ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Poornima kamalashile Column: ನಮ್ಮ ಹಳ್ಳಿಯ ವೀರ ವನಿತೆ !

ಆಕೆಗೆ ಮಕ್ಕಳ ಡ್ಯಾನ್ಸ್, ಮತ್ತಿನ್ನೇನೊ ನೋಡುವುದಕ್ಕಿಂತ, ಅವರನ್ನು ಸಭೆ ಮೇಲೆ ಕಳುಹಿಸು ವುದೇ ಮಹಾ ಸಂಭ್ರಮ. ಜೊತೆಗೆ ಕೆಲವು ಶಾಲೆಯಲ್ಲಿ, ಅಕಸ್ಮಾತ್ ಆಗಿ ಕೆಲವು ಶಿಕ್ಷಕರ ಕಾಮುಕತನ ಗೊತ್ತಾದರೆ ಆಕೆ ಮಹಾಕಾಳಿಯಾಗಿದ್ದೂ ಇದೆ. ಜೊತೆಗೆ, ನಮ್ಮೂರ ಹೆಣ್ಮಕ್ಕಳಿಗೆಲ್ಲ ಅಂತ ಕಾಮಪಿಪಾಸುಗಳಿಂದ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆಯ ಪಾಠ ಮಾಡಿದ ದಿಟ್ಟ ಹೆಂಗಸಾಕೆ.

ನಮ್ಮ ಹಳ್ಳಿಯ ವೀರ ವನಿತೆ !

-

Ashok Nayak
Ashok Nayak Mar 8, 2026 12:53 PM

ಪೂರ್ಣಿಮಾ ಕಮಲಶಿಲೆ

(ಮಹಿಳಾ ದಿನ ವಿಶೇಷ)

ಮಹಿಳಾ ದಿನದಂದು ಹಲವು ಯಶಸ್ವಿ ಮಹಿಳೆಯರನ್ನು ನೆನಪಿಸಿಕೊಳ್ಳುವು ದುಂಟು. ಗ್ರಾಮೀಣ ಪ್ರದೇಶದಲ್ಲಿ ಅವೆಷ್ಟೋ ಮಹಿಳೆಯರು ತಮ್ಮ ಪಾಡಿಗೆ ತಾವು ಸಾಧನೆ ಮಾಡುತ್ತಾರೆ, ಅನಾಮಿಕ ರಾಗಿ ಸುತ್ತಲಿನ ಸಮಾಜಕ್ಕೆ ತಮ್ಮ ಕೊಡುಗೆ ನೀಡುತ್ತಾರೆ, ತಮ್ಮನ್ನು ನಂಬಿದವರ ರಕ್ಷಣೆ ಮಾಡುತ್ತಾರೆ, ನಿಷ್ಠೆಯಿಂದ ಬದುಕಿಗೆ ಬದ್ಧರಾಗಿ ದುಡಿಯುತ್ತಾರೆ. ಇಡೀ ಹಳ್ಳಿಯ ಹಿತ ಕಾಯುವ, ಯಾರ ಮನೆಗೆ ಬೇಕಾ ದರೂ ಬಂದು ಸಹಾಯ ಮಾಡುವ ಮಹಿಳೆ ಯರು ಇಂದಿಗೂ ಇದ್ದಾರೆ. ಅಂತಹ ಒಬ್ಬ ವೀರ ವನಿತೆಯೊಂದಿಗೆ ಒಡನಾಡಿದವರ ಆಪ್ತ ನೆನಪುಗಳು ಇಲ್ಲಿವೆ.

ಮಹಿಳಾ ದಿನದ ಆಚರಣೆ ಹತ್ತಿರ ಬಂತು ಎಂದರೆ, ನನಗೆ ನಮ್ಮ ಹಳ್ಳಿಯ ಕಲ್ಯಾಣಿಯೆಂಬ ‘ವೀರವನಿತೆ’ಯ ನೆನಪಾಯಿತು. ಅವಳ್ಯಾಕೆ ವೀರ ವನಿತೆ ಎಂದರೆ...ಕಲ್ಯಾಣಿ ನಮ್ಮೂರ ಒಬ್ಬ ಗಟ್ಟಿಗಿತ್ತಿ ಮಹಿಳೆ. ಐದು ಹೆಣ್ಮಕ್ಕಳ ತಾಯಿ. ಇದ್ದದ್ದು ಅಂಗೈ ಅಗಲದ ಐದು ಸೆಂಟ್ಸು ಬರಡು ಭೂಮಿ. ಸಾತ್ವಿಕ ಸ್ವಭಾವದ ಪತಿ. ಪತಿಯದ್ದು ಚೂರು ಪಾರು ದುಡಿಮೆ. ಮನೆ ನಿರ್ವಹಿಸಲು ಅದೆಲ್ಲಿಗೂ ಬಾರದು.

ಜನವರಿಯಿಂದ ಮಾರ್ಚ್ ವರೆಗೆ ನಾಲ್ಕು ಗೇರು (ಗೋಡಂಬಿ) ಮರದ ಫಸಲಾದರೂ ಸಿಕ್ಕೀತು. ಮತ್ತೆ ಇನಿತು ಆದಾಯವಿಲ್ಲ. ಹಟ್ಟಿಯಲ್ಲಿ ನಾಲ್ಕು ಊರು ಗಂಟಿಕರು. ಅವುಗಳಿವೆ ಯಾರದ್ದೋ ತೋಟದ, ಗುಡ್ಡೆಯ ಸೊಪ್ಪು ಹುಲ್ಲು. ವರ್ಷಕ್ಕೆ ಮೂರು ನಾಲ್ಕು ಗಾಡಿ ಗೊಬ್ಬರ ಮಾರಿದರೆ ಸಿಗುವುದವರಿಗೆ ಪುಡಿಕಾಸು.

ಇಷ್ಟೇ ಅವರ ಆದಾಯದ ಮೂಲ.ಕಲ್ಯಾಣಿ ದಿನಕ್ಕೆ ಎರಡಾಳು ಕೆಲಸ ಮಾಡುವ ಎದೆಗಾರಿಕೆಯವಳು. ಮನೆಯ ಅಷ್ಟೂ ಜವಬ್ದಾರಿಯ ಜೊತೆಗೆ ನಮ್ಮ ಮನೆಯ ಜವಬ್ದಾರಿ ಯನ್ನು, ಅಪ್ಪಯ್ಯ ಅಮ್ಮ ಪರ ಊರಿಗೆ ಹೋಗುವ ಸಂದರ್ಭ ಬಂದಾಗ, ನಿಭಾಯಿಸಿ ಕೊಟ್ಟವಳು. ನಮ್ಮ ಮನೆಯ ಹಟ್ಟಿ ಚಾಕರಿ, ತೋಟದ ಕೆಲಸದ ಜೊತೆ ಜೊತೆಗೆ ಮನೆಯ ಕಾವಲು ಕಾಯುತ್ತಾ, ಮಕ್ಕಳಾದ ನಮ್ಮಲ್ಲಿ ಗಂಜಿ ಮಾಡಲು ಹೇಳಿ, ಅದನ್ನು ಚಾವಡಿಗೆ ತಂದು ಎಲ್ಲರಿಗೂ ಬಡಿಸಿ, ಮತ್ತೆ ‘ಅಡುಗೆ ಮನೆಯ ಬಾಗಿಲು ಹಾಯ್ಕಂಡ್ ಶಾಲೆಗೆ ಹೊಯ್ನಿ ಮಕ್ಕಳೆ.. ನಾ ಮನೆ ಕಾಯ್ತೆ’ ಎಂದು ಜವಾಬ್ದಾರಿ ಹೊತ್ತ ಮಹಿಳೆ.

ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ದಿನ ಡ್ಯಾನ್ಸ್ ಇದ್ದರೆ.. ಕಲ್ಯಾಣಿ ಆ ದಿನ ಶಾಲೆಯಲ್ಲೂ ಹಾಜರಿರುತ್ತಾಳೆ. ಮಕ್ಕಳಿಗೆಲ್ಲ ಸೀರೆ ಉಡಿಸಿ, ಡ್ರೆಸ್ ಮಾಡಿ, ಸ್ಟೇಜಿಗೆ ದೂಡಿ ಬಿಡುವ ಕೆಲಸದಲ್ಲೂ ಆಕೆ ನಿಸ್ಸೀಮೆ.

ಇದನ್ನೂ ಓದಿ: International WomensDay: ಮಾರ್ಚ್‌ 8 ಮಹಿಳಾ ದಿನಾಚರಣೆ: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಇಲ್ಲಿದೆ

ಆಕೆಗೆ ಮಕ್ಕಳ ಡ್ಯಾನ್ಸ್, ಮತ್ತಿನ್ನೇನೊ ನೋಡುವುದಕ್ಕಿಂತ, ಅವರನ್ನು ಸಭೆ ಮೇಲೆ ಕಳುಹಿಸುವುದೇ ಮಹಾ ಸಂಭ್ರಮ. ಜೊತೆಗೆ ಕೆಲವು ಶಾಲೆಯಲ್ಲಿ, ಅಕಸ್ಮಾತ್ ಆಗಿ ಕೆಲವು ಶಿಕ್ಷಕರ ಕಾಮುಕತನ ಗೊತ್ತಾದರೆ ಆಕೆ ಮಹಾಕಾಳಿಯಾಗಿದ್ದೂ ಇದೆ. ಜೊತೆಗೆ, ನಮ್ಮೂರ ಹೆಣ್ಮಕ್ಕಳಿಗೆಲ್ಲ ಅಂತ ಕಾಮಪಿಪಾಸುಗಳಿಂದ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆಯ ಪಾಠ ಮಾಡಿದ ದಿಟ್ಟ ಹೆಂಗಸಾಕೆ.

ಊರಿನ ದೌಲತ್ತು ತೋರುವ ಸಾಹುಕಾರರ ಜೊತೆಗೆ ಮುಖಕ್ಕೆ ಮುಖ ಕೊಟ್ಟು ಮಾತಾಡುವ ಧೈರ್ಯ ಮತ್ತು ಸಜ್ಜನರ ಮುಂದೆ ಅಷ್ಟೆ ಸೌಜನ್ಯಯುತ ನಡೆ ಇದು ಆಕೆಗೆ ಸಿದ್ಧಿಸಿದ ವರ. ಅವಳಿಗೆ ಗೊತ್ತಿಲ್ಲದ ಕೆಲಸವೆಂಬುದೇ ಇರಲಿಲ್ಲ. ಕಲ್ಯಾಣಿಯು, ಅಗತ್ಯ ಬಿದ್ದಾಗ ಮರ ಹತ್ತಿ ಹಲಸು, ಮಾವು, ಕಾಳುಮೆಣಸು ಕೊಯ್ಯುತ್ತಿದ್ದಳು. ತರತರದ ತರಕಾರಿ ಬೆಳಿಸಿ ಊರಿಗೆಲ್ಲ ಹಂಚುತ್ತಿದ್ದಳು. ಊರಿನ ಹೆಚ್ಚಿನ ಮನೆಯಲ್ಲಿ ಬಾಣಂತಿಯರ ಆರೈಕೆಗೆ ಕಲ್ಯಾಣಿಯೇ ಮುಂದು. ಜೊತೆಗೆ ಬಾಣಂತಿ ಲೇಹ ಚೈ ಮಾಡಲೂ ಅವಳು ಎತ್ತಿದ ಕೈ.

ಸೌದೆಗೆ ಮರ ಕಡಿಯಲು ಗರಗಸ ಹಿಡಿಯಲೂ ಸೈ, ಹೋರಿ ಕಟ್ಟಿ ಹೂಡಲೂ ಸೈ. ಅರ್ಧ ಕ್ವಿಂಟಾಲ್ ಭಾರದ ಅಕ್ಕಿ, ಹಿಂಡಿ ಚೀಲ ಹೊರಲೂ ಸೈ, ಎಂತ ಹರಾಮಿ ದನವಾದರೂ ಮುಗು ದಾರ ಹಾಕಿ, ಅದರ ಹರಾಮಿತನ ನಿಲ್ಲಿಸುವಲ್ಲೂ ನಿಪುಣೆ. ಅಷ್ಟು ಚಾಣಾಕ್ಷೆ ಕಲ್ಯಾಣಿ ತನ್ನ ಜೀವಿತವಿಡೀ ಮರ್ಯಾದೆಯಿಂದ ಘನತೆಯ ಬದುಕು ಬದುಕಿ ತೋರಿಸಿದ್ದ ಲ್ಲದೆ, ತನ್ನ ಐದು ಹೆಣ್ಮಕ್ಕಳನ್ನು ಅದೇ ದಾರಿಯಲ್ಲಿ ಬೆಳೆಸಿ, ಅವರೆಲ್ಲ ಗಂಡನ ಮನೆಯಲ್ಲಿ ಸುಖ ಸಂಸಾರ ನಡೆಸುವುದನ್ನು ನೋಡಿ ತೃಪ್ತಿಯ ಬದುಕು ಕಂಡಿದ್ದಾಳೆ.

Screenshot_6 ಒಕ

ಇಂದಿಗೂ ನಮ್ಮೂರ ದಾರಿಯಲ್ಲಿ ಮಗಳ ಮನೆಗೆ ಬಸ್ಸಿನಲ್ಲಿ ಹೋಗುವಾಗ, ನಮ್ಮೂರಲ್ಲಿ ಇಳಿದು, ನನ್ನನ್ನೊಮ್ಮೆ ಮಾತನಾಡಿಸಿ, ಬೆಳೆದ ತರಕಾರಿ ಇದ್ದರೆ ತಂದಿತ್ತು, ‘ಒಂದ್ ಚಾ ಮಾಡ್ ಪೂಣಿ..ಕುಡ್ಕಂಡ್ ಇನ್ನೊಂದು ಬಸ್ಸಿಗೆ ಮಗಳ ಮನೆಗೆ ಹೋತೆ’ ಎನ್ನುವ ಕಲ್ಯಾಣಿ ಯ ಅಕ್ಕರೆಗೆ ನಾ ಬಾಲ್ಯದಿಂದ ಇಂದಿನವರೆಗೂ ಮೂಕಿ.

ಇಂತಹ ದಿಟ್ಟ ಗ್ರಾಮೀಣ ಮಹಿಳೆ ಕಲ್ಯಾಣಿಗೆ ಅವಳಿ ಜವಳಿ ಮಕ್ಕಳು ಹುಟ್ಟಿದ ಸಮಯ ದಲ್ಲಿ ನನಗಾದ ಒಂದು ಚಂದದ ಅನುಭವ ನಿಮ್ಮ ಬಳಿ ಹೇಳಬೇಕು. ಕಲ್ಯಾಣಿ ಮಕ್ಕಳನ್ನು ಹೆರುವ ದಿನ ಹತ್ತಿರ ಬರುತ್ತಿದ್ದಂತೆ, ನಮ್ಮನೆಗೆ ಬಂದು ಬಾಣಂತಿಗೆ ಮಗುವಿಗೆ ಬೇಕಾದ ಹಳೇ ವಸ್ತ್ರ, ತೊಟ್ಟಿಲು ತೆಗೆದುಕೊಂಡು ಹೋಗುವಾಗ, ಅಪ್ಪಯ್ಯನ ಬಳಿ ‘ಅಯ್ಯಾ ಹಟ್ಟಿಯಂಗೆ ಗೊಬ್ಬರ ತುಂಬಿತ್.

ಗಂಟಿ ಕುತ್ಗಿ ಹಟ್ಟಿ ಹಣೆಗೆ ಹೊಡಿತ್. ನನ್ ಕೈಲಿ ಈ ಸರ್ತಿ ಗೊಬ್ಬರದ ವಿಲೇವಾರಿ ಮಾಡುಕ್ ಆತಿಲ್ಯಾ ಕಾಂತತ್. ಒಡಲೇ ಭಾರ ಆಯ್ತ್ ಕಾಣಿ. ನೀವ್ ಒಂದು ವ್ಯವಸ್ಥೆ ಮಾಡಿರ್ ಆತಿತ್. ಗೊಬ್ಬರ ತಕಂಡ್ ಬನ್ನಿ’ ಎಂದು ಹೇಳಿ ಹೋಗಿದ್ದಳು. ಒಂದೆರಡು ದಿನಗಳಲ್ಲಿ ಕಲ್ಯಾಣಿ ಅವಳಿ ಮಕ್ಕಳನ್ನು ಹಡೆದ ಸುದ್ದಿ ನಮ್ಮನೆ ತಲುಪಿತ್ತು; ಅವಳು ಹೆತ್ತ ನಂತರವೇ ಗೊತ್ತಾದದ್ದು, ಎರಡು ಮಕ್ಕಳು ಎಂದು!

ಅಪ್ಪಯ್ಯನಿಗೆ ವ್ಯಥೆಯಾಯ್ತು. ಆ ಬಸುರಿ ಹೆಂಗಸು ಹೇಳಿದ ಕೆಲ್ಸ ಮಾಡಲಾಗಲಿಲ್ಲವಲ್ಲ ಎಂದು. ಆ ದಿನ ಮಧ್ಯಾಹ್ನವೇ ಎರಡು ಆಳುಗಳನ್ನು ಕರೆದುಕೊಂಡು ಅಪ್ಪಯ್ಯ ಕಲ್ಯಾಣಿ ನಗೆ ಹೊರಟರು. ನಾನು ಅಪ್ಪಯ್ಯನ ಬೆನ್ನು ಹಿಡಿದು ಹೊರಟೆ. ಮುಖ್ಯವಾಗಿ ನನಗೆ ಕಲ್ಯಾಣಿ ಹಡೆದ ಆ ಎರಡು ಪುಟ್ಟ ಕೂಸುಗಳನ್ನು ನೋಡುವ ಹಂಬಲವಿತ್ತು.

ಅಪ್ಪಯ್ಯ ಕಲ್ಯಾಣಿ ಮನೆಯ ಉಣುಗೋಲು ದಾಟಿ ಸೀದಾ ಹಟ್ಟಿಗೆ ಹೋದರು. ಆಳುಗಳ ಜೊತೆಗೆ ತಾವೂ ಗೊಬ್ರದ್ ತೊಡ್ಕು ಹಿಡಿದು ಗೊಬ್ಬರ ತೆಗೆಯಲು ಆರಂಭಿಸಿ, ಗೊಬ್ಬರ ವನ್ನು ಗಾಡಿಗೆ ಲೋಡ್ ಮಾಡಿಸುತ್ತಿದ್ದರು. ನಾನೋ ನಿಧಾನಕ್ಕೆ ಕಲ್ಯಾಣಿಯ ಮನೆಯ ಹಿತ್ಲಕಡಿನ ಬಾಗಿಲಲ್ಲಿ ಒಳಗೆ ಹೋದೆ. ಕಲ್ಯಾಣಿ ಮನೆ ಎಂದರೆ ಒಂದು ರೂಮು, ಒಂದು ಚಾವಡಿ, ಒಂದು ಪುಟ್ಟ ಕತ್ತಲಿನ ಅಡುಗೆ ಕೋಣೆ ಮಾತ್ರ.

ಕಲ್ಯಾಣಿಯ ಹಿರಿ ಮಗಳೇ ಬಾಣಂತನ ಮಾಡುವ ‘ಅಮ್ಮ’. ಆಕೆಗಾಗ ಹತ್ತು ವರ್ಷ ಇರಬಹುದು. ಕಲ್ಯಾಣಿ ಮಲಗಿದ ಕೋಣೆಗೆ ಹೋದೆ. ಅಲ್ಲಿ ನೆಲದ ಮೇಲೆ ಚಾಪೆಯಲ್ಲಿ ಕಲ್ಯಾಣಿ ಮಲಗಿದ್ದಳು. ಮಗ್ಗುಲಲ್ಲಿ ಎರಡು ಪುಟ್ಟ ಮಕ್ಕಳು. ಕಲ್ಯಾಣಿ ನನ್ನನ್ನು ಕಂಡವಳೇ ‘ಏ ಪೂಣ್ಯಾ... ಮನೆ ಒಳ್ಗ್ ಯಾಕ್ ಬಂದೆ ಮಗುವೆ... ಹೆತ್ ಅಮೆ ನಮಗೆ ಮಗುವೆ’ ಎಂದಳು.

‘ಅದೆಲ್ಲಾ ನಂಗೊತ್ತಿಲ್ಲ...ಮಗಿನ್ ಕೊಡ್ ನನ್ನ ಕೈಲಿ’ ಅಂದೆ. ‘ಇತ್ ಬಾ, ಕಾಲ್ನೀಡಿ ಕೂಕೊ, ಮಕ್ಕಳನ್ ಕಾಲ್ ಮೇಲ್ ಹಾಕ್ತೆ’ ಅಂದಳು. ಸರಿ ಎಂದು ಅವಳ ಚಾಪೆಯ ಇನ್ನೊಂದು ಮಗ್ಗುಲಲ್ಲಿ ಕಾಲು ನೀಡಿ ಕುಳಿತೆ. ಕಾಲ ಮೇಲೆ ಮೊದಲೊಂದು ಮಗುವನ್ನು ಮಲಗಿಸಿದಳು ಹಸಿ ಬಾಣಂತಿ ಕಲ್ಯಾಣಿ. ಅದು ಕುಸುಕುಸು ಎಂದದ್ದಷ್ಟೇ ನೆನಪಿದೆ ನನಗೆ. ಆಮೇಲೆ ಆ ಮಗುವನ್ನು ಕೆಳಗೆ ಮಲಗಿಸಿ ಮತ್ತೊಂದು ಮಗುವನ್ನು ಕಾಲ ಮೇಲಿಟ್ಟಳು. ಈ ಮಗು ಕಣ್ಣು ತೆರೆದು ನನ್ನ ಪಿಳಿಪಿಳಿ ನೋಡಿತು.

ಅಷ್ಟರಲ್ಲಿ ಕಲ್ಯಾಣಿ ಅವಳ ಎರಡನೇ ಮಗಳನ್ನು ಬಳಿ ಕರೆದು, ‘ಈ ಪೂಣಿ (ನನ್ನನ್ನು ಅವಳು ಕರೆಯುವುದೇ ಹಾಗೆ ತಾನೆ?) ಮನೆ ಒಳಗೆ ಬಂದ ವಿಚಾರ ಯಾರ ಹತ್ರವೂ ಹೇಳ್ಬೆಡ. ಹಿತ್ಲಕಡಿನ್ ಬಾಗ್ಲಲ್ ಯಾರಿಲ್ದಿರೆ ಇವಳನ್ ಹಟ್ಟಿ ಹತ್ರ ಬಿಟ್ ಬಾ’ ಎಂದಳು ಗಡಿಬಿಡಿ ಯಲ್ಲಿ.

ನಾನಾಗ ಕಲ್ಯಾಣಿಯ ಬಳಿ ‘ನಾ ಚೂರು ಹೊತ್ತು ನಿನ್ನ ಸಂಕ್ತೆ ಕೂಕಂಡ್ ಹೋತೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಮಲಗಿಸುದಿಲ್ಯ?’ ಕೇಳಿದೆ. ಅದಕ್ಕವಳು ‘ಶುದ್ಧ ಆದ್ಮೇಲೆ ತೊಟ್ಲಿಗ್ ಹಾಕುದ್. ನನ್ನ ಹೊಟ್ಟೆಲಿ ಎರಡು ಮಕ್ಕಳಿದ್ದೊ ಅಂದ್ ಮೊದಲೇ ಗೊತ್ತಿರಲಲ್ಲೆ ಪೂಣ್ಯಾ...ಒಂದ್ ನಿಮ್ಮನಿಯಿಂದ ತಂದ ತೊಟ್ಲ್ ಇತ್. ಇನ್ನೊಂದು ತೊಟ್ಲ್ ಆಚಾರ್ ಹತ್ರ ಇನ್ನ್ಯಾರ್ ಮನಿದಾರೂ ತಪ್ಕ್ ಹೇಳ್ಕ್ ಎಂದು, ನೀ ಮನೆಗ್ ಹೋಗ್ ಮರತಿ’ ಎಂದು ನನ್ನ ಕಳುಹಿಸಿದಳು.

ಸಂಜೆಯ ಆ ಮಬ್ಬು ಬೆಳಕಿನಲ್ಲಿ ಕರೆಂಟಿಲ್ಲದ ಆ ಪುಟ್ಟ ಮನೆಯೊಳಗೆ ನಾಲ್ಕಾರು ಜೀವಗಳು ಬದುಕು ಸಾಗಿಸುತ್ತಿರುವುದೇ ನನಗಾಗ ಸೋಜಿಗವಾಗಿತ್ತು. ನನ್ನ ಸಹಪಾಠಿಯು, ತನ್ನ ಅಮ್ಮನಿಗೆ ಬಾಣಂತನ ಮಾಡುತ್ತಾ, ಅಡುಗೆ ಕೆಲಸ, ತಂಗಿಯ ಆರೈಕೆ, ಮನೆಗೆ ನೀರು, ಸೌದೆ ಎಲ್ಲವನ್ನೂ ಹೊಂದಿಸಿಕೊಂಡು ಹೋಗುತ್ತಿದ್ದುದನ್ನು ನೋಡಿ ಬೆರಗಾದ ದಿನವದು.

ಕಲ್ಯಾಣಿಯ ಗಂಡ ಆಚಾರ್ರು ಎಲ್ಲೊ ಉಪ್ಪು ಮೆಣಸಿನ ದುಡಿಮೆಗೆ ಹೋಗಿದ್ದರು. ನಾನು ಹಿತ್ಲಕಡಿಯ ಬಾಗಿಲಿನಿಂದ ಹೊರ ಬರುವಾಗ ಅಪ್ಪಯ್ಯ ಕಂಡರು.

‘ಅಯ್ಯೋ ಸಿಕ್ಕಿಬಿದ್ದೆ. ಇನ್ನು ಹೂಟೆ ಕೋಲು ಹೊಡಿ ಮಾಡ್ತಾರೆ ನಂಗೆ’ ಎಂದುಕೊಂಡು ಬೆವರಿದೆ. ಆದರೆ ಹಾಗಾಗಲಿಲ್ಲ. ನಿಧಾನ ದನಿಯಲ್ಲಿ ‘ಪೂಣಿ’ ಅಂತ ಕರೆದ ಅಪ್ಪಯ್ಯ ‘ಕಲ್ಯಾಣಿ ಹುಶಾರಿದ್ಲಾ?’ ಎಂದು ಕೇಳಿದರು. ‘ಹೌದು’ ಎಂದೆ ತುಸು ಹೆದರುತ್ತಾ. ‘ಆಚಾರ್‌ರ ಹತ್ರ ಕಡೆಗೆ ಮನೆಗ್ ಬಂದ್ ಹೋಪ್ಕ್ ಹೇಳಿ ಬಾ’ ಎಂದರು. ಹೂಂ ಎಂದು ಮತ್ತೆ ಆ ಪುಟ್ಟ ಮನೆಯೊಳಗೆ ಓಡಿ ಹೇಳಿ ಬಂದೆ. ಆಚಾರ್‌ರು ಅಂದರೆ ಕಲ್ಯಾಣಿ ಗಂಡ.

ಮರುದಿನ ಆಚಾರರು ಮನೆಗೆ ಬಂದರು. ಅಮ್ಮ ಅವರಿಗೇನೊ ಬಾಣಂತಿಗೆ ಬೇಕಾದ್ದನ್ನು ಕೊಟ್ಟರು. ಅಪ್ಪಯ್ಯನೂ ಏನೋ ನೀಡಿದರು. ಜೊತೆಗೆ ‘ಇನ್ನೊಂದು ತೊಟ್ಟಿಲು ನಮ್ಮೂರ ದಾಸಜ್ಜಯ್ಯನ ಮನೆಯಲ್ಲಿದೆ, ಹೋಗಿ ತಕಂಡ್ ಬಾ’ ಎಂದರು.

‘ಅಯ್ಯ, ಮತ್ತೊಂದ್ ತೊಟ್ಲ್ ವ್ಯವಸ್ಥೆ ಆಯ್ತ್’ ಎನ್ನುತ್ತಾ ಆಚಾರ್ರು ಮನೆಗೆ ಹೋದರು. ಕಲ್ಯಾಣಿ ವಿಧಿಸಿದ ಷರತ್ತು ಕಲ್ಯಾಣಿಯ ಸಮಯಪ್ರe ಮತ್ತು ಕೆಲಸದ ಬದ್ಧತೆಯ ಕುರಿತು ಒಂದು ವಿಚಾರವನ್ನು ಬರೆಯದೇ ಹೋದರೆ, ಅವಳ ವ್ಯಕ್ತಿ ಪರಿಚಯ ಅಪೂರ್ಣ ವಾಗುತ್ತದೆ. ನಾನಾಗ ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡ್ತಿದ್ದೆ. ನನ್ನ ತಂಗಿಯಂದಿರು ಒಬ್ಬಳು 9, ಇನ್ನೊಬ್ಬಳು, 8ನೇ ತರಗತಿ ಓದುತ್ತಿದ್ದರು. ನಮ್ಮ ಅಪ್ಪಯ್ಯ ಅಮ್ಮ ಒಂದು ವಾರದ ಮಟ್ಟಿಗೆ ಮುಂಬೈಗೆ ಹೋಗಿ ಬರುವ ನಿರ್ಧಾರ ಮಾಡಿ, ಕಲ್ಯಾಣಿಗೆ ಮನೆಯ ಜವಾಬ್ದಾರಿ ಹೊರಿಸಿ, ಹೊರಟರು.

ಆಗ ನಮ್ಮ ಮನೆಯಲ್ಲಿ ಒಂದು ಕೆಂಚು ಬಣ್ಣದ ನಾಯಿ ಇತ್ತು. ಕೆಂಚಾ ಎಂದೇ ಊರಿಡೀ ಹೆಸರು ವಾಸಿಯಾಗಿತ್ತು. ಅಷ್ಟು ಜೋರಿನ ನಾಯಿ. ಮನೆ ಕಾವಲು, ತೋಟದ ಗಸ್ತಿಗೆ ಪಕ್ಕಾ ಹೇಳಿ ಮಾಡಿಸಿದ ಹಳ್ಳಿಗಾಡಿನ ನಾಯಿ ಅದು. ಅದರ ಸ್ವರ ಎಂದರೆ.. ಇಡೀ ಊರಿಗೆ ಕೇಳಬೇಕು ಅಂತ ಘರ್ಜನೆಯ ಧ್ವನಿ. ನಮ್ಮ ಮನೆಗೆ ಯಾರೇ ಬಂದ್ರೂ, ತೋಟ ಗದ್ದೆಯ ಬದಿ ಮನುಷ್ಯರು, ಪ್ರಾಣಿಗಳನ್ನು ಕಂಡಾಗ ಕೆಂಚ ಕೂಗುವ ಧ್ವನಿಯ ಏರಿಳಿತದಲ್ಲೇ ಹೀಗೇನೊ ಆಗಿದೆ ಎಂದು ಕಂಡುಹಿಡಿಯಬಹುದಿತ್ತು.

ಕೆಂಚನಿಗೆ ನಮ್ಮ ಪಕ್ಕದ ತೋಟದ ಕೇರಳಿಗರನ್ನು ನೋಡಿದರೆ ಅಸಾಧಾರಣ ಕೋಪ. ಆ ತೋಟದ ಮಾಲಿಕ ಇಡೀ ದಿನ ಕೋವಿ ಹಿಡಿದು ಊರು ಸುತ್ತುವಾತ. ಅವನ ಶಿಕಾರಿಯ ಹವ್ಯಾಸಕ್ಕೆ ಕೆಂಚನ ಕೂಗು ಅಡ್ಡಿಪಡಿಸುತ್ತದೆ ಎಂದು ಆತನ ಆರೋಪ. ಅವ ಯಾವಾಗಲೂ ನಮ್ಮ ಮನೆಯ ಬಳಿಯ ತೋಟ ಕ್ಕೆ ಬಂದಾಗ, ಭಟ್ರೇ, ಭಟ್ರಾಮ್ಮೆ... ಆನಾಯಿನ ಒಂದು ಕಟ್ಟಿ ಹಾಕುಕಲ್ಲೆ. ನನಗೆ ಶಿಕಾರಿ ಮಾಡಲು ತೊಂದರೆಯಾವುತ್ತಲ್ಲೆ. ಎಂದಾ ರಗಳೆ ಕೆಂಚ ಇವ’ ಎನ್ನುವುದು ಆತನ ಮಾಮೂಲಿ ರಾಗ.

ಅಪ್ಪಯ್ಯ, ಅಮ್ಮ ಮುಂಬೈಗೆ ಹೋಗಿ ಎರಡು ದಿನ ಆಗಿತ್ತು. ಮೂರನೇ ದಿನ ಬೆಳಿಗ್ಗೆ ಕೆಂಚ ಶವವಾಗಿ ನಮ್ಮನೆಯ ತೆಂಗಿನಕಟ್ಟೆಯಲ್ಲಿದ್ದ. ಯಾರೋ ವಿಷ ಹಾಕಿದ ಆಹಾರ ಸೇವಿಸಿ, ನರಳುತ್ತಾ ಬಂದು ನಮ್ಮನೆಯ ಎದುರಿನ ತೆಂಗಿನ ಕಟ್ಟೆಯ ಬಳಿಯ ನೀರು ಹೊಂಡದ ಬಳಿ ಪ್ರಾಣ ಬಿಟ್ಟಿದ್ದ.

ನಾವೆಲ್ಲ ಬೆಳಿಗ್ಗೆ ಎದ್ದು ಅಡುಗೆ ಮಾಡಿ ಉಂಡು, ಬುತ್ತಿ ತೆಗೆದುಕೊಂಡು ಶಾಲೆಗೆ ಹೋಗುವ ಗಡಿಬಿಡಿಯಲ್ಲಿದ್ದೆವು. ಕಲ್ಯಾಣಿ ಬೆಳಿಗ್ಗೆ ಬೇಗ ಎದ್ದವಳು ತೋಟಕ್ಕೆ ಒಂದು ಸುತ್ತು ಸುತ್ತಿ ಬಂದು, ಹಟ್ಟಿ ಕೆಲಸ ಮುಗಿಸಿ, ಹಾಲು ಕರೆದು ಕೊಟ್ಟು ಕಾಯಿಸಲು ಹೇಳಿ, ನಾವು ಶಾಲೆಗೆ ಹೋಗುವ ಮೊದಲು ಅವಳಿಗೂ ಚಾ ಊಟ ಕೊಡಲು ಹೇಳಿದಳು. ಅವಳು ಬೆಳಿಗ್ಗೆ ಎದ್ದು ಮಾತನಾಡುವುದು ಕಡಿಮೆ. ತದೇಕ ಚಿತ್ತದಿಂದ ಬಡಬಡ ಕೆಲಸ ಮಾಡುತ್ತಾ ಸಾಗುತ್ತಾಳೆ. ಅದವಳ ದಿನಚರಿಯ ಗುಟ್ಟು.

ಅವಳಿಗೆ ಊಟ ಬಡಿಸಿ, ಕೆಂಚನಿಗೆ ನೀನೇ ಅನ್ನ ಹಾಕೆಂದು ಅವನ ಪಾಲಿನ ಅನ್ನ ತೆಗೆದಿಟ್ಟು ಅಡುಗೆ ಮನೆ ಬಾಗಿಲು ಹಾಕಿ, ಶಾಲೆಯ ಬ್ಯಾಗ್ ಬೆನ್ನಿಗೇರಿಸುವಾಗ ಕಲ್ಯಾಣಿ.. ಪೂಣ್ಯಾ ಚೂರು ತಡ್ದ್ ಹೋಗ್ ಶಾಲೆಗೆ. ನಾ ಒಂದು ಮುಷ್ಟಿ ಉಂಡ್ಕ ಬತ್ತೆ. ಆ ಮಕ್ಕಳ್ ಹತ್ರ ಮುಂದ್ ಹೋಪ್ಕ್ ಹೇಳ್’ ಎಂದಳು.

‘ಯಾಕೆ?’ ಕೇಳಿದೆ.

‘ಅದೆಲ್ಲಾ ಕಡಿಗ್ ಹೇಳ್ತೆ.. ಈಗ ಆ ಮಕ್ಕಳನ್ ಶಾಲೆಗೆ ಕಳ್ಸ್’ ಎಂದಳು.

ಸರಿ ಎಂದು ತಂಗಿಯಂದಿರನ್ನ ಶಾಲೆಗೆ ಕಳಿಸಿ, ‘ನಾ ಚೂರು ತಡ್ದ್ ಹೊರಟು ಬತ್ತೆ’ ಎಂದು ನಿಂತೆ. ಕಲ್ಯಾಣಿ ಗಂಜಿ ಉಂಡವಳೇ, ಉಂಡ ಜಾಗಕ್ಕೆ ಗೋಮಯ ಸಿಂಪಡಿಸಿ, ಸಾರಿಸಿ, ‘ಇಗಾ ಪೂಣ್ಯಾ.. ಈ ಕೆಂಚನ ಅನ್ನ ತಕಂಡ್ ಹೋಯ್ ದನಿನ್ ಮರ್ಗಿಗ್ ಹಾಕ್. ಕೆಂಚನ್ನ ಯಾರೋ ಕೊಂದ್ ತೆಗದ್ರಲೆ ಪಾಪಿಗಳು’ ಎನ್ನುತ್ತಾ, ಮೂಗಿನ ನೀರು ಒರೆಸಿಕೊಂಡಳು. ನಾನೋ ಕಲ್ಯಾಣಿಯ ಮಾತು ಕೇಳಿ ಕುಸಿದು ಕುಳಿತೆ. ‘ಅಯ್ಯೋ ಎಂತ ಹೇಳ್ತೆ ಕಲ್ಯಾಣಿ ...ಎಂತಾಯ್ತ್ ಕೆಂಚನಿಗೆ?’

‘ಅಗಾ ಪೂಣ್ಯಾ... ಅಲ್ ತೆಂಗಿನ ಮರದ್ ಬುಡ್ದಂಗ್ ಇದ್ದ ಕಾಣ್ ಕೆಂಚ. ಬೆಳ್ಮುಚ್ ಎದ್ದಳೆ ಕಂಡೆ. ನಿಮ್ಗೆಲ್ಲ ಹೇಳುಕ್ ಹೊಯ್ಲಿಲ್ಲ. ಬ್ಯಾಜಾರ್ ಮಾಡ್ಕಂತ್ರಿ ಅಂದೆಳಿ. ಯಾರೋ ವಿಷ ಹಾಕಿ ತೆಗ್ದೆ ಬಿಟ್ರ್ ಅಷ್ಟ್ ಘನಾ ಬುದ್ದಿಯ ನಾಯಿಯನ್ನ. ಅದರ ಋಣ ಮುಗಿತ್. ನಾ ಅಯ್ಯನಿಗೆ ಊರಿಗೆ ಬಂದ್ ಮೇಲೆ ಎಂತ ಉತ್ರ ಹೇಳುದ್ ಹೇಳ್ ಪೂಣ್ಯಾ’ ಎಂದಳು ಹನಿಗಣ್ಣಾಗಿ.

ನನಗೆ ದಿಕ್ಕೇ ತೋಚದಾಯಿತು. ಕೆಂಚನ ಕಳೆಬರ ನೋಡಿ ಬಿಕ್ಕಿ ಬಿಕ್ಕಿ ಅತ್ತೆ. ಕಲ್ಯಾಣಿ ಆಗಲೇ ಹಾರೆ ಪಿಕಾಸಿ ತೆಗೆದುಕೊಂಡು ಬಂದು ಅದೇ ತೆಂಗಿನಮರದ ಕೆಳಗೆ ಗುಂಡಿ ಅಗೆಯಲು ಆರಂಭಿಸಿದಳು.

ನಾನಾಗ ‘ಯಾರಾದರೂ ಗಂಡಸರಿಗೆ ಹೇಳಿ ಕಕಂಡ್ ಬಾ ಮರೆತಿ. ನೀನೇ ಯಾಕೆ ಆ ಕೆಲಸ ಮಾಡುದ್’ ಎಂದೆ, ಅಳುತ್ತಾ.. ‘ನೀ ಒಂದು ಕೆಲ್ಸ ಮಾಡ್ತ್ಯಾ ಪೂಣ್ಯಾ.. ಒಳಗೆ ಎಂತಾರೂ ಚಣ್ ಹೊಸ ವಸ ಇದ್ರೆ ತಂದ್ ಕೊಡ್. ಪಾಣಿ ಪಂಚೆ ಆದರೂ ಅಡ್ಡಿಲ್ಲ. ಇಷ್ಟ್ ನಿಷ್ಟಾವಂತ ನಾಯಿನ್ ಮಣ್ ಮಾಡು ಯೋಗ ನಂದಾಯ್ತಲೆ’ಎಂದು ಮರುಗಿದಳು.

ನನಗೆ ಒಂದು ಕಡೆ ಶಾಲೆಗೆ ಹೋಗುವ ಗಡಿಬಿಡಿ, ಇನ್ನೊಂದು ಕಡೆ ಕೆಂಚನ ಅಗಲಿಕೆಯ ನೋವು. ಹೇಗೋ ಸುಧಾರಿಸಿಕೊಂಡು, ಮನೆಯೊಳಗಿನ ಕಪಾಟಿನಲ್ಲಿದ್ದ ಹೊಸ ಪಾಣಿ ಪಂಚೆಯೊಂದನ್ನು ಆಕೆಗೆ ಹುಡುಕಿ ಕೊಟ್ಟೆ. ಅವಳು ಹೊಂಡ ತೆಗೆದು ಕೆಂಚನನ್ನು ಅದರೊಳಗೆ ಮಲಗಿಸಿ, ಪಾಣಿಪಂಚೆ ಹೊದೆಸಿ, ಒಂದಿಷ್ಟು ಹೂವು ಕೊಯ್ದು ತಂದು ಅರ್ಪಿಸಿ, ಕೆಂಚನನ್ನು ಮಣ್ಣು ಮಾಡಿದಳು. ನಾನು ಅಳುತ್ತಲೇ ಕೂತಿದ್ದೆ. ‘ಪೂಣ್ಯಾ... ಮರ್ಕತ ಕೂತ್ರೆ ಕೆಂಚ ಬತ್ತಿಲ್ಲೆ. ನೀ ಇವತ್ ಶಾಲಿಗ್ ಹೋಪ್ದ್ ಬ್ಯಾಡ. ನಾ ಬೆಳ್ಮುಚ್ಚೆ ಕೆಂಚನ ವಿಷಯ ಹೇಳಿದ್ರೆ ಆ ಮಕ್ಕಳು ಶಾಲಿಗ್ ಹೋತಿರಲ್ಲೆ. ಇಲ್ಲೆ ಮರ್ಕತ ಕೂಕಂತಿದ್ದೊ. ಅದೂ ಅಲ್ದೆ.. ನೀವ್ ಮೂರು ಜನ ಶಾಲೆಯಂಗ್ ಎಲ್ಲರ ಹತ್ರ ನಮ್ಮನಿ ನಾಯಿ ಸತ್ತೊಯ್ತ್ ಅಂದ್ ಹೇಳಿ ಬತ್ತಿದ್ರಿ. ನಿಮ್ ಮನೆಯಂಗೆ ಕೆಂಚ ಇಪ್ಕೊಯ್ ಯಾರ್ ಬಪ್ಕೂ ಹೆದ್ರತಿದ್ರ್.

ಈಗ ಅವ ಇಲ್ಲ ಅಂದ್ ಗೊತ್ತಾರೆ ಮನೆ ಕಾಯುದ್ ಕಷ್ಟ. ಅಯ್ಯ ಊರಂಗಿಲ್ಲ, ಕೆಂಚನೂ ಇಲ್ಲ ಅಂದ್ ಗೊತ್ತಾದರೆ ಜನ ಏನ್ ಬೇಕಾರೂ ಮಾಡ್ ಮಗಾ. ಹಾಂಗಾಯ್ ಅಯ್ಯ ಅಮ್ಮ ಊರಿಗ್ ಬಪ್ಪಲ್ಲಿವರೆಗೆ ಕೆಂಚ ಇಲ್ಲ ಅಂಬ್ ಸುದ್ದಿ ಯಾರತ್ರವೂ ಹೇಳುಕಿಲ್ಲೆ’ ಎಂದು ಷರತ್ತು ವಿಧಿಸಿದಳು. ನಾನು ತಲೆಯಾಡಿಸಿದೆ.

‘ನಾನೇ ಕೆಂಚನ್ನ ಮಣ್ ಪಾಲ್ ಮಾಡಿದ್ ಎಂತಕೆ ಅಂದ್ ಗೊತ್ತಾಯ್ತಾ? ಬೇರೆ ಯಾರನ್ನು ಕರೆದುಕೊಂಡು ಬಂದು ಹೊಂಡ ತೆಗೆದು ಹುಗಿಯಲು ಹೇಳಿದ್ರೆ, ಅವರು ಇಡೀ ಊರಿಗೆ ಕೆಂಚ ಸತ್ತ ಸುದ್ದಿ ಹೇಳ್. ಆಗ ಮನೆ ಕಾಯುದ್ ಹ್ಯಾಂಗೆ?’ ಎಂಬ ಅವಳ ಮಾತನ್ನ ಬಿಟ್ಟ ಬಾಯಿ ಬಿಟ್ಟಂತೆ ಕೇಳುತ್ತಾ, ಆ ದಿನ ಶಾಲೆಯ ಹಾದಿ ತುಳಿಯದೇ ಮನೆಯಲ್ಲೇ ಕೆಂಚನ ನೆನಪಲ್ಲಿ ದಿನ ಕಳೆದೆ.

ಇದು ಕಲ್ಯಾಣಿಯ ಸಮಯಪ್ರಜ್ಞೆ ಮತ್ತು ಕೆಲಸದ ಬದ್ಧತೆ. ಇಂತವರೊಂದಿಗೆ ಬೆಳೆಯಲು ನಮ್ಮ ತಲೆಮಾರು ನಿಜಕ್ಕೂ ಪುಣ್ಯ ಮಾಡಿತ್ತಲ್ಲವೇ? ಕಲ್ಯಾಣಿಯ ಅಂದಿನ ಸ್ಥಿತಿಗತಿಗಳು, ಅವಳ ಧಾರಣ ಶಕ್ತಿಯನ್ನೆಲ್ಲ ಕಂಡು ಬೆಳೆದವಳು ನಾನು. ನಮ್ಮ ಕುಟುಂಬಕ್ಕೆ ಧೈರ್ಯದ ಗೋಲಿಯಾಗಿದ್ದ, ಸಹಾಯ ಸಹಕಾರದ ಗಣಿಯಾಗಿದ್ದ ಆ ಹಿರಿಯಳನ್ನು ಮರೆಯುವು ದಾದರೂ ಹೇಗೆ? ಹೀಗೆ ಊರುರಲ್ಲಿ ನೂರಕ್ಕೆ ಒಬ್ಬಿಬ್ಬರು ಕಲ್ಯಾಣಿಯರಿದ್ದರಲ್ವ? ಮಹಿಳಾ ದಿನಾಚರಣೆಯ ನೆಪದಲ್ಲಿ, ಹೀಗೆ ಊರೂರಿಗೇ ಉಪಕಾರಿಯಾಗಿದ್ದ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕೆಲಸವಾಗಲಿ. ಕಲ್ಯಾಣಿಯಂತವರ ಸಂಖ್ಯೆ ಸಾವಿರವಾಗಲಿ.