Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು !
ಅಲ್ಲೊಂದು ಅವಿಭಕ್ತ ಕುಟುಂಬವು ಹಲವು ತಲೆಮಾರುಗಳಿಂದ ಬದುಕನ್ನು ಕಟ್ಟಿಕೊಂಡಿತ್ತು. ಆ ಮನೆಯಲ್ಲಿದ್ದ ಮಕ್ಕಳ ಸಂಖ್ಯೆಯೇ ಸುಮಾರು 30! ವಿಶೇಷವೆಂದರೆ, ಆ ಮನೆಯ ಒಡೆತನದಲ್ಲಿ ಎಂ ಬಂತೆ ಒಂದು ಸರಕಾರಿ ಶಾಲೆಯಿತ್ತು! ಮನೆಯಿಂದ ಅನತಿ ದೂರದಲ್ಲಿ, ಒಂದು ತೋಟದಿಂ ದಾಚೆ ಶಾಲಾ ಕಟ್ಟಡ


ಶಶಾಂಕಣ
ಹಳ್ಳಿಗಳಲ್ಲಿನ ಬದುಕು, ದಿನಚರಿ ಶ್ರೇಷ್ಠ ಎಂಬ ಮಾತಿದೆ. ಅಲ್ಲಿನ ಬದುಕಿನಲ್ಲಿ ದೊರಕುವ ಅನುಭವ ವೈವಿಧ್ಯ, ಆಪ್ತ ಭಾವವು ಇಂಥ ಮಾತಿಗೆ ಮೂಲ. ಈತನಕ ಹಲವು ಹಳ್ಳಿಗಳನ್ನು ಕಂಡಿರುವೆ ನಾದರೂ, ಕುಚ್ಚೂರು ಮತ್ತು ಕಬ್ಬಿನಾಲೆ ಎಂಬ ಹಳ್ಳಿಗಳು ನನ್ನ ಮನ ಸೆಳೆದ ಪರಿ ನಿಜಕ್ಕೂ ಅನನ್ಯ. ನಾನು ಕುಚ್ಚೂರಿಗೆ ಮೊದಲ ಬಾರಿ ಹೋಗಿದ್ದು ನಾಲ್ಕನೆಯ ತರಗತಿಯಲ್ಲಿದ್ದಾಗ. ಅಲ್ಲಿಗೆ ಕರೆದೊ ಯ್ದವರು ನಮ್ಮ ಅಮ್ಮಮ್ಮ. ಕರ್ನಾಟಕದ ಅತಿ ಸುಂದರ ಸ್ಥಳಗಳಲ್ಲಿ ಒಂದು ಎನ್ನಬಹುದಾದ ಕಬ್ಬಿನಾಲೆ ಗ್ರಾಮದ ತುತ್ತತುದಿಯಲ್ಲಿರುವ ಜನವಸತಿಯೇ ಕುಚ್ಚೂರು. ಸುತ್ತಲೂ ಕಾಡು, ಬೆಟ್ಟ, ಪರ್ವತಗಳು, ಸದಾ ಹರಿಯುವ ನದಿತೊರೆಗಳು, ಅಲ್ಲಲ್ಲಿ ಅಡಿಕೆ ತೋಟ; ಸಮುದ್ರ ಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿರುವ ಕುಚ್ಚೂರು, ಪ್ರಕೃತಿಮಾತೆಯ ಪುಟ್ಟಕೂಸು ಎನ್ನಬಹು ದಾದ ಸುಂದರ ತಾಣ. ಕುಚ್ಚೂರು ಎಂಬಲ್ಲಿ ನಮ್ಮ ಬಂಧುಗಳ ಮನೆ ಯಿದೆ. ಆ ಮನೆಯ ಎದುರಿ ನಲ್ಲೇ ಒಂದು ಗದ್ದೆ.
ಆ ಗದ್ದೆಯ ತುದಿಯಲ್ಲಿ ನಿಂತರೆ, ಕೆಳಗೆ ಪ್ರಪಾತ, ಅದರಾಚೆ ದಟ್ಟ ಕಾಡು ತುಂಬಿದ ಕಣಿವೆ. ಎಡಭಾಗದಲ್ಲಿ ಮೇಲೇರಿ ನಿಂತ ‘ಸುಳಿಗಲ್ ಬರೆ’ ಎಂಬ ಹೆಸರಿನ ಮಲೆ. ಕೆಳಭಾಗದಲ್ಲಿ ಹರಿಯುತ್ತಿ ರುವ ಪುಟ್ಟ ನದಿಯ ನೀರನಿ ಮೊರತ. ಆ ಗದ್ದೆಯ ತುದಿಯಲ್ಲಿ ನಿಂತು ಸೂರ್ಯಾಸ್ತವನ್ನು ನೋಡುವುದೇ ಒಂದು ದೃಶ್ಯಕಾವ್ಯ ಸವಿದ ಅನುಭವ. ಸುತ್ತಲೂ ಹರಡಿರುವ ಹಸಿರು ತುಂಬಿದ ಪರ್ವತ ಗಳು, ಕಣಿವೆಗಳು, ಅಡಿಗೆ ತೋಟಗಳು; ಅವುಗಳ ನಡುವಿನಿಂದ ಕಾಣುವ ಸೂರ್ಯಾಸ್ತದ ಸೊಬಗನ್ನು ಅಕ್ಷರಗಳಲ್ಲಿ ಬಣ್ಣಿಸುವುದು ಕಷ್ಟ. ಕೆಂಬಣ್ಣದ ಸೂರ್ಯನು ದೂರದ ಸಮುದ್ರದಲ್ಲಿ ಮುಳುಗುವಾಗ, ಇಡೀ ಜಗತ್ತನ್ನೇ ಕೆಂಬಣ್ಣದಲ್ಲಿ ಮುಳುಗಿಸಿ ಬಿಡುತ್ತಾನೆ.
ಹಸಿರನ್ನೇ ಒಡಲಲ್ಲಿ ತುಂಬಿಕೊಂಡಿರುವ ಕುಚ್ಚೂರು, ಆ ಸಂಜೆ ಹೊತ್ತಿನ ಕೆಂಬಣ್ಣದ ಲೋಕ ದಲ್ಲಿ, ಬೇರೊಂದೇ ವರ್ಣಛಾಯೆಯಲ್ಲಿ ಮಿಂದೇಳುತ್ತದೆ, ಮನದಲ್ಲಿ ಕಾವ್ಯಾನುಭವವನ್ನೇ ಮೂಡಿ ಸುತ್ತದೆ. ಕೊನೆಯಲ್ಲಿ ಸೂರ್ಯ ಮರೆಯಾದಾಗ, ಆ ಸುತ್ತಲಿನ ಹಸುರಿನ ಲೋಕವು ನಿಶಾಕತ್ತಲಿನಲ್ಲಿ ನಿಧಾನವಾಗಿ ಅದೃಶ್ಯವಾಗುವಾಗ, ನೋಡುವವರ ಮನಸ್ಸಿನಲ್ಲಿ ಒಂದು ತೆರನ ವಿಷಾದ ತುಂಬಿದ ಅನುಭವ, ಆ ವಿಷಾದದಲ್ಲೂ ಸೂರ್ಯಾಸ್ತದ ಅದ್ಭುತ ನೋಟವನ್ನು ಕಣ್ತುಂಬಿಕೊಂಡ ತೃಪ್ತ ಭಾವ. ಕುಚ್ಚೂರು ಮನೆಗೆ ಆ ನಂತರ ನಾನು ಹಲವು ಬಾರಿ ಹೋಗಿದ್ದೆನಾದರೂ, ನಾಲ್ಕನೆಯ ತರಗತಿಯಲ್ಲಿದ್ದಾಗ ನಡೆದ ಆ ಮೊದಲ ಭೇಟಿ ನಿಜಕ್ಕೂ ವಿಶೇಷ. ಹಲವು ಕೊಠಡಿಗಳಿದ್ದ, ಎರಡು ಮಹಡಿ ಗಳಿದ್ದ ಕುಚ್ಚೂರು ಮನೆಯಲ್ಲಿ 1980ರ ದಶಕದ ತನಕ ಸುಮಾರು 100ರಿಂದ 150 ಜನರು ವಾಸಿಸುತ್ತಿದ್ದರು!
ಅಲ್ಲೊಂದು ಅವಿಭಕ್ತ ಕುಟುಂಬವು ಹಲವು ತಲೆಮಾರುಗಳಿಂದ ಬದುಕನ್ನು ಕಟ್ಟಿಕೊಂಡಿತ್ತು. ಆ ಮನೆಯಲ್ಲಿದ್ದ ಮಕ್ಕಳ ಸಂಖ್ಯೆಯೇ ಸುಮಾರು 30! ವಿಶೇಷವೆಂದರೆ, ಆ ಮನೆಯ ಒಡೆತನದಲ್ಲಿ ಎಂಬಂತೆ ಒಂದು ಸರಕಾರಿ ಶಾಲೆಯಿತ್ತು! ಮನೆಯಿಂದ ಅನತಿ ದೂರದಲ್ಲಿ, ಒಂದು ತೋಟದಿಂ ದಾಚೆ ಶಾಲಾ ಕಟ್ಟಡ. ಆ ಶಾಲೆಗೆ ಉದ್ಯೋಗ ಅರಸಿ ಬರುವ ಉಪಾಧ್ಯಾಯರಿಗೆ ಕುಚ್ಚೂರು ಮನೆ ಯಲ್ಲಿ ಒಂದು ಕೊಠಡಿ ಮೀಸಲು. ಅದು ಏಕೋಪಾಧ್ಯಾಯ ಶಾಲೆ.
ಸಾಮಾನ್ಯವಾಗಿ ದೂರದ ಬಯಲುಸೀಮೆಯಿಂದ ಬರುವ ಅಧ್ಯಾಪಕರು, ಕುಚ್ಚೂರು ಮನೆಯವರು ನೀಡಿದ ಕೊಠಡಿಯಲ್ಲಿ ವಾಸಿಸಿ, ಅವರ ಮನೆಯಲ್ಲೇ ಊಟ ತಿಂಡಿ ಮಾಡುತ್ತಿದ್ದರು; ಅದು ಅನಿವಾರ್ಯ. ಏಕೆಂದರೆ, ಕುಚ್ಚೂರು ಮನೆಯ ಭೌಗೋಳಿಕ ಸನ್ನಿವೇಶ ಹಾಗಿತ್ತು! ಉಡುಪಿ ಜಿಲ್ಲೆಯ ಹೆಬ್ರಿ ಯಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದ ಅಲ್ಲಿಗೆ ನಡೆದುಕೊಂಡೇ ಬರುವ ಅನಿವಾರ್ಯತೆ. ಕಾಡಿನ ನಡುವೆ ಸಾಗುವ ಕಚ್ಚಾ ರಸ್ತೆಯಲ್ಲಿ ಸುಮಾರು ಎರಡು ಗಂಟೆಯ ನಡಿಗೆ! ಆ ಮಹಾ ಕುಟುಂಬದಲ್ಲಿ ನಡೆದ ಒಂದು ಮದುವೆಗೆ, ನಮ್ಮ ಅಮ್ಮಮ್ಮ ಕರೆದುಕೊಂಡು ಹೊರಟಿದ್ದರು.
ಹೆಬ್ರಿ ಸನಿಹ ಬಸ್ ಇಳಿದು, ದಟ್ಟ ಕಾಡಿನ ನಡುವೆ ಸಾಗಿದ್ದ ಕಲ್ಲುತುಂಬಿದ ರಸ್ತೆಯಲ್ಲಿ ನಡೆಯ ತೊಡಗಿದೆವು. ಆ ಸುತ್ತಲಿನ ಎಲ್ಲರಿಗೂ ನಡಿಗೆಯೇ ಪ್ರಧಾನ. ಎದುರಿಗೆ ಸಿಕ್ಕಿದವರೆಲ್ಲರೂ, ಪರಿಚಯ ಇರಲಿ ಬಿಡಲಿ, ‘ದೂರ ಹೊರಟಿದ್ದು?’ ಎಂದು ನಸುನಗುತ್ತಾ ವಿಚಾರಿಸುತ್ತಿದ್ದರು. ಕುಚ್ಚೂರು ಮನೆಗೆ ಎಂದಾಕ್ಷಣ, ಯಾರ ಕಡೆಯ ಬಂಧುಗಳು ಎಂದು ಗುರುತಿಸಿ, ಮಾತನಾಡಿಸಿ ಮುಂದೆ ಹೋಗುತ್ತಿ ದ್ದರು. ಎಲ್ಲರಿಗೂ ಎಲ್ಲರೂ ಪರಿಚಯವಿರುವ ಗ್ರಾಮೀಣ ಪ್ರದೇಶ ಕುಚ್ಚೂರು. ನಡುದಾರಿಯಲ್ಲಿ ನನಗೆ ಸುಸ್ತು; ದಾರಿಯ ಪಕ್ಕದಲ್ಲಿ ಪುಟ್ಟ ಹೋಟೆಲ್. ಅಲ್ಲಿ ಕಾರದ ಕಡ್ಡಿ ಕೊಡಿಸಿ, ಪುಸಲಾಯಿಸಿ ನಡೆಸಿಕೊಂಡು ಹೊರಟರು ನಮ್ಮ ಅಮ್ಮಮ್ಮ.
ಆ ಹೋಟೆಲ್‌ನಲ್ಲಿ ಪುಟ್ಟ ಪಂಜರ; ಅಲ್ಲೊಂದು ಗಿಣಿ ಸಾಕಿದ್ದರು! ಕಬ್ಬಿನಾಲೆಯುದ್ದಕ್ಕೂ ಸಾಗುವ ಆ ರಸ್ತೆಯಲ್ಲಿ, ದಟ್ಟವಾಗಿ ಬೆಳೆದಿದ್ದ ಮರಗಳ ನೆರಳಿನಲ್ಲಿ ನಡೆದಿತ್ತು ನಮ್ಮ ನಡಿಗೆ. ಆ ಆರೆಂಟು ಕಿ.ಮೀ. ದೂರದ ಹಾದಿಯುದ್ದಕ್ಕೂ ಅಲ್ಲಲ್ಲಿ ಸಾಕಷ್ಟು ಮನೆಗಳಿದ್ದವು; ಪ್ರತಿ ಮನೆಗೆ ಒಂದು ಹೆಸರಿತ್ತೋ ಎಂಬಷ್ಟು ಸ್ಥಳನಾಮ ವೈವಿಧ್ಯ!
ಪೆರ್ಲ, ಗುಬ್ಬಿಮಾರು, ಕಜನೆ, ಕೊರ್ತಬೈಲು, ಕೆಪ್ಪನ ಮಕ್ಕಿ, ಕೆಳ ಮಠ, ಮೇಲ್ಮಠ, ಕೊಂಕಣರ ಬೆಟ್ಟು, ಬಾಯರಬೆಟ್ಟು, ಜಾರನಬೆಟ್ಟು, ಕಾಜ ಗಲ್ಲು- ಈ ರೀತಿಯ ಹೆಸರುಗಳು. ಕೆಲವು ಕಡೆ ಒಂದು ಮನೆಗೆಂದೇ ಒಂದು ಹೆಸರು! ನಮ್ಮ ದಾರಿಗಡ್ಡಲಾಗಿ ಒಂದು ಹೊಳೆ ಬಂತು; ಕಲ್ಲುಗಳ ನಡುವೆ ರಭಸದಿಂದ ಹರಿಯುವ, ನೊರೆಯುಕ್ಕುವ ನೀರು. ಆ ಹೊಳೆಯನ್ನು ದಾಟಲು, ಸುಮಾರು 80 ಅಡಿ ಉದ್ದ ಸೇತುವೆ- ಅದನ್ನು ನಿರ್ಮಿಸಿದ್ದು ಬಿಳಲು, ಬೆತ್ತ ಮತ್ತು ಮರದ ತುಂಡುಗಳನ್ನು ಬಳಸಿ!
ಎರಡು ಬೃಹದಾಕಾರದ ಮರಗಳನ್ನು ಆಧರಿಸಿ, ಬಿಳಲುಗಳನ್ನು ಹೆಣೆದು ಮಾಡಿದ ಆ ಸೇತುವೆಯ ಮೇಲೆ ನಡೆಯುತ್ತಾ ಹೋದರೆ, ನಡುದಾರಿಯಲ್ಲಿ ತೂಗಾಡುತ್ತದೆ! ಮೇಘಾಲಯದಲ್ಲಿ ಎಲ್ಲೋ ಕೆಲವು ಕಡೆ ತೂಗಾಡುವ ಬಿಳಲು ಸೇತುವೆ ಇನ್ನೂ ಇವೆಯಂತೆ; ಅಂಥದ್ದೇ ಬಿಳಲು ಸೇತುವೆ ಕಬ್ಬಿ ನಾಲೆಯಲ್ಲಿ ಅಂದು ಸಾಮಾನ್ಯ ಎನಿಸಿತ್ತು! ಆ ಬಿಳಲಿನ ಸೇತುವೆಯನ್ನು ದಾಟುವಾಗ, ನಮ್ಮ ಅಮ್ಮಮ್ಮ ಕೈ ಹಿಡಿದಿದ್ದರೂ, ಮಧ್ಯ ಬಂದಾಗ, ಕೆಳಗೆ ಹರಿವ ರಭಸವಾದ ನೀರನ್ನು ಕಂಡು ಮತ್ತು ಸೇತುವೆ ತೂಗಾಡಿದ ಭರಕ್ಕೆ ನನಗೆ ನಿಜಕ್ಕೂ ಭಯವಾಯಿತು.
ಕುಚ್ಚೂರು ಮನೆಯನ್ನು ತಲುಪಿದಾಗ, ಸಣ್ಣ ಜಾತ್ರೆಯ ಮಧ್ಯೆ ಬಂದು ನಿಂತಂತಾಯಿತು. ಮರು ದಿನ ನಡೆಯಲಿರುವ ಮದುವೆಯಲ್ಲಿ ಪಾಲ್ಗೊಳ್ಳಲೆಂದು ದೂರದೂರಿನಿಂದ ಬಂದಿದ್ದ ಬಂಧುಗಳು, ಬಂಧುಗಳ ಬಂಧುಗಳು (ನಮ್ಮಂಥ ವರು), ಅವರ ಮಕ್ಕಳು ಎಲ್ಲಾ ಅತ್ತಿತ್ತ ಓಡಾಡುತ್ತಿದ್ದರು. ಮರುದಿನದ ಮದುವೆಗಾಗಿ ತೋರಣ ಕಟ್ಟುವವರು ಮಕ್ಕಳನ್ನು ಒಡಗೂಡಿ, ಸಂಭ್ರಮದಿಂದ ಮಾತನಾಡುತ್ತಾ ಅತ್ತಿತ್ತ ಓಡಾಡುತ್ತಿದ್ದರು. ಆ ರಾತ್ರಿ ಅಲ್ಲಿ ಉರಿಸಿದ್ದ ಗ್ಯಾಸ್ ಲೈಟ್‌ನ ಬೆಳಕಿನ ಪ್ರಖರತೆ ಕಂಡು ಬೆರಗಾದೆ; ಗೊಸ್ ಎಂದು ಸದ್ದು ಮಾಡುತ್ತಿದ್ದ, ಮ್ಯಾಂಟಲ್ ಬಳಸಿ ಬೆಳಕು ನೀಡುತ್ತಿದ್ದ ಆ ಸೀಮೆಎಣ್ಣೆ ಆಧಾರಿತ ಸಾಧನವನ್ನು ಅದೇ ಮೊದಲು ಕಂಡಿದ್ದೆ!
ಮದುವೆಗೆಂದು ಹೋಗಿದ್ದ ನಾವು ಮೂರು ದಿನ ಅಲ್ಲೇ ಠಿಕಾಣಿ ಹೂಡಿ, ಮಲೆನಾಡಿನ ನಡುವಿನ ಬದುಕಿನ ಒಂದು ಝಲಕನ್ನು ಅನುಭವಿಸಿದೆವು. ಜಿಗಣೆ, ಇಂಬಳ, ಉಂಬುಳು ಎಂದೆಲ್ಲಾ ಕರೆಸಿ ಕೊಳ್ಳುವ, ಲೋಳೆ ದೇಹದ, ಕಪ್ಪನೆಯ ಪುಟ್ಟ ಜೀವಿಯನ್ನು ನಾನು ಮೊದಲು ಕಂಡದ್ದು ಇಲ್ಲೇ! ಕುಚ್ಚೂರು ಮನೆಯ ಎದುರಿನಲ್ಲೇ, ತುಸು ತಗ್ಗಿನ ಇಳಿಜಾರು ಜಾಗದಲ್ಲಿ ಅಡಿಕೆ ತೋಟವಿದೆ; ಅದರ ನಡುವೆ ಪುಟ್ಟ ತೋಡು ಹರಿಯುತ್ತದೆ; ಅಲ್ಲಿ ಸದಾ ಹರಿಯುವ ನೀರು. ಅಲ್ಲೆಲ್ಲಾ ಏಲಕ್ಕಿ ಗಿಡಗಳು ಪೊದೆಗಳಂತೆ ಬೆಳೆದಿದ್ದವು. ಜತೆಗೆ, ಆ ತಂಪು ಜಾಗದಲ್ಲಿ, ಸುರುಳಿ ಹೂವಿನ ಗಿಡಗಳಿದ್ದವು.
ತೀಕ್ಷ್ಣ ಸುಗಂಧ ಹೊಂದಿದ್ದ ಬಿಳಿ ಬಣ್ಣದ ಸುರುಳಿ ಹೂವನ್ನು ಕೊಯ್ಯಲೆಂದು, ಕುಚ್ಚೂರಿನ ಬಾಲಕರ ಜತೆ ನಾನೂ ಹೊರಟೆ. ಸದಾ ತೇವ ಇರುವ ತೋಡಿನ ಬಳಿ, ಒಂದು ಇಂಬಳ ನನ್ನ ಕಾಲನ್ನು ಕಚ್ಚಿತು! ‘ಅಯ್ಯೋ ಇಂಬಳ, ಕಿತ್ತು ಬಿಸಾಕು’ ಎಂದು ಆ ಮನೆಯ ಹುಡುಗನೊಬ್ಬ ಹೇಳಿದ. ಬೆರಳಿನಲ್ಲಿ ಹಿಡಿದರೆ, ಜಾರಿ ಜಾರಿ ಹೋಗುವ ಇಂಬಳವನ್ನುಕೀಳಲು ನನ್ನಿಂದ ಹೇಗೆ ತಾನೆ ಸಾಧ್ಯ? ಜತೆಗೆ, ಲೋಳೆ ದೇಹದ ಅದನ್ನು ಬೆರಳಿನಿಂದ ಮುಟ್ಟುವುದೇ ಒಂದು ಸಾಹಸ! ಪ್ರತಿದಿನ ಎಂಬಂತೆ ಇಂಬಳವನ್ನು ನೋಡಿದ್ದ, ಅದರೊಂದು ಸಹಬಾಳ್ವೆ ನಡೆಸುತ್ತಿದ್ದ ಆ ಮನೆಯ ಹುಡುಗನೇ ಇಂಬಳವನ್ನು ನಾಜೂಕಿನಂದ ಕಿತ್ತೆಸೆದ. ದೂರ ಹಾರಿ ಬಿದ್ದ ಅದನ್ನು ಕಂಡು, ಎಲ್ಲಾ ಮಕ್ಕಳೂ ನಕ್ಕದ್ದೇ ನಕ್ಕದ್ದು. ಸಣ್ಣ ಸಣ್ಣ ವಿಷಯಕ್ಕೂ ನಕ್ಕು ಸಂತಸದಿಂ ದಿರುತ್ತಿದ್ದರು, ಕುಚ್ಚೂರು ಮನೆಯ ಮಕ್ಕಳು!
100 ರಿಂದ 150 ಜನ ವಾಸವಿದ್ದ ಆ ಮನೆಯ ದಿನಚರಿ ಹೇಗಿತ್ತು? ಅದೊಂದು ಪ್ರತ್ಯೇಕ ಗ್ರಾಮ ವಿದ್ದಂತೆ. ಬೆಳಗಿನ ತಿಂಡಿಗೆ ದೋಸೆ ಮಾಡಿದರೆ, ಎರಡು ದೋಸೆ ಕಲ್ಲುಗಳನ್ನಿಟ್ಟುಕೊಂಡು, ಸೌದೆ ಒಲೆಯ ಮುಂದೆ ಇಬ್ಬರು ಮಹಿಳೆಯರು ಆಸೀನ ರಾಗುತ್ತಿದ್ದರು. ಎಲ್ಲರಿಗೂ ದೋಸೆ ಮಾಡಿ ಕೊಡುವುದೇ ಅವರ ಕೆಲಸ! ಮೊದಲಿಗೆ ಮಕ್ಕಳ ಸಾಲು; ಅವರದ್ದು ಮುಗಿದ ನಂತರ ದೊಡ್ಡವರಿಗೆ. ಮನೆಯವರೆಲ್ಲರೂ ಮಧ್ಯಾಹ್ನದ ಹೊತ್ತಿನಲ್ಲಿ ಸಾಲಾಗಿ ಊಟಕ್ಕೆ ಕುಳಿತಾಗ, ಊಟ ಬಡಿಸಲು ಇಬ್ಬರು ಬೇಕು! ಆ ಮನೆಯಲ್ಲೇ ಒಂದು ಪುಟ್ಟ ದೇಗುಲವಿದೆ; ಪ್ರತಿ ವರ್ಷ ನವರಾತ್ರಿಯಲ್ಲಿ ಸಂಭ್ರಮದ ಆಚರಣೆ ನಡೆಯುತ್ತದೆ. ಇಂದಿಗೂ ಕುಚ್ಚೂರು ಮನೆಯಲ್ಲಿನ ದೇಗುಲದ ನವರಾತ್ರಿ ಆಚರಣೆ ಎಂದರೆ ವಿಶೇಷ ಸಂಭ್ರಮ.
ಕುಚ್ಚೂರು ಮನೆಯ ಅನತಿ ದೂರದಲ್ಲಿತ್ತು ಒಂದು ‘ದೊಂಬೆ’. ದಪ್ಪನೆಯ ಅಡಿಕೆ ಮರದ ಕಾಂಡ ವನ್ನು ಸೀಳಿ, ನೀರು ಹರಿದು ಹೋಗಲು ಅನುಕೂಲವಾಗುವಂತೆ ಚೊಕ್ಕಡ ಮಾಡಿದ ಕಾಂಡವೇ ದೊಂಬೆ. ಅಂಥ ದೊಂಬೆಯನ್ನು ಎತ್ತರದ ಒಂದು ನೀರಿನ ಒರತೆಗೆ ಜೋಡಿಸಿ, 30 ಅಡಿ ನೀರು ನೆಗೆಯುವಂತೆ ಮಾಡಿದ್ದರು. ನೀರು ಬೀಳುವ ಜಾಗದಲ್ಲಿ ಕಲ್ಲಿನ ಚಪ್ಪಡಿ ಮತ್ತು ವಿಶಾಲವಾದ ಜಾಗ. ಸದಾ ನೀರು ಬೀಳುತ್ತಿದ್ದ ಆ ದೊಂಬೆಯ ಅಡಿ ನಿಂತೆ, ದಬದಬನೆ ತಲೆಯ ಮೇಲೆ ಸುರಿವ ಜಲಧಾರೆಯ ಸ್ನಾನ. ಪ್ರತಿದಿನ ಜಲಪಾತಕ್ಕೆ ತಲೆಯೊಡ್ಡುವ ಅವಕಾಶ ಆ ಮನೆಯ ಮಕ್ಕಳಿಗೆ, ದೊಡ್ಡವರಿಗೆ! ಆ ಪ್ರದೇಶದ ಸುತ್ತಲೂ ಹಲವು ಮೈಲುಗಳ ತನಕ ಕಾಡು, ಮಲೆಗಳೇ ಇದ್ದುದರಿಂದ, ಆ ನೀರಿನ ಧಾರೆ ಬೇಸಗೆಯಲ್ಲೂ ಬತ್ತುವುದಿಲ್ಲ. ವಿಶೇಷವೆಂದರೆ, ಕುಚ್ಚೂರು ಮನೆಯ ಅಡುಗೆ ಮನೆ, ಬಚ್ಚಲುಮನೆಗಳಲ್ಲೂ ಇಂಥದ್ದೇ ಪುಟ್ಟ ದೊಂಬೆಗಳಿವೆ! ಅಲ್ಲೆಲ್ಲಾ ಸದಾಕಾಲ, ದಿನದ ಇಪ್ಪತ್ತನಾಲ್ಕು ಗಂಟೆಯೂ ಸುರಿವ ನೀರು!
ಕುಡಿಯಲು ಸಹ ನಿಸರ್ಗವೇ ನೀಡಿದ ನಿರಂತರ ನಲ್ಲಿ ನೀರು! ಆಧುನಿಕತೆಯು ನಿಧಾನವಾಗಿ ಕುಚ್ಚೂರಿಗೂ ಬಂದ ನಂತರ, ಅಡಿಕೆ ಮರದ ದೊಂಬೆಗಳ ಬದಲು, ಪ್ಲಾಸ್ಟಿಕ್ ಪೈಪುಗಳ ಮೂಲಕ ಈಗಲೂ ನೀರು ಬಂದು ಸುರಿಯುತ್ತದೆ, ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ! ಆ ನಂತರವೂ ಹಲವು ಬಾರಿ ಕಬ್ಬಿ ಆ ನಂತರವೂ ಹಲವು ಬಾರಿ ಕಬ್ಬಿನಾಲೆ ಮತ್ತು ಕುಚ್ಚೂರಿಗೆ ಹೋಗಿದ್ದುಂಟು. ಆದರೆ ಮೊದಲ ಭೇಟಿಯ ಬೆರಗು ಇನ್ನೂ ಮಾಸಿಲ್ಲ. ನಂತರದ ದಶಕಗಳಲ್ಲಿ, ಕುಚ್ಚೂರು ಮನೆಯ ಅವಿಭಕ್ತ ಕುಟುಂಬವು, ಭಾಗವಾಯಿತು; ಜಮೀನು, ತೋಟ ಎಲ್ಲವೂ ಭಾಗವಾಗಿ, ಹೆಚ್ಚಿನವರು ಮೂಲಮನೆ ತೊರೆದು, ಸುತ್ತಮುತ್ತಲಿನ ಜಾಗಗಳಲ್ಲಿ ಪ್ರತ್ಯೇಕ ಮನೆ ಕಟ್ಟಿಕೊಂಡರು. ಎಲ್ಲಾ ಮನೆಗಳ ಸುತ್ತಲೂ ಮರಗಿಡಗಳು, ಹಳ್ಳ ತೊರೆಗಳು. ಒಂದು ಮನೆಯವರಂತೂ, ರಭಸದಿಂದ ಹರಿಯುವ ದೊಡ್ಡ ತೊರೆಯೊಂದರ ಮೇಲೆ, ಮರದ ಅಟ್ಟಣಿ ಕೆಗಳನ್ನು ಬಳಸಿ ಮನೆ ಕಟ್ಟಿಕೊಂಡಿ ದ್ದರು!
ಕಾಡಿನ ನಡುವಿನ ಬದುಕು ಕಷ್ಟ; ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಲುಗಟ್ಟಲೆ ನಡೆಯಬೇಕು. ಆ ಮನೆಗೆಂದೇ ಇದ್ದ ಶಾಲೆಯು ಪ್ರಾಥಮಿಕ ಶಾಲೆ. ಆದ್ದರಿಂದ, ಹಲವರು ಪಟ್ಟಣಗಳತ್ತ ಸಾಗಿದರು. ಇಪ್ಪತ್ತೊಂದನೆಯ ಶತಮಾನವು ಎಲ್ಲೆಡೆ ಬದಲಾವಣೆ ತಂದಿರುವಂತೆ, ಕಬ್ಬಿನಾಲೆ-ಕುಚ್ಚೂರಿ ನಲ್ಲೂ ಬದಲಾವಣೆಗಳನ್ನು ತಂದಿದೆ. ಈಗ ಬಸ್ ರಸ್ತೆಯಿದೆ; ಕಾರುಗಳು ಚಲಿಸಬಹುದಾದ ಟಾರು ರಸ್ತೆಯಿದೆ. ವಿದ್ಯೆ ಕಲಿತ ಹಲವರು ಕೆಲಸದ ನಿಮಿತ್ತ ಬೆಂಗಳೂರು, ಮಂಗಳೂರು, ಉಡುಪಿ ಮೊದ ಲಾದ ಪಟ್ಟಣಗಳನ್ನು ಸೇರಿದ್ದಾರೆ. ಹಲವರು ಅಲ್ಲೇ ನೆಲೆಸಿದ್ದಾರೆ. ಆ ಕಾಡಿನ ನಡುವೆ ಈಗ ಹೋಂ ಸ್ಟೇಗಳೂ ಆರಂಭವಾಗಿವೆ! ಪ್ರಕೃತಿಯ ಮಡಿ ಲಲ್ಲಿರುವ ಈ ಸುಂದರ ಗ್ರಾಮ ಇಂದಿಗೂ ಹಸುರಿ ನಿಂದ ತುಂಬಿದೆ. ಮತ್ತೊಮ್ಮೆ ಅಲ್ಲಿಗೆ ಹೋಗಿ ನಾಲ್ಕಾರು ದಿನ ತಂಗಬೇಕು ಎಂಬ ಆಸೆ ಮೂಡಿಸು ತ್ತಿದೆ.