ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಿಜಿಟಲ್‌ ಪಾವತಿ ಸರಾಗಗೊಳಿಸಿದ ಯುಪಿಐ

ಭಾರತದಲ್ಲಿ ನಡೆಯುತ್ತಿರುವ ಒಟ್ಟಾರೆ ಡಿಜಿಟಲ್ ಪಾವತಿಯಲ್ಲಿ ‘ಯುಪಿಐ’ನ ಪಾಲು ಶೇ.85ರಷ್ಟು ದೊಡ್ಡ ಪ್ರಮಾಣದ್ದಾಗಿದೆ. ಜನರಿಗೆ ಮತ್ತು ವರ್ತಕರಿಗೆ ನಿತ್ಯದ ವ್ಯಾಪಾರ ವಹಿವಾಟಿನಲ್ಲಿನ ಹಣ ಪಾವತಿಯನ್ನು ‘ಡಿಜಿಟಲ್ ಪಾವತಿ’ ವ್ಯವಸ್ಥೆ ಬಲು ಸರಾಗಗೊಳಿಸಿದೆ. ಅದರಲ್ಲೂ ‘ಯುಪಿಐ’ ಸೌಲಭ್ಯ ಜಾರಿ ಬಳಿಕವಂತೂ ಡಿಜಿಟಲ್ ಪಾವತಿ ವ್ಯವಸ್ಥೆ ಅತ್ಯಂತ ವೇಗಗೊಂಡಿದೆ, ಬಹಳ ವಿಶ್ವಾಸಾರ್ಹ ವೆನಿಸಿದೆ.

ಭಾರತದಲ್ಲಿನ ಡಿಜಿಟಲ್‌ ಪಾವತಿಯಲ್ಲಿ ಯುಪಿಐ ಪಾಲು 85%

-

Ashok Nayak Ashok Nayak Sep 12, 2025 10:24 AM

ಬಿ.ವಿ.ಮಹೇಶ್ ಚಂದ್ರ

‘ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್’ ಅರ್ಥಾತ್ ‘ಯುಪಿಐ’ ವಹಿವಾಟು ಭಾರತದಲ್ಲಿ ಅದೆಷ್ಟು ಜನಪ್ರಿಯವಾಗಿದೆ ಎಂದರೆ ‘ನಗದು ನೋಟು ನೋಡಿಯೇ ಬಹಳ ದಿನಗಳಾಯಿತು’ ಎಂದು ಜನರು ಹೇಳುವಂತಾಗಿದೆ. ಗ್ರಾಮೀಣ ಭಾಗದ ಜನರೂ ‘ಡಿಜಿಟಲ್ ಪಾವತಿ ವ್ಯವಸ್ಥೆ’ಯ ಮೇಲೆ ನಂಬಿಕೆ ಇಡುವಂತಾಗಿದೆ. 1 ರು.ನಷ್ಟು ಸಣ್ಣ ಮೊತ್ತದ ಪಾವತಿಗೂ ಡಿಜಿಟಲ್ ಪಾವತಿ ಅನುಸರಿಸಬಹುದು ಎನ್ನುವಂತಾಗಿದೆ.

ಭಾರತದಲ್ಲಿ ನಡೆಯುತ್ತಿರುವ ಒಟ್ಟಾರೆ ಡಿಜಿಟಲ್ ಪಾವತಿಯಲ್ಲಿ ‘ಯುಪಿಐ’ನ ಪಾಲು ಶೇ.85ರಷ್ಟು ದೊಡ್ಡ ಪ್ರಮಾಣದ್ದಾಗಿದೆ. ಜನರಿಗೆ ಮತ್ತು ವರ್ತಕರಿಗೆ ನಿತ್ಯದ ವ್ಯಾಪಾರ ವಹಿವಾಟಿನಲ್ಲಿನ ಹಣ ಪಾವತಿಯನ್ನು ‘ಡಿಜಿಟಲ್ ಪಾವತಿ’ ವ್ಯವಸ್ಥೆ ಬಲು ಸರಾಗಗೊಳಿಸಿದೆ. ಅದರಲ್ಲೂ ‘ಯುಪಿಐ’ ಸೌಲಭ್ಯ ಜಾರಿ ಬಳಿಕವಂತೂ ಡಿಜಿಟಲ್ ಪಾವತಿ ವ್ಯವಸ್ಥೆ ಅತ್ಯಂತ ವೇಗಗೊಂಡಿದೆ, ಬಹಳ ವಿಶ್ವಾ ಸಾರ್ಹವೆನಿಸಿದೆ. ಕ್ಷಣಮಾತ್ರದಲ್ಲಿಯೇ(ರಿಯಲ್ ಟೈಮ್) ಡಿಜಿಟಲ್ ಪಾವತಿ ನಡೆಯುವಂತೆ ಮಾಡಿದೆ ‘ಯುಪಿಐ’. ಅದುವೇ ಯುಪಿಐನ ಜಾದೂ ಆಗಿದೆ!

ಭಾರತದಲ್ಲಷ್ಟೇ ಅಲ್ಲ, ವಿವಿಧ ದೇಶಗಳಲ್ಲೂ ಭಾರತ ಮೂಲದ ‘ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ’(ಯುಪಿಐ) ಪರಿಚಯವಾಗಿದೆ. ವಿದೇಶಗಳ ಪ್ರಮುಖ ನಾಯಕರೇ ಭಾರತದ ‘ಯುಪಿಐ’ ಪಾವತಿ ವ್ಯವಸ್ಥೆಯ ಸರಳತೆಗೆ ಮಾರುಹೋಗಿದ್ದಾರೆ. ಫ್ರಾನ್ಸ್ ಅಧ್ಯಕ್ಷರು, ಜರ್ಮನಿ ಪ್ರಮುಖರು, ಸಿಂಗಪುರ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ‘ಯುಪಿಐ’ ಪಾವತಿ ವ್ಯವಸ್ಥೆಯನ್ನು ಸ್ವತಃ ಕಂಡು ಅದರ ವೇಗಗತಿ ಪಾವತಿಗೆ ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ: Narendra Modi Column: ವಸುಧೈವ ಕುಟುಂಬಕಂನ ಜ್ವಲಂತ ಉದಾಹರಣೆ ಮೋಹನ್‌ ಭಾಗವತ್‌ಜೀ

ಹಣ ಪಾವತಿಯ ಸರಾಗ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಪರಿಣಾಮವಾಗಿಯೇ ವಿವಿಧ ಏಳು ದೇಶಗಳಲ್ಲಿ ಯುಪಿಐ ವ್ಯವಸ್ಥೆ ಜಾರಿಗೊಳ್ಳುವುದು ಸಾಧ್ಯವಾಗಿದೆ. ಜುಲೈ ತಿಂಗಳಲ್ಲಿ ‘ಯುಪಿಐ’ ವಹಿವಾಟು ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, 1947 ಕೋಟಿಯಷ್ಟಕ್ಕೆ ಮುಟ್ಟಿದೆ. ಅಂದರೆ ಜುಲೈ ತಿಂಗಳಲ್ಲಿ ದೇಶದ ಜನರು 25.08 ಲಕ್ಷ ಕೋಟಿ ರು.ಗಳಷ್ಟು ಖರೀದಿ ಮತ್ತು ಪಾವತಿ ವಹಿವಾಟುಗಳನ್ನು ‘ಯುಪಿಐ’ ಪಾವತಿ ಮಾರ್ಗದಲ್ಲಿಯೇ ನಡೆಸಿದ್ದಾರೆ ಎಂಬುದು ‘ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ’(ಎನ್‌ಪಿಸಿಐ)ದ ದತ್ತಾಂಶದಿಂದ‌ ತಿಳಿದು ಬರುತ್ತದೆ.

ಇದಕ್ಕೂ ಮುನ್ನ ಇದೇ ವರ್ಷದ ಮೇ ತಿಂಗಳಲ್ಲಿ 25.14 ಲಕ್ಷ ಕೋಟಿ ರು.ಗಳಷ್ಟು ಪಾವತಿ ‘ಯುಪಿಐ’ ಮೂಲಕ ನಡೆದಿದ್ದು, ಅದು ಮೊದಲ ದಾಖಲೆಯಾಗಿದೆ. ಆದರೆ, ವಹಿವಾಟು ಸಂಖ್ಯೆ 1867 ಕೋಟಿ ಯಷ್ಟಿತ್ತು. ಹಾಗಾಗಿ, ಜುಲೈ ತಿಂಗಳಲ್ಲಿ ನಡೆದಿರುವ ವಹಿವಾಟೇ ದಾಖಲೆ ಪ್ರಮಾಣದ್ದಾಗಿದೆ.

ಮೊದಲಿಗೆ ಸವಾಲಿನ ರೀತಿ ಕಂಡಿದ್ದ, ಕಠಿಣ ಎನಿಸಿದ್ದ ‘ಡಿಜಿಟಲ್ ಪಾವತಿ’ ಈಗ ದೇಶದ ಜನರಿಗೆ ಸಲೀಸೆನಿಸಿದೆ. ಸಣ್ಣ ಪುಟ್ಟದಕ್ಕೂ ಜನರು ಮೊಬೈಲ್ ಫೋನ್ ಹೊರ ತೆಗೆದು ಕ್ಷಣ ಮಾತ್ರದಲ್ಲಿ ಹಣ ಪಾವತಿ ಮಾಡುವುದನ್ನೇ ರೂಢಿಯಾಗಿಸಿಕೊಂಡಿದ್ದಾರೆ. 5 ರು.ಪಾವತಿ ಮಾಡಬೇಕಿದ್ದರೂ ಡಿಜಿಟಲ್ ಸಿಸ್ಟೆಂಗೇ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಮಾರುಕಟ್ಟೆಯಲ್ಲಿ ನೋಟುಗಳ ಬಳಕೆ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಅತ್ಯಂತ ಕಡಿಮೆ ಇದೆ.

ನಿತ್ಯಬದುಕಿನ ಭಾಗ

ಯುಪಿಐ ಮೂಲಕ ವಹಿವಾಟು ನಡೆಯುತ್ತಿರುವುದರ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಜನರಿಗೆ ಅದು ನಿತ್ಯದ ಬದುಕಿನ ಭಾಗವೇ ಆಗಿಬಿಟ್ಟಿದೆ. ಮೊದಲಿಗೆ ಡಿಜಿಟಲ್ ಪಾವತಿಗೆ ಅಂಜು ತ್ತಿದ್ದ ಗ್ರಾಮೀಣ ಭಾಗದ ಜನರೂ ಈಗ ಯುಪಿಐ ಮೂಲಕ ಹಣ ಪಾವತಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಗ್ರಾಹಕರ ಜತೆ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಪರಿಣಾಮ, ನೋಟು-ನಾಣ್ಯಗಳ ಬಳಕೆ ಬಹಳಷ್ಟು ಕಡಿಮೆಯಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ಈ ಪರಿಯಲ್ಲಿ ಜನಪ್ರಿಯವಾಗುವುದರಲ್ಲಿ ‘ಯುನಿ ಫೈಡ್ ಪೇಮೆಂಟ್ ಇಂಟರ್ ಫೇಸ್’(ಯುಪಿಐ) ಪಾತ್ರ ಬಹಳ ಪ್ರಮುಖವಾಗಿದೆ.

ಯುಪಿಐ ಎಂಬುದು ಒಟ್ಟಾರೆ ಡಿಜಿಟಲ್ ಪಾವತಿ ವ್ಯವಸ್ಥೆಯ ಬೆನ್ನೆಲುಬು ಆಗಿದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿಯೂ ಯುಪಿಐನ ಕೊಡುಗೆ ಗಮನಾರ್ಹವಾಗಿದೆ ಎಂದು ಹಣಕಾಸು ಮಾರುಕಟ್ಟೆ ತಜ್ಞ ದಿಲಿಪ್ ಮೋದಿ ಎಂಬವರು ಹೇಳಿದ್ದಾರೆ.

ವಿದೇಶದಲ್ಲೂ ಜನಪ್ರಿಯ

ಯುಪಿಐ ಪಾವತಿ ವ್ಯವಸ್ಥೆಯನ್ನು ಭಾರತವಷ್ಟೇ ಅಲ್ಲದೇ, ಹಲವಾರು ದೇಶಗಳೂ ಬಹಳವಾಗಿ ಮೆಚ್ಚಿಕೊಂಡು ತಮ್ಮ ದೇಶದಲ್ಲಿಯೂ ಅಳವಡಿಸಿಕೊಂಡಿವೆ. ಅವುಗಳ ಸಾಲಿನಲ್ಲಿ ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ಸಿಂಗಾಪುರ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಸೇರಿವೆ.

ಫ್ರಾನ್ಸ್‌ನಲ್ಲಿ ಯುಪಿಐ ಸಿಸ್ಟೆಂ ಅಳವಡಿಕೆಯು ಯೂರೋಪ್ ಒಕ್ಕೂಟಕ್ಕೆ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಮೊದಲ ಪ್ರವೇಶವಾಗಿದೆ. ಯುಪಿಐ ಪಾವತಿ ವ್ಯವಸ್ಥೆ ವಿದೇಶಗಳಲ್ಲೂ ಲಭ್ಯ ವಾಗಿರುವುದರಿಂದ ಭಾರತದ ಪ್ರವಾಸಿಗರಿಗಂತೂ ಬಹಳ ಅನುಕೂಲವಾಗಿದೆ. ವಿದೇಶ ಪ್ರವಾಸ ಕಾಲದಲ್ಲಿ ಹಣ ಪಾವತಿಯನ್ನು ಭಾರತದ ಪ್ರವಾಸಿಗರಿಗೆ ಸರಳಗೊಳಿಸಿದೆ.

ಆರಂಭದ ಕಷ್ಟ ಈಗಿಲ್ಲ

ಡಿಜಿಟಲ್ ಪಾವತಿ ಕ್ರಮ ದೇಶದಲ್ಲಿ ಮೊದಲಿಗೆ ಶುರುವಾದಾಗ ಪ್ರತಿನಿತ್ಯವೂ ‘ವಹಿವಾಟು ವಿಫಲ’ ವಾಗಿರುವ ಬಗ್ಗೆ ದೂರುಗಳು ಬರುತ್ತಿದ್ದವು. ಡಿಜಿಟಲ್ ಪಾವತಿ ಮಾಡಿದ ವರಿಗೆ ‘ನಿಮ್ಮ ಬ್ಯಾಂಕ್ ಖಾತೆಯಿಂದ ..... ಹಣ ಕಡಿತವಾಗಿದೆ’ ಎಂಬ ಸಂದೇಶ ವೇನೂ (ಎಸ್‌ಎಂಎಸ್) ಮೊಬೈಲ್ ಫೋನ್ ಗೆ ಬಂದಿರುತ್ತಿತ್ತು. ಆದರೆ, ಹಣ ತಲುಪಬೇಕಾದವರ ಖಾತೆಗೆ ಜಮಾ ಆಗಿರುತ್ತಿರಲಿಲ್ಲ. ಮಧ್ಯದಲ್ಲಿ ಯೇ ಡಿಜಿಟಲ್ ವಹಿವಾಟಿನಲ್ಲಿಯೋ, ನೆಟ್‌ವರ್ಕ್ ನಲ್ಲಿಯೋ ಸಮಸ್ಯೆಯಾಗಿ ಹಣ ನಿಗದಿತ ವ್ಯಕ್ತಿ/ ಖಾತೆಗೆ ವರ್ಗಾವಣೆ ಆಗಿರುತ್ತಿರಲಿಲ್ಲ. ಆಗ ಹಣ ಪಾವತಿ ಮಾಡಿದವರು ‘ಡಿಜಿಟಲ್ ಪೇಮೆಂಟ್ ವ್ಯವಸ್ಥೆ’ಯ ನಿರ್ವಾಹಕ ಕಂಪನಿಗೆ ಆನ್‌ಲೈನ್ ಮೂಲಕವೇ ದೂರು ದಾಖಲಿಸಬೇಕಿತ್ತು.

ಕಂಪನಿಯ ಕಾಲ್ ಸೆಂಟರ್‌ನಿಂದಲೋ, ಸ್ವಯಂಚಾಲಿತ ವ್ಯವಸ್ಥೆ ಯಿಂದಲೋ ‘ಅಡಚಣೆಗಾಗಿ ಕ್ಷಮಿಸಿ, ನಿಮ್ಮ ಡಿಜಿಟಲ್ ಪಾವತಿ ಪ್ರಕ್ರಿಯೆ ವಿಫಲವಾಗಿದೆ. ನಿಮ್ಮ ಖಾತೆ ಯಿಂದ ಕಡಿತವಾಗಿರುವ ...... ಮೊತ್ತ 72 ಗಂಟೆಗಳಲ್ಲಿ ಮರಳಿ ನಿಮ್ಮ ಖಾತೆಗೆ ಜಮಾ ಆಗಲಿದೆ’ ಎಂಬ ಉದ್ದದ ಸಂದೇಶ ಬರುವುದು ಸಾಮಾನ್ಯವಾಗಿತ್ತು. ಆ ಬಳಿಕವೂ ಡಿಜಿಟಲ್ ಪಾವತಿ ಮಾಡಿದವರು, 3 ದಿನಗಳವರೆಗೂ ತಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾದ ಮೊತ್ತ ವಾಪಸ್ ಬಂದಿತೇ, ಇಲ್ಲವೇ ಎಂಬುದನ್ನು ಪದೇ ಪದೇ ಪರಿಶೀಲಿಸಬೇಕಾಗಿ ಬರುತ್ತಿತ್ತು.

ಇಂಥ ‘ಪಾವತಿ ವಿಫಲ’ ಎಂಬ ಡಿಜಿಟಲ್ ಪಾವತಿಯ ಸಮಸ್ಯೆಯಿಂದಾಗಿ ದೊಡ್ಡ ಮೊತ್ತವನ್ನು ಪಾವತಿಸಿದವರು, ಹಣ ವರ್ಗಾವಣೆ ಮಾಡಿದವರು ಮೂರು ದಿನಗಳ ಕಾಲವೂ ಆತಂಕದಲ್ಲೇ ಇರಬೇಕಾಗಿ ಬರುತ್ತಿತ್ತು. ಡಿಜಿಟಲ್ ಪಾವತಿ ಬಳಕೆದಾರರಲ್ಲಿ ಕೆಲವರಾದರೂ ಹೀಗೆ ಪಾವತಿ ವಿಫಲ ವಾದ ಸಂದರ್ಭಗಳಲ್ಲಿ ಕೆಲವೊಮ್ಮೆ ನಿದ್ರೆ, ನೆಮ್ಮದಿಯನ್ನೂ ಕಳೆದುಕೊಂಡಿರುವ ಉದಾಹರಣೆ ಗಳಿವೆ.

‘ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್’(ಯುಪಿಐ) ಪಾವತಿ ವ್ಯವಸ್ಥೆ ದೇಶದಲ್ಲಿ ಜಾರಿಗೊಂಡ ಬಳಿಕ ಇಂತಹ ‘ಪಾವತಿ ವಿಫಲ’ ಸಮಸ್ಯೆ ಎದುರಾಗುವುದು ತಪ್ಪಿದೆ. ಜನರೂ ಬಹಳ ನಂಬಿಕೆ ಯಿಂದಲೇ ‘ಯುಪಿಐ’ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ಮಾರು ಹೋಗಿದ್ದಾರೆ. ಲಕ್ಷ ರು. ಮೊತ್ತವನ್ನೂ ಡಿಜಿಟಲ್ ಪಾವತಿ ಮೂಲಕವೇ ಮಾಡುವಷ್ಟು ‘ಯುಪಿಐ’ ವ್ಯವಸ್ಥೆಯ ಬಗೆಗೆ ದೃಢ ನಂಬಿಕೆ ಇಟ್ಟಿದ್ದಾರೆ.

ಬ್ಯಾಂಕ್‌ಗಳೂ ನಿರಾಳ

ಬಳಕೆದಾರರಿಗಷ್ಟೇ ಅಲ್ಲ, ‘ಯುಪಿಐ’ ವ್ಯವಸ್ಥೆ ಜಾರಿಗೆ ಬಂದಾಗಿನಿಂದ, ಅದರ ಬಳಕೆ ಹೆಚ್ಚಿದಾಗಿ ನಿಂದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿನ ಸೇವಾದಾರ ಸಂಸ್ಥೆಗಳಿಗೂ, ಬ್ಯಾಂಕ್‌ಗಳಿಗೂ ಒತ್ತಡ, ಆತಂಕ ತಪ್ಪಿದೆ. ದೂರುಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿವೆ. ಡಿಜಿಟಲ್ ಹಣ ಪಾವತಿ ಅತ್ಯಂತ ಸುರಕ್ಷಿತ ಎನಿಸಿದೆ. ಸರಳ ಅಷ್ಟೇ ಸರಾಗ ಎನಿಸಿದೆ. ಹಾಗಾಗಿ ಯುಪಿಐ ವ್ಯವಸ್ಥೆ ಯನ್ನು ಆಧರಿಸಿರುವ ಬ್ಯಾಂಕಿಂಗ್ ವ್ಯವಸ್ಥೆ, ಸೇವಾ ಸಂಸ್ಥೆಗಳು ಈಗ ಬಹಳ ನಿರಾಳವಾಗಿವೆ. ಇದೇ ಕಾರಣ ದಿಂದಾಗಿ ಯುಪಿಐ ಬಳಕೆದಾರರಿಗೂ ಸೇವಾ ಸಂಸ್ಥೆಗಳು ಹಲವು ಅನುಕೂಲಗಳನ್ನು ಈಗ ಹೊಸದಾಗಿ ಪರಿಚಯಿಸುತ್ತಿವೆ.

ಜೂನ್‌ನಲ್ಲಿ ವಹಿವಾಟು ಇಳಿಕೆ

2025 ರ ಜೂನ್‌ನಲ್ಲಿನ ನಡೆದ ‘ಯುಪಿಐ’ ಪಾವತಿ ವಹಿವಾಟು ಮೇ ತಿಂಗಳಿನಲ್ಲಿ ನಡೆದಿದ್ದ ಕ್ಕಿಂತಲೂ ಕಡಿಮೆ ಪ್ರಮಾಣವಾಗಿದೆ. ಜೂನ್‌ನಲ್ಲಿ 1839 ಕೋಟಿಯಷ್ಟು ಯುಪಿಐ ವಹಿವಾಟು ನಡೆದಿದೆ. ಹೀಗೆ ಡಿಜಿಟಲ್ ಮಾರ್ಗದಲ್ಲಿ ಪಾವತಿಯಾದ ಮೊತ್ತದ ಪ್ರಮಾಣ 25.08 ಲಕ್ಷ ಕೋಟಿ ರು.ಗಳಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ, ಅಂದರೆ, 2024ರ ಜೂನ್‌ನಲ್ಲಿ ಯುಪಿಐ ವಹಿವಾಟು ಮೊತ್ತ 20.64 ಲಕ್ಷ ಕೋಟಿ ರು. ಗಳಷ್ಟಾಗಿತ್ತು. ಆ ಲೆಕ್ಕದಲ್ಲಿ ಒಂದು ವರ್ಷದ ಅಂತರ ದಲ್ಲಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿನ ವಹಿವಾಟು ಮೊತ್ತದಲ್ಲಿ 4.40 ಲಕ್ಷ ಕೋಟಿ ರು.ಗಳಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಅಂದರೆ, ಡಿಜಿಟಲ್ ಪಾವತಿಯ ಪ್ರಮಾಣದಲ್ಲಿ ವರ್ಷ ದಿಂದ ವರ್ಷಕ್ಕೆ ಶೇ.21ರಷ್ಟು ಹೆಚ್ಚಳ ಕಂಡುಬಂದಂತಾಗಿದೆ.

ಭಿಕ್ಷುಕರ ಬಳಿಯೂ..

ಡಿಜಿಟಲ್ ಪಾವತಿ ವ್ಯವಸ್ಥೆ ಮೊದಲಿಗೆ ಪರಿಚಯವಾದಾಗ ದೊಡ್ಡ ದೊಡ್ಡ ಷಾಪಿಂಗ್ ಮಾಲ್ ಗಳಲ್ಲಷ್ಟೇ ಕಾಣಬಂದಿತು. ನಂತರದಲ್ಲಿ ಮೆಡಿಕಲ್ ಸ್ಟೋರ್, ದಿನಸಿ ಅಂಗಡಿಗಳವರೂ ಬಳಸಲಾ ರಂಭಿಸಿದರು. ಈಗ ರಸ್ತೆ ಬದಿ ತರಕಾರಿ ಮಾರಾಟಗಾರರು, ತಳ್ಳುಗಾಡಿ ವ್ಯಾಪಾರಿಗಳೂ ಕ್ಯೂಆರ್ ಕೋಡ್ ಇಟ್ಟುಕೊಂಡಿದ್ದಾರೆ. ಅಷ್ಟೇ ಏಕೆ, ಟ್ರಾಫಿಕ್ ಸಿಗ್ನಲ್ ಗಳಲ್ಲಿ, ರೈಲುಗಳಲ್ಲಿ ಎದುರಾಗುವ ಭಿಕ್ಷುಕರ ಬಳಿಯೂ ಕ್ಯೂಆರ್ ಕೋಡ್‌ನ ಚಿಕ್ಕ ಬೋರ್ಡ್ ಇರುತ್ತದೆ. ಯಾರಾದರೂ ‘ಚಿಲ್ಲರೆ ಇಲ್ಲ’ ಎಂದು ಹೇಳಿದರೆ, ‘ಡಿಜಿಟಲ್ ಪೇ ಮಾಡಬಹುದು ಸಾ’ ಎಂದು ಕ್ಯೂಆರ್ ಕೋಡ್ ಫಲಕವನ್ನು ಕೈಚೀಲದಿಂದ ಹೊರತೆಗೆದು ಹಿಡಿಯುತ್ತಾರೆ. ಅಷ್ಟರ ಮಟ್ಟಿಗೆ ಕ್ಯೂಆರ್ ಕೋರ್ಡ್ ಭಾರತದಲ್ಲಿ ಸರ್ವಾಂತರ್ಯಾಮಿ ಆಗಿಬಿಟ್ಟಿದೆ.

ಆರ್‌ಬಿಐನ ಕೂಸು

‘ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ’(ಎನ್‌ಪಿಸಿಐ) ಭಾರತದಲ್ಲಿನ‌ ಡಿಜಿಟಲ್ ಪಾವತಿ ವ್ಯವಸ್ಥೆಯ ಬೆನ್ನೆಲು ಬಾಗಿದೆ. ಎನ್‌ಪಿಸಿಐ ಎಂಬುದು ‘ಭಾರತೀಯ ರಿಸರ್ವ್ ಬ್ಯಾಂಕ್’ (ಆರ್‌ಬಿಐ) ಮತ್ತು ‘ಭಾರತದ ಬ್ಯಾಂಕ್‌ಗಳ ಸಂಘಟನೆ’(ಐಬಿಎ)ಯ ಜಂಟಿ ಪ್ರಯತ್ನದ ಕೂಸು. ಭಾರತದಲ್ಲಿನ ಹತ್ತಾರು ಬ್ಯಾಂಕ್‌ಗಳ ನಡುವಿನ ಸಂಪರ್ಕ ವನ್ನು (ನೆಟ್ ವರ್ಕ್) ಒಂದೇ ಜಾಲದಲ್ಲಿ ತಂದು ಡಿಜಿಟಲ್ ಪಾವತಿ ವ್ಯವಸ್ಥೆ ಯನ್ನು ಸರಾಗಗೊಳಿಸುವುದಕ್ಕೆ ಸಾಧ್ಯವಾಗಿದ್ದೇ ‘ಎನ್‌ಪಿಸಿಐ’ ರಚನೆಯಿಂದ. ‘ಎನ್‌ಪಿಸಿಐ’ ಭಾರತ ದಲ್ಲಿನ ವಿವಿಧ ಬ್ಯಾಂಕ್ ಗಳ ನಡುವಿನ ಒಟ್ಟಾರೆ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿನ ಹಣದ ವಿನಿಮಯ ವಹಿವಾಟನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿದೆ. ಅಷ್ಟೇ ಸರಾಗವಾಗಿ ಹಾಗೂ ಕ್ಷಿಪ್ರಗತಿಯಲ್ಲಿ ನಡೆಸಿ ಕೊಡುತ್ತಿದೆ.

ಈ ರೀತಿಯಲ್ಲಿ ಹಣದ ವರ್ಗಾವಣೆ ಕ್ಷಿಪ್ರಗತಿಯಲ್ಲಿ ನಡೆಸುವುದಕ್ಕಾಗಿ, ಅದೂ ‘ರಿಯಲ್ ಟ್ರೈಮ್ ಪೇಮೆಂಟ್ಸ್’ ಯಥಾ ರೀತಿ ನಡೆಯುವುದಕ್ಕಾಗಿ ‘ಯುಪಿಐ’ ವ್ಯವಸ್ಥೆಯನ್ನು ‘ಎನ್‌ಪಿಸಿಐ’ ಅವಲಂಬಿ ಸಿದೆ ಎಂಬುದು ಉಲ್ಲೇಖಾರ್ಹ.

ಬ್ಯಾಲೆನ್ಸ್ ಚೆಕ್‌ಗೆ ಮಿತಿ!

ಮೊದಲೆಲ್ಲಾ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿಯಲು ಖಾತೆ ಇರುವ ಬ್ಯಾಂಕ್ ಶಾಖೆಗೇ ಹೋಗಬೇಕಿತ್ತು. ಇಲ್ಲವೇ ಬ್ಯಾಂಕ್‌ನ ಎಟಿಎಂ ಘಟಕಕ್ಕೆ ಡೆಬಿಟ್ ಕಾರ್ಡ್ ಸಮೇತ ತೆರಳಿ ಸಾಲಿನಲ್ಲಿ ನಿಂತು ಪರಿಶೀಲಿಸಬೇಕಿತ್ತು. ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ನಂತರ ಜನರಿಗೆ ಈ ಸಮಸ್ಯೆ ತಪ್ಪಿತು. ತಮ್ಮ ಮೊಬೈಲ್‌ನಲ್ಲಿಯೇ ಎಲ್ಲೆಂದರಲ್ಲಿ, ಯಾವುದೇ ಸಮಯದಲ್ಲಿ (ಅರ್ಧ ರಾತ್ರಿಯಲ್ಲಿ ಕೂಡಾ) ತಮ್ಮ ಬ್ಯಾಂಕ್ ಖಾತೆಯಲ್ಲಿನ ‘ಶಿಲ್ಕು’(ಬ್ಯಾಲೆನ್ಸ್) ಎಷ್ಟಿದೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಯಿತು. ಆದರೆ, ಇದುವರೆಗೂ ಹೀಗೆ ಬ್ಯಾಲೆನ್ಸ್ ಚೆಕ್ ಸೌಲಭ್ಯವನ್ನು ದಿನದಲ್ಲಿ ಅದೆಷ್ಟೇ ಬಾರಿಯಾದರೂ ಬಳಸಬಹುದಾಗಿತ್ತು. ಆದರೆ, ಈಗ ಡಿಜಿಟಲ್ ಪಾವತಿ ಸೇವಾ ಅಪ್ಲಿಕೇಷನ್ ಒದಗಿಸಿರುವ ಸಂಸ್ಥೆಗಳು ಒಂದು ದಿನದಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವ ಅವಕಾಶಕ್ಕೆ ಮಿತಿ ವಿಧಿಸಿವೆ. ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆದಾರರು ಈಗ ದಿನದಲ್ಲಿ 50 ಬಾರಿಯಷ್ಟೇ ತಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ. ಬ್ಯಾಂಕ್‌ನ ಸರ್ವರ್‌ಗಳ ಮೇಲೆ ಹೆಚ್ಚು ಹೊರೆ ಬೀಳುವುದು, ನೆಟ್‌ವರ್ಕ್‌ನ ಮೇಲಿನ ಒತ್ತಡ ಹೆಚ್ಚುವುದನ್ನು ತಪ್ಪಿಸಲೆಂದೇ ಈ ಮಿತಿ ವಿಧಿಸಲಾಗಿದೆ ಎಂದು ಡಿಜಿಟಲ್ ಪಾವತಿ ವ್ಯವಸ್ಥೆಯ ಸೇವಾ ಕಂಪನಿಗಳು ತಿಳಿಸಿವೆ.