Shashidhara Halady Column: ಪರಿಸರ ಪಾಠ ನೀಡಿದ ಗುಡಿಸಲು ಶಾಲೆ !
ಬಾಗೂರಿನ ದೇಗುಲದಲ್ಲಿ ಹಿಂದೆ ಶಾಲೆ ನಡೆಯುತ್ತಿದ್ದ ವಿಚಾರ ತಿಳಿದಾಗ, ನಮ್ಮ ಹಳ್ಳಿಯ ಶಾಲೆಯ ನೆನಪಾಯಿತು. ಅದೊಂದು ಏಕೋಪಾಧ್ಯಾಯ ಶಾಲೆ. 1959-60ರಲ್ಲಿ ಆರಂಭ ಗೊಂಡಾಗ, ಆ ಪುಟಾಣಿ ಶಾಲೆ ಮುಂದುವರಿಯಲ್ಲಿದ್ದ ಪುರಾತನ ಮಹಾಲಿಂಗೇಶ್ವರ ದೇವಾ ಲಯದ ಮುಖಮಂಟಪದಲ್ಲಿ ನಡೆಯುತ್ತಿದ್ದವು.
-
ಶಶಾಂಕಣ
ಇತ್ತೀಚೆಗೆ ಹೊಸದುರ್ಗ ಸಮೀಪದ ಬಾಗೂರು ಎಂಬ ಹಳ್ಳಿಗೆ ಭೇಟಿ ನೀಡುವ ಅವಕಾಶ ದೊರಕಿತ್ತು; ಹಿಂದೆ ಅಲ್ಲಿ ಗುಣಮಟ್ಟದ ಅಕ್ಕಿಯನ್ನು ಬೆಳೆಯುತ್ತಿದ್ದುದರಿಂದ, ಆ ಹಳ್ಳಿ ಯನ್ನು ಸಣ್ಣಕ್ಕಿ ಬಾಗೂರು ಎಂದೇ ಕರೆಯುವ ರೂಢಿ. ಅಲ್ಲಿ ಹಲವು ದೇಗುಲಗಳಿದ್ದ ವಂತೆ; ಈಗ ಉಳಿದುಕೊಂಡಿರುವ ದೇಗುಲಗಳಲ್ಲಿ, ಚನ್ನಕೇಶವ ದೇಗುಲ ಸಾಕಷ್ಟು ಪ್ರಸಿದ್ಧ. ಆ ದೇಗುಲದ ಸುತ್ತಲೂ ಕೋಟೆಯ ಭಾಗಗಳಿವೆ; ಕೆಲವು ಕಡೆ ಬಿದ್ದು ಹೋಗಿವೆ.
ನಮ್ಮ ರಾಜ್ಯದ ಇತರ ಹಲವಾರು ಕೋಟೆಗಳಂತೆ ಇದೂ ಪಾಳು ಬಿದ್ದಿದೆ, ನಶಿಸುತ್ತಿದೆ. ಆ ದೇಗುಲದಲ್ಲಿ ಗಮನ ಸೆಳೆದದ್ದೆಂದರೆ, ಅಲ್ಲಿನ ಮುಖಮಂಟಪದಂತಹ ರಚನೆಯಲ್ಲಿ ಹಲವು ದಶಕಗಳ ಹಿಂದೆ ಶಾಲೆಗಳು ನಡೆಯುತ್ತಿದ್ದ ವಿಚಾರ!
ನಿಜ, ಇಂತಹದೊಂದು ಪರಿಪಾಠ ನಮ್ಮ ರಾಜ್ಯದ ಹಲವು ಭಾಗಗಳಲ್ಲಿದೆ. ಪ್ರಾಥಮಿಕ ಶಾಲೆಗಳು ಆರಂಭವಾದಾಗ, ಬಹಳಷ್ಟು ಊರುಗಳಲ್ಲಿ, ಹಳ್ಳಿಗಳಲ್ಲಿ ಮೊದಲ ತರಗತಿಗಳು ನಡೆದದ್ದು ಊರಿನ ದೇಗುಲದ ಒಂದು ಭಾಗದಲ್ಲಿ. ಅದಕ್ಕೂ ಹಿಂದೆ ಅಲ್ಲಿ ಕೂಲಿ ಮಠ, ಐಗಳ ಮಠಗಳು ಇದ್ದದ್ದರಿಂದಲೋ ಅಥವಾ ಸುಲಭವಾಗಿ ಜಾಗ ಸಿಕ್ಕಿದ್ದರಿಂದಲೋ, ಹಲವು ದಶಕಗಳ ಹಿಂದೆ ದೇಗುಲಗಳು ಶಾಲೆಗಳಿಗೆ ಆಶ್ರಯ ನೀಡಿದ್ದವು.
ಬಾಗೂರಿನ ದೇಗುಲದಲ್ಲಿ ಹಿಂದೆ ಶಾಲೆ ನಡೆಯುತ್ತಿದ್ದ ವಿಚಾರ ತಿಳಿದಾಗ, ನಮ್ಮ ಹಳ್ಳಿಯ ಶಾಲೆಯ ನೆನಪಾಯಿತು. ಅದೊಂದು ಏಕೋಪಾಧ್ಯಾಯ ಶಾಲೆ. 1959-60ರಲ್ಲಿ ಆರಂಭ ಗೊಂಡಾಗ, ಆ ಪುಟಾಣಿ ಶಾಲೆ ಮುಂದುವರಿಯಲ್ಲಿದ್ದ ಪುರಾತನ ಮಹಾ ಲಿಂಗೇಶ್ವರ ದೇವಾಲಯದ ಮುಖಮಂಟಪದಲ್ಲಿ ನಡೆಯುತ್ತಿದ್ದವು.
ಇದನ್ನೂ ಓದಿ: Shashidhara Halady Column: ಕುದುರೆಯ ಬಾಲ ಮನೆಯಂಗಳದಲ್ಲಿ !
ದೇಗುಲದ ಮುಖಮಂಟಪವು ಸಹ ಬಹು ಹಳೆಯದು; ಕೈಯಿಂದ ತಯಾರಿಸಿದ ಹಂಚು ಗಳನ್ನು ಹೊದಿಸಿದ ಛಾವಣಿಯನ್ನು ಹೊಂದಿದ್ದ ಆ ದೇಗುಲವು, ಜೀರ್ಣೋದ್ಧಾರ ಕಾಣದೇ ಹಲವು ವರ್ಷಗಳೇ ಆಗಿದ್ದವು ಎನಿಸುತ್ತದೆ. ಶಶಿಕಲಾ ಟೀಚರ್ ಎಂಬ ಏಕೋ ಪಾಧ್ಯಾಯಿನಿ ನಡೆಸುತ್ತಿದ್ದ ತರಗತಿಗಳನ್ನು ಕೇಳುತ್ತಾ ಕುಳಿತಿದ್ದ ವಿಶಾಲಿ ಎಂಬ ವಿದ್ಯಾರ್ಥಿನಿಯ ಮೇಲೆ, ಛಾವಣಿಯ ಒಂದು ಹೆಂಚು ಬಿದ್ದು, ತಲೆಗೆ ಗಾಯವಾಯಿತು!
ಆ ದೇಗುಲದ ಮುಖಮಂಟಪದಲ್ಲಿ ಶಾಲೆ ನಡೆಸಿದರೆ ಇನ್ನಷ್ಟು ಮಕ್ಕಳು ಗಾಯಗೊಂಡಾರು ಎಂಬ ಭಯದಿಂದಾಗಿ, ಶಾಲೆಯನ್ನು ಸ್ಥಳಾಂತರಿಸುವ ಅನಿವಾರ್ಯತೆ ಉಂಟಾಯಿತು. ನೆಕ್ಕತ್ತಾಯ ಎಂಬ ಹಿರಿಯರು ದೇಗುಲದ ಮುಖಮಂಟಪವನ್ನು ಜೀರ್ಣೋದ್ಧಾರ ಮಾಡಲು ಧನ ಸಹಾಯ ನೀಡಿ, ಮಂಗಳೂರು ಹೆಂಚಿನ ಸೊಗಸಾದ ಮುಖಮಂಟಪ ನಿರ್ಮಾಣವಾಯಿತು. ಆ ಕೆಲಸ ನಡೆಯುವಾಗ, ಶಾಲೆಯು ಸ್ಥಳಾಂತರ ಗೊಂಡದ್ದು, ಒಂದು ಗುಡಸಲಿಗೆ!
ಅಲ್ಲಿಂದ ಎರಡು ಕಿ.ಮೀ. ದೂರದಲ್ಲಿದ್ದ ಗೋರಾಜಿ ಎಂಬ ಇನ್ನೊಂದು ಪುಟ್ಟ ಹಳ್ಳಿಯ ಲ್ಲಿದ್ದ ‘ಮೈಯ್ಯ’ ಎಂಬುವವರ ಮನೆಗೆ ಮೊದಲು ಸ್ಥಳಾಂತರಗೊಂಡು, ನಂತರ ಅವರ ಮನೆಯಿಂದ ತುಸು ದೂರದಲ್ಲಿದ್ದ ತೀರಾ ಪುಟ್ಟ ಗುಡಿಸಲಿಗೆ ಶಾಲೆಯು ಸ್ಥಳಾಂತರ ಗೊಂಡು, 1970ರ ದಶಕದ ತನಕ ಆ ಗುಡಿಸಲಿನಲ್ಲೇ ಕಾರ್ಯನಿರ್ವಹಿಸಿತು.
ಒಬ್ಬರು ಉಪಾಧ್ಯಾಯರು, ಇಪ್ಪತ್ತು ಮೂವತ್ತು ಮಕ್ಕಳು, ಒಂದು ಕೊಠಡಿ; ಆ ಕೊಠಡಿಗೆ ಬಾಗಿಲು ಇರಲಿಲ್ಲ; ನೆಲಕ್ಕೆ ಮಣ್ಣಿನ ಸಾರಣೆ. ಗೋಡೆಗಳ ಎತ್ತರ ಕೇವಲ ಮೂರರಿಂದ ನಾಲ್ಕು ಅಡಿ. ಛಾವಣಿಗೆ ಹುಲ್ಲಿನ ಹೊದಿಕೆ. ಶಾಲೆಯಿದ್ದ ಆ ಗುಡಿಸಲಿನ ಎದುರುಭಾಗ ದಲ್ಲಿದ್ದ ಗುಡ್ಡದ ಮೇಲೆ ಬಯಲು ರಂಗಮಂದಿರ, ಬಯಲು ಶೌಚಾಲಯ, ಬಯಲು ಕ್ರೀಡಾಂಗಣ, ಬಯಲು ದಾರಿ ಎಲ್ಲವೂ ಇದ್ದವು!
ಅಂದರೆ, ಶಾಲೆಯ ಸುತ್ತಲಿನ ಗುಡ್ಡದ ಪ್ರದೇಶವೇ ಎಲ್ಲದಕ್ಕೂ ಉಪಯೋಗ. ಈ ಗುಡಿಸಲು ಶಾಲೆಯಲ್ಲಿ ನಾನು ಅಧ್ಯಯನ ಮಾಡಿದ್ದೆ ಎಂಬುದೇ ಇಂದು ನೆನಪಾಗುತ್ತಿರುವ ವಿಶೇಷ. ನಮ್ಮ ಮನೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ, ಹಾಡಿ-ಹಕ್ಕಲು-ಗುಡ್ಡಗಳ ನಡುವೆಯಿದ್ದ ಆ ಶಾಲೆಗೆ ಹೋಗಲು ಇದ್ದ ಏಕೈಕ ಕನ್ವೆಯನ್ಸ್ ಎಂದರೆ ಕಾಲ್ನಡಿಗೆ!
ಸೈಕಲ್ ಸೇರಿದಂತೆ ಯಾವುದೇ ವಾಹನ ತಲುಪಲಾಗದ, ಹಾಡಿಯೊಂದರ ಪಕ್ಕದಲ್ಲಿದ್ದ ಬೆಳಾರ ಜಾಗದಲ್ಲಿದ್ದ ಆ ನನ್ನ ಆ ಶಾಲೆಯ ನೆನಪುಗಳು ಆಪ್ತವಾಗಿವೆ, ಸೊಗಸಾಗಿವೆ. ವರ್ಷಕ್ಕೆ ನಾಲ್ಕಾರು ತಿಂಗಳು ಮಳೆಬರುವ ಹಳ್ಳಿ ನಮ್ಮದು. ಕೈಯಲ್ಲೊಂದು ಓಲಿ ಕೊಡೆ ಯನ್ನು ಹಿಡಿದು, ನಾನು ಆ ಶಾಲೆಯನ್ನು ಸೇರಿದಾಗ, ಅಲ್ಲಿದ್ದ ಮುಖ್ಯೋ ಪಾಧ್ಯಾಯರು ಸುಬ್ರಾಯ ಭಟ್.
ನಾಲ್ಕೇ ತರಗತಿಗಳಿದ್ದ, ಕಾಡಿನ ನಡುವಿನ ಗುಡಿಸಲಿನಲ್ಲಿದ್ದ ಆ ಶಾಲೆಯಲ್ಲಿ ಅಧ್ಯಯನ ಮಾಡುವುದೆಂದರೆ, ಇತ್ತ ಅಕ್ಷರಾಭ್ಯಾಸವೂ ಹೌದು, ಅತ್ತ ಪರಿಸರದ ಪಾಠವೂ ಹೌದು. ಅಕ್ಷರಾಭ್ಯಾಸವನ್ನು ಏಕೋಪಾಧ್ಯಾಯರು ಮಾಡಿಸಿದರೆ, ನಮಗೆ ಪರಿಸರದ ಪಾಠ ದೊರೆಯುತ್ತಿದ್ದುದು, ಆ ಶಾಲೆಗೆ ನಡೆದುಬರುತ್ತಿದ್ದ ದಾರಿಯಲ್ಲಿ.
ಕಿರಿಯ ಪ್ರಾಥಮಿಕ ಶಾಲೆಯ (ಅಂದರೆ, ಒಂದರಿಂದ ನಾಲ್ಕು ತರಗತಿಗಳು) ಪುಟಾಣಿ ವಿದ್ಯಾರ್ಥಿಗಳಿಗೆ ಹೇಗೆ ಪರಿಸರ ಪಾಠ ದೊರಕುತ್ತಿತ್ತು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಹೊಳೆದಿರಬೇಕು; ಅದು ಹೇಗೆಂದು ತಿಳಿಯಲು, ಆ ಹಳ್ಳಿ ಶಾಲೆಯ ಒಂದು ದಿನದ ದಿನಚರಿ ಯನ್ನು ನೆನಪಿಸಿಕೊಳ್ಳಬೇಕು!
ಬೆಳಗ್ಗೆ ಬೇಗನೆದ್ದು ಸ್ನಾನ ಮಾಡಿ, ಕುಚ್ಚಿಗೆ ಅಕ್ಕಿಯ ಗಂಜಿಯನ್ನು ತಿಂದು, ಕೈಲೊಂದು ಸ್ಲೇಟು ಹಿಡಿದು, ಮಳೆಯ ವಾತಾವರಣವಿದ್ದರೆ ಓಲಿಕೊಡೆಯನ್ನೂ ಇನ್ನೊಂದು ಕೈಯಲ್ಲಿ ಹಿಡಿದು ಶಾಲೆಯತ್ತ ಹೊರಟರೆ, ಮೊದಲಿಗೆ ಎದುರಾಗುವುದು ಗದ್ದೆ ಬೈಲು. ನಮ್ಮ ಮನೆಯ ಅಂಗಳ ದಾಟಿ, ಮೊದಲ ಹೆಜ್ಜೆ ಇಟ್ಟರೆ ಸಿಗುವುದೇ ಭತ್ತದ ಗದ್ದೆ. ವರ್ಷದ ಎಂಟು ತಿಂಗಳುಗಳ ಕಾಲ ಅದರಲ್ಲಿ ನೀರು, ಕೆಸರು! ಗದ್ದೆಯಂಚಿನ ಕಂಟದ ಮೇಲೆ ಬೆಳೆದ ಹುಲ್ಲಿನ ನಡುವೆ, ಪುಟಾಣಿ ಹೆಜ್ಜೆಯಿಡುತ್ತಾ ನನ್ನ ಸವಾರಿ ಹೊರಡುತ್ತಿತ್ತು.
ನನ್ನ ಜತೆಗೆ ದುಗ್ಗ ನಾಯಕರು ಮತ್ತು ಇತರ ವಿದ್ಯಾರ್ಥಿಗಳು ಕಂಬಳಗದ್ದೆಯಿಂದ ಬರುತ್ತಿದ್ದುದುಂಟು. ಆರೆಂಟು ಗದ್ದೆ ಕಂಟಗಳ ಮೇಲೆ ನಡೆದು, ಉತ್ತರ ದಿಕ್ಕಿನ ಒಂದು ತೋಡಿನ ಅಂಚಿನಲ್ಲಿ ಸಾಗಿದರೆ, ಮುಡಾರಿ ಭಟ್ಟರ ಮನೆ.
ಅಲ್ಲಿ ಎದುರಾಗುತ್ತಿತ್ತು ನಾನು ದಾಟಬೇಕಾದ ಮೊದಲ ‘ಸಂಕ’. ವರ್ಷದಲ್ಲಿ ಎಂಟು ತಿಂಗಳು ಹರಿಯುವ ನೀರಿನಿಂದ ತುಂಬಿರುತ್ತಿದ್ದ ಆ ತೋಡನ್ನು ದಾಟಲು, ಸುಮಾರು 20 ಅಡಿ ಉದ್ದದ ಮರದ ಕಾಂಡವೇ ಆಸರೆ. ಆ ಸಂಕದ ಮೇಲೆ ಬ್ಯಾಲೆನ್ಸ್ ಮಾಡುತ್ತಾ ತೋಡು ದಾಟಿ, ಮುಡಾರಿ ಭಟ್ಟರ ಮನೆಯಿಂದ ಶಾಲೆಗೆ ಬರುತ್ತಿದ್ದ ಮಕ್ಕಳನ್ನು ಜತೆ ಮಾಡಿ ಕೊಂಡು, ಪೂರ್ವದಿಕ್ಕಿನ ಮಕ್ಕಿಗದ್ದೆಗಳನ್ನು ದಾಟಿದಾಗ, ಹಕ್ಕಲು ಸಿಗುತ್ತಿತ್ತು.
ಹಕ್ಕಲು ಎಂದರೆ, ಭಾರೀ ದೊಡ್ಡ ಮರಗಳು ಇಲ್ಲದ, ಆದರೆ ಮಧ್ಯಮ ಗಾತ್ರದ ಸಾಕಷ್ಟು ಗಿಡ ಮರಗಳು, ಪೊದೆಗಳು, ಬಳ್ಳಿಗಳಿರುವ, ಪರಿಸರ ವೈವಿಧ್ಯದ ಕಾಡುವನ. ಆ ಹಕ್ಕಲಿನ ತುಂಬಾ ನಾನಾ ರೀತಿಯ ಗಿಡಗಳು, ಪೊದೆಗಳಿದ್ದವು. ಸಳ್ಳೆ, ನೇರಳೆ, ಮುರಿನ ಮರ ಮೊದಲಾದ ಹತ್ತಾರು ಪ್ರಭೇದದ ಗಿಡಗಳು ಅಲ್ಲಿ ಒತ್ತೊತ್ತಾಗಿ ಬೆಳೆದಿದ್ದವು. ಅವುಗಳ ನಡುವೆ ಪದೇ ಪದೇ ಕಣ್ಣಿಗೆ ಬೀಳುತ್ತಿದ್ದ ಜೀವಿ ಎಂದರೆ ಕಾಯಿಕಳ್ಳ (ಓತಿಕ್ಯಾತ). ಆ ಕಾಯಿಕಳ್ಳನಿಗೆ ಮಕ್ಕಳನ್ನು ಕಂಡರೆ ಅಸಹನೆ, ಅಪಹಾಸ್ಯವಂತೆ!
ಅದು ಗಿಡವೊಂದರ ಕಾಂಡದ ಮೇಲೆ ಕುಳಿತು, ತಲೆಯಲ್ಲಾಡಿಸುತ್ತಾ, ನಮ್ಮನ್ನು ಅಣಕಿಸು ತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಕಲ್ಲು ಬೀಡಿದಾಗ, ಅದರ ತಲೆ ಅಪ್ಪಚ್ಚಿ! ಆ ಹಕ್ಕಲಿ ನಲ್ಲಿ ಕಾಲು ಕಿ.ಮೀ. ನಡೆದ ನಂತರ, ದೊಡ್ಡ ಮರಗಳಿದ್ದ ಹಾಡಿಗೆ ನಮ್ಮ ಪ್ರವೇಶ. ಬೋಗಿ, ದೂಪ, ಕಾಟು ಮಾವು ಮತ್ತಿತರ ಮರಗಳಿದ್ದ ಆ ಹಾಡಿಯು ಮಂಗಗಳ ನೆಚ್ಚಿನ ತಾಣ; ಅವುಗಳ ಚೇಷ್ಟೆಯನ್ನು ನೋಡುವ ಅವಕಾಶ.
ಮರಗಳ ನೆರಳಿನಲ್ಲೇ ಸಾಗುವ ಅಲ್ಲಿನ ದಾರಿಯು, ಕೆಲವೇ ನೂರು ಮೀಟರ್ ದೂರದಲ್ಲಿ, ದರೆಯೊಂದರ ಪ್ರಪಾತದ ಪಕ್ಕದಲ್ಲೇ ಸಾಗಿ, ಕೊರಕಲು ದಾರಿಯಲ್ಲಿ ಕೆಳಗಿಳಿದು, ಒಂದು ತೋಡಿನ ಬಳಿ ಬರುತ್ತದೆ. ಆ ಸಣ್ಣ ತೋಡಿಗೆ ಇನ್ನೊಂದು ಮರದ ಸಂಕ. ಅದರ ಮೇಲೆ ನಡೆದು, ಗದ್ದೆಯೊಂದನ್ನು ದಾಟಿದರೆ, ನಮ್ಮ ದಾರಿಗಡ್ಡಲಾಗಿ ಮೂರನೆಯ ತೋಡು ಮತ್ತು ಸಂಕ ಎದುರಾಗುತ್ತದೆ (ಒಟ್ಟು ಮೂರು ಸಂಕಗಳನ್ನು ದಾಟಬೇಕಿತ್ತು).
ಮತ್ತೊಮ್ಮೆ ಮರದ ಸಂಕದ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದು ದಾಟಿದರೆ, ಗದ್ದೆಯ ಪಕ್ಕದಲ್ಲೇ ಸಾಗುವ ದಾರಿ. ಈ ತೋಡುಗಳ ಪಕ್ಕದಲ್ಲೆಲ್ಲಾ ನಾನಾ ರೀತಿಯ ಮರಗಳು, ಗಿಡಗಳು, ಬಳ್ಳಿಗಳು, ಮುಂಡುಕನ ಮುಳ್ಳು ಎಲೆಗಳ ಪೊದೆಗಳು. ಮುಂದೆ ಸಾಗುವ ಗದ್ದೆಯಂಚಿನ ದಾರಿಯ ಪಕ್ಕದಲ್ಲೇ ಒಂದು ಗುಮ್ಮಿ (ಪುಟಾಣಿ ಕೆರೆ). ಸದಾ ನೀರಿನಿಂದ ತುಂಬಿರುತ್ತಿದ್ದ ಆ ಗುಮ್ಮಿಯಲ್ಲಿ ತಾವರೆಯಂತೆಯೇ ಕಾಣುವ ಕೋಳ್ ಹೂಗಳು ಅರಳಿ, ನಸುನಗುತ್ತಾ ನಳನಳಿಸುತ್ತಿದ್ದವು. ಆ ಗುಮ್ಮಿಯ ನೀರೆಂದರೆ, ಕಪ್ಪೆಗಳಿಗೆ, ಒಳ್ಳೆ ಹಾವುಗಳಿಗೆ ಬಹು ಇಷ್ಟ.
ಒಳ್ಳೆ ಹಾವುಗಳು ಕಪ್ಪೆ ಹಿಡಿಯಲು ನಡೆಸುತ್ತಿರುವ ಪ್ರಯತ್ನವನ್ನು ನೋಡುತ್ತಾ, ಗುಮ್ಮಿಯ ನೀರಿಗೆ ನಾವು ಜಾರಿ ಬೀಳದಂತೆ ಜಾಗ್ರತೆ ವಹಿಸಿ, ಮುಂದೆ ಸಾಗಿದರೆ, ಒಂದು ಸಣ್ಣ ತೋಟ, ಗುಡಿ ದೇವಸ್ಥಾನ ಎಂಬ ಪುಟ್ಟ ಗುಡಿ. ಅದರ ಪಕ್ಕದ ಓಣಿಯಲ್ಲಿ ನಡೆದು, ಒಂದು ತೊಡಮೆ ದಾಟಿದರೆ, ಖಾಲಿ ಜಾಗದಲ್ಲಿ ಗುಡಿಸಲೊಂದು ಕಾಣಿಸುತ್ತದೆ.
ಅದೇ ನಮ್ಮ ಶಾಲೆ. ನಾವೆಲ್ಲಾ ಹಿಡಿದು ತಂದಿದ್ದ ಓಲಿಕೊಡೆಗಳನ್ನು ಮಡಚುವಂತಿಲ್ಲ; ಹಣೆ (ತಾಳೆ) ಮರದ ಓಲಿಗಳಿಂದ ತಯಾರಿಸಿದ ಆ ವೃತ್ತಾಕಾರದ ಕೊಡೆಯನ್ನು, ನೆಲದಲ್ಲಿ ಇಡಬೇಕು. ಏಕೋಪಾಧ್ಯಾಯ ಮತ್ತು ಏಕಕೊಠಡಿಯ ಆ ಶಾಲೆಯ ಅರ್ಧ ಭಾಗವನ್ನು ನಮ್ಮ ಓಲಿಕೊಡೆಗಳೇ ತುಂಬಿರುತ್ತವೆ! ಶಾಲೆ ಎದುರು ಸ್ವಲ್ಪ ಖಾಲಿ ಜಾಗ. ಅದರಾಚೆ ದಟ್ಟವಾದ ಹಾಡಿ. ಪ್ರತಿದಿನ ಸ್ಲೇಟಿನಲ್ಲಿ ಕನ್ನಡ ಕಾಪಿ ಬರೆಯುವುದು ನಮ್ಮ ಪ್ರಮುಖ ಅಸೈನ್‌ಮೆಂಟ್.
ಸ್ಲೇಟು ಅಳಿಸಲು ಸೋಣೆ ಹೂ ಗಿಡದ ಕಾಂಡದಲ್ಲಿ ಇರುವ ನೀರಿನ ಬಳಕೆ. ಇದಕ್ಕೆಂದೇ, ನಾವೆಲ್ಲಾ ಸೋಣೆ ಗಿಡದ ಕಾಂಡಗಳನ್ನು ತರುತ್ತಿದ್ದುದುಂಟು! ಮಧ್ಯಾಹ್ನದ ಊಟಕ್ಕೆ ಅದೇ ಕಾಡುದಾರಿಯಲ್ಲಿ ನಡೆದು, ಮನೆ ತಲುಪಿ ಊಟ ಮಾಡಿ, ಪುನಃ ಒಂದು ಕಿ.ಮೀ. ನಡೆದು ಶಾಲೆಗೆ ಹಾಜರಾಗುತ್ತಿದ್ದ ಆ ಪರಿಯನ್ನು ನೆನಪಿಸಿಕೊಂಡರೆ ಇಂದಿಗೂ ವಿಸ್ಮಯ! ಹೋಗುವಾಗ ಮೂರು ಬಾರಿ ದಾಟಿದ ಸಂಕವನ್ನು, ಬರುವಾಗಲೂ ದಾಟಬೇಕು. ಒಟ್ಟು ದಿನವೊಂದಕ್ಕೆ, ಹನ್ನೆರಡು ಬಾರಿ ಸಂಕದ ಮೇಲೆ ನಡಿಗೆ ನಮ್ಮದು.
ಒಂದು ದಿನ ಸಂಜೆ ಶಾಲೆ ಮುಗಿಸಿಕೊಂಡು, ಮಾಮೂಲಿ ದಾರಿಯ ಬದಲು, ಮುಡಾರಿಯ ಹಾಡಿ ದಾರಿಯನ್ನು ಹಿಡಿದೆವು. ದಂಡಿಯಾಗಿ ಬಿದ್ದಿರುತ್ತಿದ್ದ ಕಾಟುಮಾವಿನ ಹಣ್ಣನ್ನು ಹೆಕ್ಕುವುದು ನೆಪ. ಈ ದಾರಿಯಲ್ಲಿ ಬಂದರೆ ದಟ್ಟವಾದ ಹಾಡಿ. ಮರಗಳ ನೆರಳಿನಿಂದಾಗಿ, ಅದಾಗಲೇ ಸಂಜೆಗತ್ತಲು ಕವಿಯತೊಡಗಿತ್ತು. ಹಾಡಿಯ ಮಧ್ಯದಲ್ಲಿ ನಡೆಯುವಾಗ, ಒಂದು ದೊಡ್ಡ ದೂಪದ ಮರದಿಂದ ಏನೋ ಹಾರಿದಂತಹ ಸದ್ದು. ಆ ಹಾರಾಟದ ಶೈಲಿ, ಮರದ ಕೊಂಬೆಗಳು ಮತ್ತು ಎಲೆಗಳು ಅಲುಗಿದ ರೀತಿ ಇವೆಲ್ಲವನ್ನೂ ಕಂಡು, ಮಂಗವೊಂದು ಮರದಿಂದ ಮರಕ್ಕೆ ಹಾರಿರಬಹುದು ಎಂದು ಅಂದುಕೊಂಡೆ.
ಆದರೆ ನನ್ನ ಜತೆಯಲ್ಲಿದ್ದ ಹುಡುಗರು ‘ಏ ಅಲ್ಲಿ ಕಾಣು, ಅದೇ ಭೂತ’ ಎಂದು ಬೆದರಿ ಆ ಮರವನ್ನೇ ನೊಡುತ್ತಾ, ಮನೆಯತ್ತ ಓಟಕಿತ್ತರು. ‘ಅದು ಭೂತವಲ್ಲ, ಮಂಗವೊಂದು ಮರದಿಂದ ಮರಕ್ಕೆ ಹಾರಿದ್ದು’ ಎಂದು ನಾನೆಂದರೆ ಅವರಾರೂ ಕೇಳಲು ತಯಾರಿರಲಿಲ್ಲ! ಅವರ ಮನೆಯವರು ನಂಬಿದ, ಹೇಳಿಕೊಟ್ಟ ವಿದ್ಯಮಾನಗಳು ಆ ಮಕ್ಕಳ ತಿಳಿವಳಿಕೆ ಯನ್ನು ರೂಪಿಸಿತ್ತು.
ಮನೆಗೆ ಬಂದು ನಮ್ಮ ಅಮ್ಮಮ್ಮನ ಬಳಿ ಈ ಘಟನೆಯನ್ನು ಹೇಳಿದಾಗ, ‘ಹೌದು, ನೀನು ಕೇಳಿದ್ದು ಮಂಗ ಹಾರಿದ ಸದ್ದು. ಆ ಹಾಡಿಯಲ್ಲಿ ಭೂತ ಇಲ್ಲ. ಧೈರ್ಯವಾಗಿ ಇರಲು ಎಲ್ಲಾ ಮಕ್ಕಳಿಗೆ ಹೇಳು’ ಎಂದು ಧೈರ್ಯ ತುಂಬಿದರು. ನಮ್ಮ ಆ ಗುಡಿಸಲು ಶಾಲೆಯಲ್ಲಿ ಪ್ರತ್ಯೇಕ ಟಾಯಿಲೆಟ್ ಇರಲಿಲ್ಲವಲ್ಲ! ಶಾಲೆಯಿಂದ ತುಸು ದೂರವಿದ್ದ ಒಂದು ಕಾಸಾನು (ಕಾಸರಕ) ಮರದ ಬುಡವೇ ಅಂತಹ ಕೆಲಸಕ್ಕೆ ಸೂಕ್ತ ಜಾಗ. ಪ್ರತಿದಿನ ಕಾಸಾನು ಮರದ ಬುಡದಲ್ಲಿ ಬೆಳೆದಿದ್ದ ಪೊದೆಗಳ ಮೇಲೆ, ಕಾಸಾನು ಮರದ ಹೊಸ ಚಿಗುರಿನ ಮೇಲೆ ಉಪ್ಪು ನೀರು ಹಾರಿಸಿ, ಎಷ್ಟು ದಿನಗಳಲ್ಲಿ ಆ ಗಿಡಗಳ ಎಲೆಗಳು ಕರಟಿ, ಒಣಗಿ ಹೋಗುತ್ತವೆ ಎಂದು ಲೆಕ್ಕ ಹಾಕುವುದು ನಮ್ಮೆಲ್ಲರ ಹವ್ಯಾಸ. ಇದೂ ಒಂದು ಸಸ್ಯಶಾಸ್ತ್ರದ ಪ್ರಾಯೋಗಿಕ ಪಾಠ ವಲ್ಲವೆ? ಕಾಡು ಮತ್ತು ಗದ್ದೆಗಳ ನಡುವೆ ನಡೆದು, ಒಣಹುಲ್ಲು ಬೆಳೆವ ಗುಡ್ಡದ ಮೇಲಿದ್ದ ಆ ಗುಡಿಸಲು ಶಾಲೆಯ ಕುರಿತಾಗಿ ಇನ್ನೂ ಹಲವು ನೆನಪುಗಳಿವೆ. ಪರಿಸರದ ನಡುವೆಯೇ ಇದ್ದ ಆ ಶಾಲೆಯು ನೀಡಿದ ಪರಿಸರ ಪಾಠಗಳ ನೆನಪುಗಳೂ ಇನ್ನೂ ಹಸಿರಾಗಿವೆ.