Prof R G Hegde Column: ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ
ಸುಮಾರಾಗಿ ಮೆರವಣಿಗೆಗಳು ಹೊರಡುವ ಸಮಯ ಸಾಯಂಕಾಲ. ಏಕೆಂದರೆ ಜನ ಮಾರ್ಕೆಟ್ಟಿಗೆ ಬರುವ ಸಮಯ ಅದೇ. ಅಷ್ಟೊಂದು ಖರ್ಚು ಮಾಡಿದ ಮೆರವಣಿಗೆಗಳನ್ನು ನೋಡುವವರು ಬೇಕಲ್ಲ? ಹಾಗೆಂದು ರಸ್ತೆಗಳಲ್ಲಿ ತಯಾರಿ, ಡೆಕೋರೇಶನ್ ಬೆಳಗ್ಗೆಯಿಂದಲೇ ಆರಂಭಗೊಳ್ಳುತ್ತವೆ. ರಸ್ತೆಗಳು ಫುಲ್. ಮುಷ್ಕರಗಳು ನಡೆಯುವುದು ಹಗಲ ಹೊತ್ತು. ಆಮೇಲೆ ಯಾರಾದರೂ ತೀರಿ ಕೊಂಡಿದ್ದರೆ ಆ ಮೆರವಣಿಗೆ ಬರುವುದು ಹಗಲೇ.

-

ಪ್ರೊ.ಆರ್.ಜಿ.ಹೆಗಡೆ
ರಸ್ತೆಗಳು ಇರುವುದು ಸಂಚಾರಕ್ಕಾಗಿ. ಕುತೂಹಲವೆಂದರೆ ಈ ವಿಷಯವೇ ನಮ್ಮ ದೇಶದಲ್ಲಿ ಮರೆತೇ ಹೋಗುತ್ತಿರುವಂತಿದೆ. ಹಬ್ಬ ಹರಿದಿನಗಳು ಈಗಿನಂತೆ ಸಾಲುಸಾಲಾಗಿ ಬಂದರಂತೂ ಮುಗಿದೇ ಹೋಯಿತು! ಜನ ಹೆಚ್ಚು ಕಡಿಮೆ ಊಟ ತಿಂಡಿ ಮಾಡುವುದು ಕೂಡ ರಸ್ತೆಗಳಲ್ಲಿಯೇ. ಉಚಿತ ಸಾರ್ವಜನಿಕ ಅನ್ನದಾನದ ಕಾರ್ಯಕ್ರಮ ಇರುತ್ತದೆ.
ಕೆಲವರಾದರೂ ಅಲ್ಲೇ ಮಲಗುತ್ತಾರೆ ಕೂಡ. ಸಾರ್ವಜನಿಕ ಮೂರ್ತಿಗಳು, ಅಲಕಾರಗಳು ಇತ್ಯಾದಿ ಗಳನ್ನು ಕಾಯಲು. ಅದಿರಲಿ. ನಾನು ಹೆಚ್ಚಿನ ಸಮಯ ಕೆಲಸ ಮಾಡಿದ್ದು ಚಿಕ್ಕ ನಗರವೊಂದರಲ್ಲಿ. ಚಂದದ ನಗರ ಬಿಡಿ ಅದು. ಅದೆಲ್ಲ ವಿಷಯವೇ ಬೇಡ. ಹೇಳಿಕೊಳ್ಳಬೇಕಾದದ್ದೆಂದರೆ ಅಲ್ಲಿ ಇರುವವು ಎರಡೇ ಎರಡು ಮುಖ್ಯ ರಸ್ತೆಗಳು.
ಉಳಿದಂತೆ ಚಿಕ್ಕ ಚಿಕ್ಕ ಒಳರಸ್ತೆಗಳು. ಸುಮಾರಾಗಿ ಎಲ್ಲ ಪಟ್ಟಣಗಳು ಇರುವುದೂ ಹೀಗೆಯೇ ಬಿಡಿ. ಕುತೂಹಲದ ವಿಷಯವೆಂದರೆ ಆ ಚಿಕ್ಕ ನಗರ ಒಂದು ಮಿನಿ ಭಾರತ. ಇಡೀ ದೇಶದಿಂದ ಬಂದ ಜನ ಏನೇನೋ ಕೆಲಸದ ಮೇಲೆ ಅಲ್ಲಿ ಇದ್ದಾರೆ. ಹೆಚ್ಚಾಗಿ ಜನ ಇರುವುದು ಕೆಲವೇ ಕೆಲವು ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಮತ್ತು ಹೆಚ್ಚಿನವರು ಸಾಯಂಕಾಲದ ಹೊತ್ತಿಗೆ ಫ್ರೀ ಆಗುವ ಕೆಲಸ ಮಾಡುವವರು.
ದೇಶದ ಹೆಚ್ಚುಕಡಿಮೆ ಎಲ್ಲ ಸಂಸ್ಕೃತಿಗಳು, ಉಪ ಸಂಸ್ಕೃತಿಗಳು ಅಲ್ಲಿ ಇವೆ. ಆ ಎಲ್ಲಾ ಸಂಸ್ಕೃತಿ ಗಳಿಗೆ, ಉಪಸಂಸ್ಕ್ರತಿಗಳಿಗೆ ತಮ್ಮ ಅಸ್ತಿತ್ವವನ್ನು ಕಾಯ್ದಿಟ್ಟುಕೊಳ್ಳಬೇಕೆಂಬ ತೀವ್ರ ಬಯಕೆ ಇದೆ (ಸಂಖ್ಯೆ ಕಡಿಮೆಯಾದಂತೆ ಜನರಿಗೆ ತಮ್ಮ ತಮ್ಮ ಪ್ರತ್ಯೇಕತೆಯನ್ನು ಕಾಪಿಟ್ಟುಕೊಳ್ಳುವ ತಲಬು ಜಾಸ್ತಿಯಾಗುತ್ತದೆ ). ಹೀಗಾಗಿ ಆ ಸಂಸ್ಕೃತಿಗಳು, ಉಪಸಂಸ್ಕೃತಿಗಳು ತಮ್ಮೆಲ್ಲ ಹಬ್ಬ ಹುಣ್ಣಿಮೆ ಗಳನ್ನು ಶ್ರದ್ಧಾಭಕ್ತಿಯಿಂದ ಸಡಗರದಿಂದ ಆಚರಿಸುತ್ತವೆ. ನಂತರ ರಸ್ತೆಗಿಳಿದು ಅವರವರ ಸಾಂಸ್ಕೃತಿಕ ವಿಧಾನದಂತೆ ಮೆರವಣಿಗೆ ನಡೆಸುತ್ತವೆ.
ಇದನ್ನೂ ಓದಿ: Prof R G Hegde Column: ದೇಶದ ಚರಿತ್ರೆ ಅವರನ್ನು ಆದರದಿಂದ ಕಾಣಲಿದೆ
ಮೆರವಣಿಗೆ ನಡೆಯುವುದು ಅರೆ ವರ್ತುಲಾಕಾರದ ಆಕೃತಿಯಲ್ಲಿ, ಒಂದನ್ನೊಂದು ಕೂಡಿಕೊಳ್ಳುವ ಅವೇ ರಸ್ತೆಗಳಲ್ಲಿ. ಮೆರವಣಿಗೆ ರಸ್ತೆಯ ಈ ತುದಿಯಿಂದ ಹೊರಟು ಸುತ್ತಿಕೊಂಡು ಬಂದು ಒಂದು ಮೈದಾನವನ್ನು ಸೇರುತ್ತದೆ. ಅಲ್ಲಿ ಸಾರ್ವಜನಿಕ ಕಾರ್ಯಕ್ರಮ. ಇದು ಸಾಧಾರಣವಾದ ಮೆರವಣಿಗೆ ಗಳ, ಹಬ್ಬಗಳ ಆಚರಣೆಗಳ ಮಾದರಿ.
ಎಲ್ಲ ಮೆರವಣಿಗೆಗಳಲ್ಲಿ ಹೆಚ್ಚು ಕಡಿಮೆ ಅವರವರ ತಾಖತ್ತನ್ನು ಅವಲಂಬಿಸಿದ ಡಿಜೆಗಳು ಇರು ತ್ತವೆ. ಅವರವರ ಧರ್ಮಕ್ಕೆ, ಹಬ್ಬಕ್ಕೆ ರಾಷ್ಟ್ರೀಯ ದಿನಾಚರಣೆಗಳಿಗೆ ಸಂಬಂಧಪಟ್ಟ ಬಣ್ಣದಲ್ಲಿ ಕಟೌಟ್‌ಗಳು ನಿಂತಿರುತ್ತವೆ. ಪ್ಲಾಸ್ಟಿಕ್ ಹೂವುಗಳು, ಹೂಮಾಲೆಗಳು, ಬಣ್ಣ ರಸ್ತೆಯ ಮೇಲೆ ಹರಡಿರುತ್ತವೆ. ಅವರವರ ತಾಖತ್ತಿಗೆ ತಕ್ಕಂತೆ ಪಟಾಕಿ ಹೊಡೆಯುತ್ತಾರೆ. ಜನ ಸೇರುತ್ತಾರೆ.
ಡಿಜೆ ಆಯಾ ಹಬ್ಬಕ್ಕೆ, ರಾಷ್ಟ್ರೀಯ ಹಬ್ಬಕ್ಕೆ , ಸಾಂಸ್ಕೃತಿಕ ಆಚರಣೆಗೆ ಸಂಬಂಧಿಸಿದ ಹಾಡು ಗಳನ್ನು, ಭಕ್ತಿಗೀತೆಗಳನ್ನು ಸಂಘಟಕರ ಪವರ್‌ಗೆ ಅನುಗುಣವಾಗಿ ಒದರುತ್ತಿರುತ್ತದೆ. ಗಣಪತಿ ಹಬ್ಬವಾದರೆ ಸ್ವಾಗತದಿಂದ ಹಿಡಿದು ವಿಸರ್ಜನೆಯ ತನಕ ಸುಮಾರು ಇಪ್ಪತ್ತು ಇಪ್ಪತ್ತೈದು ದಿನ ಇಂತಹ ಮೆರವಣಿಗೆ ನಿರಂತರವಾಗಿ, ನಿರಾತಂಕವಾಗಿ ನಡೆಯುತ್ತಿರುತ್ತದೆ.
ಸುಮಾರಾಗಿ ಮೆರವಣಿಗೆಗಳು ಹೊರಡುವ ಸಮಯ ಸಾಯಂಕಾಲ. ಏಕೆಂದರೆ ಜನ ಮಾರ್ಕೆಟ್ಟಿಗೆ ಬರುವ ಸಮಯ ಅದೇ. ಅಷ್ಟೊಂದು ಖರ್ಚು ಮಾಡಿದ ಮೆರವಣಿಗೆಗಳನ್ನು ನೋಡುವವರು ಬೇಕಲ್ಲ? ಹಾಗೆಂದು ರಸ್ತೆಗಳಲ್ಲಿ ತಯಾರಿ, ಡೆಕೋರೇಶನ್ ಬೆಳಗ್ಗೆಯಿಂದಲೇ ಆರಂಭಗೊಳ್ಳುತ್ತವೆ. ರಸ್ತೆಗಳು ಫುಲ್. ಮುಷ್ಕರಗಳು ನಡೆಯುವುದು ಹಗಲ ಹೊತ್ತು. ಆಮೇಲೆ ಯಾರಾದರೂ ತೀರಿ ಕೊಂಡಿದ್ದರೆ ಆ ಮೆರವಣಿಗೆ ಬರುವುದು ಹಗಲೇ. ಮತ್ತೆ ಊರಿನಲ್ಲಿ ಏನಾದರೂ ಸಾಧನೆಗಳಿದ್ದರೆ ಉದಾಹರಣೆಗೆ ಎಲ್ಲಿಯೋ ನಡೆದ ಫುಟ್ಬಾಲ್ ಪಂದ್ಯದಲ್ಲಿ ಊರಿನ ಯಾರೋ ಚಾಂಪಿಯನ್ ಆಗಿ ಬಂದಿದ್ದರೆ ಪಟಾಕಿ ಹೊಡೆಯುತ್ತ ಮೆರವಣಿಗೆ ಹೊರಡುವುದು ಈಗಲೇ.
ಆಮೇಲೆ ನವರಾತ್ರಿ ಬರುತ್ತದೆ. ದುರ್ಗಾ ಪೂಜಾ ಕಾರ್ಯಕ್ರಮ ಸಾಯಂಕಾಲ. ಜೋರಾಗಿ ನಡೆಯುತ್ತದೆ. ದುರ್ಗಾ ಪೂಜಾ ಮೆರವಣಿಗೆಯೂ ಹಾಗೆಯೇ ನಡೆಯುತ್ತದೆ. ಅದೇ ರೀತಿ, ರಸ್ತೆಗಳಲ್ಲಿ ಮಧ್ಯದಲ್ಲಿಯೇ ಈದ್ ಇತ್ಯಾದಿ ಹಬ್ಬಗಳು ಬರುತ್ತವೆ. ಅವುಗಳ ಮೆರವಣಿಗೆ ಅದೇ ರಸ್ತೆಗಳಲ್ಲಿಯೇ ಸಾಗಿಬರುತ್ತದೆ. ಆ ಸಮಯದಲ್ಲಿ ರಸ್ತೆಗಳು ಅವಕ್ಕಾಗಿ ಮೀಸಲು.
ಮಧ್ಯದಲ್ಲಿ ಬರುವವು ರಾಷ್ಟ್ರೀಯ ಹಬ್ಬಗಳು. ನಡೆಯುವುದು ಇದೇ ರಸ್ತೆಗಳಲ್ಲಿಯೇ. ಶಾಲೆಗಳ ಮಕ್ಕಳು, ಶಿಕ್ಷಕರು ಬಿಳಿ ಬಟ್ಟೆಗಳಲ್ಲಿ ಈಗ ರಸ್ತೆಗಳಿಗಿಳಿಯುತ್ತಾರೆ.ಅಗಸ್ಟ್ ಹದಿನೈದು, ಜನವರಿ ಇಪ್ಪತ್ತಾರು ಹೀಗೆಯೇ. ಕನ್ನಡ ರಾಜ್ಯೋತ್ಸವ ಬಂದರೆ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಎನ್ನುವ ಹಾಡು ಕನ್ನಡ ನಾಡಿನ ಕುರಿತ ನಮ್ಮ ಶ್ರದ್ಧಾಭಕ್ತಿಯನ್ನು ಸಾರಿ ಹೇಳುತ್ತದೆ.
ಮೆರವಣಿಗೆ, ಡೊಳ್ಳು ಕುಣಿತ, ತಲೆಗೆ ರುಮಾಲು ಕಟ್ಟಿದ ಕನ್ನಡದ ಶಾಲುಧಾರಿಗಳಾದ ಜನ ಇಡೀ ರಸ್ತೆ ತುಂಬ ಸಂಚರಿಸುತ್ತಾರೆ. ಶಿವಾಜಿ ಜಯಂತಿಗೂ ಹಾಗೇ. ಜನ ತುಸು ಬೇರೆ ಅಷ್ಟೇ. ಜನವರಿ ೨೬ರಂದು ಆಕರ್ಷಕ ಕವಾಯತು ನಡೆಯುತ್ತದೆ. ಇದೇ ರಸ್ತೆಗಳಲ್ಲಿ ಮೆರವಣಿಗೆಗಳಲ್ಲಿ ಹೋಗಿ ಧುರೀಣರು ಧ್ವಜವಂದನೆ ಮಾಡಿ ಮಾತನಾಡುತ್ತಾರೆ.
ಸಾಂಸ್ಕೃತಿಕ ಹಬ್ಬ, ಸಾಹಿತ್ಯ ಸಮ್ಮೇಳನಗಳು ಇತ್ಯಾದಿ, ಮೆರವಣಿಗೆಗಳನ್ನು ಇವೇ ರಸ್ತೆಗಳಲ್ಲಿಯೇ ತರುತ್ತವೆ. ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯುವುದು ಇಲ್ಲಿಯೇ. ಹಾಡುಗಳು ಬೇರೆ ಅಷ್ಟೇ. ಎಲ್ಲಾ ಹಾಡುಗಳು ಕುಣಿಯುವ ಲಯ ಹೊಂದಿದವು.
ಹಾಗಾಗಿ ಜನ ಕುಣಿಯಲಾರಂಭಿಸುತ್ತಾರೆ. ಉತ್ಸಾಹ ತಂದುಕೊಳ್ಳಲು ಜನ ತಮಗೆ ಬೇಕಾದ ‘ವ್ಯವಸ್ಥೆ’ ಮಾಡಿಕೊಳ್ಳುತ್ತಾರೆ. ಹೀಗಾಗಿ ಮೆರವಣಿಗೆಗಳಿಗೆ ರಂಗೇರಿ ಬಿಡುತ್ತದೆ. ಈಗ ನೋಡುಗರದೂ ದೊಡ್ಡ ಮೆರವಣಿಗೆಯೇ ನಡೆಯುತ್ತದೆ. ಬಣ್ಣ ಎರಚಾಡುವುದು ಬಣ್ಣದ ಶಾಲು ಧರಿಸುವುದು ಇತ್ಯಾದಿ ಕೂಡ ಮೆರವಣಿಗೆಗೆ ಆಕರ್ಷಣೆಯನ್ನು ತಂದಿಡುತ್ತವೆ.
ಕೆಲವೊಮ್ಮೆ ಸ್ವಾಮೀಜಿಗಳ ಭಾರೀ ಮೆರವಣಿಗೆಗಳು ನಡೆಯುತ್ತವೆ. ಅಡ್ಡಪಲ್ಲಕ್ಕಿ ಮೆರವಣಿಗೆಗಳು ಬರುತ್ತವೆ. ರಸ್ತೆಗಳು ನವವಧುವಿನಂತೆ ಶೃಂಗಾರಗೊಳ್ಳುತ್ತವೆ. ಸ್ವಾಮೀಜಿಗಳು ಎರಡು ಕಡೆ ಕೈಬೀಸಿ ಜನರನ್ನು ಆಶೀರ್ವದಿಸುತ್ತಾ ಮುಂದೆ ಸಾಗುತ್ತಾರೆ. ಪ್ರತಿಯೊಂದು ಸಮುದಾಯವೂ ತನ್ನ ಪ್ರತಿಷ್ಠೆ ಯನ್ನು ತನ್ನ ತಾಕತ್ತನ್ನು ಮೆರವಣಿಗೆಯಲ್ಲಿ ಪ್ರದರ್ಶಿಸುತ್ತದೆ.
ಹಾಗಾಗಿ ಭಾರಿ ಪ್ರಮಾಣದಲ್ಲಿ ಪಟಾಕಿಗಳು ಸುಡಲ್ಪಡುತ್ತವೆ. ಪ್ರಮುಖ ಸಮುದಾಯಗಳ ನಡುವೆ ಸ್ಪರ್ಧೆಯೇ ಏರ್ಪಡುತ್ತದೆ. ದೊಡ್ಡ ಪ್ರಮಾಣದಲ್ಲಿ ಲೈಟಿಂಗ್‌ಗಳು, ಧ್ವನಿವರ್ಧಕಗಳು. ಊರಿನ ಹೆಚ್ಚು ಶ್ರೀಮಂತ ಸಮುದಾಯದವರು ಹೊರಟರೆಂದರೆ ಮೆರವಣಿಗೆ ಒಂದೊಂದು ಹೆಜ್ಜೆ ಸಾಗಲು ಒಂದೊಂದು ತಾಸು ಹಿಡಿಯುತ್ತದೆ ಅವೇ ರಸ್ತೆಗಳಲ್ಲಿ. ಧಾರ್ಮಿಕ ಮುಖಂಡರು ಹೀಗೆ ಇರುವ ಮೆರವಣಿಗೆಗಳಾದರೆ ಫಾರ್ಮಾಟ್ ತುಸು ಬದಲಾಗುತ್ತದೆ.
ತಲೆಯ ಮೇಲೆ ಕಳಶಗಳನ್ನು ಹೊತ್ತ, ಹಣೆಗೆ ಕುಂಕುಮ ಅರಶಿನ ಡಾಳಾಗಿ ಹಾಕಿಕೊಂಡ ಮಹಿಳೆಯರು ಮೆರವಣಿಗೆಯ ಮುಂದೆ ಇರುತ್ತಾರೆ. ಈ ಸಂದರ್ಭದಲ್ಲಿ ಒಂದು ಹಾಸ್ಯ ಪ್ರಸಂಗ ವನ್ನು ನೆನಪಿಸಿಕೊಳ್ಳಬೇಕು. ನಮ್ಮ ರೋಟರಿ ಕ್ಲಬ್ಬಿಗೆ ಅದೇ ಸಂದರ್ಭದಲ್ಲಿ ಒಂದು ಅಮೆರಿಕನ್ ವಿಸಿಟಿಂಗ್ ಟೀಮ್ ಬಂದಿತ್ತು. ಅವರಿಗೆ ಈ ಮೆರವಣಿಗೆಯನ್ನು ನೋಡಿ ಹುಚ್ಚು ಹಿಡಿದು ಹೋಯಿತು. ಎಂತಹ ಭಾರತ! ಎಂಥ ಅದ್ಭುತ ಸಂಸ್ಕೃತಿ! ಎಂದು ಕುಣಿದಾಡಿದರು.
‘ಹೌದು’ ಎಂದು ಹೇಳಿ ನಾನು ಸುಮ್ಮನಾದೆ. ಮಧ್ಯದಲ್ಲಿ ಕೆಲವೊಮ್ಮೆ ಮದುವೆಗಳೂ ಮೆರವಣಿಗೆ ಗಳಲ್ಲಿ ಸಾಗಿ ಬರುತ್ತವೆ. ಅದರಲ್ಲಿ ವರ ಕುದುರೆಯ ಮೇಲೆ ಕುಳಿತುಕೊಂಡು ಹೋಗುವುದು ಇಂಥವುದೆಲ್ಲ ನಡೆಯುತ್ತದೆ. ಮಜವೇ ಮಜ. ಮೆರವಣಿಗೆಯ ತಯಾರಿ ಇಡೀ ದಿನ ನಡೆಯುತ್ತದೆ. ಅದಕ್ಕೆ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ತೋಡಿ ಇತ್ಯಾದಿ ಮಾಡಿ ಡೆಕೋರೇಶನ್ ಮಾಡಬೇಕಾಗುತ್ತದೆ. ಬಾಳೆ ಮರ ನೆಟ್ಟು ಜನ ಸಂಭ್ರಮಿಸುತ್ತಾರೆ. ಭಾರೀ ದೊಡ್ಡ ದೊಡ್ಡ ಪಟಾಕಿ ಹೊಡೆದು ಜನ ಸಂಭ್ರಮಿಸುತ್ತಾರೆ.
ಗಣಪತಿ ಹಬ್ಬ ಮತ್ತು ದೀಪಾವಳಿಗಳಲ್ಲಿ ರಸ್ತೆಗಳು ಪಟಾಕಿ ಹೊಡೆಯುವ ಸ್ಥಳಗಳು. ಸುತ್ತಮುತ್ತಲೂ ಸಾವಿರಾರು ಜನ ನಿಂತು ನೋಡಿ ಸಂಭ್ರಮ ಪಡುತ್ತಾರೆ. ಪ್ರಜಾಪ್ರಭುತ್ವ ಅಂದ ಮೇಲೆ ರಾಜಕೀಯ ಮೆರವಣಿಗೆಗಳು ಇರಲೇಬೇಕು. ಆದರೆ ಬೇರೆ ಹಬ್ಬ, ಹುಣ್ಣಿಮೆಗಳ ಮೆರವಣಿಗೆಗೆ ಹೋಲಿಸಿದರೆ ರಾಜಕೀಯ ಮೆರವಣಿಗೆಗಳಲ್ಲಿ ಅಬ್ಬರ ಕಡಿಮೆ. ಏಕೆಂದರೆ ಎಲ್ಲಿಲ್ಲದ ಕಾಯಿದೆ ಕಾನೂನುಗಳು ಅಲ್ಲಿ ಅನ್ವಯವಾಗುತ್ತವೆ.
ಅಲ್ಲದೆ ಇಲ್ಲಿ ಯಾಕೋ ಜನ ಸೇರುವುದು ಕಡಿಮೆ. ಅಲ್ಲದೆ ಜನ ಕುಣಿಯುವಂತೆ ಮಾಡುವುದು ಇತ್ಯಾದಿ ರಾಜಕಾರಣಿಗಳಿಗೆ ಬಹಳ ಖರ್ಚಿನ ವಿಷಯ. ಹಾಗಾಗಿ ಇವು ತುಸು ಶಾಂತ ಮೆರವಣಿಗೆಗಳು. ಆದರೂ ಮೆರವಣಿಗೆ ಮೆರವಣಿಗೆಯೇ! ಮತ್ತೆ ಮತ್ತು ಅದು ಸಾಗಬೇಕಾದದ್ದು ಅದೇ ರಸ್ತೆಗಳಲ್ಲಿಯೇ!
ಈಗ ಆ ನಗರದ ವಿಷಯ ಬಿಡಿ. ಅದು ನನ್ನ ಅನುಭವವನ್ನು ಹೇಳಲು ಬಳಸಿದ್ದು ಅಷ್ಟೇ. ಯಾವ ಪಟ್ಟಣವೂ, ನಗರವೂ ಇಂತಹ ಅನುಭವಗಳಿಗೆ ಹೊರತಾಗಿ ಏನೂ ಇಲ್ಲ. ಇನ್ನೊಂದು ವಿಷಯ. ನಗರಗಳು ದೊಡ್ಡವಾಗುತ್ತಾ ಹೋದಂತೆ ಮೆರವಣಿಗೆಗಳ ಸಂಖ್ಯೆಗಳು, ವೈವಿಧ್ಯತೆಗಳು, ವಾದ್ಯಗಳು ಮತ್ತು ಸಿಡಿಮದ್ದುಗಳ ಅಬ್ಬರ ಜೋರಾಗುತ್ತಲೇ ಹೋಗುತ್ತದೆ.
ದೆಹಲಿ, ಮುಂಬಯಿ, ಬೆಂಗಳೂರುಗಳಲ್ಲಿ ಇವೆಲ್ಲ ವಿಪರೀತಕ್ಕೆ ಹೋಗುತ್ತದೆ.ರಸ್ತೆಗಳು ಇರುವುದು ಸಂಚಾರಕ್ಕಾಗಿ ಎನ್ನುವ ವಿಷಯವೇ ಮರೆತು ಹೋಗುತ್ತದೆ. ಅವು ಇರುವುದು ಮೆರವಣಿಗೆಗಾಗಿ. ಮೇಲೆ ಹೇಳಿದ ಮಾತುಗಳು ಹಾಸ್ಯದಂತೆ ಅನಿಸಬಹುದು. ಆದರೆ ವಿಷಯ ಹಾಸ್ಯದ್ದು ಅಲ್ಲ. ನಾವು ಯೋಚಿಸಬೇಕಾದದ್ದು ನಮ್ಮ ಸಾರ್ವಜನಿಕ ರಸ್ತೆಗಳ ಪರಿಸ್ಥಿತಿ ಮತ್ತು ಜನಸಂಚಾರದ ಪರಿಸ್ಥಿತಿ (ಹಾಗೆಯೇ ಯೋಚಿಸಬೇಕಾಗಿದ್ದು ಮೆರವಣಿಗೆಗಳ ಉಪ ಉತ್ಪನ್ನಗಳಾದ ಪರಿಸರ ಮಾಲಿನ್ಯ ಮತ್ತು ಅಂಟು ರೋಗಗಳು ಹರಡಬಹುದಾದ ಸಾಧ್ಯತೆ).
ರಸ್ತೆಗಳನ್ನು ಈ ಮೆರವಣಿಗೆಗಳು ಸಂಪೂರ್ಣವಾಗಿ ಹಾಳು ಮಾಡುತ್ತವೆ. ಇದು ಸಣ್ಣ ವಿಷಯವೇ ನಲ್ಲ. ಪ್ರತಿ ವರ್ಷ ನಗರಸಭೆ ಕೋಟ್ಯಂತರ ರೂಪಾಯಿಗಳನ್ನು ಈ ರಸ್ತೆಗಳನ್ನು ಸರಿಮಾಡಲು ಖರ್ಚುಮಾಡಬೇಕು. ಹಣವಿಲ್ಲದಿದ್ದಾಗ ನಗರಸಭೆಗಳೂ ರಸ್ತೆಗಳಿಗೆ ತೇಪೆಹಾಕಿ ಸುಮ್ಮನಾಗುತ್ತವೆ. ಎರಡನೆಯದು ಧ್ವನಿವರ್ಧಕಗಳು ಅಬ್ಬರಿಸುವ ಸದ್ದು ಮತ್ತು ಕಣ್ಣು ಕೋರೈಸುವ ಲೈಟ್ ಬೀಮ್‌ಗಳಿಂದುಟಾಗುವ ಅಸಾಧಾರಣ ಸಾರ್ವಜನಿಕ ಕಿರಿಕಿರಿ. ನಮ್ಮ ಸಾರ್ವಜನಿಕ ಜವಾಬ್ದಾರಿಯ ಮಟ್ಟ ಹೇಗಿದೆ ಎನ್ನುವುದನ್ನು ಹೇಳುವವು ರಸ್ತೆಗಳು.
ಚಿಕ್ಕ ರಾಷ್ಟ್ರ ಜಪಾನ್‌ನಲ್ಲಿ ಜನ ಶೂ ಧರಿಸುವುದು ಕಡ್ಡಾಯ. ಜನರ ಕಾಲುಗಳ ರಕ್ಷಣೆಗಾಗಿಯೇನೂ ಅಲ್ಲ. ರಸ್ತೆಗಳನ್ನು ಸ್ವಚ್ಛವಾಗಿರಿಸಲು. ನಾಯಿ ಅಥವಾ ಬೆಕ್ಕುಗಳನ್ನು ಸಾರ್ವಜನಿಕ ಸ್ಥಳಗಳಿ ಗೊಯ್ಯುವವರು ಅವು ಹೊಲಸು ಮಾಡಿದ್ದನ್ನು ಸ್ವಚ್ಛ ಮಾಡಿಬರಲೇಬೇಕು. ಇಲ್ಲವಾದರೆ ಶಿಕ್ಷೆಗೊಳಗಾಗಬೇಕು. ಆದರೆ ನಮ್ಮಲ್ಲಿ ಮೆರವಣಿಗೆಗಳಿಂದಾಗಿ ರೋಗಿಗಳು ಸಮಯಕ್ಕೆ ಆಸ್ಪತ್ರೆ ತಲುಪಲು ಸಾಧ್ಯವಾಗದೆ ಜೀವ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ.
ಈ ಹಿನ್ನೆಲೆಯಲ್ಲಿ ಅನುಮಾನ ಇಟ್ಟುಕೊಳ್ಳದೆ ಒಂದು ತೀರ್ಮಾನಕ್ಕೆ ಬರಲೇಬೇಕು. ವಿಷಯ ಅರಿಯಬೇಕು. ಏನೆಂದರೆ ನಮ್ಮ ರಸ್ತೆಗಳು ಇರುವುದು ಸಂಚಾರಕ್ಕಾಗಿ ಮಾತ್ರ. ಅವನ್ನು ಬೇರೆ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಜನರಿಗೆ, ಆಡಳಿತ ವ್ಯವಸ್ಥೆಗೆ ಈ ಕುರಿತು ಅರಿವು ಮೂಡಿಸಲು ಕೆಲವು ಕ್ರಮಗಳನ್ನು ನಾವು ತೆಗೆದುಕೊಳ್ಳಬಹುದಾಗಿದೆ.
*
ಧಾರ್ಮಿಕ ಕಾರ್ಯಕ್ರಮಗಳು ರಸ್ತೆಗೆ ಬರುವುದನ್ನು ರದ್ದುಪಡಿಸುವ ಕುರಿತು ಯೋಚಿಸ ಬಹುದು. ಧಾರ್ಮಿಕ ಕಾರ್ಯಕ್ರಮಗಳು ಬಯಲುಗಳಲ್ಲಿ, ಸ್ಟೇಡಿಯಂಗಳಲ್ಲಿ ನಡೆಯಬಹುದು.
೨. ನಡೆಯಲೇಬೇಕೆಂದಿದ್ದರೆ ಕನಿಷ್ಠ ಮುಖ್ಯರಸ್ತೆಯಲ್ಲಿ/ರಸ್ತೆಗಳಲ್ಲಿ ಮೆರವಣಿಗೆಗೆ ಸಂಚರಿಸುವುದನ್ನು ರದ್ದುಪಡಿಸಬೇಕು.
೩. ಮೆರವಣಿಗೆಯ ಮಾರ್ಗವನ್ನು ಕೇವಲ ಅರ್ಧ ಕಿಲೋಮೀಟರ್‌ಗೆ ನಿರ್ದಿಷ್ಟಪಡಿಸಿ, ಅದು ಸಾಗುವ ಸಮಯವನ್ನೂ ನಿರ್ದಿಷ್ಟಪಡಿಸಬೇಕು.
೪. ಮೆರವಣಿಗೆ ನಡೆಸುವರಿಂದ ರಸ್ತೆ ನಿರ್ವಹಣಾ ಶುಲ್ಕವನ್ನು ವಸೂಲಿಮಾಡಬೇಕು.
೫. ಸಂಚಾರದ ಪೀಕ್ ಸಮಯದಲ್ಲಿ ಮೆರವಣಿಗೆಗೆ ಅವಕಾಶ ಕೊಡಕೂಡದು.
೬. ಇವು ಯಾವುವೂ ಸಾಧ್ಯವಿಲ್ಲದಿದ್ದರೆ ಸರಕಾರ ಅಥವಾ ದಯಾಳುಗಳು ಮುಂದೆ ಬಂದು ಮೆರವಣಿಗೆಗಳಿಗಾಗಿಯೇ ಮೀಸಲಿಟ್ಟ ರಸ್ತೆಗಳನ್ನು ದೇಶಾದ್ಯಂತ ನಿರ್ಮಿಸಿಕೊಡಬಹುದು. ಉಪಕಾರವಾಗುತ್ತದೆ