ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಕಾಡಿನಲ್ಲಿ ಕಳೆದುಹೋಗುವ ಅಪೂರ್ವ ಅನುಭವ !

ಅದು 1980ರ ದಶಕ. ಮೊಬೈಲ್ ಬಿಡಿ, ಆಗಿನ್ನೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಮಾರುವ ಪದ್ಧತಿ ಯೂ ಇರಲಿಲ್ಲ. ಎಣ್ಣೆಯನ್ನು ಸಂಗ್ರಹಿಸಬಹುದಾದ ಒಂದು ಲೀಟರ್ ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ನೀರನ್ನು ತುಂಬಿಸಿಕೊಂಡು, ಚಾರಣ ಹೋಗುವ ಪದ್ಧತಿ. ಇಂತಹ ಸಿದ್ಧತೆಯೊಂದಿಗೆ, ಆ ಒಂದು ಸಾಹಸದ ಚಾರಣಕ್ಕೆ ನಾವು ಎಂಟು ಜನ ಹೊರಟೆವು. ಆಯ್ದುಕೊಂಡದ್ದು ಕೊಡಚಾದ್ರಿ ಶಿಖರ ವನ್ನು (4400ಅಡಿ).

ಕಾಡಿನಲ್ಲಿ ಕಳೆದುಹೋಗುವ ಅಪೂರ್ವ ಅನುಭವ !

-

ಶಶಾಂಕಣ

ದಟ್ಟ ಕಾಡಿನಲ್ಲೋ, ದೂರದ ಬೆಟ್ಟಗುಡ್ಡಗಳಲ್ಲೋ ಕಳೆದುಹೋಗುವ ಅನುಭವ ಇದೆಯಲ್ಲಾ, ಅದು ಬಹುಅಪರೂಪದ್ದು. ಅದನ್ನು ‘ಥ್ರಿಲ್ಲಿಂಗ್’ ಅಂತಲೂ ಕರೆಯಬಹುದು, ರೋಮಾಂಚಕ ಎನ್ನಲೂ ಬಹುದು, ಕೆಲವು ಬಾರಿ ನೋವುಗಳ ಸರಮಾಲೆಯನ್ನೇ ತಂದಿಡುವ ಅಪಾಯಕಾರಿ ಅನುಭವ ಎಂತಲೂ ಹೇಳಬಹುದು.

ಕಳೆದ ವಾರ, ಕೊಡಗಿನ ಕಾಡು ಗುಡ್ಡಗಳ ನಡುವೆ ಮಹಿಳೆಯೊಬ್ಬರು ಮೂರ‍್ನಾಲ್ಕು ದಿನ ಕಳೆದು ಹೋಗಿ, ಮತ್ತೆ ಪತ್ತೆಯಾದ ಸುದ್ದಿ, ಆ ಸುದ್ದಿ ಸೃಷ್ಟಿಸಿದ ಸಂಚಲನ ಕಂಡು, ‘ಕಾಡಿನಲ್ಲಿ ಕಳೆದು ಹೋಗುವ’ ಅಪೂರ್ವ ಅನುಭವಗಳ ನೆನಪಾಯಿತು.

ಬೆಟ್ಟಗುಡ್ಡಗಳಲ್ಲಿ ಚಾರಣ ಹೋಗುವವರು, ಹಳ್ಳಿಗಾಡಿನ ಕಾಲ್ದಾರಿಯಲ್ಲಿ ಬಹು ದೂರ ನಡೆದು ಗುರಿ ತಲುಪಬೇಕಾದವರು, ಹಲವು ಬಾರಿ ದಾರಿ ತಪ್ಪಿದ ಅನುಭವ ಪಡೆದಿರುತ್ತಾರೆ. ಕಾಡು, ಹಾಡಿಗಳಲ್ಲಿ, ಅದರಲ್ಲೂ ಸಂಜೆಯ ಹೊತ್ತಿನಲ್ಲಿ, ಈ ‘ದಾರಿ ತಪ್ಪುವುದು’ ಅದೆಷ್ಟು ಸಾಮಾನ್ಯ ಎಂದರೆ, ನಮ್ಮ ಹಳ್ಳಿಯಲ್ಲಿ, ಅಂತಹ ಅನುಭವ ಪಡೆದವರು, ಒಂದು ನಂಬಿಕೆಯನ್ನೇ (ಮೂಢನಂಬಿಕೆ) ಹುಟ್ಟು ಹಾಕಿದ್ದಾರೆ: ಅದೇನೆಂದರೆ, ಕಾಡಿನಲ್ಲಿ ದಾರಿ ತಪ್ಪುವ ಬಳ್ಳಿ ಇದೆಯಂತೆ; ಅದು ಕಾಲಿಗೆ ತಾಗಿದರೆ, ಆ ದಿನ ದಾರಿ ತಪ್ಪಿ, ಎಲ್ಲೆಲ್ಲೋ ಅಲಯಬೇಕಂತೆ!

ಅದಾವ ಬಳ್ಳಿ ಎಂದು ಕೇಳಿದರೆ, ‘ಯಾರೂ ನೋಡದಂತಹ ನಿಗೂಢ ಬಳ್ಳಿ’ ಎಂದು ಹೇಳಿ, ಬೆರಗಿನಲ್ಲಿ ಮುಳುಗಿ ಹೋಗುತ್ತಾರೆ. ನಾನು ಬಹು ಹಿಂದೆ ಕೆಲವು ಚಾರಣಗಳನ್ನು ಕೈಗೊಂಡಾಗ, ಒಂದೆರಡು ಬಾರಿ ದಾರಿ ತಪ್ಪಿದ ಅನುಭವವಾಗಿದೆ; ಆಗ ಅನುಭವಿಸಿದ ಅಪರೂಪದ ಅನುಭವ ನೆನಪಿಸಿಕೊಳ್ಳಲು ಬಹು ಆಪ್ತ ಎನಿಸುತ್ತಿದೆ.

ಇಲ್ಲಿ ‘ಬಹು ಹಿಂದೆ ಕೈಗೊಂಡ ಚಾರಣ’ ಎಂಬುದು ತುಸು ಮುಖ್ಯ; ಏಕೆಂದರೆ, ಆಗ ಅಂತರ್ಜಾಲ ಇರಲಿಲ್ಲ, ಮೊಬೈಲ್ ಇರಲಿಲ್ಲ, ಮೊಬೈಲ್‌ನಲ್ಲಿ ಮ್ಯಾಪ್ ನೋಡುವ ಅವಕಾಶವೂ ಇರಲಿಲ್ಲ. ಎಷ್ಟೋ ಬಾರಿ ನಾವು ಕೈಗೊಂಡ ಚಾರಣಗಳಿಗೆ ಕೆಲವು ಸ್ಥಳೀಯರ ಬಾಯ್ಮಾತಿನ ಮಾರ್ಗದರ್ಶನವೇ ಮೂಲಾಧಾರ.

ಇದನ್ನೂ ಓದಿ: Shashidhara Halady Column: ಘಮಘಮಿಸುವ ಆ ವ್ಯಂಜನವನ್ನು ತಯಾರಿಸುವ ಕಾಲ !

ಅದೊಂದು ಹುಂಬತನದ ನಡಿಗೆ, ‘ಹೋಗಿಯೇ ನೋಡೋಣ, ಏನಾಗುತ್ತದೋ ನೋಡೋಣ, ಅಪಾಯ ಏನೂ ಆಗುವುದಿಲ್ಲ’ ಎಂಬ ಹುಚ್ಚು ಧೈರ್ಯ. ಇಂತಹ ಹುಚ್ಚು ಧೈರ್ಯದಲ್ಲಿ ಆ ಒಂದು ಚಾರಣ ಕೈಗೊಂಡಾಗ, ನಮ್ಮ ಬಳಿ ಮೊಬೈಲ್ ಇರಲಿಲ್ಲ, ಮ್ಯಾಪ್ ಇರಲಿಲ್ಲ, ಕಣ್ಣಾಂದಾಜಿನ ನೋಟವೇ ದಿಕ್ಸೂಚಿ!

ಅದು 1980ರ ದಶಕ. ಮೊಬೈಲ್ ಬಿಡಿ, ಆಗಿನ್ನೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಮಾರುವ ಪದ್ಧತಿಯೂ ಇರಲಿಲ್ಲ. ಎಣ್ಣೆಯನ್ನು ಸಂಗ್ರಹಿಸಬಹುದಾದ ಒಂದು ಲೀಟರ್ ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ನೀರನ್ನು ತುಂಬಿಸಿಕೊಂಡು, ಚಾರಣ ಹೋಗುವ ಪದ್ಧತಿ. ಇಂತಹ ಸಿದ್ಧತೆಯೊಂದಿಗೆ, ಆ ಒಂದು ಸಾಹಸದ ಚಾರಣಕ್ಕೆ ನಾವು ಎಂಟು ಜನ ಹೊರಟೆವು. ಆಯ್ದುಕೊಂಡದ್ದು ಕೊಡಚಾದ್ರಿ ಶಿಖರ ವನ್ನು (4400ಅಡಿ).

ಕೊಲ್ಲೂರು ದೇವಸ್ಥಾನದಲ್ಲಿ ನಿಂತು ಪೂರ್ವ ದಿಕ್ಕಿಗೆ ನೋಡಿದರೆ, ಕೊಡಚಾದ್ರಿ ಶಿಖರವು ಎತ್ತರ ವಾಗಿ, ಸುಂದರವಾಗಿ ಕಾಣಿಸುತ್ತದೆ. ಕರಾವಳಿಯವರು, ಆ ಶಿಖರ ಏರಲು, ಬಸ್ ಮೂಲಕ ಘಟ್ಟ ಹತ್ತಿ, ನಾಗೋಡಿ ಎಂಬ ಹಳ್ಳಿಯ ಬಳಿ ಇಳಿದು, ಕಾಡಿನ ನಡುವೆ ಸುತ್ತಿಕೊಂಡು ಸಾಗುವ ದಾರಿಯನ್ನು ಅನುಸರಿಸುವುದು ಪದ್ಧತಿ.

ನಾಗೋಡಿಯಿಂದ ತುಸು ಮುಂದೆ ಸಂಪೆಕಟ್ಟೆ ಎಂಬ ಹಳ್ಳಿಗೆ ಹೋದರೆ, ಜೀಪ್ ದಾರಿಯೂ ಇತ್ತು. ಆ ಜೀಪ್ ದಾರಿಯನ್ನು ಖನಿಜ ಶೋಧನೆಗಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು. ಮಾಮೂಲಿ ದಾರಿಯಲ್ಲಿ ಹಲವು ಬಾರಿ ಕೊಡಚಾದ್ರಿ ಏರಿದ್ದರಿಂದಾಗಿ, ಹೊಸ ದಾರಿಯಲ್ಲಿ ಏರೋಣ ಎಂದ ವರು, ನಮ್ಮ ತಂಡದ ನಾಯಕ ಉಡುಪಿಯ ಜಯರಾಂ. ಕೊಲ್ಲೂರು ದೇಗುಲದಿಂದ ನೇರವಾಗಿ, ಆ ಶಿಖರ ಕಾಣಿಸುವ ದಿಕ್ಕಿನಲ್ಲೇ ನಡೆಯುವುದು ಎಂಬುದು ಅವರ ನಿರ್ಣಯ. ಅದೊಂದು ಹುಚ್ಚು ಸಾಹಸವೇ. ಏಕೆಂದರೆ, ಆ ದಾರಿಯ ನಡುವೆ ಬಹು ದಟ್ಟವಾದ ಕಾಡು ಇತ್ತು, ಇಂದಿಗೂ ಇದೆ. ಅಸಲು ಅಲ್ಲಿ ದಾರಿಯೇ ಇಲ್ಲ!

Screenshot_5 ok

‘ನೋಡೇ ಬಿಡೋಣ, ತೊಂದರೆ ಏನೂ ಆಗೋದಿಲ್ಲ. ಬನ್ನಿ’ ಎಂದು ಅವರು ಮುಂದೆ ಹೊರಟರು, ನಾವು ಏಳು ಮಂದಿ ವಿದ್ಯಾರ್ಥಿಗಳು ಅವರನ್ನು ಅನುಸರಿಸಿದೆವು. ನಡು ಮಧ್ಯಾಹ್ನದ ಹೊತ್ತಿಗೆ ನಮ್ಮ ಚಾರಣ ಆರಂಭವಾಯಿತು. ಮೊದಲಿಗೆ ದಳಿ ಎಂಬ ಹಳ್ಳಿಯ ಬಳಿ ಬಂದೆವು; ಅಲ್ಲಿನ ತನ ದಾರಿ ಇತ್ತು; ಆ ನಂತರ ಗೊಂಡಾರಣ್ಯ, ಅಲ್ಲಿಂದಾಚೆಗೆ ಜನವಸತಿ ಇಲ್ಲ. ಆದರೂ, ಆ ಮರಗಳ ನಡುವೆ ಒಂದು ಕಚ್ಚಾ ರಸ್ತೆ ಏರಿ ಹೋಗಿತ್ತು. ಅದರಲ್ಲೇ ಹೊರಟೆವು; ಒಂದೆರಡು ಕಿ.ಮೀ. ನಡೆದಾಗ, ದಟ್ಟ ಅರಣ್ಯದ ಮಧ್ಯೆ, ಆ ರಸ್ತೆಯ ತುದಿಯಲ್ಲಿ ಒಂದು ಲಾರಿ ನಿಂತಿತ್ತು! ಅದರ ತುಂಬಾ ಮರವನ್ನು ತುಂಬಿದ್ದರು. ನಾಲ್ಕೆಂಟು ಮಂದಿಯೂ ಅಲ್ಲಿ ನಿಂತಿದ್ದರು.

‘ಇಲ್ಲಿಂದ ಮುಂದೆ ದಾರಿ ಇಲ್ಲ. ನೀವೆಲ್ಲಾ ಎಲ್ಲಿಗೆ ಹೊರಟದ್ದು?’ ಎಂದ ಒಬ್ಬ ವ್ಯಕ್ತಿ. ‘ನಮಗೆ ದಾರಿ ಬೇಡ. ಕೊಡಚಾದ್ರಿ ಶಿಖರದ ತುದಿಗೆ ಹೋಗುತ್ತಿದ್ದೇವೆ’ ಎಂದು, ಆ ಕಚ್ಚಾ ರಸ್ತೆಯ ಕೊನೆಯ ಬಿಂದುವನ್ನು ದಾಟಿ, ಮರಗಳ ನಡುವಿನ ಒಂದು ಕಲ್ಲಿನ ಏಣನ್ನು ಹತ್ತಿದೆವು. ಅಲ್ಲಿಂದಾಚೆ ದಟ್ಟವಾದ ಕಾಡು; ಅಲ್ಲಲ್ಲಿ ಕಾಡು ಪ್ರಾಣಿಗಳು ನಡೆದ ಜಾಡು.

ಪೊದೆಗಳು; ಮುಳ್ಳುಗಳು. ಬಿರುಬಿಸಿಲಿನ ದಿನ; ಕೈಯಲ್ಲಿದ್ದ ಒಂದು ಲೀಟರ್ ನೀರು ಖಾಲಿಯಾಗಿತ್ತು. ನಮ್ಮ ಗುರಿ ಎಲ್ಲಿದೆ ಎಂದು ಗೊತ್ತಿಲ್ಲ, ದೂರದಲ್ಲಿ ಏನೂ ಕಾಣಿಸುತ್ತಲೂ ಇಲ್ಲ! ಏಕೆಂದರೆ, ನಮ್ಮ ಸುತ್ತಲೂ ಎತ್ತರವಾದ ಮರಗಳ ಗೊಂಡಾರಣ್ಯ!

ಸಂಜೆ ಐದರ ಹೊತ್ತಿಗೆ, ಒಂದು ಕಡೆ ಮರಗಳ ತೆರವು ಕಾಣಿಸಿತು; ತುಸು ಮಟ್ಟಸ ಜಾಗ; ಅಲ್ಲಿ ಮರಗಳ ನಡುವೆ, ಕೊಡಚಾದ್ರಿ ಶಿಖರ ಕಾಣಿಸಿತು. ಅದು ಗೋಡೆಯ ರೀತಿ, ಬಹು ಎತ್ತರಕ್ಕೆ ಏರಿ ಹೋಗಿತ್ತು!

‘ಇವತ್ತು ಇಲ್ಲೇ ಉಳಿಯಬೇಕು, ಮೊದಲು ನೀರು ಇರುವ ಜಾಗ ಹುಡುಕಿ’ ಎಂದರು ತಂಡದ ನಾಯಕ ಜಯರಾಂ. ನಸುಗತ್ತಲಾಗುತ್ತಿದೆ; ಯಾರ ಬಳಿಯೂ ನೀರಿಲ್ಲ! ಒಣಗಿದ ತೊರೆಯ ಜಾಡು ಕಾಣಿಸಿ, ಅದರ ಅಂಚಿನಲ್ಲೇ ಕೆಳಭಾಗದತ್ತ ಓಡಿದೆವು; ಕತ್ತಲಾಗುವ ಹೊತ್ತಿಗೆ, ಆ ತೊರೆಯಲ್ಲಿ ಒಂದು ಪುಟ್ಟ ಗುಂಡಿ, ಅಲ್ಲಿತ್ತು ನೀರು!

ಎಲ್ಲರೂ ಗಟಗಟನೆ ಕುಡಿದೆವು; ‘ಸೌದೆ ಸಂಗ್ರಹಿಸಿ, ರಾತ್ರಿ ಇಡೀ ಶಿಬಿರಾಗ್ರಿ ಉರಿಯಬೇಕು’ ಎಂದರು ನಾಯಕ ಜಯರಾಂ. ಆ ನಸುಗತ್ತಲಲ್ಲೇ ಅತ್ತಿತ್ತ ಓಡಾಡಿ, ಒಣಸೌದೆ ಸಂಗ್ರಹಿಸಿದೆವು; ನಮ್ಮಲ್ಲಿ ಒಬ್ಬಿಬ್ಬರ ಕೈಯಲ್ಲಿ ಪುಟಾಣಿ ಬ್ಯಾಟರಿ ಇತ್ತು. ಊರಿನಿಂದ ತಂದಿದ್ದ ಅಲ್ಯುಮಿನಿಯಂ ಡಬರಿ ಯಲ್ಲಿ ಅಕ್ಕಿ ಬೇಯಿಸಿ, ಗಂಜಿ ಮಾಡಿ ಉಂಡೆವು.ಆ ರಾತ್ರಿಗೆ, ಮರಗಳೇ ನಮ್ಮ ನೆರಳು; ಬೆಂಕಿ ಹಚ್ಚಿ, ಅದರ ಸುತ್ತಲೂ ಕುಳಿತು, ಹರಟತೊಡಗಿದೆವು.

ಅಷ್ಟರಲ್ಲಿ, ಅದಾವುದೋ ಕಾಡುಪ್ರಾಣಿ ಪೊದೆಗಳ ನಡುವೆ ಓಡಿದ ಸದ್ದು! ಬೆಂಕಿ ಉರಿ ಜಾಸ್ತಿ ಮಾಡಿದೆವು; ಬೆಳಗಿನ ತನಕ ಶಿಬಿರಾಗ್ನಿ ಇರುವಂತೆ ನೋಡಿಕೊಂಡು, ಬೆಳಗ್ಗೆ ಪುನಃ ಅಕ್ಕಿ ಬೇಯಿಸಿ, ಗಂಜಿ ಮಾಡಿ, ಉಪ್ಪಿನ ಕಾಯಿ ಹಾಕಿ ಸೇವಿಸಿ, ನಡೆಯತೊಡಗಿದೆವು. ನೇರವಾದ ಆ ಕೊಡಚಾದ್ರಿಯ ಭಿತ್ತಿಯನ್ನು ಏರಿ, ಅಂಬಾವನ ಎಂಬ ದಟ್ಟ ಅರಣ್ಯದ ನಡುವೆ ದಾರಿ ಮಾಡಿಕೊಂಡು ಶಿಖರ ತಲುಪಿದಾಗ, ಮಧ್ಯಾಹ್ನದ 1 ಗಂಟೆಯ ಸಮಯ.

‘ಈ ದಟ್ಟ ಕಾಡಿನಲ್ಲಿ ನಡೆದು ಬಂದವರು ನೀವೇ ಮೊದಲು’ ಎಂದರು, ಶಿಖರದಲ್ಲಿದ್ದ ಮನೆಯ ವರು. ಆ ರಾತ್ರಿ ನಾವು ದಟ್ಟ ಅರಣ್ಯದಲ್ಲಿ ಕಳೆದ ನೆನಪು ಇಂದಿಗೂ ಆಪ್ತ ಎನಿಸಿದೆ. ಆ ಚಾರಣದಲ್ಲಿ, ಅಪಾಯ ಸಂಭಾವ್ಯತೆ ಇತ್ತು; ಆದರೆ, ಥ್ರಿಲ್ ಇತ್ತು, ರೋಮಾಂಚಕಾರಿ ಅನುಭವವಿತ್ತು; ಸ್ಥಳದಲ್ಲೇ ನಿರ್ಣಯ ಕೈಗೊಂಡು, ಕಾರ್ಯ ರೂಪಕ್ಕೆ ತರಬೇಕಾದ ಸವಾಲು ಇತ್ತು, ಜವಾಬ್ದಾರಿಯೂ ಇತ್ತು.

ಮರಗಳೇ ನಮ್ಮ ನೆರಳು; ಅಲ್ಲಿ ನಮ್ಮ ರಕ್ಷಣೆಗಾಗಿ, ರಾತ್ರಿಯಿಡೀ ಬೆಂಕಿಯನ್ನ ಉರಿಸಬೇಕೆಂಬ ಕಾಳಜಿ, ಜಾಗ್ರತೆ ನಮ್ಮಲ್ಲಿತ್ತು. ಅಂದು ನಾವು ದಾರಿ ಕಳೆದುಕೊಂಡು, ಕಾಡಿನ ನಡುವೆ ಕಳೆದು ಹೋಗಿದ್ದೆವು!

ಚಾರಣ ಮಾಡಿದವರೆಲ್ಲರಿಗೂ, ಮನಸ್ಸಿನ ಮೂಲೆಯಲ್ಲಿ, ಇಂತಹ ‘ಕಳೆದು ಹೋಗುವ’ ಅನುಭವಕ್ಕಾಗಿ ಒಂದು ಹಪಹಪಿತನವಿತ್ತದೆ. ಬೆಟ್ಟ ಗುಡ್ಡಗಳಲ್ಲಿ ನಡೆದವರಿಗೆ ಇದು ಗೊತ್ತು - ದಾರಿ ಕಳೆದುಹೋಗಿ, ಎಲ್ಲೆಲ್ಲೋ ಅಲೆದು ಪುನಃ ಸರಿದಾರಿಗೆ ಬಂದಾಗ ದೊರಕುವ ಥ್ರಿಲ್ಲಿಂಗ್ ಅನುಭವ ಅದು. ಚಾರಣ ಹೋಗಿದ್ದಾಗ, ಅಂತಹದೊಂದು ಅನುಭವ ನಮಗೂ ಆಗಲಿ ಎಂಬ ಆಸೆ ನಮ್ಮ ಮನದ ಮೂಲೆಯಲ್ಲಿರುತ್ತದೇನೋ ಎಂಬ ಅನುಮಾನವೂ ನನಗಿದೆ.

ಇಲ್ಲವಾದರೆ, ಈ ಮುಂದಿನ ಒಂದು ಚಾರಣವನ್ನು ನಾವು ಮಾಡಿದ್ದಾರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗಲಾರದು! ಮೂಡಿಗೆರೆಯ ಬಳಿ ಸುಂಕಸಾಲ್ ಎಂಬ ಹಳ್ಳಿಯಿದೆ; ಅಲ್ಲೇ ಸನಿಹದಲ್ಲಿ ಪಶ್ಚಿಮ ಘಟ್ಟಗಳು ಮುಗಿಯುವ ಸ್ಥಳ; ಅಂದರೆ, ಕಡಿದಾದ ಪ್ರಪಾತದ ಅಂಚು ಅಲ್ಲಿದೆ. ಅಂತಹ ಸುಂದರ ತಾಣದಲ್ಲಿ ರಾಣಿ ಝರಿ ಎಂಬ ಬೃಹತ್ ಗಾತ್ರದ, ನೇರ ಇಳಿತ ಕಾಣುವ ಪ್ರಪಾತವಿದೆ.

ಅಕ್ಟೋಬರ್ ತಿಂಗಳಿನ ಒಂದು ದಿನ, ನಾವು ಮೂವರು ಗೆಳೆಯರು ರಾಣಿ ಝರಿ ನೋಡೋಣ ಎಂದು, ಸುಂಕಸಾಲ್ ಬಳಿ ಬಸ್ ಇಳಿದು, ಬೆಟ್ಟದ ದಾರಿಯನ್ನು ಏರತೊಡಗಿದೆವು. ಕೆಲವೇ ಕಿ.ಮೀ. ಏರಿದ ನಂತರ ಸಿಗುವ ರಾಣಿ ಝರಿಯು, ನಮ್ಮ ರಾಜ್ಯದ ಅತಿ ಸುಂದರ ತಾಣಗಳಲ್ಲಿ ಒಂದು. ಈಚಿನ ದಿನಗಳಲ್ಲಿ, ಅದಕ್ಕೆ ಸ್ವಲ್ಪ ಪ್ರಚಾರ ದೊರಕಿದ್ದರೂ, ಸಾವಿರಾರು ಅಡಿ ಉದ್ದದ, ನೂರಾರು ಅಡಿ ಕಡಿದಾದ ಅಂತಹ ಪ್ರಪಾತದ ದೃಶ್ಯಕ್ಕೆ, ಸಿಗಬೇಕಾದ ಪ್ರಚಾರ ಇನ್ನೂ ದೊರಕಿಲ್ಲ.

ಇರಲಿ, ಅದು ಹೀಗೆಯೇ ಇರಲಿ, ಪ್ರವಾಸಿಗರು ನಡೆಸುವ ತಿಳಿಗೇಡಿತನದಿಂದ ದೂರವಾಗಿರಲಿ ಎಂದು ಪ್ರಕೃತಿಪ್ರೇಮಿಗಳೆಲ್ಲರೂ ಆಶಿಸಬೇಕು, ಅಂತಹ ತಾಣ ಅದು. ಆದರೆ, ನಾವು ಹೋಗಿದ್ದ ದಿನ ಅಲ್ಲಿ ಮೋಡ! ಗಾಳಿ ಬೀಸಿದಾಗ, ಮೋಡದ ಆಟವನ್ನು ನೋಡುವ ಅವಕಾಶವಿದ್ದರೂ, ರಾಣಿ ಝರಿ ಪ್ರಪಾತದ ಸುಂದರ ನೋಟ ದಕ್ಕಲಿಲ್ಲ. ನಮ್ಮ ಚಾರಣ ಬಹುಬೇಗನೆ ಮುಗಿದುಹೋಗು ವಂತಾಯಿತು.

ಆಗ ನಮ್ಮ ತಲೆಯಲ್ಲಿ ಮೊಳೆದದ್ದೇ, ‘ಬಂಡಾಜೆ ಅರ್ಬಿ’ಯ ಚಾರಣದ ಕನಸು. ಆ ತಾಣದಿಂದ ಹೊರಟು, ಬಲ್ಲಾಳರಾಯನ ದುರ್ಗದ ಅಂಚಿನಲ್ಲೇ ಸಾಗಿದರೆ, ಕೆಲವು ಕಿ.ಮೀ. ಅಂತದಲ್ಲಿ ಬಂಡಾಜೆ ಅರ್ಬಿ ಜಲಪಾತವಿದೆ ಎಂಬ ಮಾಹಿತಿ ನಮಗಿತ್ತು. ಆ ಜಲಪಾತವನ್ನು ನೋಡಲು, ಅತ್ತ ಕರಾವಳಿಯ ಕೆಳಭಾಗದಿಂದಲೂ ದಾರಿ ಇದೆ.

ರಾಣಿ ಝರಿಯಿಂದ ಹೋಗುವ ದಾರಿಯಲ್ಲಿ ಸಾಗಿದರೆ, ನಾವು ಬಂಡಾಜೆ ಅರ್ಬಿಯ ತುದಿಯನ್ನು ತಲುಪಬಹುದು. ‘ಎಂತಿದ್ದರೂ ಸಮಯವಿದೆ, ಬಂಡಾಜೆ ಅರ್ಬಿಗೆ ಹೋಗೋಣ’ ಎಂದು ನಿರ್ಧರಿಸಿದೆವು. ‘ವಾಪಸು ಬರಲು ಸಮಯ ಸಾಕಾಗದೇ?’ ಎಂಬ ಪ್ರಶ್ನೆ. ‘ಹಾಗಿದ್ದರೆ, ಬಂಡಾಜೆ ಅರ್ಬಿಯಿಂದ, ಕೆಳಗಿಳಿದು ಕರಾವಳಿಯ ಹಳ್ಳಿಯನ್ನು ತಲುಪೋಣ’ ಎಂಬ ಹುಂಬ ಉತ್ತರ ನಮ್ಮಲ್ಲಿ. ಇದ್ದದ್ದು ಮೂರೇ ಜನ; ಬಿಸಿಲು ಸಹ ಇರಲಿಲ್ಲ; ಮೋಡದ ನೆರಳಿನಲ್ಲಿ ಅತ್ತ ಸಾಗಿದೆವು. ಪರ್ವತದ ಆ ತುದಿಯಲ್ಲಿ, ದಟ್ಟ ಅರಣ್ಯವಿಲ್ಲ; ಅಲ್ಲಲ್ಲಿ ಹುಲ್ಲುಗಾವಲಿನಿಂತಹ ಏರಿಳಿತದ ಜಾಗ, ಶೋಲಾ ಕಾಡು. ನಾವು ಚಾರಣ ಆರಂಭಿಸಿದಾಗ ಮಧ್ಯಾಹ್ನದ 2 ಗಂಟೆಯಿರಬಹುದು.

ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದ ಆ ಜಾಗದಲ್ಲಿ, ದಕ್ಷಿಣ ದಿಕ್ಕಿಗೆ ಒಂದು ಕಾಲ್ದಾರಿ ಸಾಗಿತ್ತು. ಅದನ್ನೇ ಅನುಸರಿಸಿದೆವು. ಆದರೆ, ನಮಗೆ ದೂರದ ನೋಟ ದಕ್ಕುತ್ತಿರಲಿಲ್ಲ, ಏಕೆಂದರೆ ಮೋಡ! ಬರಬರುತ್ತಾ, ಮೋಡ ದಟ್ಟವಾಯಿತು. ಗಾಳಿ ಬೀಸತೊಡಗಿತು. ಮೋಡದ ದಟ್ಟನೆ ಎಷ್ಟೆಂದರೆ, ನಮ್ಮಿಂದ ಕೇವಲ ನಾಲ್ಕಾರು ಅಡಿ ದೂರ ಮಾತ್ರ ಕಾಣಿಸುತ್ತಿತ್ತು. ಕಾಲ್ಜಾಡು ಇದೆಯಲ್ಲಾ ಎಂಬ ಹುಚ್ಚು ಧೈರ್ಯ, ಹುಂಬ ಧೈರ್ಯ. ಕೆಲವೇ ನಿಮಿಷದಲ್ಲಿ, ನಮ್ಮ ಸುತ್ತಲಿದ್ದ ಮೋಡಗಳು, ಭಾಷ್ಪೀಕರಣಗೊಂಡವು!

ಮಳೆಯ ತುಂತುರು! ತಲೆ ಒದ್ದೆಯಾಯಿತು, ಬೆನ್ನಿನ ಚೀಲ ತೋಯ್ದಿತು. ಬಿರು ಮಳೆ ಅಲ್ಲ, ಸಣ್ಣಗೆ ತುಂತುರು. ಮುಂದಿನ ದಾರಿ ಕಾಣದಷ್ಟು ಮೋಡದ ದಟ್ಟಣೆ.

ನಿಜ ಹೇಳಬೇಕಂದರೆ, ಆ ಪರ್ವತದ ತುದಿಯಲ್ಲಿ, ಬಂಡಾಜೆ ಅರ್ಬಿಯಿಂದ ನಾಲ್ಕಾರು ಕಿ.ಮೀ. ಹಿಂದೆ, ನಾವು ‘ಕಳೆದು ಹೋಗಿದ್ದೆವು’! ಸುತ್ತಲೂ ಮೋಡದ ಮಸುಕು. ಮಳೆ ಬೇರೆ ಬರುತ್ತಿದೆ. ಆ ರೀತಿ ಕಳೆದುಹೋಗಲು ನಮ್ಮ ಮನಸ್ಸೇ ಒಳಗೊಳಗಿಂದಲೇ ಸಂಚು ಮಾಡಿತ್ತು ಎನಿಸುತ್ತದೆ; ಏಕೆಂದರೆ, ಮಧ್ಯಾಹ್ನದ ಎರಡು ಗಂಟೆಯ ನಂತರ, ದಾರಿ ಗೊತ್ತಿಲ್ಲದ, ಅಂತಹ ದುರ್ಗಮ ಪ್ರದೇಶಗಳಲ್ಲಿ ಚಾರಣ ಮಾಡಬಾರದು ಎಂಬುದು ಸಾಮಾನ್ಯ ನಿಯಮ. ಆದರೂ, ನಾವು ಬಂಡಾಜೆ ಅರ್ಬಿ ಎಂಬ ನೆಪ ಮಾಡಿಕೊಂಡು, ಸುತ್ತಲಿನ ದೃಶ್ಯವೇ ಕಾಣದಂತಹ ಮೋಡಗಳ ನೆರಳಿನಲ್ಲಿ, ಸಾಗಿದ್ದೆವು.

ರಾತ್ರಿಯಾದರೆ, ಕರಾವಳಿಯ ಹಳ್ಳಿಗೆ ನಡೆದು ಸಾಗುವುದು ಎಂಬ ಹುಂಬ ನಿರ್ಧಾರ ಬೇರೆ. ನಿಜ ಹೇಳಲಾ, ಅಂದು ‘ಕಳೆದು ಹೋಗುವ’ ಥ್ರಿಲ್ ಅನುಭವಿಸುವ ಒಳಸಂಚಿನಿಂದ ನಾವು ಅತ್ತ ನಡೆದಿದ್ದೆವು!

ಅಷ್ಟರಲ್ಲಿ, ನಮ್ಮಲ್ಲೊಬ್ಬರ ಪ್ರಾಕ್ಟಿಕಲ್ ಥಿಂಕಿಂಗ್ ಜಾಗೃತವಾಯಿತು. ‘ಹೇ, ನಮಗೆಂತ ಆಗಿದೆ. ಮಳೆ ಬರುತ್ತಾ ಇದೆ, ಮೋಡದಿಂದಾಗಿ, ಐದು ಅಡಿ ದೂರವೂ ಕಾಣಿಸುತ್ತಿಲ್ಲ! ಬಂಡಾಜೆ ಅರ್ಬಿ ಎಲ್ಲಿದೆ? ನಾವ್ಯಾರು ಕಂಡವರಲ್ಲ, ದಾರಿಯ ಪರಿಚಯವಿಲ್ಲ, ಸಂಜೆಯಾಗುತ್ತಾ ಇದೆ. ಎಂತ ಇದು. ಸ್ಟಾಪ್. ವಾಪಸ್ ಸುಂಕಸಾಲಿಗೆ ಹೋಗಿ ಬಸ್ ಹಿಡಿಯೋಣ. ನಾನು ನಾಳೆ ಡ್ಯೂಟಿಗೆ ಹೋಗಬೇಕು’ ಎಂದು, ದೊಡ್ಡ ದನಿಯಲ್ಲಿ ಗದರಿ, ಒಮ್ಮೆಗೇ ಹಿಂದಿರುಗಿ, ಬಂದ ದಾರಿಯಲ್ಲಿ ದಪ ದಪ ಹೆಜ್ಜೆ ಹಾಕಿದರು.

ಒಳೊಳಗೇ ನಮ್ಮ ಮನಸ್ಸು ಹೂಡಿದ್ದ, ‘ಕಳೆದು ಹೋಗುವ ಥ್ರಿಲ್’ ಅನುಭವ ಪಡೆಯುವ ಒಳಸಂಚನ್ನು, ನಮ್ಮ ಗೆಳೆಯ ಆ ದಿನ ವಿಫಲಗೊಳಿಸಿದ್ದ. ಮರುಮಾತಾಡದೇ ನಾವು ಅವನ ಹಿಂದೆ ಹೆಜ್ಜೆ ಹಾಕಿ, ಊರಿಗೆ ವಾಪಸಾದೆವು. ದಟ್ಟ ಕಾಡಿನಲ್ಲೋ, ನಿರ್ಜನ ಹುಲ್ಲುಗಾವಲಿನಲ್ಲೋ ದಾರಿ ಕಳೆದುಕೊಂಡು, ಅಲೆಯುವುದಿದೆಯಲ್ಲಾ, ಕಾಡಿನ ನಡುವೆ ಮರಗಳ ಅಡಿ ಕುಳಿತು ರಾತ್ರಿ ಕಳೆಯುವುದಿದೆಯಲ್ಲಾ, ಅಂತಹ ಅನುಭವ, ಅಂತ ರೋಮಾಂಚನ ಬೇರೆಲ್ಲೂ ದೊರಕದು. ಅಲ್ಲಿ ರಿಸ್ಕ್ ಇದೆ. ಆದರೆ, ಅಷ್ಟೇ ಸಂತಸವೂ ಇದೆ.

ನಾನು ಹೀಗೆ ಹೇಳಿದ್ದು ನಂಬಿಕೆಗೆ ಬರುತ್ತಿಲ್ಲವೇ, ನೀವೂ ಒಮ್ಮೆ ಅನುಭವಿಸಿ ನೋಡಿ, ಕಾಡಿನಲ್ಲಿ ಕಳೆದು ಹೋಗುವ ಥ್ರಿಲ್ ಕುರಿತು ನಾನು ಹೇಳಿದ್ದು, ನಿಜವೋ ಸುಳ್ಳೋ ನಿಮಗೇ ಗೊತ್ತಾಗುತ್ತದೆ!