆದು ತೊಳೆ) ಎಂಬ ಎರಡು ವಿಧ. ಹಲಸಿನ ಹೀಚು ತುಸು ದೊಡ್ಡದಾದ ಕ್ಷಣದಿಂದ, ಅದು ನಮ್ಮ ಆಹಾರ ವಾಗಲು ಆರಂಭ.

ಮೊದಲಿಗೆ ಎಳೆಯ ಕಡಿಗೆಯಿಂದ ಪಲ್ಯ, ತಾಳ್ಳು ತಯಾರಿ; ಹದವಾಗಿ ಬಲಿತಾಗ ಹುಳಿ, ಪಲ್ಯ; ಜತೆಗೆ ರುಚಿ ರುಚಿಯಾದ ಉಪ್ಪಿನಕಾಯಿಗೂ ಆಗುತ್ತದೆ. ಈಗ ಬಹುಮಟ್ಟಿಗೆ ಬಳಕೆಯಿಂದ ದೂರ ವಾಗಿರುವ ಎಳೆ ಹಲಸಿನ ಕಾಯಿಯ ಉಪ್ಪಿನಕಾಯಿಯ ರುಚಿ ನಿಜಕ್ಕೂ ಅದ್ಭುತ! ಒಂದೇ ಕೊರತೆ ಎಂದರೆ, ಫ್ರಿಜ್ ಇಲ್ಲದಿದ್ದರೆ ಈ ಉಪ್ಪಿನಕಾಯಿಯ ಬಾಳಿಕೆ ಒಂದೆರಡು ತಿಂಗಳು ಮಾತ್ರ; ನಂತರ ರುಚಿ ಕೆಡುತ್ತದೆ.

ಉಪಾಹಾರಕ್ಕೆ ಹಪ್ಪಳ!

ಹಲಸಿನ ಕಾಯಿ ಬಲಿತ ನಂತರ, ತೊಳೆಗಳನ್ನು ಬೇಯಿಸು ಹಪ್ಪಳ ತಯಾರಿಸುವುದು ಎಲ್ಲರಿಗೂ ಗೊತ್ತು. ಹಲಸಿನ ಹಣ್ಣಿನಿಂದಲೂ ಹಪ್ಪಳ ತಯಾರಿಸುವುದುಂಟು. ಜಾಸ್ತಿ ಹಪ್ಪಳಗಳನ್ನು ಮಾಡಿಟ್ಟುಕೊಂಡು, ಮಳೆಗಾಲದ ಕಷ್ಟದ ದಿನಗಳಲ್ಲಿ ಬೆಳಗಿನ ಉಪಾಹಾರದ ಸ್ವರೂಪದಲ್ಲಿ ಹಪ್ಪಳಗಳನ್ನು ಸುಟ್ಟು ತಿನ್ನುವ ಪದ್ಧತಿಯೂ ಇತ್ತು!

ಹಲಸಿನ ಬೀಜಗಳನ್ನು ಸುಟ್ಟು ತಿಂದರೆ ರುಚಿಕರ. ಅವುಗಳನ್ನು ಚೆನ್ನಾಗಿ ಅರೆದು, ಸಿಹಿ ರೊಟ್ಟಿ ಯನ್ನೂ ಮಾಡುವುದುಂಟು. ಹಲಸಿನ ಕಾಯಿ ಪಲ್ಯ ತಿಂದರೆ ಹಸಿವು ದೂರ; ಜತೆಗೆ, ಮಧುಮೇಹ ದವರಿಗೆ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ. ಹಲಸಿನ ಹಣ್ಣಿನ ಮುಳುಕ, ಪಾಯಸ ಮೊದಲಾದ ನಾನಾ ತಿನಿಸುಗಳಿವೆ.

ಹಲಸಿನ ಹಣ್ಣಿನ ರುಚಿ ಎಲ್ಲರಿಗೂ ಗೊತ್ತು; ಆದರೆ, ತರಕಾರಿಯಾಗಿ ಹಲಸು, ಕೇವಲ ಕರಾವಳಿ ಮತ್ತು ಮಲೆನಾಡಿನ ಜನರಿಗೆ ಮಾತ್ರ ಗೊತ್ತು. ಇದೇಕೆ ಹೀಗೆ? ಹಲಸಿನ ಮರವು ಪೀಠೋಪಕರಣ ಗಳಿಗೆ ಪ್ರಶಸ್ತ; ಬಾಗಿಲು, ಕಿಟಕಿ ತಯಾರಿಸಲು ಉತ್ತಮ; ಹೊಳೆವ ಹಳದಿ ಬಣ್ಣದ ಉತ್ತಮ ಮೋಪು ಹಲಸು. ಈ ಮರದಿಂದ ತಯಾರಿಸಿದ ಒಂದು ಟೇಬಲ್, ಒಂದು ಕುರ್ಚಿ ಕಳೆದ ಐದು ದಶಕಗಳಿಂದ ನಮ್ಮ ಮನೆಯಲ್ಲಿ ಉಪಯೋಗದಲ್ಲಿದೆ! ಚೆನ್ನಾಗಿ ಪಾಲಿಶ್ ಮಾಡಿದ ಹಲಸಿನ ಹಲಗೆಯ ಬಣ್ಣವು ಕಣ್‌ಸೆಳೆಯುವಂತಹದ್ದು. ಇದೇ ರೀತಿ, ಹೆಬ್ಬಲಸಿನ ಹಲಗೆಗಳೂ ಬಹೂಪಯೋಗಿ. ಹಣ್ಣಿನ ಬೀಜದ ಎಣ್ಣೆ!

ಹೆಬ್ಬಲಸು ಎಂಬುದು ಹಲಸಿನ ಸಂಬಂಧಿ ಸಸ್ಯ; ಅದರ ಹಣ್ಣಿನ ಗಾತ್ರ ಕಿರಿದು; ತೊಳೆ ಇನ್ನೂ ಕಿರಿದು; ರುಚಿ ಮಾತ್ರ ಚೆಂದ. ಬೇಸಗೆಯ ದಿನಗಳಲ್ಲಿ ಹೆಬ್ಬಲಸಿನ ಹಣ್ಣಾಗುತ್ತದೆ; ಒಂದೊಂದು ಮರದಲ್ಲೂ ಸಾವಿರಾರು ಹಣ್ಣುಗಳು. ಹಣ್ಣಿನ ತೊಳೆಯಲ್ಲಿರುವ ಪುಟಾಣಿ ಬೀಜಗಳನ್ನು ರಾಶಿ ರಾಶಿ ಸಂಗ್ರಹಿಸಿ, ಎಣ್ಣೆ ತಯಾರಿಸುವ ಪರಿಪಾಠ ನಮ್ಮ ಹಳ್ಳಿಯಲ್ಲಿತ್ತು; ಇದೇ ರೀತಿ ಎಣ್ಣೆ ಕೊಡುವ ಕಾಯಿ ಬಿಡುವ ಇನ್ನೊಂದು ಮರವೂ ನಮ್ಮ ಮನೆಯ ಹಿಂಭಾಗದ ಹಕ್ಕಲಿನಲ್ಲಿದೆ; ಮುಳ್ಳು ಹರಳು ಎಂಬುದು ಗಿಡದ ಹೆಸರು. ಅದರ ಕಾಂಡದ ತುಂಬಾ ಮುಳ್ಳುಗಳು.

ಅದರ ಕಾಯಿಯನ್ನು ಒಣಗಿಸಿ, ಜಜ್ಜಿ, ಬೇಯಿಸಿ ಎಣ್ಣೆ ತೆಗೆದು, ತಲೆಗೆ ಹಚ್ಚಿಕೊಳ್ಳುತ್ತಿದ್ದರಂತೆ. ಅದರ ಕಾಯಿಗಳು ಬುಗುರಿಯ ರೀತಿ ಮಕ್ಕಳಿಗೆ ಆಟಕ್ಕೆ ಒದಗುತ್ತಿದ್ದವು. ಆದರೆ, ಈಚಿನ ವರ್ಷಗಳಲ್ಲಿ ಇದರ ಎಣ್ಣೆ ತಯಾರಿಸುವುದನ್ನು ನಮ್ಮೂರಿನ ಜನರು ಮರೆತೇಬಿಟ್ಟಿದ್ದಾರೆ. ಅಂಗಡಿಗಳಲ್ಲಿ ದೊರಕುವ ರಿಫೈನ್ಡ್ ಆಯಿಲ್ ಬಳಕೆಗೆ ಬಂದ ನಂತರದ ಬದಲಾವಣೆ ಇದು.

ದೂಪದ ಎಣ್ಣೆ, ಹೊನ್ನೆಣ್ಣೆ, ಹೆಬ್ಬಲಸಿನ ಬೀಜದ ಎಣ್ಣೆ, ಮುಳ್ಳು ಹರಳಿನ ಎಣ್ಣೆ - ಕಾಡು ಸಸ್ಯ ಗಳಿಂದ ತಯಾರಿಸುತ್ತಿದ್ದ, ಇಂದು ಮರೆಯಾಗುತ್ತಿರುವ ಎಣ್ಣೆಗಳ ಉದಾಹರಣೆಗಳು; ಇಂತಹ ಸ್ಥಳೀಯ ಎಣ್ಣೆಗಳ ಬಳಕೆ ನಿಂತುಹೋದರೆ, ಅಷ್ಟರ ಮಟ್ಟಿಗೆ ನಮಗೆ ನಷ್ಟ ಅಲ್ಲವೆ! ಅವುಗಳ ಜಾಗದಲ್ಲಿ ಕೃತಕ ಮತ್ತು ರಿಫೈನ್ಡ್ ಹೆಸರಿನ ಎಣ್ಣೆಗಳು ಬಳಕೆಗೆ ಬಂದು, ನಮ್ಮ ಆರೋಗ್ಯವನ್ನು ನಲುಗಿಸುತ್ತಿವೆ.

ರಿಫೈನ್ಡ್ ಎಣ್ಣೆಯಿಂದ ಆರೋಗ್ಯಕ್ಕೆ ಹಾನಿ ಎಂದು ವೈದ್ಯರು ಅದಾಗಲೇ ಎಚ್ಚರಿಸಿದ್ದಾರೆ. ಹೇಗೆ ನಮ್ಮ ಸುತ್ತಲಿನ ಮರಗಿಡಗಳ ಮತ್ತು ಪರಿಸರದ ನಾಶವು, ನಮ್ಮ ಬದುಕನ್ನೇ ಬದಲಿಸುತ್ತಿದೆ ಎಂಬು ದಕ್ಕೆ ಇದೂ ಒಂದು ಉದಾಹರಣೆ.

ಚಿರುಟಿದ ಮಿಡಿ ನಾಲಗೆಗೆ ರುಚಿ

ನಮ್ಮ ಹಳ್ಳಿಯಲ್ಲಿದ್ದ ನೂರಾರು ಕಾಟು ಮಾವಿನ ಮರಗಳ ವೈವಿಧ್ಯ ಮಾತ್ರ, ಎಂಥವರಲ್ಲೂ ವಿಸ್ಮಯ ಹುಟ್ಟಿಸೀತು! ಈಚಿನ ವರ್ಷಗಳಲ್ಲಿ ಹಳೆಯ ಮರಗಳು ಮರೆಯಾಗಿ, ಅಷ್ಟರ ಮಟ್ಟಿಗೆ ನಷ್ಟವಾಗಿದೆ. ಎಳೆಯ ಮಾವಿನ ಮಿಡಿಗಳನ್ನು ಕೊಯ್ದು, ಉಪ್ಪಿನಲ್ಲಿ ಚಿರುಟಿಸಿ, ಮೆಣಸಿನ ಕಾಯಿಯನ್ನು ಅರೆದು, ಬೆರೆಸು, ಜಾಲಿಗಳಲ್ಲಿ ತುಂಬಿಟ್ಟರೆ, ದೀರ್ಘಕಾಲ ಬಾಳಿಕೆ ಬರುವ ‘ಮಿಡಿ ಉಪ್ಪಿನ ಕಾಯಿ’ ಸಿದ್ಧ!

ಹದವಾಗಿ ತಯಾರಿಸಿದ ಮಿಡಿ ಉಪ್ಪಿನಕಾಯಿಯು, ಕನಿಷ್ಟ ಮೂರು ವರ್ಷ ಕೆಡದೇ ಉಳಿಯುತ್ತದೆ. ಸರಿಯಾಗಿ ಕಾಪಿಟ್ಟರೆ, ಇನ್ನೂ ದೀರ್ಘ ಕಾಲ ಬಾಳಿಕೆ ಬರಬಲ್ಲದೇನೋ! ಒಂದೆರಡು ವರ್ಷ ಹಳೆಯ ದಾದ ಉಪ್ಪಿನಕಾಯಿಯಲ್ಲಿ ಕೆಲವು ಔಷಧಿಯ ಗುಣಗಳು, ಪ್ರೊಬಯೋಟಿಕ್ ಪೂರಕ ಅಂಶಗಳು ಇವೆ ಎನ್ನುತ್ತಿದ್ದಾರೆ ಆಹಾರ ತಜ್ಞರು. ಹಿಂದಿನ ದಿನಗಳಲ್ಲಿ, ಜ್ವರ ಬಂದಾಗ, ಮಿಡಿ ಉಪ್ಪಿನಕಾಯಿ ರಸದೊಂದಿಗೆ ಊಟ ಮಾಡಿದರೆ, ಬೇಗನೆ ವಾಸಿಯಾಗುತ್ತದೆ ಎಂದು ಅಜ್ಜಿಯರು ಹೇಳುತ್ತಿದ್ದರು; ಅಂದಿನ ಅನುಭವದ ಮಾತಿನಲ್ಲಿ ಸತ್ಯ ಅಡಗಿದೆ ಎನಿಸುತ್ತದೆ.

ಕಾಡು, ಗುಡ್ಡ, ಹಾಡಿ, ಹಕ್ಕಲು, ತೋಡಿನ ಅಂಚು, ತೋಟದ ಬೇಲಿಗುಂಟ, ಕೆರೆಯ ದಡ, ನದಿ ದಡ, ಮನೆಯ ಅಂಗಳದ ಅಂಚು - ಹೀಗೆ ಎಲ್ಲೆಂದರಲ್ಲಿ ಬೃಹದಾಕಾರವಾಗಿ ಬೆಳೆದುಕೊಂಡಿರುತ್ತಿದ್ದ ಕಾಟು ಮಾವಿನ ಒಂದೊಂದು ಮರದಲ್ಲೂ ನೂರಾರು, ಸಾವಿರಾರು ಕಾಯಿಗಳಾಗುತ್ತಿದ್ದವು!

ಆ ಕಾಯಿಗಳನ್ನು ಕತ್ತರಿಸಿ, ಒಣಗಿಸಿ, ಮಳೆಗಾಲದಲ್ಲಿ ಹುಳಿಗಾಗಿ ಬಳಸುವ ಪದ್ಧತಿಯೂ ಇತ್ತು. ಒಂದೊಂದು ಮರವೂ ಸಾವಿರಾರು ಹಣ್ಣುಗಳನ್ನು ನೀಡುವ ಸಮಯವೆಂದರೆ, ಬಿರು ಬೇಸಗೆಯ ಕೊನೆಯ ಮತ್ತು ಮಳೆಗಾಲದ ಆರಂಭದ ದಿನಗಳು. ಮುಂಗಾರಿನ ಗಾಳಿ ಬೀಸಿದಾಗ, ಒಂದೊಂದು ಮರದಿಂದಲೂ ಒಂದು ಹೊತ್ತಿಗೆ ನೂರಾರು ಹಣ್ಣುಗಳು ಉದುರಿ ಬೀಳುತ್ತಿದ್ದವು!

ಅವುಗಳನ್ನು ಆಯ್ದು ಬುಟ್ಟಿಯಲ್ಲಿ ತುಂಬಿ ಮನೆಗೆ ತರುವುದು ಮಕ್ಕಳ ಕೆಲಸ; ಆ ಪುಟಾಣಿ ಹಣ್ಣು ಗಳ ಸಿಪ್ಪೆ ತೆಗೆದು, ಅರೆಯುವ ಕಲ್ಲಿಗೆ ಹಾಕಿ, ತಿರುಗಿಸಿ, ರಸಮಾಡಿ, ಒಂದು ಗೆರಸಿಯ ಮೇಲೆ ಸುರಿದು, ಒಣಗಿಸುವುದು ಅಕ್ಕ, ತಂಗಿ, ಅಮ್ಮನ ಕೆಲಸ. ಈ ರೀತಿ ಆರೆಂಟು ದಿನ ರಸವನ್ನು ತೆಗೆದು, ಅದೇ ಗೆರಸಿಗೆ ಸುರಿದು, ಚೆನ್ನಾಗಿ ಒಣಗಿಸಿಟ್ಟರೆ, ‘ಹಣ್ ಚಟ್’ ಸಿದ್ಧ. ಮಳೆಗಾಲದಲ್ಲಿ ರುಚಿರುಚಿ ಯಾಗಿ ತಿನ್ನಲು, ಗೊಜ್ಜು, ಚಟ್ನಿ ಮಾಡಲು ಅನುಕೂಲ. ಹಳ್ಳಿಗಳು ನಗರೀಕರಣ ಗೊಳ್ಳುತ್ತಾ ಸಾಗಿದಂತೆ, ಕಳೆದು ಹೋಗುತ್ತಿರುವ ಅಮೂಲ್ಯ ವಸ್ತುಗಳಲ್ಲಿ ಈ ‘ಹಣ್‌ಚಟ್’ ಕುಡಾ ಒಂದು.

ನಾಯಿ ಭಟ್ಕಳ!

ಈಗ ನಮ್ಮೂರಲ್ಲಿ ಅಷ್ಟೊಂದು ಸಂಖ್ಯೆಯ ಬೃಹದಾಕಾರದ ಕಾಟು ಮಾವಿನ ಮರಗಳಿಲ್ಲ; ಒಂದೊಂದು ಮರದ ಹಣ್ಣೂ ಒಂದೊಂದು ರುಚಿ; ಕೆಲವು ಮರಗಳ ಹಣ್ಣುಗಳು ರುಚಿ ಥೇಟ್ ರಸಪೂರಿಯದು. ಆದರೆ ಗಾತ್ರ ಮಾತ್ರ ಚಿಕ್ಕದು. ಈ ಕಾಟು ಮಾವಿನ ತಳಿಗಳಲ್ಲೇ, ಮಧ್ಯಮ ಗಾತ್ರದ ಕಾಯಿ ಬಿಡುವ ಕೆಲವು ಮರಗಳಿದ್ದವು. ಇಂತಹ ಮಾವನ್ನು ‘ನಾಯಿ ಭಟ್ಕಳ’ ಎಂದೂ ಕರೆಯುವು ದುಂಟು. ತುಸು ದೊಡ್ಡ ಗಾತ್ರದ ಈ ಕಾಯಿಗಳನ್ನು ಉಪ್ಪುನೀರಿಗೆ ಹಾಕಿಟ್ಟರೆ, ನಾಲ್ಕಾರು ತಿಂಗಳು ಗಳ ನಂತರ, ಅದರಿಂದ ಮಾವಿನ ಕಾಯಿಯ ಚಟ್ನಿ ಮಾಡಬಹುದು!

ಸೀಸನ್ ಮುಗಿದ ನಂತರವೂ ಮಾವಿನ ಕಾಯಿಯ ಚಟ್ನಿ ಬೇಕೆಂದರೆ, ‘ನೀರಿಗೆ ಹಾಕಿದ ಮಾವಿನ ಕಾಯಿ’ ಸೂಕ್ತ. ನಮ್ಮ ಮನೆಯಿಂದ ಒಂದು ಫರ‍್ಲಾಂಗ್ ದೂರದಲ್ಲಿರುವ ಹಕ್ಕಲಿನಲ್ಲಿ ಹಲವು ಬಗೆಯ ಬಹೂಪಯೋಗಿ ಮರಗಳಿವೆ. ಅವುಗಳಲ್ಲಿ ಹೆಚ್ಚು ವಾಣಿಜ್ಯಕ ಪ್ರಾಮುಖ್ಯತೆ ಇರುವುದು ಗೋಡಂಬಿ ಮರಗಳಿವೆ. ನಮ್ಮವರು ಅದನ್ನು ‘ಗೋಯ್ ಮರ’ ಎಂದೇ ಕರೆಯುವುದು: ಗೋವೆಯ ಪ್ರದೇಶದಿಂದ ಆಮದಾದ ಮರ ಎಂಬ ಹಿನ್ನೆಲೆಯಲ್ಲಿ. ಜತೆಗೆ ಗೇರು ಮರ ಎಂದೂ ಹೇಳುವು ದುಂಟು.

‘ಗೇರು’ ಎಂಬ ಇನ್ನೊಂದು ಮರದ ಹೋಲಿಕೆ ಇದಕ್ಕೆ ಇರುವುದರಿಂದಾಗಿ ಆ ಹೆಸರು. ಗೋಯ್ ಮರಗಳಿಗೆ ವಿಶೇಷ ಆರೈಕೆ ಬೇಡ; ನೀರಿನಾಶ್ರಯ ಇಲ್ಲದ ಗುಡ್ಡದ ಪ್ರದೇಶದಲ್ಲೂ ಸೊಂಪಾಗಿ ಬೆಳೆಯಬಲ್ಲದು. ಅದರಲ್ಲಿ ಬಣ್ಣ ಬಣ್ಣದ ಹಣ್ಣು, ಅದರ ತುದಿಯಲ್ಲಿ ಬೀಜ; ಈ ಬೀಜದ ತಿರುಳೇ ಗೋಡಂಬಿ. ಬಣ್ಣದ ಹಣ್ಣು ಮಕ್ಕಳಿಗೆ ತಿನ್ನಲು ಮಾತ್ರ ಉಪಯೋಗ; ಕೊಯ್ದು ಅರ್ಧ ದಿನದಲ್ಲೇ ಹುಳಿ ಬರುವುದರಿಂದ, ಹಣ್ಣುಗಳ ಸಾಲಿನಲ್ಲಿ ಗೋಡಂಬಿ ಹಣ್ಣು ನಿಲ್ಲಲಾರದು. ತುಸು ಒಗರು, ತುಸು ಸಿಹಿ.

ಪ್ರಭುತ್ವದ ಮಧ್ಯಪ್ರವೇಶ!

ಸ್ವತಂತ್ರ ಪೂರ್ವದ ದಿನಗಳಲ್ಲಿ ಗೋಯ್ ಹಣ್ಣನ್ನು ಕೊಳೆಯಿಸಿ, ಅದಕ್ಕೆ ಬೆಲ್ಲದ ವೇಸ್ಟ್ ಸೇರಿಸಿ ಸಾರಾಯಿಯನ್ನು ನಮ್ಮ ಹಳ್ಳಿಯಲ್ಲೇ ಅಲ್ಲಲ್ಲಿ ತಯಾರಿಸುತ್ತಿದ್ದರಂತೆ. ಈ ಸ್ಥಳೀಯ ಸಾರಾಯಿಗೆ ‘ಕಿಕ್’ ಬರಲೆಂದು, ಭಟ್ಟಿ ಇಳಿಸುವ ಮೊದಲೇ ಅದಕ್ಕೆ ಕೋಳಿ ಹೇಲು, ಬ್ಯಾಟರಿ ಶೆಲ್ ಪುಡಿ ಸೇರಿಸು ತ್ತಿದ್ದರು ಎಂದೂ ಹೇಳುತ್ತಿದ್ದರು. ಆದರೆ, ಸಾರಾಯಿಯನ್ನು ತಯಾರಿಸಿ, ಮಾರಿ, ಅದರಿಂದ ಲಾಭ ಪಡೆಯುವ ಹಕ್ಕು ತನಗೆ ಮಾತ್ರ ಎಂದು ಪ್ರಭುತ್ವ ಸಾರಿದ ನಂತರ, ಅದಕ್ಕಾಗಿ ಬಿಗಿ ಕಾನೂನು ಮಾಡಿದ ನಂತರ, ಆ ರೀತಿ ಹಳ್ಳಿಗಳಲ್ಲಿ ಗೋಯ್ ಹಣ್ಣನಿಂದ ಸ್ಥಳೀಯರೇ ಸಾರಾಯಿಯನ್ನು ಭಟ್ಟಿ ಇಳಿಸುದುವು ಕಾನೂನು ಬಾಹಿರ ಚಟುವಟಿಕೆ ಎಂದಾಯಿತು!

ಸ್ಥಳೀಯ ವಸ್ತುಗಳನ್ನು ಬಳಸಿ, ಸ್ಥಳೀಯರೇ ಭಟ್ಟಿ ಇಳಿಸುವ ಕ್ರಿಯೆಯನ್ನು ಕಳ್ಳಭಟ್ಟಿ ಎಂದು ಕರೆಯಲಾಯಿತು. ಸಹಜವಾಗಿ, ನಿಧಾನವಾಗಿ ಆ ಚಟುವಟಿಕೆ ನಿಂತು ಹೋಯಿತು.

ನಮ್ಮ ಹಕ್ಕಲಿನಲ್ಲಿದ್ದ ಆರೆಂಟು ಗೋಡಂಬಿ ಮರಗಳಿಂದ ಪ್ರತಿ ಬೇಸಗೆಯಲ್ಲಿ ಸಾಕಷ್ಟು ಬೀಜಗಳು ಸಿಗುತ್ತಿದ್ದವು. ಅವುಗಳ ಹಸಿ ಬೀಜದ ತಿರುಳಿನ ಪಲ್ಯ, ನಿಜಕ್ಕೂ ಬಲುರುಚಿ. ಒಣಗಿಸಿದ ಗೋಡಂಬಿ ಬೀಜವನ್ನು ಮನೆಯ ಬಳಿಯೇ ಸುಟ್ಟು, ತಿರುಳನ್ನು ಬೇರ್ಪಡಿಸಿ, ಬಿಸಿಬಿಸಿ ಇರುವಾಗಲೇ ತಿಂದರೆ ಬಲುರುಚಿ!

ಪಿತ್ತದೋಷಕ್ಕೆ ಪರಿಹಾರ

ಆ ಹಕ್ಕಲಿನಲ್ಲಿದ್ದ ಆರೆಂಟು ಗೋಡಂಬಿ ಮರಗಳಿಂದ ತುಸು ದೂರದಲ್ಲಿ ಎರಡು ‘ಮುರಿನ ಮರ’ಗಳಿದ್ದವು (ಗಾರ್ಸೀನಿಯಾ ಇಂಡಿಕಾ). ಮುರಿನ ಹಣ್ಣು ಎಂದರೆ ಕೋಕಂ ಹಣ್ಣು. ಆ ಹಣ್ಣಿನ ತಿರುಳು ಹುಳಿ ಮಿಶ್ರಿತ ಸಿಹಿ. ಹಣ್ಣಿನ ಕೆಂಪನೆಯ ಸಿಪ್ಪೆಯನ್ನು ಒಣಗಿಸಿಟ್ಟರೆ, ಬಹುಕಾಲ ಬಾಳಿಕೆ ಬರುತ್ರದೆ; ಅದರಿಂದ ತಿಳಿಸಾರು ಮಾಡಬಹುದು; ಕೋಕಂ ಜ್ಯೂಸ್ ಸಹ ಮಾಡಬಹುದು. ಪಿತ್ತದ ಸಮಸ್ಯೆ ಇರುವವರು, ಮುರಿನ ಹಣ್ಣಿನ ಸಿಪ್ಪೆಯ ಸಾರನ್ನು ಸೇವಿಸಿದರೆ ಉತ್ತಮ ಎಂಬ ನಂಬಿಕೆ ನಮ್ಮೂರಲ್ಲಿದೆ.

ನಮ್ಮ ಮನೆಯಂಗಳದ ಅಂಚಿನಲ್ಲೇ ಬೆಳೆದಿದ್ದ ಬೃಹದಾಕಾರದ ಇನ್ನೊಂದು ಮರದ ಕುರಿತು ಹೇಳಲೇಬೇಕು - ಅದೇ ಅಮಟೆ ಮರ. ಎಷ್ಟು ವರ್ಷಗಳಿಂದ ಅದು ಬೆಳೆದಿತ್ತೋ ಅರಿಯೆ - ಪಕ್ಕದಲ್ಲಿದ್ದ ಇನ್ನೊಂದು ಬೃಹದಾಕಾರದ ಬಾಗಾಳು ಹೂವಿನ ಮರ (ರಂಜ, ಬಕುಳ)ಕ್ಕೆ ಸ್ಪರ್ಧೆ ನೀಡುವಂತೆ ಬೆಳೆದುಕೊಂಡಿತ್ತು, ಆ ಅಮಟೇ ಮರ. ಪ್ರತಿವರ್ಷ ಅದು ನೀಡುತ್ತಿದ್ದ ಸಾವಿರಾರು ಅಮಟೆ ಕಾಯಿಗಳು ಬಹೂಪಯೋಗಿ; ಎಳೆಯ ಅಮಟೆ ಕಾಯಿಗಳಿಗೆ ಹುಳಿರುಚಿ; ಅದನ್ನು ಉಪ್ಪಿನ ಕಾಯಿ ಮಾಡಬಹುದು. ಕಾಯಿ ಬಲಿತ ನಂತರ, ಒಳಗಿನ ಓಟೆ ಬಿರುಸಾಗುತ್ತದೆ - ಮಾವಿನ ಕಾಯಿಯ ರೀತಿ.

ಆಗ, ಅವುಗಳನ್ನು ಕತ್ತರಿಸಿ, ತೊಗಟೆ ಬೇರ್ಪಡಿಸಿ, ಉಪ್ಪಿನಕಾಯಿ ತಯಾರಿಸುವರು. ಹಿಂಡಿಗೊಜ್ಜು ಎಂಬ ವ್ಯಂಜನವನ್ನೂ ಅಮಟೆಕಾಯಿಯಿಂದ ತಯಾರಿಸಬಹುದು. ಮಳೆಗಾಲದಲ್ಲಿ ತಯಾರಿಸುವ ಹುರುಳಿ ಸಾರಿಗೆ, ಅಮಟೆಕಾಯಿಯನ್ನು ಜಜ್ಜಿ ಹಾಕಿದರೆ, ಸಾರಿನ ರುಚಿಯು ಒಂದು ಹಂತ ಮೇಲೇರುತ್ತದೆ. ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಬೆಂಡೆಕಾಯಿಯ ಹುಳಿಗೂ ಅಮಟೆಕಾಯಿ ಯನ್ನು ಸೇರಿಸಿದರೆ, ಆ ಪದಾರ್ಥದ ರುಚಿ ಹೆಚ್ಚುತ್ತದೆ.

ನಮ್ಮ ಹಳ್ಳಿಯಲ್ಲಿ ಇಂತಹ ಹಲವು ಬಹೂಪಯೋಗಿ ಮರಗಳಿದ್ದವು; ನಮ್ಮ ನಾಡಿನ ಹೆಚ್ಚಿನ ಹಳ್ಳಿಗಳಲ್ಲೂ ಕೆಲವು ವರ್ಷಗಳ ಹಿಂದೆ ಇಂತಹ ಮರ, ಗಿಡ, ಬಳ್ಳಿಗಳಿದ್ದವು. ಈ ಬರಹದಲ್ಲಿ ಹಲವು ಕಡೆ ‘ಬೃಹದಾಕಾರದ ಮರಗಳು’ ಎಂದೇ ಕರೆದಿದ್ದೇನೆ; ಅವು ಬೃಹದಾಕಾರವಾಗಿಯೂ ಇದ್ದವು. ದೂಪದ ಮರ, ಹಲಸಿನ ಮರ, ಹೆಬ್ಬಲಸು, ಮಾವು, ಅಮಟೆ ಮೊದಲಾದವು ಅಂದು ಮನೆಯ ಪಕ್ಕದಲ್ಲೇ ಬಹು ಎತ್ತರ ಬೆಳೆದಿದ್ದವು. ಆದರೆ, ಇಂದು ಅಂತಹ ಬೃಹದಾಕಾರದ ಮರಗಳು ಕಡಿಮೆ; ಅದರಲ್ಲೂ ಮನೆಗಳ ಸುತ್ತಮುತ್ತ ಇನ್ನೂ ಕಡಿಮೆ.

ಮನೆಯ ಅಂದ ದೂರಕ್ಕೆ ಕಾಣಿಸುವುದಿಲ್ಲ ಎಂದು ಮನೆಯ ಹತ್ತಿರದ ಮರಗಳನ್ನು ಕಡಿದು ಹಾಕಿದವರೂ ಉಂಟು. ಜತೆಗೆ, ಮನೆಯ ಕೂಗಳತೆಯಲ್ಲಿದ್ದ ಹಕ್ಕಲು, ಹಾಡಿಗಳಲ್ಲೂ ಇಂದು ಮರಗಳ ಸಂಖ್ಯೆ ಕಡಿಮೆಯಾಗಿದೆ. ಹಕ್ಕಲು, ಹಾಡಿ, ಗುಡ್ಡಗಳು ಕೆಲವು ಕಡೆ ಸೈಟುಗಳಾಗಿ ಮಾರ್ಪ ಟ್ಟಿವೆ; ಇನ್ನು ಕೆಲವು ಕಡೆ, ಅಕೇಶಿಯಾ ಬೆಳೆಸುವ ಪ್ರದೇಶವಾಗಿವೆ; ಬಹುಬೇಗನೆ ಬೆಳೆಯುವ ಸಸ್ಯ ಅಕೇಶಿಯಾ ಎಂದು ಸರಕಾರದ ಇಲಾಖೆಗಳೇ ಪ್ರಚಾರ ಮಾಡಿ, ಅಕೇಶಿಯಾ ಬೆಳೆಯಲು ಕೃಷಿಕರಿಗೆ ಪ್ರೋತ್ಸಾಹ ನೀಡಿದವು.

ಬೃಹತ್ ಕಳೆ ಸ್ವರೂಪದ ಅಕೇಶಿಯಾ ಇಂದು, ನಮ್ಮ ಹಳ್ಳಿಯ ಸುತ್ತಮುತ್ತಲಿನ ಸಹಜ ಕಾಡನ್ನು ನಿಧಾನವಾಗಿ ನುಂಗಿ ಹಾಕುತ್ತಿದೆ - ಪೇಟೆಯಿಂದಲೋ, ದೂರದ ದೇಶದಿಂದಲೋ ಹರಿದು ಬಂದ ಹೆಬ್ಬಾವಿನ ರೀತಿ, ಅಕೇಶಿಯಾವು ನಿಧಾನವಾಗಿ ನಮ್ಮ ಹಳ್ಳಿಯ ಸಹಜ ಸಸ್ಯವೈವಿಧ್ಯವನ್ನು ನುಂಗಿ, ಜೀರ್ಣಿಸಿಕೊಳ್ಳುತ್ತಿದೆ.

ಸಹಜವಾಗಿ ಬೆಳೆಯುವ ವೈವಿಧ್ಯಮಯ ಕಾಡು, ದೂಳನ್ನು ಸಹ ತಡೆಯಬಲ್ಲದು; ಅವುಗಳ ಎಲೆಗಳು ಗಾಳಿಯಲ್ಲಿರುವ ದೂಳನ್ನು ತಡೆದು, ಶುದ್ಧಗಾಳಿಯನ್ನು ನಮಗೆ ಕೊಡುತ್ತವೆ. ಆದ್ದರಿಂದಲೇ, ದೆಹಲಿಯ ಜನರು ಅರಾವಳಿ ಬೆಟ್ಟಗಳನ್ನು ಅಲ್ಲಿನ ಕಾಡನ್ನು ಉಳಿಸುವಂತೆ ಹೋರಾಟ ಆರಂಭಿಸಿದ್ದಾರೆ; ಅಷ್ಟರ ಮಟ್ಟಿಗೆ ತಮ್ಮ ನಗರದ ಗಾಳಿಯನ್ನು ಚೊಕ್ಕಟವಾಗಿಡುವ ಆಸೆ ಅವರದ್ದು. ನಮ್ಮ ಪಶ್ಚಿಮಘಟ್ಟಗಳನ್ನು, ನಮ್ಮ ನಿಮ್ಮ ಊರಿನ ಸನಿಹದಲ್ಲಿರುವ ಕಾಡು ಗಳನ್ನು, ಕುರುಚಲು ಪ್ರದೇಶವನ್ನು ಇದೇ ರೀತಿಯ ಹಲವು ಕಾರಣಗಳಿಗೆ ನಾವು ಉಳಿಸಿಕೊಳ್ಳ ಬೇಕಾಗಿದೆ.

ಈ ಬರಹದಲ್ಲಿ ಬಂದಿರುವ, ನಾನು ಬಾಲ್ಯದಲ್ಲಿ ಕಂಡಿದ್ದ ದೂಪದ ಎಣ್ಣೆ, ದುಗಳುದೂಪದ ರಾಳ, ಹೊನ್ನೆ ಎಣ್ಣೆ ಮೊದಲಾದವುಗಳನ್ನು ಇಂದಿನ ಮಕ್ಕಳಿಗೆ, ಕೇವಲ ಚಿತ್ರದ ಮೂಲಕ ಮಾತ್ರ ತೋರಿಸಲು ಸಾಧ್ಯ. ಮುಂದಿನ ತಲೆಮಾರಿನವರು ಇನ್ನಷ್ಟು ಕಳೆದುಕೊಳ್ಳುತ್ತಿದ್ದಾರೆ; ಇದೇ ರೀತಿ ನಮ್ಮ ಪರಿಸರವನ್ನು ನಾವು ಮರೆತರೆ, ನಿರ್ಲಕ್ಷ್ಯ ಮಾಡಿದರೆ, ಮುಂದಿನ ತಲೆಮಾರಿನವರು ಸಹಜ ಕಾಡನ್ನು ನೋಡಲು ಛಾಯಾಚಿತ್ರ, ವಿಡಿಯೋ ಮತ್ತು ಎಐ ಚಿತ್ರಗಳ ಮೊರೆ ಹೋಗಬೇಕಾ ದೀತು.

(ಪ್ರತಿಕ್ರಿಯಿಸಿ : virama post@gmail.com)