Surendra Pai Column: ಕೃತಕ ಬುದ್ಧಿಮತ್ತೆ ಯುಗದ ರೋಬೋಟ್ ಮಮ್ಮಿಗಳು
ರೋಬೋಟಿಕ್ ತಂತ್ರಜ್ಞಾನವು ಇದೀಗ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿದ ಅನುಭವವನ್ನು ನೀಡಲು ಸಜ್ಜಾಗಿವೆ. ತಂತ್ರಜ್ಞಾನ ಲೋಕದ ಇಂಥ ಆವಿಷ್ಕಾರವನ್ನು ಜಗತ್ತು ಕುತೂಹಲ ಮತ್ತು ಚಿಂತೆಯ ಕಣ್ಣಿಂದ ನಿರೀಕ್ಷಿಸುವಂತಾಗಿದೆ. ಇದನ್ನೊಮ್ಮೆ ಊಹಿಸಿಕೊಂಡರೆ ಹಾಲಿವುಡ್ ಸಿನಿಮಾಗಳಲ್ಲಿ ಕಂಡುಬರುವ ಅತಿರಂಜಿತ/ಭ್ರಮಾತ್ಮಕ ಪಾತ್ರದಂತೆ ಕಾಣಬಹುದು


ಸುರೇಂದ್ರ ಪೈ, ಭಟ್ಕಳ
ಕರುಳಬಳ್ಳಿ ಕಟ್ ಮಾಡಬೇಕಿಲ್ಲ, ಖಿಖಆ ಕೇಬಲ್ ಖ್ಞಿmಜ ಮಾಡಿದರೆ ಸಾಕು! ಇದು ರೋಬೋಟ್ ಬೇಬಿ...
ಇದು ದ್ವಾಪರ ಯುಗದ ಕಥೆ. ಕೃಷ್ಣನ ಮಗನಾದ ಸಾಂಬನು ಋಷಿಗಳನ್ನು ಪರೀಕ್ಷಿಸಲೆಂದು ತಾನು ಹೆಣ್ಣಿನ ವೇಷ ಧರಿಸಿ, “ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಗಂಡೋ ಹೆಣ್ಣೋ?" ಎಂದು ಕೇಳುತ್ತಾನೆ. ಸಾಂಬನ ಕುಚೇಷ್ಟೆಯಿಂದ ಕೋಪಗೊಂಡ ಋಷಿಗಳು, “ನಿನ್ನ ಹೊಟ್ಟೆಯಲ್ಲಿ ಒನಕೆ ಹುಟ್ಟುತ್ತದೆ" ಎನ್ನುತ್ತಾರೆ.
ಅವರ ಶಾಪದಂತೆ ಪುರುಷನೊಬ್ಬ ಒನಕೆಗೆ ಜನ್ಮ ನೀಡುತ್ತಾನೆ. ಆ ಒನಕೆಯು ಯಾದವ ಕುಲವನ್ನೇ ನಾಶ ಮಾಡಿಬಿಡುತ್ತದೆ. ಅಂದು ಮನುಷ್ಯನ ಹೊಟ್ಟೆಯಲ್ಲಿ ನಿರ್ಜೀವ ಒನಕೆ ಜನ್ಮ ತಾಳಿದರೆ, ಇಂದು ನಿರ್ಜೀವ ರೋಬೋಟ್ ಹೊಟ್ಟೆಯಲ್ಲಿ ಮಗು ಹುಟ್ಟುವ ಸಮಯ ಸನ್ನಿಹಿತವಾಗಿದೆ. ನೆಲವನ್ನು ಸ್ವಚ್ಛಗೊಳಿಸಲು, ಕಾರುಗಳನ್ನು ಓಡಿಸಲು, ಶಸ್ತ್ರಚಿಕಿತ್ಸೆಗಳಲ್ಲಿ ಸಹಾಯ ಮಾಡಲು ಮಾತ್ರವಲ್ಲದೆ ಹೋಟೆಲ್, ವಿಮಾನ ನಿಲ್ದಾಣ ಹೀಗೆ ಎಲ್ಲೆಡೆ ರೋಬೋಟ್‌ಗಳು ತಮ್ಮ ನೆಲೆಯನ್ನು ಭದ್ರಗೊಳಿಸಿಕೊಂಡಿವೆ.
ರೋಬೋಟಿಕ್ ತಂತ್ರಜ್ಞಾನವು ಇದೀಗ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿದ ಅನುಭವವನ್ನು ನೀಡಲು ಸಜ್ಜಾಗಿವೆ. ತಂತ್ರಜ್ಞಾನ ಲೋಕದ ಇಂಥ ಆವಿಷ್ಕಾರವನ್ನು ಜಗತ್ತು ಕುತೂಹಲ ಮತ್ತು ಚಿಂತೆಯ ಕಣ್ಣಿಂದ ನಿರೀಕ್ಷಿಸುವಂತಾಗಿದೆ. ಇದನ್ನೊಮ್ಮೆ ಊಹಿಸಿಕೊಂಡರೆ ಹಾಲಿವುಡ್ ಸಿನಿಮಾ ಗಳಲ್ಲಿ ಕಂಡುಬರುವ ಅತಿರಂಜಿತ/ಭ್ರಮಾತ್ಮಕ ಪಾತ್ರದಂತೆ ಕಾಣಬಹುದು; ಆದರೆ ಇದು ಕೃತಕ ಬುದ್ಧಿಮತ್ತೆಯ (ಎಐ) ಯುಗದ ಕಥೆ. ಇಲ್ಲಿ ರೋಬೋಟ್ ಎಂಬುದು ಮಗುವಿಗೆ ಮಮ್ಮಿ-ಡ್ಯಾಡಿ ಎಲ್ಲಾ...!
ಇದನ್ನೂ ಓದಿ: Surendra Pai Column: ಪ್ರಥಮ ಪ್ರಜೆ ಕಲಿಸಿದ ದೇಶಭಕ್ತಿಯ ಪಾಠ
ಚೀನಾದಲ್ಲಿ ಬಂಜೆತನ
ಲ್ಯಾನ್ಸೆಟ್ ವರದಿಯ ಪ್ರಕಾರ, ಚೀನಾದಲ್ಲಿ ಬಂಜೆತನದ ಪ್ರಮಾಣವು 2007ರಲ್ಲಿ ಶೇ. 11.9ರಷ್ಟು ಇದ್ದುದು 2020ರಲ್ಲಿ ಶೇ.18ಕ್ಕೆ ಏರಿದೆ. ಐವಿಎಫ್ ನಂಥ ಕೃತಕ ಗರ್ಭಧಾರಣೆಯ ಚಿಕಿತ್ಸೆಗಳು ದುಬಾರಿ ವೆಚ್ಚದವು. ಭಾವನಾತ್ಮಕ ಬಳಲಿಕೆಯ ನಂತರವೂ ಇಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ. ಹೀಗಾಗಿ, ಬೀಜಿಂಗ್ ಮತ್ತು ಶಾಂಘೈನಂಥ ನಗರಗಳು ಈಗ ವೈದ್ಯಕೀಯ ವಿಮಾ ರಕ್ಷಣೆಯಲ್ಲಿ ಕೃತಕ ಗರ್ಭಧಾರಣೆ ಮತ್ತು ಐವಿಎಫ್ ಅನ್ನೂ ಸೇರಿಸಿಕೊಂಡಿವೆ. ಇದು ಗರ್ಭಧಾರಣೆಯ ಸವಾಲುಗಳನ್ನು ಎದುರಿಸುವ ಕುಟುಂಬಗಳಿಗೆ ಬೆಂಬಲ ನೀಡುತ್ತದೆ.
ಕುಟುಂಬಗಳಿಗೆ ಹೊಸ ಅವಕಾಶ
ಸಂತಾನೋತ್ಪತ್ತಿಯ ಸಮಸ್ಯೆಯನ್ನು ನಿವಾರಿಸುವಲ್ಲಿ ಗರ್ಭಧಾರಣೆಯ ರೋಬೋಟ್‌ಗಳು ಸಹಕಾರಿಯಾಗಲಿವೆ ಎಂಬುದು ವಿಜ್ಞಾನಿಗಳ ವಾದ. ಈ ಆವಿಷ್ಕಾ ರವು ವಿಶ್ವಾದ್ಯಂತ ಬಂಜೆತನ ದಿಂದ ಬಳಲುತ್ತಿರುವ ಶೇ.15ರಷ್ಟು ದಂಪತಿಗಳ ಜೀವನವನ್ನು ಪರಿವರ್ತಿಸುತ್ತದೆ ಎಂಬುದು ಇವರ ಸಮರ್ಥನೆ. ಇದು ಗರ್ಭಧಾರಣೆಗೆ ಒಳಗಾಗಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದ ಮಹಿಳೆಯರಿಗೆ ವೈದ್ಯಕೀಯ ಅಪಾಯಗಳನ್ನು ಕಡಿಮೆ ಮಾಡಬಲ್ಲದು.
ವಿಶೇಷತೆ ಏನು?
ಕೈಗೆಟುಕುವಂತಿರುವ ವೆಚ್ಚದ ಹೊರತಾಗಿ ಈ ವ್ಯವಸ್ಥೆಯು, ಗರ್ಭಾವಸ್ಥೆಯು ತಾಯಂದಿರ ಮೇಲೆ ಹೇರಬಹುದಾದ ದೈಹಿಕ ಮತ್ತು ಭಾವನಾತ್ಮಕ ಹೊರೆಗಳನ್ನು ಕಡಿಮೆ ಮಾಡುವ ಭರವಸೆಯನ್ನು ನೀಡುತ್ತದೆ. ಇದು ಸುರಕ್ಷಿತವಾಗಿದ್ದು ಕಡಿಮೆ ಒತ್ತಡದ ಅನುಭವವನ್ನು ನೀಡುತ್ತದೆ. ಈ ಪ್ರಗತಿಯು ಸಂತಾನೋತ್ಪತ್ತಿಯ ಕುರಿತಾದ ಭವಿಷ್ಯವನ್ನು ಬದಲಾಯಿಸಬಲ್ಲದು.
ಹ್ಯಾಷ್‌ಟ್ಯಾಗ್ ಪ್ರೇರಣೆ
Weibo ಎಂಬ ಚೀನಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ World's First Pregnancy Robot to Launch Within a Year ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಟ್ರೆಂಡ್ ಆಗಿರುವ ಸುದ್ದಿ ಯಲ್ಲಿ, “ನಾನು ಮೂರು ಬಾರಿ ಕೃತಕ ಗರ್ಭಧಾರಣೆಗೆ ಪ್ರಯತ್ನಿಸಿ ವಿಫಲಳಾಗಿರುವೆ. ಆದರೆ ಈಗ ನನಗೆ ಮಗುವನ್ನು ಹೊಂದುವ ಅವಕಾಶ ಸಿಕ್ಕಿದೆ" ಎಂದು ಮಹಿಳೆಯೊಬ್ಬರು ಆಶಾದಾಯಕ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, ರೋಬೋಟ್ ಗರ್ಭಧಾರಣೆಯಿಂದ ಭವಿಷ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಆಕೆ ಹರ್ಷವನ್ನು ವ್ಯಕ್ತಪಡಿಸಿದ್ದು ಪ್ರೇರಣೆಯಾಯಿತು.
ತಂತ್ರಜ್ಞಾನದ ಹಿಂದಿರುವ ವಿಜ್ಞಾನ
ಕೃತಕ ಗರ್ಭಧಾರಣೆಯ ತಂತ್ರಜ್ಞಾನವು ಸಂಪೂರ್ಣ ಹೊಸದೇನಲ್ಲ. ಪ್ರಾಣಿಗಳ ಅಧ್ಯಯನಗಳಲ್ಲಿ ಕೃತಕ ಗರ್ಭಧಾರಣೆಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿವೆ. 2017ರಲ್ಲಿ, ಫಿಲಡೆಲಿಯಾದ ಮಕ್ಕಳ ಆಸ್ಪತ್ರೆಯ ಸಂಶೋಧಕರು 23 ವಾರಗಳ ಮಾನವ ಗರ್ಭಧಾರಣೆಗೆ ಸಮನಾದ ಅಕಾಲಿಕ ಕುರಿಮರಿಯನ್ನು ‘ಬಯೋಬ್ಯಾಗ್’ನಲ್ಲಿ ಯಶಸ್ವಿಯಾಗಿ ಪೋಷಿಸಿದರು.
ಇದು ಬೆಚ್ಚಗಿನ ಲವಣಯುಕ್ತ ಕೃತಕ ಆಮ್ನಿಯೋಟಿಕ್ ದ್ರವದಿಂದ ತುಂಬಿದ ಪಾರದರ್ಶಕ ವಿನೈಲ್ ಚೀಲವಾಗಿತ್ತು. ಹೊಕ್ಕುಳಬಳ್ಳಿಗೆ ಜೋಡಿಸಲಾದ ಕೊಳವೆಯ ಮೂಲಕ ಪೋಷಕಾಂಶ ಗಳನ್ನು ತಲುಪಿಸಲಾಯಿತು. 4 ವಾರಗಳಲ್ಲಿ ಈ ಕುರಿಮರಿಯಲ್ಲಿ ಉಣ್ಣೆಯು ಅಭಿವೃದ್ಧಿಗೊಂಡಿತ್ತು.
ಪರಿಕಲ್ಪನೆ ಹುಟ್ಟಿದ್ದು ಹೇಗೆ?
ಈ ವರ್ಷ ಬೀಜಿಂಗ್‌ನಲ್ಲಿ ನಡೆದ ವಿಶ್ವ ರೋಬೋಟ್ ಸಮ್ಮೇಳನದಲ್ಲಿ ಈ ‘ರೋಬೋಟ್ ಸರೋಗೇಟ್’ ಅನ್ನು ಪ್ರಸ್ತುತಪಡಿಸಲಾಗಿತ್ತು. ಇದು ಗರ್ಭಧಾರಣೆಯಿಂದ ಹೆರಿಗೆಯವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಬಲ್ಲ ಪೂರ್ಣಪ್ರಮಾಣದ ‘ಹ್ಯುಮನಾಯ್ಡ್’ ಎಂಬುದನ್ನು ಆಗಲೇ ಬಹಿರಂಗಪಡಿಸಲಾ ಗಿತ್ತು. ಅಸಂಭವವೆಂದು ತೋರುವ ಈ ಪರಿಕಲ್ಪನೆಯನ್ನು ‘ಕೈವಾ ಟೆಕ್ನಾಲಜಿ’ಯ ಸಂಶೋಧಕರಾದ ಜಾಂಗ್ ಕಿಫೆಂಗ್ ಅವರು ಅದಾಗಲೇ ಇಲಿಗಳ ಭ್ರೂಣವನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ಬಳಸುವ ಮೂಲಕ ಭರವಸೆ ಹುಟ್ಟಿಸಿದ್ದರು.
ಗರ್ಭ ಧರಿಸಲು ಕಷ್ಟಪಡುವವರು ತಮ್ಮ ಮಗುವನ್ನು ಹೆರಲು ‘ಹ್ಯುಮನಾಯ್ಡ್’ ಅನ್ನು ನೇಮಿಸಿ ಕೊಳ್ಳಲು ಸುಮಾರು 14 ಲಕ್ಷ ರು. ವೆಚ್ಚವಾಗುತ್ತದೆ. 2026ರಲ್ಲಿ ಮೊದಲ ‘ರೋಬೋಟ್ ಸರೋಗೇಟ್ ಮಗು’ ಈ ಭೂಮಿಗೆ ಕಾಲಿಡುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ಸ್ವಾಭಾವಿಕ ವಿಧಾನದಿಂದ ಮಗು ಜನಿಸಲು 9 ತಿಂಗಳು ಬೇಕಾದರೆ, ಈ ವಿಧಾನದ ಮೂಲಕ ಮಗುವು ಜನಿಸುವುದಕ್ಕೆ 10 ತಿಂಗಳು ಹಿಡಿಯುತ್ತದೆ ಎನ್ನಲಾಗಿದೆ.
ಗರ್ಭಧಾರಣೆಯ ರೋಬೋಟ್ ಎಂದರೇನು?
ಚೀನಾ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದು, ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಚಾಂಗ್ ಕಿಫೆಂಗ್ ಇದರಲ್ಲಿ ಕೈಜೋಡಿಸಿದ್ದಾರೆ. ಇದರ ಮೂಲತತ್ವ ಕೃತಕ ಗರ್ಭಾಶಯ ತಂತ್ರಜ್ಞಾನ. ರೋಬೋಟ್‌ನ ಹೊಟ್ಟೆಯು ಕೃತಕ ಆಮ್ನಿಯೋಟಿಕ್ ದ್ರವದಿಂದ ತುಂಬಿದ ಸಂಶ್ಲೇಷಿತ ಗರ್ಭಾಶಯವನ್ನು ಹೊಂದಿರುತ್ತದೆ.
ಹೊಕ್ಕುಳಬಳ್ಳಿಯಂತೆ ಕಾರ್ಯ ನಿರ್ವಹಿಸುವ ಮೆದುಗೊಳವೆಯ ಮೂಲಕ ಪೋಷಕಾಂಶಗಳು ಚಲಿಸುತ್ತವೆ. ಮಾನವರೊಂದಿಗೆ ಸಂವಹನ ನಡೆಸಲು, ನೈಜಸಮಯದಲ್ಲಿ ಗರ್ಭಧರಿಸಲು ಪೂರಕ ವಾದ ಸ್ವಾಭಾವಿಕ ಪರಿಸರ ವನ್ನು ಅನುಕರಿಸುವಂತೆ ಈ ರೋಬೋಟ್ ಅನ್ನು ವಿನ್ಯಾಸಗೊಳಿಸ ಲಾಗಿದೆ. ಈ ಆವಿಷ್ಕಾರವು ಯಶಸ್ವಿಯಾದರೆ, ವೈದ್ಯಕೀಯ ವಿಜ್ಞಾನ, ಸಂತಾ ನೋತ್ಪತ್ತಿ ಆರೋಗ್ಯ ಮತ್ತು ಫಲವತ್ತತೆಯ ಚಿಕಿತ್ಸೆಗಳನ್ನು ಪರಿವರ್ತಿಸಬಹುದು.
ಮುಂದಿರುವ ಪ್ರಶ್ನೆಗಳು
ಈ ತಂತ್ರಜ್ಞಾನವು ಕ್ರಾಂತಿಕಾರಿಯಾಗಿದ್ದರೂ, ಗಂಭೀರವಾದ ಒಂದಷ್ಟು ನೈತಿಕ ಮತ್ತು ಕಾನೂನಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ:
ರೋಬೋಟ್ ಗರ್ಭಧಾರಣೆ ಪ್ರಕ್ರಿಯೆಯಲ್ಲಿ ಫಲೀಕರಣ ಮತ್ತು ಇಂಪ್ಲಾಂಟೇಶನ್ ಹೇಗೆ ನಡೆಯುತ್ತದೆ?
ರೋಬೋಟ್‌ನಿಂದ ಜನಿಸಿದ ಮಗು ಪೋಷಕರೊಂದಿಗೆ ಆರಂಭಿಕ ಭಾವನಾತ್ಮಕ ಬಂಧಗಳನ್ನು ಹೇಗೆ ರೂಪಿಸಿಕೊಳ್ಳುತ್ತದೆ?
ಅಂಡಾಣು ಮತ್ತು ವೀರ್ಯಾಣುವನ್ನು ಎಲ್ಲಿಂದ ಪಡೆಯಲಾಗುತ್ತದೆ?
ಇದು ಅಕ್ರಮ ಜನನಕ್ಕೆ ಉತ್ತೇಜನ ನೀಡಬಹುದೇ?
ಈ ವಿಧಾನದಿಂದ ಪಡೆದ ಮಗುವಿನ ದೈಹಿಕ ಹಾಗೂ ಮಾನಸಿಕ ಗುಣಲಕ್ಷಣಗಳು ಇತರ ಮಗುವಿಗಿಂತ ಭಿನ್ನವಾಗಿರುತ್ತವೆಯೇ?
ನೈತಿಕ ಮತ್ತು ಕಾನೂನು ಕಾಳಜಿಗಳ ಕುರಿತಾದ ರೂಪುರೇಷೆ ರೂಪಿಸುವ ಹೊಣೆ ಯಾರದ್ದು? ಮಾನವ ಸಹಜ ಸಂಬಂಧಗಳು ಇದರಿಂದ ನಾಶವಾಗಬಹುದೇ?
ರೋಬೋಟ್‌ಗಳಿಂದ ಜನಿಸಿದ ಶಿಶುಗಳನ್ನು ಸಮಾಜ ಸ್ವೀಕರಿಸುತ್ತದೆಯೇ?