Roopa Gururaj Column: ರಾಮಚರಿತ ಮಾನಸ: ತಾಯಿ ಕೈಕೇಯಿಯ ಭೇಟಿ ಕ್ಷಮೆಯ ಪರಾಕಾಷ್ಠೆ
ರಾಮನಿಗೆ ರಾಜ್ಯದ ಸಂಪತ್ತಿಗಿಂತ ಪ್ರಜೆಗಳ ನಗುವೇ ದೊಡ್ಡದಾಗಿತ್ತು. ಆಯೋಧ್ಯಾ ಎಂದರೆ ಮನಸ್ಸು. ಅಲ್ಲಿ ಕಾಮ, ಕ್ರೋಧಗಳ ಯುದ್ಧ ನಿಂತಾಗ ಮಾತ್ರ ‘ರಾಮ’ ಪಟ್ಟಾಭಿಷೇಕಗೊಳ್ಳುತ್ತಾನೆ. ನಮ್ಮ ನಾಲಿಗೆಯ ಮೇಲೆ ‘ರಾಮ ನಾಮ’ದ ದೀಪವಿದ್ದರೆ, ಅದು ನಮ್ಮ ಒಳಗಿನ ಕತ್ತಲೆಯನ್ನು ಸರಿಸುವು ದಲ್ಲದೆ, ಹೊರಗಿನ ಸಮಾಜಕ್ಕೂ ಬೆಳಕನ್ನು ನೀಡುತ್ತದೆ.
-
ಒಂದೊಳ್ಳೆ ಮಾತು
ರಾಮಚರಿತ ಮಾನಸದ ಉತ್ತರ ಕಾಂಡದಲ್ಲಿ ಬರುವ ರಾಮರಾಜ್ಯದ ವರ್ಣನೆ ಕೇವಲ ಸುಭಿಕ್ಷೆಯ ಕಥೆಯಲ್ಲ, ಅದು ಮನುಷ್ಯತ್ವದ ಉತ್ತುಂಗದ ಸ್ಥಿತಿ. ಗಡಿಬಿಡಿಯ ನಡುವೆಯೂ ರಾಮನು ಮೊದಲು ಧಾವಿಸಿದ್ದು ತಾಯಿ ಕೈಕೇಯಿಯ ಭವನಕ್ಕೆ. ಅಯೋಧ್ಯೆಯ ಪ್ರಜೆಗಳು ಯಾರನ್ನು ದ್ವೇಷಿಸುತ್ತಿ ದ್ದರೋ, ಯಾರ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದರೋ, ಆ ತಾಯಿಯ ಪಾದಗಳಿಗೆ ರಾಮನು ಪ್ರಣಾಮ ಮಾಡಿದನು.
ಕೈಕೇಯಿ ಕಣ್ಣೀರು ಹಾಕುತ್ತಾ ಪಶ್ಚಾತ್ತಾಪದಿಂದ ನಡುಗುತ್ತಿದ್ದಾಗ, ರಾಮನು ಅವಳನ್ನು ಅಪ್ಪಿಕೊಂಡು ಹೇಳಿದನು, ತಾಯಿ, ನೀನು ಮಾಡಿದ್ದು ತಪ್ಪಲ್ಲ. ವಿಧಿಯ ಆಟದಲ್ಲಿ ನೀನು ನಿಮಿತ್ತಳಾದೆ ಅಷ್ಟೇ. ನಿನ್ನಿಂದಲೇ ನಾನು ಶಬರಿಯ ಭಕ್ತಿ ಕಂಡೆ, ಹನುಮಂತನ ಸ್ನೇಹ ಪಡೆದೆ, ರಾವಣನ ಸಂಹಾರ ಮಾಡಿದೆ.
ನೀನು ನನಗೆ ಅನ್ಯಾಯ ಮಾಡಿಲ್ಲ, ಜಗತ್ತಿಗೆ ಧರ್ಮದ ಹಾದಿ ತೋರಿಸಿಕೊಟ್ಟೆ. ಇಲ್ಲಿ ರಾಮನು ನಮಗೆ ಕಲಿಸುವುದು ದ್ವೇಷವನ್ನು ಪ್ರೀತಿಯಿಂದ ಗೆಲ್ಲುವ ದಾರಿಯನ್ನು. ಒಬ್ಬ ವ್ಯಕ್ತಿಯನ್ನು ಅವರ ತಪ್ಪುಗಳಿಗಾಗಿ ದಂಡಿಸುವುದಕ್ಕಿಂತ, ಅವರನ್ನು ಕ್ಷಮಿಸಿ ಅವರಲ್ಲಿರುವ ಒಳ್ಳೆಯತನವನ್ನು ಎಚ್ಚರಿಸುವುದೇ ಅತಿ ದೊಡ್ಡ ವಿಜಯ.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಅಯೋಧ್ಯೆಯ ತಪಸ್ವಿ ಭರತ
ರಾಮನು ಪಟ್ಟಾಭಿಷೇಕದ ನಂತರ ಅಯೋಧ್ಯೆಯ ಸ್ಥಿತಿ ಹೇಗಿತ್ತು ಎಂಬುದನ್ನು ತುಳಸೀದಾಸರು ತಮ್ಮ ಚೌಪದಿಯಲ್ಲಿ ಹೀಗೆ ಬಣ್ಣಿಸುತ್ತಾರೆ:
ದೈಹಿಕ ದೈವಿಕ ಭೌತಿಕ ತಾಪಾ |
ರಾಮ ರಾಜ್ಯ ನಹಿಂ ಕಾಹುಹಿ ವ್ಯಾಪಾ ||
ಸಬ ನರ ಕರಹಿಂ ಪರಸ್ಪರ ಪ್ರೀತಿ |
ಚಲಹಿಂ ಸ್ವಧರ್ಮ ನಿರತ ಶ್ರುತಿ ರೀತಿ ||
ಭಾವಾರ್ಥ: ರಾಮರಾಜ್ಯದಲ್ಲಿ ಯಾರಿಗೂ ದೈಹಿಕ ಕಾಯಿಲೆಗಳಾಗಲಿ, ದೈವಿಕ ಸಂಕಷ್ಟಗಳಾಗಲಿ ಅಥವಾ ಪ್ರಕೃತಿಯ ವಿಕೋಪಗಳಾಗಲಿ ಕಾಡುತ್ತಿರಲಿಲ್ಲ. ಪ್ರತಿಯೊಬ್ಬ ಮನುಷ್ಯನು ಇನ್ನೊಬ್ಬ ನನ್ನು ತನ್ನವನೆಂಬಂತೆ ಪ್ರೀತಿಸುತ್ತಿದ್ದನು.
ಯಾರೂ ದಾರಿತಪ್ಪುತ್ತಿರಲಿಲ್ಲ, ಎಲ್ಲರೂ ತಮ್ಮ ಧರ್ಮ ಮತ್ತು ಕರ್ತವ್ಯದ ಹಾದಿಯಲ್ಲಿ ನಡೆಯು ತ್ತಿದ್ದರು. ರಾಮರಾಜ್ಯದಲ್ಲಿ ಸಿಂಹಾಸನವು ಕೇವಲ ಅಧಿಕಾರಕ್ಕಷ್ಟೇ ಸೀಮಿತವಾಗಿರಲಿಲ್ಲ. ರಾಮನು ಪ್ರತಿದಿನ ಸಂಜೆ ಪ್ರಜೆಗಳ ನಡುವೆ ಬಂದು ಕುಳಿತು ಅವರ ಕಷ್ಟ-ಸುಖಗಳನ್ನು ಆಲಿಸುತ್ತಿದ್ದನು.
ಬಡವನೊಬ್ಬನ ಗುಡಿಸಲಿಗೆ ಹೋಗಿ ಅವನ ಜೊತೆ ಊಟ ಮಾಡುವುದಾಗಲಿ ಅಥವಾ ವೃದ್ಧರ ಆಶೀರ್ವಾದ ಪಡೆಯುವುದಾಗಲಿ ರಾಮನಿಗೆ ಸಣ್ಣ ಕೆಲಸವೆನಿಸಲಿಲ್ಲ. ಒಮ್ಮೆ ಅಯೋಧ್ಯೆಯ ಪ್ರಜೆಯೊಬ್ಬ ತನ್ನ ಮಗನ ಅಕಾಲಿಕ ಮರಣದಿಂದ ದುಃಖಿತನಾಗಿ ಬಂದಾಗ, ರಾಮನು ಅವನ ಕಣ್ಣೀರನ್ನು ತನ್ನ ಕೈಯಿಂದ ಒರೆಸಿ, ಆ ಸಾವಿನ ಹಿಂದಿನ ಅಧರ್ಮದ ಕಾರಣವನ್ನು ಹುಡುಕಿ ಅದನ್ನು ಸರಿಪಡಿಸಿದನು.
ರಾಮನಿಗೆ ರಾಜ್ಯದ ಸಂಪತ್ತಿಗಿಂತ ಪ್ರಜೆಗಳ ನಗುವೇ ದೊಡ್ಡದಾಗಿತ್ತು. ಆಯೋಧ್ಯಾ ಎಂದರೆ ಮನಸ್ಸು. ಅಲ್ಲಿ ಕಾಮ, ಕ್ರೋಧಗಳ ಯುದ್ಧ ನಿಂತಾಗ ಮಾತ್ರ ‘ರಾಮ’ ಪಟ್ಟಾಭಿಷೇಕಗೊಳ್ಳುತ್ತಾನೆ. ನಮ್ಮ ನಾಲಿಗೆಯ ಮೇಲೆ ‘ರಾಮ ನಾಮ’ದ ದೀಪವಿದ್ದರೆ, ಅದು ನಮ್ಮ ಒಳಗಿನ ಕತ್ತಲೆಯನ್ನು ಸರಿಸುವುದಲ್ಲದೆ, ಹೊರಗಿನ ಸಮಾಜಕ್ಕೂ ಬೆಳಕನ್ನು ನೀಡುತ್ತದೆ.
ರಾಮರಾಜ್ಯ ಎನ್ನುವುದು ಇತಿಹಾಸದ ಒಂದು ಕಾಲಘಟ್ಟ ಮಾತ್ರವಲ್ಲ, ಅದು ಪ್ರತಿಯೊಬ್ಬ ಮನುಷ್ಯನ ಕನಸಾಗಬೇಕು. ನಾವು ಸತ್ಯವನ್ನು ನುಡಿಯುತ್ತಾ, ಪರಸ್ಪರ ಪ್ರೀತಿಯಿಂದ ಬಾಳುತ್ತಾ, ಶತ್ರುಗಳನ್ನೂ ಮನ್ನಿಸುವ ವಿಶಾಲ ಹೃದಯವನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ.
ರಾಮ ಪ್ರೇಮ ಬಿನು ಕುಶಲ ನ ಕೌಹೂಂ |
ಸತ್ಯ ಕಹಉಂ ಸಬ ಪ್ರೀತಹಿ ಚಾಹೂಂ ||
ರಾಮನ ಪ್ರೇಮವಿಲ್ಲದೆ ಈ ಜಗತ್ತಿನಲ್ಲಿ ಯಾರಿಗೂ ಕ್ಷೇಮವಿಲ್ಲ. ಸತ್ಯದ ದಾರಿಯಲ್ಲಿ ನಡೆಯು ವವನಿಗೆ ರಾಮನು ಸದಾ ಜೊತೆಗಿರುತ್ತಾನೆ. ಈ ಮಹಾನ್ ಕಾವ್ಯವು ನಮಗೆ ನೀಡುವ ಸಂದೇಶ ವೆಂದರೆ- ಬದುಕು ಸವಾಲುಗಳಿಂದ ಕೂಡಿರಬಹುದು, ಆದರೆ ಧರ್ಮದ ಹಾದಿ ಹಿಡಿದರೆ ವಿಜಯ ಮತ್ತು ಶಾಂತಿ ಎರಡೂ ನಿಶ್ಚಿತ. ಜೈ ಶ್ರೀರಾಮ.
ನಮ್ಮೊಳಗಿನ ಪ್ರಾಮಾಣಿಕತೆಯ, ಆತ್ಮಸಾಕ್ಷಿಯ ಪ್ರಜ್ಞೆ ಜಾಗೃತವಾದರೆ ನಾವು ಒಬ್ಬೊಬ್ಬರು ಕೂಡ ರಾಮ ರಾಜ್ಯದ ಪ್ರಜೆಗಳಂತೆ ಸಮಾಜದಲ್ಲಿ ಸಾಮರಸ್ಯ, ಬದುಕಿನಲ್ಲಿ ಏಳಿಗೆ , ಜೀವನದಲ್ಲಿ ನೆಮ್ಮದಿ ಯನ್ನು ಕಂಡುಕೊಳ್ಳುವ ಹಾದಿಯಲ್ಲಿ ನಡೆದಂತಾಗುತ್ತದೆ. ಇಂತಹ ಜಾಗೃತಿ ನಮ್ಮೆಲ್ಲರಲ್ಲೂ ಮೂಡಲಿ.