ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಅವರೇನು ಕಾರ್ಯಕರ್ತರೋ ಅಥವಾ ಗೂಂಡಾಗಳೋ ?

ಪಾಸ್ ಇಲ್ಲದ ಯಾರನ್ನೂ ಒಳಗೆ ಬಿಡದಂತೆ ಬಿಗಿ ಭದ್ರತೆ ಕೈಗೊಳ್ಳುತ್ತೇವೆಂದು ಸರ್ಕಾರಗಳೂ ಹೇಳಿ ದ್ದವು. ಆದರೆ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಎಲ್ಲರೂ ಕಳವಳಗೊಳ್ಳುವಂತೆ ಮಾಡಿದೆ. ವಿಧಾನ ಭವನಕ್ಕೆ ಅಕ್ರಮವಾಗಿ ಪ್ರವೇಶಿಸಲು 5000 ರೂ.ಗಳಿಂದ 10000 ರೂ.ಗಳಿಗೆ ಎಂಟ್ರಿ ಪಾಸ್‌ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಅವರೇನು ಕಾರ್ಯಕರ್ತರೋ ಅಥವಾ ಗೂಂಡಾಗಳೋ ?

ಸಂಗತ

ಮಹಾರಾಷ್ಟ್ರದ ವಿಧಾನ ಭವನದ ಆವರಣದಲ್ಲಿ ನಡೆದ ಹೊಡೆದಾಟ ಹಾಗೂ ಅವಾಚ್ಯ ಪದಗಳ ಬೈಗುಳ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಘಟನೆ ನಾವೆಲ್ಲ ತಲೆ ತಗ್ಗಿಸುವಂತೆ ಮಾಡಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿರುವುದು ಸರಿಯಾಗಿಯೇ ಇದೆ.

ಮಹಾರಾಷ್ಟ್ರದ ವಿಧಾನ ಭವನದ ಆವರಣದಲ್ಲಿ ಕಳೆದ ವಾರ ಇಬ್ಬರು ಶಾಸಕರ ಬೆಂಬಲಿಗರ ನಡುವೆ ಹಿಂಸಾಚಾರ ನಡೆಯಿತು. ಎರಡೂ ಕಡೆಯವರು ಅಕ್ಷರಶಃ ಹೊಡೆದಾಡಿಕೊಂಡರು. ಒಬ್ಬರ ನ್ನೊಬ್ಬರು ಅನಾಮತ್ತು ಎತ್ತಿ ಎಸೆದರು. ಪರಸ್ಪರರ ಅಮ್ಮ, ಅಕ್ಕಂದಿರನ್ನು ಉಲ್ಲೇಖಿಸಿ ಅವಾಚ್ಯ ವಾಗಿ ಬೈದಾಡಿಕೊಂಡರು. ಒಂದಷ್ಟು ಜನರು ಅಂಗಿ, ಪ್ಯಾಂಟ್ ಹರಿದುಕೊಂಡರು. ಆ ಘಟನೆ ಇಡೀ ಮಹಾರಾಷ್ಟ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತಂದಿತು.

ಹೊಡೆದಾಟ ನೋಡಿದವರೆಲ್ಲರೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಥವಾ ಬೆಂಬಲಿಗರು ಈ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವೇ ಎಂದು ಕೇಳಿದರು. ಇವರೆಲ್ಲ ನಿಜಕ್ಕೂ ರಾಜಕೀಯ ಪಕ್ಷದ ಕಾರ್ಯಕರ್ತರೋ ಅಥವಾ ಗೂಂಡಾಗಳೋ ಎಂದು ಪ್ರಶ್ನಿಸಿದರು. ನನ್ನ ಪ್ರಶ್ನೆಯೂ ಅದೇ.

ಹಾಗೆ ನೋಡಿದರೆ ಈ ಘಟನೆಗೆ ಮೂಲ ಕಾರಣರಾದ ಇಬ್ಬರೂ ಮುಖಂಡರಿಗೆ ಕರಾಳ ಇತಿಹಾಸವೇ ಇದೆ. ಎನ್ ಸಿಪಿ (ಶರದ್ ಪವಾರ್ ಬಣ) ಶಾಸಕ ಜಿತೇಂದ್ರ ಅವ್ಹಾದ್ ಅವರ ಬೆಂಬಲಿಗ ನಿತಿನ್ ದೇಶ ಮುಖ್ ಹಾಗೂ ಬಿಜೆಪಿ ಶಾಸಕ ಗೋಪಿಚಂದ್ ಪಡಾಲ್ಕರ್ ಅವರ ಬೆಂಬಲಿಗ ಸರ್ಜೇರಾವ್ ಬಬನ್ ಟಾಕ್ಲೆ ಇವರಿಬ್ಬರ ಮೇಲೂ ಈಗಾಗಲೇ ಪೊಲೀಸ್ ಠಾಣೆಗಳಲ್ಲಿ ಹಲವಾರು ಕೇಸುಗಳಿವೆ.

ಇದನ್ನೂ ಓದಿ: Dr Vijay Darda Column: ವಯಸ್ಸೆಂಬುದು ಬರೀ ಸಂಖ್ಯೆಯಷ್ಟೆ, ಬಿಡಿ !

ಟಾಕ್ಲೆ ವಿರುದ್ಧ ಎಂಪಿಡಿಎ ಕಾಯ್ದೆಯಡಿ ಕ್ರಮ ಕೂಡ ಜಾರಿಗೊಳಿಸಲಾಗಿತ್ತು. ಅದು ಹಾಗಿರಲಿ, ಇಲ್ಲಿರುವ ಮುಖ್ಯ ಪ್ರಶ್ನೆಯೇನೆಂದರೆ, ಅಷ್ಟೊಂದು ಭದ್ರತೆಯಿರುವ ವಿಧಾನ ಭವನದ ಆವರಣಕ್ಕೆ ಈ ಅನಾಹುತಕಾರಿ ಶಕ್ತಿಗಳು ಪ್ರವೇಶ ಪಡೆದಿದ್ದಾದರೂ ಹೇಗೆ? ಟಾಕ್ಲೆ ಬಳಿ ಸರಿಯಾದ ಎಂಟ್ರಿ ಪಾಸ್ ಕೂಡ ಇರಲಿಲ್ಲ. ಇದು ಗಂಭೀರವಾದ ಭದ್ರತಾ ಲೋಪವಲ್ಲವೇ? ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಬೇರೆ ಬೇರೆ ರಾಜ್ಯಗಳ ವಿಧಾನ ಭವನಗಳಿಗೂ ಸಾಕಷ್ಟು ಭದ್ರತೆ ನೀಡಲಾಗುತ್ತದೆ ಎಂದು ಜನರು ಭಾವಿಸಿದ್ದರು.

ಪಾಸ್ ಇಲ್ಲದ ಯಾರನ್ನೂ ಒಳಗೆ ಬಿಡದಂತೆ ಬಿಗಿ ಭದ್ರತೆ ಕೈಗೊಳ್ಳುತ್ತೇವೆಂದು ಸರ್ಕಾರಗಳೂ ಹೇಳಿದ್ದವು. ಆದರೆ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಎಲ್ಲರೂ ಕಳವಳಗೊಳ್ಳುವಂತೆ ಮಾಡಿದೆ. ವಿಧಾನ ಭವನಕ್ಕೆ ಅಕ್ರಮವಾಗಿ ಪ್ರವೇಶಿಸಲು 5000 ರೂ.ಗಳಿಂದ 10000 ರೂ.ಗಳಿಗೆ ಎಂಟ್ರಿ ಪಾಸ್‌ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಅದು ನಿಜವೇ? ಹಿಂಸಾಚಾರದಲ್ಲಿ ತೊಡಗಿದ್ದವರ ಪೈಕಿ ಒಂದು ಕಡೆಯವರು ಇದು ದಿಢೀರನೆ ಭುಗಿಲೆದ್ದ ಘಟನೆ ಎಂದು ಹೇಳಿದರೆ, ಇನ್ನೊಂದು ಕಡೆಯವರು ಇದು ಪೂರ್ವ ಸಿದ್ಧತೆಯಿಂದ ಹೆಣೆದ ಸಂಚು ಎಂದು ಆರೋಪಿಸುತ್ತಿದ್ದಾರೆ. ನನಗೆ ಅಥವಾ ಇನ್ನಾರಿಗೇ ಆದರೂ ಅಲ್ಲಿ ಜಗಳ ವನ್ನು ಮೊದಲು ಶುರು ಮಾಡಿದವರು ಯಾರು ಅಥವಾ ಯಾರು ಹೆಚ್ಚು ಹೊಡೆದರು ಅಥವಾ ಯಾರು ಹೆಚ್ಚು ಅವಾಚ್ಯ ಶಬ್ದಗಳನ್ನು ಬಳಸಿದರು ಅಥವಾ ಯಾರು ಯಾರ ಬಟ್ಟೆಯನ್ನು ಹೆಚ್ಚು ಹರಿದರು ಎಂಬುದು ಮುಖ್ಯವಲ್ಲ.

622 R

ನನಗಂತೂ ಅತಿ ಹೆಚ್ಚು ಕಾಡುತ್ತಿರುವ ಪ್ರಶ್ನೆಯೆಂದರೆ, ಮಹಾರಾಷ್ಟ್ರದ ರಾಜಕಾರಣ ಎತ್ತ ಸಾಗು ತ್ತಿದೆ? ವಿಧಾನಸಭೆಯಲ್ಲಿ ಈ ಹಿಂದೆಯೂ ಸಾಕಷ್ಟು ಕಾವೇರಿದ ಚರ್ಚೆಗಳು ನಡೆದಿವೆ. ಸದನದಲ್ಲಿ ಕೋಲಾಹಲ, ಕಿರುಚಾಟ, ಪೇಪರ್ ವೇಟ್ ಗಳನ್ನು ತೆಗೆದು ಎಸೆಯುವುದು ಮುಂತಾದ ಚಟುವಟಿಕೆ ಗಳು ವರದಿಯಾಗಿವೆ. ಆದರೆ ಅವೆಲ್ಲವೂ ಸಣ್ಣಪುಟ್ಟ ಘಟನೆಗಳು. ಕಳೆದ ವಾರ ವಿಧಾನ ಭವನದ ಆವರಣದಲ್ಲಿ ನಡೆದ ಘಟನೆ ಮಾತ್ರ ಹಿಂದೆಂದೂ ಕೇಳರಿಯದ್ದು ಮತ್ತು ಅತ್ಯಂತ ಕಳವಳಕಾರಿ ಯಾದುದು. ಈ ವಿಷಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದು ಸರಿಯಾಗಿದೆ.

ವಿಧಾನ ಭವನದಲ್ಲಿ ನಡೆದ ಘಟನೆ ನಾವೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ತಮಿಳುನಾಡು, ಉತ್ತರ ಪ್ರದೇಶ ಅಥವಾ ಬಿಹಾರದಂತಹ ರಾಜ್ಯದಲ್ಲಿ ಈ ರೀತಿಯ ಘಟನೆಗಳು ಹಿಂದೆ ನಡೆದಿರಬಹುದು. ಆದರೆ ನಮ್ಮ ಮಹಾರಾಷ್ಟ್ರದಲ್ಲಿ ಯಾವತ್ತೂ ಈ ರೀತಿಯ ಘಟನೆ ನಡೆದಿರಲಿಲ್ಲ. ಹಾಗಿದ್ದರೆ ಮಹಾರಾಷ್ಟ್ರಕ್ಕೆ ಗೂಂಡಾಗಿರಿಯ ಈ ಸಾಂಕ್ರಾಮಿಕ ರೋಗ ಹರಡಿದ್ದು ಎಲ್ಲಿಂದ? ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆಂದು ಹೇಳಿದ್ದಾರೆ. ಸಂಬಂಧಪಟ್ಟ ಶಾಸಕರಿಗೆ ಛೀಮಾರಿ ಹಾಕಿರುವ ಅವರು, ಇನ್ನು ಮುಂದೆ ವಿಧಾನ ಭವನಕ್ಕೆ ಸಂದರ್ಶಕರಿಗೆ ಪ್ರವೇಶ ನೀಡುವಂತಿಲ್ಲ ಎಂಬ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಅಲ್ಲದೆ, ಸಚಿವರು ಕೂಡ ವಿಧಾನ ಭವನದಲ್ಲಿ ಇನ್ನುಮುಂದೆ ಸಭೆಗಳನ್ನು ನಡೆಸಬೇಡಿ, ಅದರ ಬದಲಿಗೆ ಸಭೆಗಳನ್ನು ಮಂತ್ರಾಲಯದಲ್ಲಿ (ಸಚಿವಾಲಯ) ನಡೆಸಿ ಎಂದು ಸೂಚನೆ ನೀಡಿದ್ದಾರೆ. ಆದರೆ ಈ ರೀತಿಯ ಘಟನೆಗಳು ವಿಧಾನ ಭವನಕ್ಕಷ್ಟೇ ಸೀಮಿತವಲ್ಲ ಎಂಬುದು ಕೂಡ ಗಮನಾರ್ಹ ಸಂಗತಿ. ನಾವೆಲ್ಲರೂ ಯೋಚಿಸಬೇಕಾಗಿರುವುದು ಬದಲಾಗುತ್ತಿರುವ ಮಹಾರಾಷ್ಟ್ರದ ರಾಜಕೀಯ ಲಕ್ಷಣದ ಬಗ್ಗೆ. ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಗೆ ದೇಶದಲ್ಲೇ ವಿಶಿಷ್ಟ ಸ್ಥಾನವಿದೆ.

ಇಲ್ಲಿನ ರಾಜಕಾರಣಕ್ಕಿರುವ ಪಾವಿತ್ರ್ಯವೇ ನಮ್ಮ ಹೆಮ್ಮೆ. ನಾನು ದೇಶದುದ್ದಗಲಕ್ಕೂ, ಸಾಕಷ್ಟು ವಿದೇಶಗಳಿಗೂ ಪ್ರವಾಸ ಮಾಡಿದ್ದೇನೆ. ಅವುಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಜಕಾರಣದ ಶ್ರೇಷ್ಠತೆಯನ್ನು ಹೆಮ್ಮೆಯಿಂದ ಹೇಳಬಲ್ಲೆ. ಆದರೆ ಇತ್ತೀಚಿನ ಘಟನೆಯನ್ನು ನೋಡಿದ ಮೇಲೆ ನಾನಾದರೂ ಹೇಗೆ ಅದೇ ಮುಖವಿಟ್ಟುಕೊಂಡು ಇನ್ನುಮುಂದೆ ಮಹಾರಾಷ್ಟ್ರದ ರಾಜಕೀಯ ಚಾರಿತ್ರ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲಿ? ಯೋಚಿಸುತ್ತಾ ಹೋದರೆ ನನ್ನೊಳಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ.

ನಮ್ಮ ರಾಜಕೀಯ ಪರಿಸರದಲ್ಲಿ ಕ್ರಿಮಿನಲ್ ಯೋಚನೆಗಳ ಕರಿನೆರಳು ಕವಿಯಲು ಆರಂಭವಾ ಗಿದೆಯೇ? ಎಲ್ಲರ ಮೇಲೂ ಹಿಡಿತ ಸಾಧಿಸುವ ಅಥವಾ ದಬ್ಬಾಳಿಕೆ ನಡೆಸುವ ಕೆಲ ರಾಜಕಾರಣಿಗಳಿಗೆ ನಾನು ಹೇಳುವುದು ಅರ್ಥವಾಗದೆ ಹೋಗಬಹುದು ಅಥವಾ ನನ್ನ ಮಾತನ್ನು ಅವರು ಒಪ್ಪದಿರ ಬಹುದು. ಆದರೆ ಸತ್ಯವನ್ನು ಯಾರು ತಾನೇ ಅಲ್ಲಗಳೆಯಲು ಸಾಧ್ಯ? ಅನೇಕ ರಾಜ್ಯಗಳಲ್ಲಿ ಆಗಿರುವಂತೆ ಈಗ ಮಹಾರಾಷ್ಟ್ರದ ರಾಜಕಾರಣ ಕೂಡ ಹೆಚ್ಚೆಚ್ಚು ಕ್ರಿಮಿನಲೈಸೇಶನ್‌ಗೆ ಶರಣಾಗು ತ್ತಿದೆಯೇ? ಚುನಾವಣಾ ಆಯೋಗದಿಂದ ಬಂದ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡುವಾಗ ನನಗೊಂದು ಆಘಾತಕಾರಿ ಸತ್ಯ ಕಾಣಿಸಿತು.

ಮಹಾರಾಷ್ಟ್ರದ ವಿಧಾನಸಭೆಯಲ್ಲಿರುವ ಒಟ್ಟು 286 ಶಾಸಕರ ಪೈಕಿ 118 ಶಾಸಕರ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆದರೆ ಸ್ಥೂಲ ಚಿತ್ರಣವನ್ನು ನೋಡಿದರೆ, ರಾಜಕೀಯದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಜಾಸ್ತಿಯಾಗುತ್ತಿರುವುದಕ್ಕೆ ಯಾವುದೋ ಒಂದು ಪಕ್ಷ ಅಥವಾ ಒಬ್ಬ ನಾಯಕ ಹೊಣೆಯಲ್ಲ. ಹೀಗಾಗಿ ಯಾರಾದರೂ ಒಬ್ಬರನ್ನು ದೂಷಿಸಿ ಪ್ರಯೋಜನವಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಇಂತಹ ಕೃತ್ಯಗಳಲ್ಲಿ ರಾಜಾರೋಷವಾಗಿ ತೊಡಗಿಕೊಳ್ಳುತ್ತಿವೆ.

ಅವುಗಳ ಉದ್ದೇಶ ಒಂದೇ: ಹೆಚ್ಚು ಸೀಟು ಗೆಲ್ಲುವುದು. ಅದಕ್ಕಾಗಿ ಏನು ಬೇಕಾದರೂ ಮಾಡಲು ರಾಜಕಾರಣಿಗಳು ಸಿದ್ಧ. ಅತ್ಯಂತ ಹೆಚ್ಚು ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಒಬ್ಬ ರಾಜಕಾರಣಿ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೇನಾದರೂ ಅತಿ ಹೆಚ್ಚು ಇದೆ ಎಂದಾದರೆ ರಾಜಕೀಯ ಪಕ್ಷಗಳು ಯಾವುದೇ ಮುಲಾಜಿಲ್ಲದೆ ಅವನಿಗೇ ಟಿಕೆಟ್ ಕೊಡುತ್ತವೆ!

ರಾಜಕೀಯವೆಂಬುದು ಇಂದು ಸಾಮ, ದಾಮ, ದಂಡ, ಭೇದ (ಹೊಂದಾಣಿಕೆ, ಹಣ, ಶಿಕ್ಷೆ ಮತ್ತು ವಿಭಜನೆ)ಗಳ ಆಟವಾಗಿದೆ. ಕ್ರಿಮಿನಲ್ ಶಕ್ತಿಗಳು ಎಸಗುವ ಕೃತ್ಯಗಳ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳೂ ಕುರುಡಾಗಿಬಿಡುತ್ತವೆ. ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆಲ ರಾಜಕಾರಣಿಗಳಂತೂ ತಮ್ಮ ಕೃತ್ಯಗಳು ಯುವಕರ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸುವುದಕ್ಕೂ ಸಿದ್ಧರಿಲ್ಲ.

ಸಂಜಯ್ ಗಾಯಕ್ವಾಡ್ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ. ಒಬ್ಬ ಬಡಪಾಯಿ ಕ್ಯಾಂಟೀನ್ ಕೆಲಸಗಾರನ ಮೇಲೆ ಈತ ಅತ್ಯಂತ ಅಮಾನುಷವಾಗಿ ಹಲ್ಲೆ ನಡೆಸಿದ. ಕ್ಯಾಂಟೀನ್‌ನಲ್ಲಿ ಕೊಟ್ಟ ಆಹಾರ ಚೆನ್ನಾಗಿರಲಿಲ್ಲ ಅಂತಾದರೆ ಅದು ಒಪ್ಪುವ ಮಾತು. ಆದರೆ ಅದರ ವಿರುದ್ಧ ದೂರು ನೀಡುವುದಕ್ಕೆ ಸದನ ಸಮಿತಿಯಿರುತ್ತದೆ. ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕನ್ನು ಅವರಿಗೆ ಕೊಟ್ಟವರು ಯಾರು? ಊಟ ಚೆನ್ನಾಗಿಲ್ಲ ಅಂದರೆ ಅದನ್ನು ಊಟ ತಯಾರಿಸಿದವನಿಗೆ ಹೇಳಬೇಕೇ ಹೊರತು ಏಕಾಏಕಿ ಹೋಗಿ ಅವನಿಗೆ ಹೊಡೆದು ಬಿಡುವುದೇ? ಇದು ಮನುಷ್ಯತ್ವ ಇರುವವರು ಮಾಡುವ ಕೆಲಸವೇ? ಹಿಂದೆಲ್ಲಾ ರಾಜಕಾರಣವೆಂಬುದು ಸಮಾಜ ಸೇವೆಯಾಗಿತ್ತು.

ದೇಶ, ರಾಜ್ಯ ಮತ್ತು ಸಮಾಜದ ಬಗ್ಗೆ ನಿಜವಾಗಿಯೂ ಕಳಕಳಿ ಇರುವವರಷ್ಟೇ ರಾಜಕೀಯಕ್ಕೆ ಬರುತ್ತಿದ್ದವು. ಹೀಗಾಗಿ ರಾಜಕಾರಣದಲ್ಲಿ ಪ್ರಾಮಾಣಿಕ, ಸರಳ ಮತ್ತು ಸಮರ್ಪಣಾ ಮನೋಭಾವದ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರೇ ಇರುತ್ತಿದ್ದರು. ಆದರೆ ಈಗ ಅವರ ಜಾಗದಲ್ಲಿ ಹಿಂಸಾಚಾರಗಳ ತಜ್ಞರು, ಬೇರೆಯವರನ್ನು ಹೊಡೆಯುವಲ್ಲಿ ಎತ್ತಿದ ಕೈ ಹೊಂದಿರುವವರು ಹಾಗೂ ತಮ್ಮ ರಕ್ತದಲ್ಲೇ ದಬ್ಬಾಳಿಕೆಯ ನೀತಿಯನ್ನು ಉಳಿಸಿಕೊಂಡವರು ಬಂದು ಸೇರಿಕೊಂಡಿದ್ದಾರೆ.

ಹೀಗಾಗಿ ರಾಜಕೀಯ ನಾಯಕರು ಪೊಗದಸ್ತಾದ ಗೂಂಡಾಗಳನ್ನು ಸಾಕುತ್ತಿದ್ದಾರೆ. ಕೆಲ ನಾಯಕ ರಂತೂ ತಾವು ಗೂಂಡಾಗಳನ್ನು ಸಾಕಿರುವುದಾಗಿ ನಾಚಿಕೆ ಬಿಟ್ಟು ಹೇಳಿಕೊಳ್ಳುತ್ತಾರೆ. ಈ ನಾಯಕ ರಿಗೆ ಅಕ್ಕಪಕ್ಕ ಗೂಂಡಾಗಳನ್ನು ಇರಿಸಿಕೊಂಡು ಓಡಾಡುವುದೊಂದು ಶೋಕಿಯಾಗಿದೆ. ನಾವು ಗೂಂಡಾಗಳನ್ನು ದುರಸ್ತಿ ಮಾಡಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಜೊತೆಗೆ ಇರಿಸಿ ಕೊಂಡು ಓಡಾಡುತ್ತೇವೆ ಎಂದು ಕೂಡ ಅವರು ನಿರ್ಲಜ್ಜೆಯಿಂದ ಹೇಳುತ್ತಾರೆ!

ಆದರೆ ಒಂದು ಮಾತ್ರ ನಿಜ; ಗೂಂಡಾಗಳ ಕೈಯಲ್ಲಿ ಸಿಲುಕಿಕೊಂಡಿರುವ ರಾಜಕೀಯವನ್ನು ಮರಳಿ ನಮ್ಮ ಕೈಗೆ ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಬಹಳ ಕಷ್ಟವಿದೆ. ಗೂಂಡಾಗಳನ್ನು ನಿಯಂತ್ರಿಸದೆ ಇದ್ದರೆ ಅವರೇ ನಮ್ಮನ್ನೂ, ರಾಜಕಾರಣವನ್ನೂ ತಮ್ಮ ಕೈಗೊಂಬೆ ಮಾಡಿಕೊಳ್ಳುತ್ತಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಹೆಸರಿನಲ್ಲಿ ಎಲ್ಲಿಯವರೆಗೆ ಸಮಾಜಕ್ಕೆ ಕಂಟಕವಾದ ಜನರನ್ನು ಪೋಷಿಸ ಲಾಗುತ್ತದೆಯೋ ಅಲ್ಲಿಯವರೆಗೂ ಅಂತಹ ಸಮಾಜದ್ರೋಹಿಗಳು ಚಿಗಿತುಕೊಳ್ಳುತ್ತಲೇ ಇರುತ್ತಾರೆ. ಅವರು ನಮ್ಮಂತಹ ವರಿಗೆ ಮುಜುಗರ ಉಂಟು ಮಾಡುತ್ತಲೇ ಇರುತ್ತಾರೆ.

ಹೀಗಾಗಿ ರಾಜಕಾರಣ ಸ್ವಚ್ಛವಾಗಬೇಕು ಅಂದರೆ ರಾಜಕಾರಣದೊಳಗಿನ ಗೂಂಡಾ ಸಂಸ್ಕೃತಿಯನ್ನು ಮೊದಲು ನಾಶಪಡಿಸಬೇಕು. ಅದನ್ನು ಮಾಡುವವರು ಯಾರು ಎಂಬುದೇ ದೊಡ್ಡ ಪ್ರಶ್ನೆ.