Surendra Pai Column: ಸಿಹಿ ಜಡೆ ಈರುಳ್ಳಿ ಬಲ್ಲಿರಾ ?
ಕುಮಟಾ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜಡೆ ಈರುಳ್ಳಿಯ ರಾಶಿಗಳನ್ನು ಇಟ್ಟು ಮಾರಾಟ ಮಾಡುವ ದೃಶ್ಯ ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಈರುಳ್ಳಿಯನ್ನು ಜುಟ್ಟು ಸಮೇತ ಮಣ್ಣಿನಿಂದ ತೆಗೆದು ಅವುಗಳ ಒಣಗಿದ ಎಲೆಗಳನ್ನು ಕೂದಲನ್ನು ಹೆಣೆಯುವ ರೀತಿ ಹೆಣೆದು, ಆ ಜಡೆ ಈರುಳ್ಳಿಯನ್ನು ನೇತು ಹಾಕಿರುತ್ತಾರೆ.


ಸುರೇಂದ್ರ ಪೈ, ಭಟ್ಕಳ
ಜಡೆಯ ರೀತಿ ಸುತ್ತಿ ಶೇಖರಿಸಿಡುವ ಈ ಈರುಳ್ಳಿಯನ್ನು ಹೆಚ್ಚಿದರೆ ಕಣ್ಣಲ್ಲಿ ನೀರು ಬರುವುದಿಲ್ಲ!
ಈರುಳ್ಳಿಯನ್ನು ಅಡುಗೆಗೆ ಬಳಸದೇ ಇರುವವರು ಅಪೂರ್ವ. ಅಡುಗೆ ಮನೆಯಲ್ಲಿ ತರಕಾರಿ ಗಳಿಗಿಂತಲೂ ಹೆಚ್ಚಾಗಿ ಈರುಳ್ಳಿ ಬಳಕೆ ಇದೆ. ಈರುಳ್ಳಿಯು ಕತ್ತರಿಸುವಾಗಲೇ ಕಣ್ಣಲ್ಲಿ ನೀರು ತರಿಸಿ ಬಿಡುತ್ತದೆ. ಆದರೆ ಕಣ್ಣಲ್ಲಿ ನೀರು ತರಿಸದ, ಸ್ವಲ್ಪ ಸಿಹಿ ರುಚಿ ಹೊಂದಿರುವ ಬಗ್ಗೆ ಕೇಳಿದ್ದೀರಾ? ರುಚಿಯಲ್ಲಿ ತುಸು ಸಿಹಿಯಾಗಿಯೂ, ಕತ್ತರಿಸುವಾಗ ಕಣ್ಣಲ್ಲಿ ನೀರು ತರಿಸದ ಈರುಳ್ಳಿಯನ್ನು ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನಲ್ಲಿ ಮತ್ತು ಕರಾವಳಿಯ ಇತರ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಇದನ್ನು ಆ ಭಾಗದಲ್ಲಿ ಜಡೆ ಈರುಳ್ಳಿ, ಪೊತ್ತೆ ಈರುಳ್ಳಿ ಎಂಬುದಾಗಿಯೂ ಕರೆಯುತ್ತಾರೆ.
ಅಷ್ಟೇ ಕುಮಟ ಭಾಗದಲ್ಲಿ ಇದನ್ನು ‘ಕುಮಟ ಈರುಳ್ಳಿ’ ಎಂತಲೂ ಕರೆಯುತ್ತಾರೆ. ಈ ಈರುಳ್ಳಿ ಬೆಳೆಯನ್ನು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಸಮಯದಲ್ಲಿ ಕುಮಟ, ಹಂದಿಗೋಣ, ಗೋಕರ್ಣ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಕೃಷಿಕರು ಬೆಳೆಯುವುದನ್ನು ಕಾಣಬಹುದು.
ಕುಮಟಾ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜಡೆ ಈರುಳ್ಳಿಯ ರಾಶಿಗಳನ್ನು ಇಟ್ಟು ಮಾರಾಟ ಮಾಡುವ ದೃಶ್ಯ ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಈರುಳ್ಳಿಯನ್ನು ಜುಟ್ಟು ಸಮೇತ ಮಣ್ಣಿನಿಂದ ತೆಗೆದು ಅವುಗಳ ಒಣಗಿದ ಎಲೆಗಳನ್ನು ಕೂದಲನ್ನು ಹೆಣೆಯುವ ರೀತಿ ಹೆಣೆದು, ಆ ಜಡೆ ಈರುಳ್ಳಿಯನ್ನು ನೇತು ಹಾಕಿರುತ್ತಾರೆ.
ಇದನ್ನೂ ಓದಿ: Surendra Pai Column: ಓದುಗರ ಮನಗೆದ್ದ ಪುಸ್ತಕ ಸಂತೆಗಳು
ಹಾಗಾಗಿ ಇದು ನೋಡಲು ಜಡೆಯ ರೀತಿಯ ಇರುವುದರಿಂದ ‘ಜಡೆ ಈರುಳ್ಳಿ’ ಎಂದು ಕರೆಯುತ್ತಾರೆ. ಈ ಈರುಳ್ಳಿಯು ರುಚಿಯಲ್ಲಿ ಖಾರದ ಅಂಶ ಕಡಿಮೆ. ಇವು ಬೇಗನೇ ಹಾಳಾಗುವುದಿಲ್ಲ. ಹಾಗೂ ಇದನ್ನು ಕತ್ತರಿಸುವಾಗ ಕಣ್ಣಿನಿಂದ ನೀರು ಬರುವುದಿಲ್ಲ. ಮೊದಲೆಲ್ಲಾ ಇವುಗಳ ಗೊಂಚಲು ಗಳನ್ನು ಅಡುಗೆ ಮನೆಯ ಮೇಲ್ಭಾಗದಲ್ಲಿ ಬಿದಿರಿನ ಗಳಕ್ಕೆ ಕಟ್ಟಿಡುತ್ತಿದ್ದರು. ಆಗ ಕಟ್ಟಿಗೆ ಒಲೆಯನ್ನು ಬಳಸುತ್ತಿದ್ದರಿಂದ ಅಡುಗೆ ಒಲೆಯ ಹೊಗೆಯು ಈರುಳ್ಳಿಯನ್ನು ಇನ್ನಷ್ಟು ದಿನ ಹಾಳಾಗದಂತೆ ಕಾಪಾಡುತ್ತಿತ್ತು.
ಈಗ ಕಟ್ಟಿಗೆ ಒಲೆ ಇಲ್ಲದಿದ್ದರೂ ಸಹ ಮೇಲ್ಚಾವಣಿಯಲ್ಲಿ ಕಟ್ಟಿಡುವುದನ್ನು ಕಾಣಬಹುದು. ಕರಾವಳಿಯ ಭಾಗದಲ್ಲಿ, ಮರಳು ಬೆರೆತ ನೆಲ ಈ ಈರುಳ್ಳಿಗೆ ಪ್ರಶಸ್ತ. ಇದನ್ನು ಕರಾವಳಿಯ ಕೃಷಿಕರು ನೂರಾರು ವರ್ಷಗಳಿಂದ ಬೆಳೆಯುತ್ತಿದ್ದಾರೆ. ಮುಂಗಾರು ಭತ್ತದ ಕೊಯ್ಲು ಮುಗಿದ ತಕ್ಷಣ ರೈತರು ಡಿಸೆಂಬರ್ ವೇಳೆಯಲ್ಲಿ ಈರುಳ್ಳಿ ಬೀಜದ ನಾಟಿ ಮಾಡುತ್ತಾರೆ. ಸಾಮಾನ್ಯವಾಗಿ ಸಾವ ಯುವ ಕೃಷಿ ಪದ್ಧತಿ ಮೂಲಕ ಬೆಳೆಯಲಾಗುತ್ತದೆ.
ನಾಟಿ ಮಾಡಿದ ಮೂರು ತಿಂಗಳಲ್ಲಿ ಈರುಳ್ಳಿ ಕಟಾವಿಗೆ ಬರುತ್ತದೆ. ಆಗ ರೈತರು ಅದನ್ನು ಜುಟ್ಟು ಸಮೇತ ಕೀಳುತ್ತಾರೆ. ನಂತರ ಅವುಗಳನ್ನು ಐದರಿಂದ ಹತ್ತು ಕೆ ಜಿ ತೂಕದ ಒಂದೊಂದೆ ಪೊತ್ತೆ ಗಳನ್ನು ಕಟ್ಟಿ ಮಾರುಕಟ್ಟೆಗೆ ತರುತ್ತಾರೆ. ಸಿಮೀತ ಅವಽಯಲ್ಲಿ ಮಾತ್ರ ಬೆಳೆಯುವ ಬೆಳೆಯಾದ್ದ ರಿಂದ ಇದರ ರುಚಿ ನೋಡಿದವರು ಹಲವು ತಿಂಗಳುಗಳಿಗೆ ಬೇಗಾಗುವಷ್ಟು ಈರುಳ್ಳಿಯನ್ನು, ಒಮ್ಮೆಲೇ ಖರೀದಿ ಮಾಡುತ್ತಾರೆ. ಈ ಸಮಯದಲ್ಲಿ ಕುಮಟಾ ಮತ್ತು ಕರಾವಳಿಯ ಇತರ ಭಾಗಗಳಿಗೆ ಪ್ರವಾಸ ಹೋಗುವಿರಾದರೆ, ಈ ಈರುಳ್ಳಿಯನ್ನು ಖರೀದಿಸಿ, ರುಚಿ ನೋಡಿ. ಅಂದ ಹಾಗೆ, ಮಾಮೂಲಿ ಈರುಳ್ಳಿಗಿಂತ ಇದರ ಬೆಲೆ ಹೆಚ್ಚು!
ಇದೇ ಈರುಳ್ಳಿ ಬೇಕು!
ಕುಮಟಾ, ಅಂಕೋಲಾ ಮೊದಲಾದ ಕರಾವಳಿ ತಾಲೂಕುಗಳಲ್ಲಿ ಬೆಳೆಯುವ ಈ ಈರುಳ್ಳಿಗೆ ರುಚಿ ಜಾಸ್ತಿ; ತುಸು ಸಿಹಿ ಬೆರೆತ ರುಚಿ ಮತ್ತು ಖಾರ ಕಡಿಮೆ; ಜತೆಗೆ, ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದಿಲ್ಲ! ಆದ್ದರಿಂದ, ಈರುಳ್ಳಿ ಹೆಚ್ಚುತ್ತಾ ಅಳುತ್ತಿರುತ್ತಾರೆ ಎಂಬ ನುಡಿಗಟ್ಟು, ಕುಮಟಾ ಈರುಳ್ಳಿಗೆ ಅನ್ವಯವಾಗುವುದಿಲ್ಲ. ಮಾರ್ಚ್ ಎಪ್ರಿಲ್ ತಿಂಗಳುಗಳಲ್ಲಿ, ಕರಾವಳಿಯ ಕುಂದಾಪುರ, ಬೈಂದೂರು ಪ್ರದೇಶಗಳಿಂದ ಹಿಡಿದು ಕುಮಟಾದ ತನಕ ಈ ಈರುಳ್ಳಿಯನ್ನು ಬೆಳೆಯತ್ತಾರೆ. ಉಪ್ಪು ಬೆರೆತ ನೀರನ್ನು ಇದರ ಕೃಷಿಗೆ ಉಪಯೋಗಿಸುವುದು ಪದ್ಧತಿ. ಕೆಲವು ಪ್ರಕಾರದ ಅಡುಗೆಗೆ ಈ ಜಡೆ ಈರುಳ್ಳಿಯೇ ಅಗತ್ಯ ಎಂದು ನಂಬಿದವರು ಕರಾವಳಿಯ ಜನರು!